ಹಿಂದಿ ಹೇರಿಕೆ ಹಿಂದುತ್ವದ ಅಜೆಂಡಾ

0
112

ನಾನು ಕಚೇರಿಯಲ್ಲಿ ಕುಳಿತುಕೊಳ್ಳುವ ಗೃಹಮಂತ್ರಿಯಾಗಿರಲಾರೆ ಎಂದು ಅಧಿಕಾರ ವಹಿಸಿದ ಮೊದಲ ದಿನವೇ ಬಹಿರಂಗ ಹೇಳಿಕೆ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತಿನ ಒಳಮರ್ಮ ಒಂದೊಂದಾಗಿಯೇ ಅನಾವರಣಗೊಳ್ಳುತ್ತಿದೆ. ಎರಡನೆಯ ಬಾರಿ ಮೋದಿ ಸರಕಾರ ಅಧಿಕಾರಕ್ಕೇರಿದ ನಂತರ ಜಾರಿಗೊಳಿಸಲಾಗುತ್ತಿರುವ ಮತ್ತು ಹೇರಲಾಗುತ್ತಿರುವ ಕಾನೂನು ನಿಯಮಾವಳಿಗಳು ಈ ದೇಶದ ಬಹುತ್ವವನ್ನು, ವೈವಿಧ್ಯತೆಯಲ್ಲಿ ಏಕತೆಯ ಶಕ್ತಿಯನ್ನು ಒಡೆದು ಹಾಕುತ್ತಿರುವುದಂತೂ ಸತ್ಯ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಪ್ರಜಾತಂತ್ರದ ಒಕ್ಕೂಟ ವ್ಯವಸ್ಥೆಯನ್ನು ಒಡೆದು ಸರ್ವಾಧಿಕಾರವನ್ನು ಹೇರುವುದಾಗಿದೆ. ಹಾಗೆಂದು ಈಗ ಸರ್ವಾಧಿಕಾರ ನಡೆಯುತ್ತಿಲ್ಲವೆಂದಲ್ಲ.ತಥಾಕಥಿತ ಸರ್ವಾಧಿಕಾರವೇ ಭಾರತದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿದೆ. ಇಂತಹ ಸರ್ವಾಧಿಕಾರ ಧೋರಣೆಗೆ ಹೊಸ ಸೇರ್ಪಡೆಯಾಗಿದೆ ಹಿಂದಿ ಭಾಷೆಯ ಹೇರಿಕೆಯ ಘೋಷಣೆ ಮತ್ತು ಅದಕ್ಕೆ ಅಮಿತ್ ಶಾ ನೀಡುತ್ತಿರುವ ಅಪಾಯಕಾರಿ ಸಮಜಾಯಿಷಿಗಳು.

ವಿಶ್ವಸಂಸ್ಥೆಯಲ್ಲಿ ಭಾರತ ವಿಶ್ವಮಾನ್ಯತೆ ಗಳಿಸಲು ಒಂದು ರಾಷ್ಟ್ರ ಭಾಷೆಯಾಗಿ ಹಿಂದಿಯನ್ನು ಪ್ರದರ್ಶಿಸಬೇಕಾಗಿದೆ, ದೇಶದ ಐಕ್ಯತೆ ಮತ್ತು ಸಮಗ್ರತೆಗಾಗಿ ‘ಒಂದು ದೇಶ-ಒಂದು ಭಾಷೆ’ ನೀತಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಹಿಂದಿ ಭಾಷೆಗೆ ಮಾತ್ರ ಆ ಶಕ್ತಿ ಇದೆ. ಭಾರತದಲ್ಲಿ ಬಹುಸಂಖ್ಯಾತ ಜನರು ಆಡುವ ಭಾಷೆ ಹಿಂದಿ ಆಗಿದೆ ಎಂಬುದು ಕೇಂದ್ರದ ಬಿಜೆಪಿ ಸರಕಾರದ ಧೋರಣೆ, ನಿಲುವು. ವಾಸ್ತವದಲ್ಲಿ ಇದ್ಯಾವುದೂ ಭಾರತದ ರಾಷ್ಟ್ರೀಯತೆಯನ್ನು ಉಳಿಸುವ, ಬೆಳೆಸುವ ಧೋರಣೆಗಳಲ್ಲ. ಒಕ್ಕೂಟ ವ್ಯವಸ್ಥೆಯನ್ನು ಒಡೆದು, ವಿವಿಧತೆಯಲ್ಲಿ ಏಕತೆ ಹಾಗೂ ಭಾರತೀಯತೆಯನ್ನು ಅಳಿಸಿ ಒಂದು ದೇಶ-ಒಂದು ಭಾಷೆಯ ಹಿಂದುತ್ವ ರಾಷ್ಟ್ರವನ್ನು ನಿರ್ಮಿಸುವುದು 1925ರಲ್ಲಿ ಸ್ಥಾಪನೆಯಾದ ಆರೆಸ್ಸೆಸ್‌ನ ಅಂತಿಮ ಗುರಿ ಆಗಿರುವ ಹಿಂದುರಾಷ್ಟ್ರದ ಬೇಡಿಕೆಗಳಾಗಿವೆ. ಈ ಪರಿಕಲ್ಪನೆಗೆ ತೊಡಕಾಗಿರುವ ಅಂಬೇಡ್ಕರ್ ರಾಷ್ಟ್ರೀಯತೆಯನ್ನು ಧ್ವಂಸಗೊಳಿಸಿ ಗೋಳ್ವಾಳ್ಕರ್ ರಾಷ್ಟ್ರೀಯತೆಯನ್ನು ಹೇರುವುದಾಗಿದೆ. ಈ ದೇಶವನ್ನು ಪ್ರತಿನಿಧಿಸುವುದು ಅಂಬೇಡ್ಕರ್ ರಾಷ್ಟ್ರೀಯತೆ. ಆದರೆ ಹಿಂದುತ್ವ ಫ್ಯಾಷಿಸಂ ಗೋಳ್ವಾಳ್ಕರ್ ರಾಷ್ಟ್ರೀಯತೆಯನ್ನು ಕಳೆದ 94 ವರ್ಷಗಳಿಂದ ಜನರ ನಡುವೆ ಹರಡುತ್ತಿದೆ. ಅದರ ಪರಿಣಾಮವಾಗಿ ಇಂದು ದೇಶದಲ್ಲಿ ಫ್ಯಾಷಿಸಮನ್ನು ಪ್ರಶ್ನಿಸುವುದು, ಮೋದಿ ಸರಕಾರವನ್ನು ಟೀಕಿಸುವುದು, ಪ್ರಭುತ್ವದ ದೌರ್ಜನ್ಯವನ್ನು ಪ್ರತಿಭಟಿಸುವ ವಿಚಾರಗಳು ದೇಶದ್ರೋಹ ಪ್ರಕರಣವಾಗಿ ದಾಖಲಾಗುತ್ತಿದೆ. ದೇಶಪ್ರೇಮದ ವ್ಯಾಖ್ಯಾನವೇ ಬದಲಾಗಿದೆ. ಹೀಗೆ ಬದಲಾದ ವ್ಯಾಖ್ಯಾನದ ಮೂಲಕವೇ ಹಿಂದಿ ಭಾಷೆಯನ್ನು ಇಡೀ ಭಾರತೀಯರ ಮೇಲೆ ಹೇರಲಾಗುತ್ತಿರುವುದು. ಇದರ ಪರಿಣಾಮ ಇಂಡಿಯಾ ಎಂಬ ಒಕ್ಕೂಟ ವ್ಯವಸ್ಥೆಯ ಭಾಗವಾಗಿರುವ ಭಾಷಾವಾರು ರಾಜ್ಯಗಳ ಅಸ್ತಿತ್ವವನ್ನೇ ಹೊಸಕಿ ಹಾಕುವುದು.

ಅಷ್ಟಕ್ಕೂ ಸಂವಿಧಾನದಲ್ಲಿ ಎಲ್ಲೂ ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಘೋಷಣೆ ಮಾಡಲಾಗಿಲ್ಲ. ಅದನ್ನು ರಾಜ್ ಭಾಷೆ ಎನ್ನಲಾಗಿದೆಯಷ್ಷೇ. ರಾಜ್ ಎಂದರೆ ಆಡಳಿತ ಎಂದರ್ಥ. ಆಡಳಿತ ಭಾಷೆಯಾಗಿ ಜನರ ಮತ್ತು ಸರಕಾರದ ನಡುವೆ ಸಂಪರ್ಕ ಸಂವಹನ ಮಾಧ್ಯಮವಾಗಿ ಇಂಗ್ಲಿಷ್ ಮತ್ತು ಹಿಂದಿಯನ್ನು ಬಳಸಲು ಅನುಮತಿಸುವ ಆಡಳಿತ ಭಾಷೆಗಳ ವಿಧೇಯಕ ತಿದ್ದುಪಡಿಯನ್ನು 1969ರಲ್ಲಿ ನೆಹರೂ ಸರಕಾರವು ಸಂಸತ್ತಿನಲ್ಲಿ ಮಂಡಿಸಿತು. ಭಾಷಾವಾರು ಪ್ರಾಂತ್ಯಗಳ ಒಕ್ಕೂಟವಾಗಿರುವ ಭಾರತದಂತಹ ಅತಿದೊಡ್ಡ ಬಹುತ್ವ ರಾಷ್ಟ್ರದಲ್ಲಿ ಒಂದು ಭಾಷೆಯನ್ನು ಹೇರುವುದು ಸಮಗ್ರತೆಯನ್ನು ಒಡೆಯುತ್ತದೆಯೇ ಹೊರತು ಏಕತೆಯನ್ನು ಸಾಧಿಸುವುದಿಲ್ಲ ಎಂಬುದಕ್ಕೆ ಈ ಹಿಂದಿನ ಘಟನೆಗಳೇ ಸಾಕ್ಷಿ. 1965ರಲ್ಲಿ ತಮಿಳುನಾಡು ರಾಜ್ಯವು ಕೇಂದ್ರದ ಹಿಂದಿ ಹೇರಿಕೆಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿತ್ತು. ಅದೇ ರೀತಿ ಪಂಜಾಬ್ ಕೂಡ ಭಾಷಾವಾರು ವಿಭಜನೆಗಾಗಿ ಪ್ರತಿಭಟನೆ ನಡೆಸಿತ್ತು. ಮೊನ್ನೆ ಅಮಿತ್ ಶಾ ಹಿಂದಿ ಹೇರಿಕೆಯ ಹೇಳಿಕೆ ನೀಡುತ್ತಲೇ ದಕ್ಷಿಣ ರಾಜ್ಯಗಳು ರೊಚ್ಚಿಗೆದ್ದವು. ಪ್ರತಿಯೊಂದು ರಾಜ್ಯಗಳು ತಮ್ಮದೇ ಆದ ನೆಲ,  ಜಲ, ಸಂಸ್ಕೃತಿ, ಭಾಷೆಗಳ ಅನನ್ಯತೆಯನ್ನು ಹೊಂದಿದೆ. ಅವುಗಳನ್ನು ಇಟ್ಟುಕೊಂಡೇ ಇತರ ರಾಜ್ಯಗಳ ಅನನ್ಯತೆಯನ್ನು ಗೌರವಿಸುತ್ತ ಒಟ್ಟು ರಾಷ್ಟ್ರೀಯತೆಯನ್ನು ಕಾಪಾಡಿಕೊಂಡು ಬಂದಿದೆ. ಇದನ್ನು ಅಂಬೇಡ್ಕರ್ ರಾಷ್ಟ್ರೀಯತೆಯ ಭಾಗವೆನ್ನಬಹುದು. ಇದನ್ನು ತೊಡೆದು ಹಾಕುವ ಪ್ರಕ್ರಿಯೆಗಳೆಲ್ಲ ಹಿಂದುತ್ವ ಫ್ಯಾಷಿಸಂನ ಅಜೆಂಡಾಗಳಾಗಿವೆ.

ದಕ್ಷಿಣ ರಾಜ್ಯಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳಲ್ಲೆಲ್ಲಾ ಹಿಂದಿ ಭಾಷಿಕರೇ ಇದ್ದಾರೆ ಎಂಬುದು ಭ್ರಮೆ ಮಾತ್ರ. ಹಿಂದಿ ರಾಷ್ಟ್ರಭಾಷೆಯಾಗಿ ಘೋಷಣೆ ಆಗದಿದ್ದರೂ ಭಾರತೀಯರು ಯಾರೂ ಅದನ್ನು ಅನ್ಯಥಾ ಅಥವಾ ತಿರಸ್ಕೃತ ಭಾವನೆಯಿಂದ ನೋಡಿದವರಲ್ಲ. ಬಾಲಿವುಡ್ ಸಿನಿಮಾಗಳು, ಹಾಡುಗಳು ಬಹುತೇಕ ಮನೆಗಳಲ್ಲಿಯೂ ಕೇಳಿಸುತ್ತಿವೆ. ದಕ್ಷಿಣ ರಾಜ್ಯಗಳ ಪಠ್ಯಪುಸ್ತಕಗಳಲ್ಲಿಯೂ ಹಿಂದಿ ಭಾಷಾ ಕಲಿಕೆ ಇದೆ. ಅದು ಈವರೆಗೆ ಆಯ್ಕೆಯಾಗಿ ಮಾತ್ರ ನಮ್ಮ ಮುಂದೆ ಇತ್ತು. ಅದನ್ನು ದೇಶದ ಒಂದು ಭಾಷೆ ಎಂದು ಎಲ್ಲರೂ ಗೌರವಿಸುತ್ತಾ ಬಂದಿದ್ದಾರೆ. ಆದರೆ ಯಾವಾಗ ಒಂದು ಭಾಷೆ, ಸಂಸ್ಕೃತಿಯನ್ನು ಇನ್ನೊಂದು ಜನಸಮೂಹದ ಮುಂದೆ ಹೇರುವ ಪ್ರಯತ್ನ ನಡೆಯುತ್ತದೋ ಅಲ್ಲೆಲ್ಲಾ ಸಂಘರ್ಷಗಳು ನಡೆದಿವೆ. ಬಹುತ್ವವು ಇದುವರೆಗೆ ದೇಶವನ್ನು ಸಂಘರ್ಷಮಯಗೊಳಿಸಿಲ್ಲ. ಆದರೆ ಬಹುತ್ವವನ್ನು ಒಡೆಯಲು ಯತ್ನಿಸಿದಾಗ ಗಲಭೆಗಳು ಉಂಟಾಗಿವೆ. ಪ್ರಾಣ, ಮಾನ ಹಾನಿ ಸಂಭವಿಸಿವೆ. ಸಂಘರ್ಷವೇ ‘ಸಂಘ’ದ ಸಿದ್ಧಾಂತವಾಗಿರುವಾಗ ಹಿಂದಿ ಹೇರಿಕೆಯು ಇನ್ನೊಂದು ಬಗೆಯ ಸಂಘರ್ಷಕ್ಕೆ ಸಂಘಪರಿವಾರವು ರೂಪಿಸಿರುವ ಷಡ್ಯಂತ್ರ ಎಂಬುದರಲ್ಲಿ ಸಂಶಯವಿಲ್ಲ.

LEAVE A REPLY

Please enter your comment!
Please enter your name here