ಹಿಂದಿ ಹೇರಿಕೆ: ಬಹುತ್ವದ ಮೇಲಿನ ಸವಾರಿ

0
96

♦ ಡಾ. ರಾಮ್ ಪುನಿಯಾನಿ

ಮೋದಿ.2 ಒಂದು ಶಕ್ತಿಶಾಲಿ ಸರಕಾರವಾಗಿ ಹೊರಹೊಮ್ಮಿದೆ. ಒಂದೆಡೆ ಅದು ಗಮನಾರ್ಹ ಸಂಸದರ ಬಲವನ್ನು ಹೊಂದಿದ್ದರೆ, ಮತ್ತೊಂದೆಡೆ ವಿಪಕ್ಷವು ತೀವ್ರ ದುರ್ಬಲವಾಗಿದೆ ಮತ್ತು ಚದುರಿಹೋಗಿದೆ. ಇದೇ ಕಾರಣದಿಂದಾಗಿ ಸರಕಾರವು ಜನರ ಭಾವನೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಲಜ್ಜವಾಗಿ ಆರೆಸ್ಸೆಸ್-ಬಿಜೆಪಿಯ ಹಿಂದೂ ರಾಷ್ಟ್ರೀಯತೆಯ ಅಜೆಂಡಾವನ್ನು ಜಾರಿಗೊಳಿಸುತ್ತಿದೆ. ಮೊದಲು ಅದು ತ್ರಿವಳಿ ತಲಾಕ್ ನಿಷೇಧಿಸುವ ಕಾನೂನು ತಂದಿತು. ನಂತರ ವಿಧಿ 370ನ್ನು ತೆಗೆದು ಹಾಕಿತು. ಈ ಸುಲಭ ಯಶಸ್ಸುಗಳಿಂದ ಉತ್ಸಾಹಗೊಂಡಿರುವ ಅದು ಇದೀಗ ಒಂದೊಂದಾಗಿ ಇತರ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ.

ಹಿಂದಿ ದಿವಸದ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮ್ಮ ಪಕ್ಷವು ಹಿಂದಿಗೆ ರಾಷ್ಟ್ರ ಭಾಷೆಯ ಸ್ಥಾನಮಾನ ನೀಡಲು ಬಯಸುತ್ತಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸಿದರು. ಅವರು ಹೇಳುವಂತೆ, ‘‘ಜಗತ್ತಿನಲ್ಲಿ ದೇಶವನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ದೇಶಕ್ಕೆ ಒಂದು ಭಾಷೆ ಇರುವುದು ಅಗತ್ಯವಾಗಿದೆ… ದೇಶದಲ್ಲಿ ವ್ಯಾಪಕವಾಗಿ ಮಾತನಾಡುವ ಹಿಂದಿ, ಭಾರತವನ್ನು ಒಂದುಗೂಡಿಸುವ ಭಾಷೆಯಾಗಬಹುದು… ಹಿಂದಿ ನಮ್ಮ ಪ್ರಾಚೀನ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ನಮ್ಮ ಸ್ವಾತಂತ್ರ ಸಂಗ್ರಾಮದ ನೆನಪುಗಳನ್ನು ಸಂರಕ್ಷಿಸುವ ಭಾಷೆಯಾಗಿದೆ. ಹಿಂದಿ ಭಾಷೆಯು ಹೆಚ್ಚುಕಡಿಮೆ ರಾಷ್ಟ್ರ ತಿಳಿದಿರುವ ಒಂದು ಭಾಷೆಯಾಗಿದೆ. ಒಂದು ವೇಳೆ ಹಿಂದಿಯನ್ನು ನಮ್ಮ ಸ್ವಾತಂತ್ರ ಸಂಗ್ರಾಮದಿಂದ ಹೊರಹಾಕಿದರೆ, ಆ ಹೋರಾಟದ ಇಡೀ ಆತ್ಮವು ಕಳೆದು ಹೋಗಬಹುದು.’’ ಅವರು ಟ್ವೀಟ್ ಮಾಡಿರುವ ಪ್ರಕಾರ, ‘‘ನಾವು ತಮ್ಮ ತಮ್ಮ ಮಾತೃಭಾಷೆಯ ಬಳಕೆಯನ್ನು ಹೆಚ್ಚಿಸಬೇಕು ಮತ್ತು ಜೊತೆಗೆ ಹಿಂದಿ ಭಾಷೆಯನ್ನು ಪ್ರಯೋಗಿಸಿ ಬಾಪೂ ಮತ್ತು ಸರ್ದಾರ್ ಪಟೇಲ್‌ರವರ ದೇಶದ ಒಂದು ಭಾಷೆಯ ಕನಸನ್ನು ನನಸಾಗಿಸಲು ಶ್ರಮಿಸಬೇಕೆಂದು ನಾನು ದೇಶದ ಎಲ್ಲಾ ನಾಗರಿಕರೊಂದಿಗೆ ಮನವಿ ಮಾಡುತ್ತೇನೆ’’ ಎಂದು ಬರೆದಿದ್ದಾರೆ.

ಶಾರವರ ಪದಗಳು ಬುದ್ಧಿವಂತಿಕೆಯಿಂದ ಕೂಡಿತ್ತು ಮತ್ತು ಅವರ ಉದ್ದೇಶ ಸ್ಪಷ್ಟವಾಗಿತ್ತು. ಇದು ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳನ್ನು ತೆರೆಗೆ ಸರಿಸುವ ಮತ್ತು ಎಲ್ಲಾ ವಿಧಾನಗಳ ಮೂಲಕ ಹಿಂದಿಗೆ ಮಹತ್ವ ನೀಡುವ ಉದ್ದೇಶವನ್ನು ಹೊಂದಿದೆ. ಶಾರವರ ನೈಜ ಉದ್ದೇಶವನ್ನು ಗ್ರಹಿಸಿರುವ ಎಂ.ಕೆ.ಸ್ಟಾಲಿನ್, ಶಶಿ ತರೂರ್, ಪಿಣರಾಯಿ ವಿಜಯನ್ ಮತ್ತು ಕಮಲ್ ಹಾಸನ್‌ರಂತಹ ದಕ್ಷಿಣ ಭಾರತದ ಹಲವು ನಾಯಕರು ಅವರ ಹೇಳಿಕೆಗೆ ಬಹಿರಂಗ ವಿರೋಧ ವ್ಯಕ್ತಪಡಿಸಿದರು. ಇದು ಈ ರಾಜ್ಯಗಳ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು. ‘‘ಆ ಭಾಷೆ(ಹಿಂದಿ)ಯು ಬಹುಸಂಖ್ಯಾತ ಭಾರತೀಯ ಮಾತೃಭಾಷೆಯಲ್ಲ. ಅವರ ಮೇಲೆ ಹಿಂದಿಯನ್ನು ಹೇರುವ ನಡೆಯು ಅವರನ್ನು ದಾಸ್ಯತನಕ್ಕೆ ತಳ್ಳುವುದಕ್ಕೆ ಸಮನಾಗಿದೆ’’ ಎಂದು ವಿಜಯನ್ ಹೇಳಿದರು. ವಿಡಿಯೋವೊಂದನ್ನು ಅಪ್‌ಲೋಡ್ ಮಾಡಿರುವ ಕಮಲ್ ಹಾಸನ್, ಇದರಲ್ಲಿ ಅವರು ಅಶೋಕ್ ಸ್ಥಂಭ ಮತ್ತು ಸಂವಿಧಾನದ ಪೀಠಿಕೆಯ ಪಕ್ಕದಲ್ಲಿ ನಿಂತಂತೆ ಕಂಡು ಬರುತ್ತಾರೆ. ಅವರು ಹೇಳುವಂತೆ, ‘‘ಭಾರತವು 1950ರಲ್ಲಿ ವಿವಿಧತೆಯಲ್ಲಿ ಏಕತೆಯ ಭರವಸೆಯೊಂದಿಗೆ ಗಣರಾಜ್ಯವಾಯಿತು ಮತ್ತು ಇದೀಗ ಯಾವನೇ ಶಾ, ಸುಲ್ತಾನ್ ಅಥವಾ ಸಾಮ್ರಾಟ ಈ ಭರವಸೆಯನ್ನು ತಕ್ಷಣ ಮುರಿಯಲು ಸಾಧ್ಯವಿಲ್ಲ. ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ನಮ್ಮ ಮಾತೃಭಾಷೆ ತಮಿಳು ಆಗಿರಲಿದೆ. ನಮ್ಮ ಭಾಷೆಯ ಕುರಿತ ಹೋರಾಟವು ವೇಗವಾಗಿ ಹೆಚ್ಚಲಿದೆ.’’

ನಮ್ಮ ದೇಶವು ಭಾಷೆ, ಸಂಸ್ಕೃತಿ, ಧರ್ಮ ಮತ್ತು ಜನಾಂಗ ಮುಂತಾದ ಎಲ್ಲಾ ವಿಚಾರಗಳಲ್ಲಿ ಅತ್ಯಂತ ವಿವಿಧತೆಯಿಂದ ಕೂಡಿದೆ. ನಮ್ಮ ಸ್ವಾತಂತ್ರ ಸಂಗ್ರಾಮವು ಈ ವಿವಿಧತೆಯನ್ನು ಪ್ರತಿಬಿಂಬಿಸುತ್ತದೆ. ಈ ಎಲ್ಲಾ ವಿವಿಧತೆಗಳ ಹೊರತಾಗಿಯೂ, ಜನರು ಬ್ರಿಟಿಷರ ವಿರುದ್ಧ ಒಂದಾಗಿ ಹೋರಾಟ ನಡೆಸಿದರು. ವಿಶೇಷವಾಗಿ, ವಿಭಿನ್ನ ಧರ್ಮಗಳು ಮತ್ತು  ಭಾಷೆಗಳ ವಿವಿಧತೆ ಮತ್ತು ಶ್ರೀಮಂತ ಪರಂಪರೆಯನ್ನು ಗೌರವಿಸಿದರು. ಭಾರತವು ಒಂದು ರಾಷ್ಟ್ರವಾಗುವ ಆಕಾಂಕ್ಷೆಯ ಅಭಿವ್ಯಕ್ತಿಯು ಎಲ್ಲಾ ಭಾಷೆಗಳಲ್ಲೂ ಉಂಟಾಯಿತು. ಇತರ ಪ್ರಾದೇಶಿಕ ಭಾಷೆಗಳೊಂದಿಗೆ, ಹಿಂದಿಗೆ ಭಾರತೀಯ ಸಮಾಜದ ದರ್ಪಣವಾಗುವ ಸಮೃದ್ಧ ಪರಂಪರೆ ದೊರಕಿತು. ಅದಾಗ್ಯೂ, ಇಂಗ್ಲಿಷ್ ಪ್ರಾಥಮಿಕವಾಗಿ ಆಡಳಿತ ಭಾಷೆಯಾಗಿ ದೇಶಕ್ಕೆ ಪರಿಚಯಿಸಲ್ಪಟ್ಟಿತು. ಆದರೆ ಅದು ಭಾರತೀಯ ಸಂಸ್ಕೃತಿಯ ಭಾಗವಾಗಿ ಬಿಟ್ಟಿತು ಮತ್ತು ಇಂದು ಅದು ಇತರ ಭಾಷೆಗಳಷ್ಟೇ ಭಾರತೀಯ ಸಮಾಜ ಮತ್ತು ಅದರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತಿದೆ.

ಬ್ರಿಟಿಷರ ದಾಸ್ಯತನದಿಂದ ಮುಕ್ತಿ ಹೊಂದುವ ರಾಷ್ಟ್ರೀಯ ಸ್ವಾತಂತ್ರ ಸಂಗ್ರಾಮವು ಎಲ್ಲಾ ಭಾಷೆಗಳನ್ನು ಗೌರವಿಸುತ್ತಿದ್ದರೆ, ಅದೇ ವೇಳೆ ಕೋಮುವಾದಿ ಶಕ್ತಿಗಳು ವಿಭಿನ್ನ ಚಿಂತನೆಯನ್ನು ಹೊಂದಿದ್ದವು. ಮುಸ್ಲಿಮ್ ಮೂಲಭೂತವಾದಿಗಳು ‘ಉರ್ದು, ಮುಸ್ಲಿಮ್, ಪಾಕಿಸ್ತಾನ’ದ ಘೋಷಣೆಯೊಂದಿಗೆ ಮುಂದೆ ಬಂದರೆ, ಹಿಂದಿ ರಾಷ್ಟ್ರೀಯವಾದಿಗಳು ‘ಹಿಂದಿ, ಹಿಂದೂ, ಹಿಂದುಸ್ತಾನ’ದ ಘೋಷಣೆಯನ್ನು ಕೂಗಿದರು. ಅವಿಭಜಿತ ಭಾರತದ ಮುಸ್ಲಿಮ್ ಬಹುಸಂಖ್ಯಾತ ಪ್ರದೇಶ (ಪೂರ್ವ ಪಾಕಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನ)ಗಳನ್ನು ಜೊತೆಗೂಡಿಸಿ ಪಾಕಿಸ್ತಾನವನ್ನು ರಚಿಸಲಾಯಿತು. ಆದರೆ ಆ ದೇಶದಲ್ಲಿ ಬಹಳಷ್ಟು ಭಾಷಾ ವಿವಿಧತೆಗಳಿದ್ದವು. ಮುಸ್ಲಿಮ್ ಲೀಗ್ ಉರ್ದುವನ್ನು ದೇಶದ ರಾಷ್ಟ್ರ ಭಾಷೆಯನ್ನಾಗಿ ಮಾಡಲು ಆಗ್ರಹಿಸಿತು. ಈ ಹಠದ ಕಾರಣದಿಂದಾಗಿ, ಪೂರ್ವ ಪಾಕಿಸ್ತಾನವು ದೇಶದಿಂದ ಪ್ರತ್ಯೇಕವಾಯಿತು ಮತ್ತು ಬಾಂಗ್ಲಾದೇಶ ಅಸ್ತಿತ್ವಕ್ಕೆ ಬಂತು. ಇಲ್ಲಿನ ಮುಖ್ಯ ಭಾಷೆ ಬಂಗಾಳಿಯಾಗಿತ್ತು.

ಕೂತೂಹಲಕಾರಿ ಸಂಗತಿಯೆಂದರೆ, ಸಂವಿಧಾನ ನಿರ್ಮಾತೃಗಳು ಈ ರೀತಿಯ ನಿರ್ಣಯಕ್ಕೆ ಬಂದಿದ್ದರು; ‘‘ನಾಗರಿಕರ ಇಚ್ಛಾನುಸಾರ ದೇವನಾಗರಿ ಅಥವಾ ಫಾರ್ಸಿ ಲಿಪಿಯಲ್ಲಿ ಬರೆಯುವ ಹಿಂದೂಸ್ತಾನಿಯು, ದೇಶದ ರಾಷ್ಟ್ರಭಾಷೆಯ ರೂಪದಲ್ಲಿ ಒಕ್ಕೂಟದ ಮೊದಲ ಅಧಿಕೃತ ಭಾಷೆಯಾಗಲಿದೆ. ಒಕ್ಕೂಟವು ಕಾನೂನಿನ ಪ್ರಕಾರ ನಿರ್ಧರಿಸುವವರೆಗೆ ಇಂಗ್ಲಿಷ್ ದ್ವಿತೀಯ ಅಧಿಕೃತ ಭಾಷೆಯಾಗಿರಲಿದೆ. ತ್ರಿಭಾಷಾ ಸೂತ್ರದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಸಬೇಕಾಗಿತ್ತು. 1960ರ ದಶಕದಲ್ಲಿ ದಕ್ಷಿಣ ರಾಜ್ಯಗಳ ಮೇಲೆ ಹಿಂದಿ ಹೇರುವ ಪ್ರಯತ್ನ ನಡೆದಾಗ, ಇದರ ವಿರುದ್ಧ ಈ ನೀತಿಯ ಅನುಷ್ಠಾನವನ್ನು ತಡೆಯವಷ್ಟರ ಮಟ್ಟಿಗೆ ವಿರೋಧ ಉಂಟಾಯಿತು. ಹೊಸ ಶಿಕ್ಷಣ ನೀತಿಯು ಮತ್ತೊಮ್ಮೆ ಹಿಂದಿಯನ್ನು ಕಡ್ಡಾಯವಾಗಿ ಪರಿಗಣಿಸುವ ಇಚ್ಛೆಯನ್ನು ಹೊಂದಿದೆ. ಹಿಂದಿ ಬಹುಸಂಖ್ಯಾತ ಭಾರತೀಯ ಭಾಷೆ ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಇತ್ತೀಚಿನ ಅಂಕಿಅಂಶಗಳು ತೋರಿಸುವಂತೆ, ಹಿಂದಿ ಶೇ.25ರಷ್ಟು ಭಾರತೀಯ ಮಾತೃಭಾಷೆಯಾಗಿದೆ ಮತ್ತು ತಾವು ಹಿಂದಿ ತಿಳಿದಿದ್ದೇವೆ ಎಂಬುದು ಸುಮಾರು ಶೇ.44ರಷ್ಟು ಮಂದಿಯ ಹೇಳಿಕೆಯಾಗಿದೆ. ತುಂಬಾ ಮೊದಲು, 1940ರ ದಶಕದಲ್ಲಿ ಕಾಂಗ್ರೆಸ್ ಸರಕಾರವು ಆಗಿನ ಮದ್ರಾಸ್ ಪ್ರಾಂತ್ಯ(ಈಗಿನ ತಮಿಳುನಾಡು)ದಲ್ಲಿ ಅಧಿಕಾರಕ್ಕೇರಿದಾಗ, ಅಲ್ಲಿ ಹಿಂದಿಯನ್ನು ಬಳಸುವ ಪ್ರಯತ್ನ ನಡೆಸಿತು. ಪೆರಿಯಾರ್ ರಾಮಸ್ವಾಮಿ ನಾಯರ್ ಇದನ್ನು ವಿರೋಧಿಸಿದ್ದರು. ಅವರು ‘‘ತಮಿಳುನಾಡು ತಮಿಳರಿಗಾಗಿ’’ ಎಂಬ ಘೋಷಣೆಯನ್ನು ನೀಡಿದರು ಮತ್ತು ಹಿಂದಿ, ದ್ರಾವಿಡ ಸಂಸ್ಕೃತಿಯ ಮೇಲೆ ದಾಳಿ ನಡೆಸುವ ಆರ್ಯನ್ನರ ಅಸ್ತ್ರವಾಗಿದೆ ಎಂದು ಆರೋಪಿಸಿದ್ದರು.

ಭಾಷೆಯಂತಹ ಸಂಕೀರ್ಣ ವಿಚಾರಗಳಲ್ಲಿ ಹೇಗೆ ವ್ಯವಹರಿಸಬೇಕು? ದೇಶದಲ್ಲಿ ಇಂಗ್ಲಿಷ್, ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳು ಮೂರು ಪ್ರತ್ಯೇಕ ಸ್ಥರಗಳಲ್ಲಿ ಪ್ರತ್ಯೇಕ ಅನುಪಾತದಲ್ಲಿ ಬಳಸಲಾಗುತ್ತಿದೆ. ಹಿಂದಿಯನ್ನು ದಕ್ಷಿಣದ ರಾಜ್ಯಗಳಲ್ಲಿ ಜನಪ್ರಿಯಗೊಳಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಅದೇ ವೇಳೆ ದಕ್ಷಿಣ ಭಾರತದ ಭಾಷೆಗಳನ್ನು ಹಿಂದಿ ಸೀಮೆಯಲ್ಲಿ ಪ್ರಚಾರಪಡಿಸುವ ಯಾವುದೇ ಪ್ರಯತ್ನಗಳು ನಡೆಯುತ್ತಿಲ್ಲ. ಹಿಂದಿ ಇವತ್ತು ಖಂಡಿತವಾಗಿಯೂ ದೇಶದ ದಕ್ಷಿಣ ಮತ್ತು ಇತರ ರಾಜ್ಯಗಳಲ್ಲಿ ಮೊದಲಿಗಿಂತಲೂ ಹೆಚ್ಚು ಮಾತನಾಡುವ ಮತ್ತು ತಿಳಿದುಕೊಳ್ಳುವ ಭಾಷೆಯಾಗಿದೆ. ಆದರೆ ಇದು ಸರಕಾರದ ಮಟ್ಟದಲ್ಲಿ ಹಿಂದಿಯನ್ನು ಹೇರುವ ಪ್ರಯತ್ನದಿಂದ ನಡೆದಿಲ್ಲ. ಇದು ಹಿಂದಿ ಸಿನಿಮಾಗಳು, ಟಿವಿ ಧಾರಾವಾಹಿಗಳು ಮತ್ತು ಹಿಂದಿಯ ಅಭಿವೃದ್ಧಿಗಾಗಿ ಕೆಲಸ ಮಾಡುವ ಸಂಸ್ಥೆಗಳಿಂದ ಶ್ರಮದಿಂದಾಗಿದೆ.

ಉರ್ದುವನ್ನು ದೇಶದ ಮೇಲೆ ಹೇರುವ ಪ್ರಯತ್ನವು ಪಾಕಿಸ್ತಾನವನ್ನು ಎರಡು ತುಂಡುಗಳನ್ನಾಗಿ ಮಾಡಿತ್ತು. ಭಾರತವು ಇಂದಿನವರೆಗೂ ಭಾಷೆಯಲ್ಲಿ ಸಮತೋಲನ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಭಾಷೆಯ ಆಧಾರದಲ್ಲಿ ರಾಜ್ಯಗಳ ಪುನರ್‌ವಿಂಗಡೆನೆಯು ನಮಗೆ ಒಂದು ಅಪೂರ್ವ ಶಕ್ತಿಯನ್ನು ನೀಡಿದೆ. ಅಮಿತ್ ಶಾ ಭಾಷೆಯ ವಿಚಾರ ಸೇರಿದಂತೆ, ಎಲ್ಲದರಲ್ಲೂ ಏಕರೂಪವನ್ನು ಹೇರುವ ತಮ್ಮ ಅಜೆಂಡಾವನ್ನು ಇಡೀ ದೇಶದ ಮುಂದಿಟ್ಟಿದ್ದಾರೆ. ಸರಕಾರವು ವಿವೇಚನೆಯೊಂದಿಗೆ ಹಾಗೂ ಪಕ್ವತೆಯೊಂದಿಗೆ ಕಾರ್ಯ ನಿರ್ವಹಿಸಲಿದೆ ಮತ್ತು ದೇಶದ ಭಾಷಾ ನೀತಿಯನ್ನು ನಿರ್ಧರಿಸುವಾಗ ದಕ್ಷಿಣ ರಾಜ್ಯಗಳ ಭಾವನೆಗಳು  ಮತ್ತು ಸಂವೇದನೆಗಳ ಕುರಿತು ಗಮನ ಹರಿಸಲಿದೆ ಎಂಬ ನಿರೀಕ್ಷೆಯಿದೆ.

LEAVE A REPLY

Please enter your comment!
Please enter your name here