ಹೈದರಾಬಾದ್ |ಖುತುಬ್ ಶಾಹಿ ಕಾಲದ 400 ವರ್ಷ ಹಳೆಯ ಮಸೀದಿಯಲ್ಲಿ ಪ್ರಾರ್ಥನೆ ಮರು ಆರಂಭ

Prasthutha|

ಹೈದರಾಬಾದ್ : ಖುತುಬ್ ಶಾಹಿ ಕಾಲದಲ್ಲಿ, ಸುಮಾರು 400 ವರ್ಷಗಳ ಹಿಂದೆ ನಿರ್ಮಿಸಲಾದ ಮಸೀದಿ ಹಲವು ವರ್ಷಗಳ ಬಳಿಕ ಸೋಮವಾರ ಮರು ಆರಂಭಗೊಂಡಿದೆ. ಇಲ್ಲಿನ ಗಾಚಿಬೌವ್ಲಿಯ ಸನ್ ಶೈನ್ ಆಸ್ಪತ್ರೆ ಬಳಿಯ ಮಲ್ಕಮ್ಚೆರು ಪ್ರದೇಶದಲ್ಲಿರುವ ಈ ಮಸೀದಿಯನ್ನು ತೆಲಂಗಾಣ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮುಹಮ್ಮದ್ ಸಲೀಂ ಮತ್ತು ಸಿಇಒ ಮುಹಮ್ಮದ್ ಖಾಸಿಂ ಮತ್ತಿತರ ಅಧಿಕಾರಿಗಳ ಸಮ್ಮುಖದಲ್ಲಿ ಮರು ತೆರೆಯಲಾಗಿದೆ. 400 ವರ್ಷಗಳ ಹಳೆಯ ಈ ಮಸೀದಿಯನ್ನು ಖುತುಬ್ ಶಾಹಿ ಮಸೀದಿ ಎಂದೇ ಕರೆಯಲಾಗುತ್ತದೆ.

ಹಲವಾರು ವರ್ಷಗಳಿಂದ ಈ ಮಸೀದಿಯಲ್ಲಿ ಪ್ರಾರ್ಥನೆಗಳು ನಡೆಯುತ್ತಿರಲಿಲ್ಲ. ಮಸೀದಿಯ ಸುತ್ತ ಮರಗಳು ಆವರಿಸಿದ್ದವು. ವನ್ಯ ಪ್ರಾಣಿಗಳೂ ಇದರೊಳಗೆ ಆಶ್ರಯ ಪಡೆದಿದ್ದವು. ಹೀಗಾಗಿ ಇಲ್ಲಿ ಪ್ರಾರ್ಥನೆ ನಡೆಯುತ್ತಿರಲಿಲ್ಲ ಎಂದು ವಕ್ಫ್ ಅಧ್ಯಕ್ಷ ಮುಹಮ್ಮದ್ ಸಲೀಂ ಈ ವೇಳೆ ಮಾತನಾಡುತ್ತಾ ತಿಳಿಸಿದರು.

- Advertisement -

ವಿಷಯ ವಕ್ಫ್ ಮಂಡಳಿ ಗಮನಕ್ಕೆ ಬಂದ ಬಳಿಕ, ಈ ಬಗ್ಗೆ ಕಂದಾಯ ಅಧಿಕಾರಿಗಳು, ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ಮಸೀದಿ ಮರು ತೆರೆಯಲು ನಿರ್ಧಾರ ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ. ಒಎಸ್ ಡಿ ಅಧಿಕಾರಿಗಳಾದ ಮುಹಮ್ಮದ್ ಇಲ್ಯಾಸ್, ಮುಹಮ್ಮದ್ ಅಸಾದುಲ್ಲಾ, ಸ್ಥಳೀಯ ಕಂದಾಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು. ಈ ವೇಳೆ ಪ್ರಾರ್ಥನೆ ಸಲ್ಲಿಸಲಾಯಿತು.

- Advertisement -