ಹೊಸದಿಲ್ಲಿ: ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿದ ಪಠ್ಯವನ್ನು ಪ್ರಕಟಿಸಿದ್ದಕ್ಕಾಗಿ ರಾಜಸ್ಥಾನ ಪೊಲೀಸರು ಪುಸ್ತಕದ ಪ್ರಕಾಶಕರು ಮತ್ತು ಲೇಖಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇಸ್ಲಾಂ ಧರ್ಮವನ್ನು ಭಯೋತ್ಪಾದನೆಯೊಂದಿಗೆ ಸಂಬಂಧ ಕಲ್ಪಿಸಿ ಮುಸ್ಲಿಮರ ಧಾರ್ಮಿಕ ನಂಬಿಕೆಯನ್ನು ಅವಮಾನಿಸಿ ಕ್ರಿಮಿನಲ್ ಪಿತೂರಿ ನಡೆಸಿದ್ದಕ್ಕಾಗಿ ‘ರಾಜಸ್ಥಾನ್ ಸ್ಟೇಟ್ ಟೆಕ್ಸ್ಟ್ ಬುಕ್ ಬೋರ್ಡ್’, ‘ಸಂಜೀವ್ ಪಾಸ್‌ಬುಕ್ ಪಬ್ಲಿಕೇಷನ್’ ಮಾಲೀಕ ಮತ್ತು ಲೇಖಕರ ವಿರುದ್ಧ ಜೈಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಒಟ್ಟು 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮುಸ್ಲಿಂ ಮಿರರ್ ವರದಿ ಮಾಡಿದೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೆ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯಲ್ಲಿ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪ್ರಕಟವಾದ ಪಠ್ಯಪುಸ್ತಕದಲ್ಲಿ ಆಕ್ರಮಣಕಾರಿ ವಿಷಯವನ್ನು ಸೇರಿಸಲಾಗಿದೆ. 2018 ರ ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯ ಶಿಕ್ಷಣ ಮಂಡಳಿ ಈ ಭಾಗವನ್ನು ಕೈಬಿಟ್ಟು ಪಠ್ಯಪುಸ್ತಕಗಳನ್ನು ಪರಿಷ್ಕರಿಸಿತ್ತು. ಟೀಕೆಗಳು ತೀವ್ರವಾಗುತ್ತಿದ್ದಂತೆ ಪ್ರಕಾಶಕರು ಪಠ್ಯಪುಸ್ತಕಗಳನ್ನು ನಾಶಪಡಿಸಿ ಲಿಖಿತವಾಗಿ ಕ್ಷಮೆಯಾಚಿಸಿದ್ದರು.
ರಾಜಸ್ಥಾನ ಮುಸ್ಲಿಂ ಫೋರಂ ಕೋ-ಆರ್ಡಿನೇಟರ್ ಮತ್ತು ಕಾಂಗ್ರೆಸ್ ಅಲ್ಪಸಂಖ್ಯಾತ ಸೆಲ್ ರಾಜಸ್ಥಾನ ಘಟಕದ ಪ್ರತಿನಿಧಿ ಮೊಹ್ಸಿನ್ ರಶೀದ್ ಅವರು ದೂರು ದಾಖಲಿಸಿದ್ದರು. “ಈ ಹಿಂದೆ ಇಸ್ಲಾಮಿಕ್ ‘ಭಯೋತ್ಪಾದನೆ’ ಎಂಬ ವಿಷಯವನ್ನು ಬಿ.ಎಡ್ ಕೋರ್ಸ್‌ನಲ್ಲಿ ಸೇರಿಸಲಾಗಿತ್ತು. ಈಗ ಅವರು 12 ನೇ ತರಗತಿಯಲ್ಲಿ ಬೋಧಿಸುತ್ತಿದ್ದಾರೆ. ಇದು ಮುಸ್ಲಿಮರಲ್ಲಿ ಅನುಮಾನವನ್ನು ಉಂಟುಮಾಡುವ ಮತ್ತು ಇಸ್ಲಾಂ ಧರ್ಮದ ಬಗ್ಗೆ ದ್ವೇಷವನ್ನು ಉಂಟುಮಾಡುವ ಪ್ರಯತ್ನ” ಎಂದು ಮೊಹ್ಸಿನ್ ರಶೀದ್ ಹೇಳಿದ್ದಾರೆ.