ಭೋಪಾಲ್: ಭೋಪಾಲ್ ನಲ್ಲಿ ಮತ್ತೊಂದು ಅನೈತಿಕ ಪೊಲೀಸ್ ಗಿರಿ ನಡೆದಿದ್ದು, ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಯುವಕ ಮತ್ತು ಯುವತಿಗೆ ಬಜರಂಗದಳದ ಕಾರ್ಯಕರ್ತರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಅನ್ಯ ಕೋಮಿನ ಮಹಿಳೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಬಜರಂಗದಳದ ಕಾರ್ಯಕರ್ತರು ಇದು ಲವ್ ಜಿಹಾದ್ ಎಂದು ಆರೋಪಿಸಿ ಇಬ್ಬರನ್ನೂ ಬಲವಂತವಾಗಿ ವಶಕ್ಕೆ ಪಡೆದು ಹಲ್ಲೆ ನಡೆಸಿ ಅಜ್ಮೀರ್ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅವರಿಬ್ಬರೂ ಕಾರ್ಯನಿಮಿತ್ತ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಪೊಲೀಸರು ಇಬ್ಬರ ಪೋಷಕರನ್ನು ಕರೆಸಿ ಹೇಳಿಕೆ ಪಡೆದಿದ್ದಾರೆ. ಅವರಿಬ್ಬರೂ ಇಂದೋರ್ ಮೂಲದ ಕುಟುಂಬ ಸ್ನೇಹಿತರು ಎಂಬುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಅವರ ಹೇಳಿಕೆಗಳನ್ನು ದಾಖಲಿಸಿದ ಬಳಿಕ ಪೊಲೀಸರು ಅವರಿಬ್ಬರನ್ನೂ ಬಿಟ್ಟು ಕಳುಹಿಸಿದ್ದಾರೆ.
ಬಜರಂಗದಳ ಕಾರ್ಯಕರ್ತರ ವಿರುದ್ಧ ಯಾರು ಕೂಡ ದೂರು ನೀಡಿಲ್ಲದ ಕಾರಣ ಅವರ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಜಿಆರ್ ಪಿ ಪೊಲೀಸರು ತಿಳಿಸಿದ್ದಾರೆ.
ಜನವರಿ 14 ರಂದು ಈ ಘಟನೆ ನಡೆದಿದೆ. ಸಣ್ಣ ಎಲೆಕ್ಟ್ರಾನಿಕ್ ಅಂಗಡಿಯ ಮಾಲೀಕ ಆಸಿಫ್ ಶೇಖ್ ಅವರು ತನ್ನ ಕುಟುಂಬದ ಸ್ನೇಹಿತರಾದ ಖಾಸಗಿ ಶಾಲಾ ಶಿಕ್ಷಕಿಯೊಂದಿಗೆ ಕೆಲಸದ ನಿಮಿತ್ತ ರೈಲಿನಲ್ಲಿ ಹೋಗುತ್ತಿದ್ದಾಗ ಈ ನೈತಿಕ ಪೊಲೀಸ್ ಗಿರಿ ನಡೆದಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಈ ಕುರಿತ ವೀಡಿಯೋ ವೈರಲ್ ಆಗಿದೆ. ತಮ್ಮನ್ನು ಬಜರಂಗದಳದ ಕಾರ್ಯಕರ್ತರು ಎಂದು ಗುರುತಿಸಿಕೊಳ್ಳುವ ಮೂವರು ವ್ಯಕ್ತಿಗಳು ಶೇಖ್ ಅವರನ್ನು ರೈಲು ಬೋಗಿಯಿಂದ ಹೊರಗೆ ಎಳೆದು ಹಲ್ಲೆ ನಡೆಸಿ ಎಳೆದೊಯ್ಯುತ್ತಿರುವುದು ಹಾಗೂ ಮಹಿಳೆ ಅವರ ಹಿಂದೆ ನಡೆದುಕೊಂಡು ಹೋಗುತ್ತಿರುವುದನ್ನು ವೀಡಿಯೋದಲ್ಲಿದೆ.