ಹುದೈಬಿಯಾ ಕರಾರಿನ ಪಾಠ

0
73

♦ ಕೆ. ವೈ ಅಬ್ದುಲ್ ಹಮೀದ್ , ಕುಕ್ಕಾಜೆ

ಮಕ್ಕಾದಿಂದ ಮುಸ್ಲಿಮರು ಮದೀನಾಗೆ ವಲಸೆ ಬಂದು ಅದಾಗಲೆ ಆರು ವರ್ಷಗಳು ಕಳೆದಿದ್ದವು.  ಈ ಅವಧಿಯಲ್ಲಿ ಮಕ್ಕಾದ ಕುರೈಶರೊಂದಿಗೆ ಹಲವಾರು ಯುದ್ಧಗಳೂ ನಡೆದಿದ್ದವು.  ಮಕ್ಕಾದ ಕಅಬಾ ಸಂದರ್ಶಿಸಲು ಮುಸ್ಲಿಮರಿಗೆ  ಕುರೈಶರ ಅನುಮತಿ ಇರಲಿಲ್ಲ್ಲ. ಪವಿತ್ರ ಹರಂ ಪ್ರವಾದಿ ಇಬ್ರಾಹೀಂ(ಅ)ರ ಸಂದೇಶ ಪ್ರಚಾರದ ಕೇಂದ್ರವಾಗಿತ್ತು. ಆ ಸಂದೇಶದ ಮುಂದುವರಿಕೆಗೆ ಪವಿತ್ರ ಹರಂ ಅನಿವಾರ್ಯವಾಗಿತ್ತು. ಇದರಿಂದಾಗಿ ಪ್ರವಾದಿ(ಸ)  ಉಮ್ರಾದ ಸಂಕಲ್ಪದೊಂದಿಗೆ ಸಾವಿರದ ನಾಲ್ಕುನೂರು ಅನುಯಾಯಿಗಳ ಜತೆ 400 ಕಿಲೋಮೀಟರ್ ದೂರದ ಮಕ್ಕಾದತ್ತ ಪ್ರಯಾಣ ಹೊರಡುತ್ತಾರೆ. ವಾಸ್ತವದಲ್ಲಿ ಅವರೆಲ್ಲರೂ ಸ್ವಇಚ್ಛೆಯಿಂದಲೇ ಈ ಸಾಹಸಕ್ಕೆ ಹೊರಟಿದ್ದರು.

ಮದೀನಾದ ರಕ್ಷಣೆಗಾಗಿ ಮುಸ್ಲಿಮರ ಒಂದು  ಗುಂಪನ್ನು ಪ್ರವಾದಿ(ಸ) ಅಲ್ಲೆ ಉಳಿಸಿಕೊಂಡಿದ್ದರು.  ಅಲ್ಲಿನ ಮೇಲ್ನೋಟವನ್ನು  ಅಬ್ದುಲ್ಲಾ ಲೈಸಿ(ರ)ಯವರಿಗೆ ವಹಿಸಿಕೊಡಲಾಗಿತ್ತು. ಕುರ್ಬಾನಿಗಾಗಿ ಎಪ್ಪತ್ತು ಒಂಟೆಗಳನ್ನು ಜತೆಯಲ್ಲಿ ಕೊಂಡೊಯ್ಯಲ್ಲಾಗಿತ್ತು. ಪ್ರವಾದಿ(ಸ) ಮತ್ತು ಅನುಯಾಯಿಗಳು   ಯಾವುದೇ ಶಸ್ತ್ರಾಸ್ತ್ರಗಳನ್ನು ಹೊಂದಿರಲಿಲ್ಲ.

ಕಅಬಾ ಭವನದ  ಪವಿತ್ರ ಯಾತ್ರೆ ಇದಾಗಿದ್ದರೂ ಅದು ಭಾರಿ ರಾಜಕೀಯ ಮಹತ್ವವನ್ನೂ ಹೊಂದಿತ್ತು. ಅದೇ ವೇಳೆ ಮಕ್ಕಾದ ಕುರೈಶರಿಗೆ ಇದೊಂದು ಪಂಥಾಹ್ವಾನವೂ ಆಗಿತ್ತು. ಒಂದು ವೇಳೆ ಪ್ರವಾದಿ(ಸ)ಯವರನ್ನು ಮಕ್ಕಾ ಸಂದರ್ಶನಕ್ಕೆ ಅನುಮತಿಸಿದರೆ  ಜನಸಾಮಾನ್ಯರ ಮೇಲೆ ಅದು ಗಾಢ ಪ್ರಭಾವ ಮೂಡಿಸುವ ಸಾಧ್ಯತೆ ಇತ್ತು. ಇಸ್ಲಾಮಿನ ಕುರಿತಾದ ಚರ್ಚೆಗಳು ಜನರ ಮಧ್ಯೆ ಮತ್ತೆ ಜೀವ ಕಳೆ ತಳೆಯುತ್ತಿತ್ತು. ಅದರ ಜತೆಗೆ  ಕುರೈಶರ ಮೇಲುಗಾರಿಕೆಗೆ ತೀವ್ರ ಪೆಟ್ಟು ಬೀಳುತ್ತಿತ್ತು. ಇದರಿಂದ ವಿಚಲಿತರಾದ ಅವರು ಸುಹೈಲ್ ಬಿನ್ ಅಮ್ರ್‌ರನ್ನು ಪ್ರವಾದಿ(ಸ) ನೇತೃತ್ವದ ಉಮ್ರಾ ಪ್ರಯಾಣಿಕರ ಬಳಿಗೆ ಕಳಿಸಿ ಕಅಬಾ ಸಂದರ್ಶನ ಅನುಮತಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಂದೇಶ ಕಳಿಸುತ್ತಾರೆ. ಆದರೆ ಅದಕ್ಕೂ ಮೊದಲೇ ಕುರೈಶರು ಪ್ರತಿರೋಧದ ಸಿದ್ಧತೆಯಲ್ಲಿದ್ದಾರೆೆ ಎಂಬ ಮಾಹಿತಿಯನ್ನು ಪ್ರವಾದಿ(ಸ)ಯವರಿಗೆ ಬೇಹುಗಾರನಿಂದ ತಿಳಿಯಲು ಸಾಧ್ಯವಾಗಿತ್ತು.

ಪ್ರವಾದಿ(ಸ) ಮತ್ತು ಸಹಾಬಿಗಳ ತಂಡವನ್ನು ತಡೆದ ಕುರೈಶರು ತುಂಬಾ ಪೇಚಿಗೆ ಸಿಲುಕುತ್ತಾರೆ. ನಿರಾಯುಧರಾದ ಪವಿತ್ರ ಯಾತ್ರಾರ್ಥಿಗಳನ್ನು ವಿನಾಕಾರಣ ತಡೆದ ಅಪವಾದ ಒಂದೆಡೆ. ಒಂದು ವೇಳೆ ಪ್ರವಾದಿ(ಸ)ಗೆ ಮಕ್ಕಾ ಪ್ರವೇಶ ಅನುಮತಿಸಿದ್ದರೆ ಕುರೈಶರು ದುರ್ಬಲರು ಎಂಬ ಕೆಟ್ಟ ಹೆಸರು ಮತ್ತೊಂದೆಡೆ. ನಿರ್ವಾಹವಿಲ್ಲದೆ ಅವರು ಪ್ರವಾದಿ(ಸ) ಬಳಿ  ಸಂಧಾನಕ್ಕೆ ಮುಂದಾಗುತ್ತಾರೆ.  ಇದನ್ನು ಮೊದಲೇ ಊಹಿಸಿದ್ದ ಪ್ರವಾದಿ(ಸ) ನಮ್ಮ ಯಾತ್ರೆಯ ಉದ್ದೇಶ ಉಮ್ರಾ ಹೊರತು ಯುದ್ಧವಲ್ಲ ಎಂದು  ಸಂಧಾನಕಾರರಿಗೆ ತಿಳಿಸುತ್ತಾರೆ.

ವಾಸ್ತವ ವಿಷಯವನ್ನು ಕುರೈಶರಿಗೆ ಮನವರಿಕೆ ಮಾಡಿ ದುಡುಕುವ ಅಗತ್ಯವಿಲ್ಲ ಎಂದು ಸಂಧಾನದ ಮೊದಲ ತಂಡ ತಿಳಿಸಿತು.  ಆದರೆ ಜಗಳಗಂಟಿ ಯುವಕರು ಈ ಮಾತನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದಾಗಿ ಕುರೈಶರು ಮತ್ತೊಂದು ತಂಡವನ್ನು ಪ್ರವಾದಿ(ಸ) ಬಳಿಗೆ ಕಳಿಸಿ  ವಾಸ್ತವ ಸ್ಥಿತಿಗತಿ ಅರಿಯಲು ಪ್ರಯತ್ನಿಸುತ್ತಾರೆ. ಪ್ರವಾದಿ(ಸ)ಯ  ಜತೆಯಲ್ಲಿದ್ದ ಕುರ್ಬಾನಿ ಪ್ರಾಣಿಗಳನ್ನು ಕಂಡು ಪ್ರಭಾವಿತರಾದ ಅವರು, ಕಅಬಾ ಸಂದರ್ಶಕರನ್ನು ತಡೆಯುವುದು ಸರಿಯಲ್ಲವೆಂದು  ಕುರೈಶರಿಗೆ ತಿಳಿಸುತ್ತಾರೆ. ತಮ್ಮ ಶರ್ತಗಳನ್ನು ಒಪ್ಪಿಸುವ ನೆಪದಲ್ಲಿ ಕುರೈಶರು ಉರ್ವಾಬಿನ್ ಮಸ್‌ಊದ್‌ರನ್ನು ಮುಸ್ಲಿಮರ ಬಳಿಗೆ ಕಳಿಸಿಕೊಡುತ್ತಾರೆ.

ಸಂಧಾನ ಮುಗಿಸಿ ಮರಳಿದ ಉರ್‌ವಾ ಪ್ರವಾದಿ(ಸ) ಸಂಗಾತಿಗಳ ವರ್ತನೆಯಿಂದ ಬಹಳ ಪ್ರಭಾವಿತರಾಗಿದ್ದರು. ಅವರು ಕುರೈಶರೊಂದಿಗೆ  ‘‘ದೊಡ್ಡ ದೊಡ್ಡ ರಾಜರುಗಳ ಆಸ್ಥಾನಗಳಲ್ಲಿ ಕಂಡಿರದಂತಹ ಪ್ರೀತಿ, ಅನುಸರಣೆಯನ್ನು ನಾನಲ್ಲಿ ಕಂಡೆನು. ಮುಹಮ್ಮದ್(ಸ)ರ ಸಂಗಾತಿಗಳು ತಮ್ಮ ಸರ್ವಸ್ವವನ್ನು ಅವರ ಮೇಲೆ ಅರ್ಪಿಸಿದ್ದಾರೆ. ಒಂದು ಸೂಚನೆ ಸಿಕ್ಕರೂ ತಮ್ಮ ಪ್ರಾಣ ತ್ಯಾಗಕ್ಕೂ ಅವರು ಸಿದ್ಧರಾಗಿರುತ್ತಾರೆ’’ ಎಂದು ಹೇಳುತ್ತಾರೆ.

ಇಸ್ಲಾಮಿನ ತಿರುಳನ್ನು ಇಲ್ಲಿ ನಮಗೆ ತಿಳಿಯಬಹುದು. ಇಸ್ಲಾಮೀ ಆಂದೋಲನಕ್ಕಾಗಿ ಇಳಿದ ಕಾರ್ಯಕರ್ತರು ತಮ್ಮ  ನಾಯಕನನ್ನು ಗಾಢವಾಗಿ ಪ್ರೀತಿಸಬೇಕು. ಆ ನಾಯಕನ ಆದೇಶಗಳನ್ನು ಚಾಚೂ ತಪ್ಪದೆ ಅನುಸರಿಸಬೇಕು. ಏಕೆಂದರೆ ಪ್ರೀತಿ ಮತ್ತು ಅನುಸರಣೆ ಒಗ್ಗೂಡಿದರೆ ಮಾತ್ರ ಅಲ್ಲಿ ಅಜೇಯ ಶಕ್ತಿ ರೂಪುಗೊಳ್ಳಲು ಸಾಧ್ಯ. ಇಂತಹ ಅನುಸರಣೆ, ಪ್ರೀತಿ ಎಲ್ಲಿರುವುದೋ, ಅಲ್ಲಿ ಶತ್ರುಗಳ ಮನದಲ್ಲಿ ಭೀತಿ ಮೂಡುತ್ತದೆ ಮತ್ತು ತನ್ನಷ್ಟಕ್ಕೆ ಅವರು  ದುರ್ಬಲರಾಗುತ್ತಾರೆ.

ಇಸ್ಲಾಮೀ ಸಂಘಟನಾ ವ್ಯವಸ್ಥೆಯು ಪರಸ್ಪರ ಹಿತಾಕಾಂಕ್ಷೆ, ನಿಷ್ಠೆ, ಪ್ರಾಮಾಣಿಕತೆ, ಪ್ರೀತಿ, ಅನುಸರಣೆಯಿಂದ ಕೂಡಿರುವುದನ್ನು ಇತಿಹಾಸದಲ್ಲಿ  ಕಾಣಬಹುದು.  ಅಲ್ಲಿ ಪ್ರತಿಯೊಬ್ಬ  ಕಾರ್ಯಕರ್ತನಿಗೂ ಮಹತ್ವವಿರುತ್ತದೆ. ಪ್ರತಿಯೊಬ್ಬರ ವ್ಯಕ್ತಿತ್ವಕ್ಕೂ  ಬೆಲೆ, ಗೌರವ ಇರುತ್ತದೆ. ಅದರಲ್ಲೂ ನಾಯಕನ ವ್ಯಕ್ತಿತ್ವವು ಎಲ್ಲರ ಪಾಲಿಗೆ ಪ್ರೀತಿಯ ಸೆಲೆಯಾಗಿರುತ್ತದೆ. ಈ ರೀತಿಯ ಬೆಳವಣಿಗೆ ಅಲ್ಲಿಲ್ಲದಿದ್ದಲ್ಲಿ ಅವರು ಕುರ್‌ಆನ್‌ನಲ್ಲಿ ತಿಳಿಸಿದ  ಪರಸ್ಪರ ಕರುಣಾಳು, ಸೀಸದ ಎರಕ ಹೊಯ್ದ ಗೋಡೆ ಆಗಲಾರರು. ಇದು ಹುದೈಬಿಯಾದಲ್ಲಿ  ಸ್ಪಷ್ಟವಾಯಿತು. ಅದು  ಪ್ರವಾದಿ(ಸ)ಸಂಧಾನಕ್ಕೆ ಆಗಮಿಸಿದ್ದ ಉರ್ವಾರ ಮನ ಸೆಳೆಯಿತು. ಅವರದನ್ನು ಮಕ್ಕಾದ ಕುರೈಶರಿಗೂ ತಿಳಿಸಿದರು.

ಒಂದೆಡೆ ನಿರಾಯುಧರಾಗಿದ್ದ ಮುಸ್ಲಿಮರ ಪವಿತ್ರ ಯಾತ್ರಾ ತಂಡ. ಮತ್ತೊಂದೆಡೆ ಅವರನ್ನು ಕೆರಳಿಸಿ ಯುದ್ಧಕ್ಕೆ ಇಳಿಸಲು ಪ್ರಯತ್ನಿಸುವ ವೈರಿಗಳು.   ಮಕ್ಕಾದ ಅರಾಜಕತೆ, ಅನೈಕ್ಯ, ಇವೆಲ್ಲವೂ  ದೊಡ್ಡ ಅನಾಹುತವನ್ನು ಉಂಟುಮಾಡುತ್ತಿತ್ತು. ಕುರೈಶರ ಬಳಿಗೆೆ ಮಾತುಕತೆಗೆ ತೆರಳಿದ್ದ ಖರಾಸ್ ಬಿನ್ ಉಮಯ್ಯ(ರ)ರ ಒಂಟೆಯನ್ನು ಅಲ್ಲಿನ ಪುಂಡರು ಕೊಂದು ಹಾಕಿದ್ದರು. ಖರಾಸ್(ರ)ರವರು  ಅದೃಷ್ವಶಾತ್ ಜೀವಂತ ಪಾರಾಗಿದ್ದರು.  ಮತ್ತೊಂದು ತಂಡ ಹುದೈಬಿಯಾಗೆ ಆಗಮಿಸಿ ಕಲ್ಲು, ಬಾಣಗಳನ್ನು ಎಸೆದು ಮುಸ್ಲಿಮರನ್ನು  ಕೆರಳಿಸಲು ಪ್ರಯತ್ನಿಸಿದ್ದರು. ಸಹಾಬಿಗಳು ಅವರನ್ನು ಸೆರೆ ಹಿಡಿದು ಪ್ರವಾದಿ(ಸ) ಸಮ್ಮುಖದಲ್ಲಿ ಹಾಜರು ಪಡಿಸಿದ್ದರು. ಸಮುದಾಯದ ಹಿತಾಕಾಂಕ್ಷೆಯನ್ನು ಬಯಸಿ ಪ್ರವಾದಿ(ಸ) ಅವರನ್ನು ಬಿಡುಗಡೆಗೊಳಿಸಿ ಮಾತುಕತೆ ಮುಂದುವರಿಯಲು ಅನುವು ಮಾಡಿಕೊಟ್ಟಿದ್ದರು. ಉದ್ವೇಗದ ಸಂದರ್ಭಗಳಲ್ಲಿ ದುಡುಕದೆ, ಅನುಚಿತವಾಗಿ ವರ್ತಿಸದಿರುವುದು, ಕಷ್ಟ ಕಾರ್ಪಣ್ಯಗಳ ಸಂದರ್ಭಗಳಲ್ಲಿ ಧೈರ್ಯಗೆಡದಿರುವುದು, ನಿರಾಶೆಗಳಿಂದ ದೂರವಿದ್ದು ಶಾಂತಚಿತ್ತವಾಗಿ ಸಂತುಲಿತ ತೀರ್ಮಾನ ಕೈಗೊಳ್ಳುವುದು ಓರ್ವ ಸಮರ್ಥ ನಾಯಕನ ಗುಣವಾಗಿದೆ. ಪ್ರವಾದಿ(ಸ)ಯ ಈ ತೀರ್ಮಾನದಲ್ಲಿ  ನಾಯಕರಿಗೆೆ  ಅನೇಕ ಪಾಠಗಳಿವೆ. ಮುಂದೆ ನಡೆದ ಹುದೈಬಿಯಾ ಒಪ್ಪಂದ ಮತ್ತು  ಅದರಿಂದ ಉಂಟಾದ ಯಶಸ್ಸು ಇದಕ್ಕೆ ಸಾಕ್ಷಿಯಾಗಿದೆ.

ಎರಡೂ ಕಡೆಯವರು ಹತ್ತು ವರ್ಷಗಳ ಕಾಲ ಯುದ್ಧ ನಡೆಸಬಾರದು, ಮುಸ್ಲಿಮರು ಮುಂದಿನ ವರ್ಷ ಉಮ್ರಾ ನಿರ್ವಹಿಸಬಹುದು, ಮಕ್ಕಾದ ಯಾರಾದರೂ ಮದೀನಾಗೆ ಹೋದರೆ ಅವರನ್ನು ಮರಳಿಸಬೇಕು ಮೊದಲಾದ ಏಕಪಕ್ಷೀಯವೆಂದು ತೋರುವ ಹುದೈಬಿಯಾ ಒಪ್ಪಂದಕ್ಕೆ ಪ್ರವಾದಿ(ಸ) ಸಮ್ಮತಿಸುತ್ತಾರೆ.   ಸತ್ಯನಿಷೇಧಿಗಳೊಡನೆ  ಇಂತಹ ಸಂಧಾನವಾಗಬಹುದೆಂದು ಯಾರೂ ಊಹಿಸಿರಲಿಲ್ಲ. ವಿಭಿನ್ನ ಶತ್ರುಗಳನ್ನು ಸೋಲಿಸುವ ಉದ್ದೇಶದಿಂದ ಕೆಲವರಲ್ಲಿ ತಾತ್ಕಾಲಿಕ ಒಪ್ಪಂದ ಅನಿವಾರ್ಯವಾಗಬಹುದು.

ಕುರೈಶರಂತಹ ಕಟ್ಟಾ ವೈರಿಗಳನ್ನು ಸಂಧಾನಕ್ಕೆ  ತಂದಿರುವುದು ಪ್ರವಾದಿ(ಸ)ಯ ರಾಜತಾಂತ್ರಿಕತೆಯ ನೈಪುಣ್ಯತೆಯನ್ನು ತೋರಿಸುತ್ತದೆ. ಬಾಹ್ಯ ನೋಟಕ್ಕೆ ಈ ಒಪ್ಪಂದ ಶತ್ರುಗಳಿಗೆ ಮಣಿದಂತೆ ಸಹಾಬಿಗಳಿಗೆ ಕಂಡರೂ ಕುರೈಶರು ಊಹಿಸಿರದಂತಹ ಲಾಭವನ್ನು ಮುಸ್ಲಿಮರು ಗಳಿಸಿಕೊಂಡರು.  ಪ್ರವಾದಿ(ಸ) ನಡೆ ದೂರ ದೃಷ್ಟಿಯದೆಂಬುದು ಆ ಬಳಿಕ ಮುಸ್ಲಿಮರಿಗೆ ಮನವರಿಕೆಯಾಯಿತು.

ದೊಡ್ಡ ಆಂದೋಲನಗಳ ಕಾರ್ಯಾಚರಣೆಯ ವೇಳೆ ಆತಂಕದ ಕ್ಷಣಗಳು ಎದುರಾಗುವುದು ಸಾಮಾನ್ಯ. ಆ ವೇಳೆ ನಾಯಕ ಮತ್ತು ಅನುಯಾಯಿಗಳ ಮಧ್ಯೆ ವೈಚಾರಿಕ  ಅಂತರ ಸಹಜ. ನಾಯಕರು ದೂರದೃಷ್ಟಿಯನ್ನು ಹೊಂದಿದ್ದರೆ ಅನುಯಾಯಿಗಳು ಹತ್ತಿರದ ವಾಸ್ತವಿಕತೆಗಳ ಕುರಿತು ಮಾತ್ರ ಯೋಚಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ಸಮರ್ಥ ನಾಯಕತ್ವ ಮಾತ್ರ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಬಲ್ಲುದು.

ಹುದೈಬಿಯಾ ಒಪ್ಪಂದ ಮುಸ್ಲಿಮರ ಮತ್ತು ಅರಬಿಗಳ ಮಧ್ಯೆ ವಿವಿಧ ರೀತಿಯ ಸಂಪರ್ಕಕಕ್ಕೆ ಹಾದಿ ತೆರೆಯಿತು. ವರ್ಷಗಳಿಂದ ದೂರವಾಗಿದ್ದ ಸಂಬಂಧಿಕರು ಪರಸ್ಪರ ಮಾತುಕತೆ ನಡೆಸಿದರು. ಬಹುದೇವ ವಿಶ್ವಾಸಿಗಳಲ್ಲಿದ್ದ ತಪ್ಪುಕಲ್ಪನೆಗಳನ್ನು ಹೋಗಲಾಡಿಸಲು ಮುಸ್ಲಿಮರಿಗೆ ಸಾಧ್ಯವಾಯಿತು. ಇಸ್ಲಾಮ್ ವ್ಯಾಪಕವಾಗಿ ಹರಡತೊಡಗಿತು. ಈ ಹಿಂದಿನ  19  ವರ್ಷಗಳಲ್ಲಿ ಇಸ್ಲಾಮ್ ಸ್ವೀಕರಿಸಿದ್ದ  ಜನರಷ್ಟು ಸಂಖ್ಯೆಯ ಜನರು ಒಪ್ಪಂದ ನಡೆದ ಎರಡೇ ವರ್ಷಗಳಲ್ಲಿ ಇಸ್ಲಾಮ್ ಸ್ವಿಕರಿಸಿದರು. ಅವರಲ್ಲಿ   ಇಸ್ಲಾಮಿಗಾಗಿ ನೂರಕ್ಕೂ ಮಿಕ್ಕು ಯುದ್ಧಗಳಲ್ಲಿ ಭಾಗವಹಿಸಿದ ಹೋರಾಟ ವೀರ ಖಾಲಿದ್ ಬಿನ್ ವಲೀದ್(ರ) ಮತ್ತು  ಅಮ್ರ್ ಬಿನ್ ಆಸ್(ರ) ಮೊದಲಾದವರೂ ಸೇರಿದ್ದರು.

***

LEAVE A REPLY

Please enter your comment!
Please enter your name here