ಹಾಶಿಂಪುರ್ ಹತ್ಯಾಕಾಂಡ: ವಿಳಂಬದ ನ್ಯಾಯ

0
221

31 ವರ್ಷಗಳ ಬಳಿಕ ಹಾಶಿಂಪುರದ ಜನರಲ್ಲಿ ಒಂದಷ್ಟು ನೆಮ್ಮದಿ ಮೂಡಿದೆ. ಇದಕ್ಕೆ ಕಾರಣ ದಿಲ್ಲಿ ಹೈಕೋರ್ಟ್ ಇತ್ತೀಚೆಗೆ ನೀಡಿದ ಮಹತ್ವದ ತೀರ್ಪು. ಉತ್ತರ ಪ್ರದೇಶದ ಹಾಶಿಂಪುರ ಹತ್ಯಾಕಾಂಡದ 42 ಮುಸ್ಲಿಮ್ ಯುವಕರ ಹತ್ಯೆಯ ಪ್ರಕರಣದ 16 ಪಿಎಸಿ ನಿವತ್ತ ಪೊಲೀಸರಿಗೆ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಸಶಸ್ತ್ರ ಪ್ರಾಂತೀಯ ಪೊಲೀಸ್ ಪಡೆ (ಪ್ರೊವಿನ್ಶಲ್ ಆರ್ಮ್ಡ್ ಕಾನ್ಸಟ್ಯಾಬ್ಯುಲರಿ – ಪಿಎಸಿ)ಯ ಈ ಆರೋಪಿಗಳ ವಿರುದ್ಧ ಹತ್ಯೆ, ಅಪಹರಣ, ಸಾಕ್ಷನಾಶ ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿತ್ತು. ಇಡೀ ಘಟನೆಯನ್ನು ಕೋರ್ಟ್ ‘ಟಾರ್ಗೆಟ್ ಕಿಲ್ಲಿಂಗ್’ ಎಂದು ಹೇಳಿದೆ. ಈ ತೀರ್ಪು, ಪೂರ್ವಗ್ರಹಪೀಡಿತ ಮನೋಸ್ಥಿತಿಯ ಪೊಲೀಸರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಮಾನವ ಹಕ್ಕು ಹೋರಾಟಗಾರರ ಛಲಬಿಡದ ಕಾನೂನು ಹೋರಾಟವು ನ್ಯಾಯವಂಚಿತವಾಗಲಿದ್ದ ಈ ಪ್ರಕರಣಕ್ಕೆ ನ್ಯಾಯವನ್ನು ದಕ್ಕಿಸಿಕೊಟ್ಟಿದೆ.

ಘಟನೆಯ ಹಿನ್ನೆಲೆ:
1986 ಫೆಬ್ರವರಿಯಲ್ಲಿ ಕೇಂದ್ರ ಸರಕಾರವು ಬಾಬರಿ ಮಸ್ಜಿದ್ ಬೀಗ ತೆರೆಯಲು ಆದೇಶ ನೀಡಿದಾಗ ಪಶ್ಚಿಮ ಯುಪಿಯಲ್ಲಿ ಪರಿಸ್ಥಿತಿಯು ಬಿಗಡಾಯಿಸಲಾರಂಭಿಸಿತ್ತು. ಇದರ ಬಳಿಕ 1987ರ ಎಪ್ರಿಲ್ – ಮೇಯಲ್ಲಿ ಸಣ್ಣ ಮಟ್ಟದ ಹಿಂದೂ-ಮುಸ್ಲಿಮ್ ಸಂಘರ್ಷಗಳು ಉಂಟಾಗಲು ಪ್ರಾರಂಭವಾದವು. ಈ ಗಲಭೆಯನ್ನು ನಿಯಂತ್ರಿಸಲು 1987ರಲ್ಲಿ ಮೇಯಲ್ಲಿ ಸೈನ್ಯವನ್ನು ಕರೆ ತರಲಾಯಿತು. ಈ ಗಲಭೆಯಲ್ಲಿ ಮಕ್ಕಳು, ಮಹಿಳೆ, ವದ್ಧರು ಸೇರಿದಂತೆ ಸಾವಿರಾರು ಮಂದಿ ತಮ್ಮ ಜೀವವನ್ನು ಕಳೆದುಕೊಂಡರು. ಈ ಸಂದರ್ಭ ಅಂದಾಜು 10 ಕೋಟಿ ರೂಪಾಯಿ ವೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ ಎಂದು ಅಂದಾಜಿಸಲಾಗಿತ್ತು. ಈ ಗಲಭೆಯಲ್ಲಿ ಪಿಎಸಿ ಪಕ್ಷಪಾತದ ಪಾತ್ರವನ್ನು ನಿರ್ವಹಿಸಿತು. ಇದು ಭಯಾನಕ ಕೊಲೆಗಳನ್ನು ನಡೆಸಿತು ಮತ್ತು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯಾಯಿತು. ಗಲಭೆಯ ಬಳಿಕ ಬಹಿರಂಗವಾದ ಪಿಎಸಿ ಪಡೆಯಿಂದ ನಡೆದ ಈ ಪಾಶವೀಕತ್ಯಗಳು ಮರೆಯಲಾಗದ ಕಹಿಸತ್ಯವಾಗಿ ದಾಖಲಾಗಿವೆ.

ಹಾಶಿಂಪುರ ಹತ್ಯಾಕಾಂಡದ ಶೂಟೌಟ್‌ನ ಬಲಿಪಶುಗಳಲ್ಲಿ 5 ಮಂದಿ ಬದುಕುಳಿದಿದ್ದರು. ಬದುಕುಳಿದವರೂ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಹತರಾದ ಉಳಿದ ಬಲಿಪಶುಗಳಂತೆ ಇವರನ್ನೂ ಕೂಡ ಹಾಶಿಂಪುರದಿಂದ ಅಪಹರಿಸಲಾಗಿತ್ತು. ಮಧ್ಯರಾತ್ರಿ ಅವರನ್ನೂ ಕೂಡ ಪಿಎಸಿ ಟ್ರಕ್‌ನಲ್ಲಿ ತುಂಬಿಸಿಕೊಂಡು ಕರೆತರಲಾಗಿತ್ತು. ಬಳಿಕ ಗುಂಡು ಹಾರಿಸಿ ಕೊಂದು ಹಿಂಡನ್ ನದಿಗೆ ಎಸೆಯಲಾಗಿತ್ತು. ದಡ ಸೇರಿ ಬದುಕುಳಿದ ಆ ಸಂತ್ರಸ್ತರು ಕೋರ್ಟ್‌ಗೆ ಹಾಜರಾಗಿ ಧೈರ್ಯದಿಂದ ಸಾಕ್ಷ ನುಡಿದಿದ್ದರು. ಅವರ ಸಾಕ್ಷವನ್ನು ಕೇಳಿದ ಎಂತಹವರ ಆತ್ಮವೂ ಕಂಪಿಸುತ್ತಿತ್ತು. ಅವರ ಸಾಕ್ಷವು ಘಟನೆಯಲ್ಲಿ ಪೊಲೀಸರ ಬರ್ಬರತೆಯನ್ನು ಸಾರಿ ಹೇಳುತ್ತಿತ್ತು. ಪೊಲೀಸರು ಅಂದು ಯಾವ ರೀತಿಯಲ್ಲಿ ನಿರ್ದಯವಾಗಿ ಆ ಹತ್ಯಾಕಾಂಡವನ್ನು ನಡೆಸಿದರು ಎಂಬುದನ್ನು ಕೂಡ ಅರಿಯಬಹುದಾಗಿತ್ತು. ಸಿಬಿ-ಸಿಐಡಿಯ 1994ರ ವರದಿಯು ಈ ಎಲ್ಲಾ ಘಟನೆಗಳ ಬಗ್ಗೆ ಬೆಳಕು ಚೆಲ್ಲಿತ್ತು. ವರದಿ ಹೇಳುವಂತೆ, ‘‘1987ರ ಮೇ 22ರಂದು ರಾತ್ರಿ ಸುಮಾರು ಎಂಟು ಗಂಟೆಗೆ ಸುಮಾರು 40-42 ಮಂದಿಯನ್ನು ಮೀರತ್‌ನ ಸಿವಿಲ್ ಲೈನ್ಸ್ ಅಥವಾ ಪೊಲೀಸ್ ಲೈನ್‌ಗೆ ಕರೆದೊಯ್ಯುವ ನೆಪವೊಡ್ಡಿ ಪಿಎಸಿಯ ಟ್ರಕ್ ಯೂಆರ್‌ಯೂ 1493ಯಲ್ಲಿ ಕುಳ್ಳಿರಿಸಿ ಹಾಶಿಂಪುರ್‌ನಿಂದ ಕೊಂಡೊಯ್ಯಲಾಯಿತು. ಆದರೆ ತುಕಡಿಯ ಕಮಾಂಡರ್ ಎಸ್.ಪಿ.ಸಿಂಗ್ ಅವರನ್ನು ಸೂಚಿಸಿದ ಸ್ಥಳಕ್ಕೆ ಕೊಂಡೊಯ್ಯದೆ ಮೊರಾದ್‌ನಗರ, ಗಾಝಿಯಾಬಾದ್‌ನ ಮೇಲಿನ ಗಂಗಾ ಕಾಲುವೆಗೆ ಕೊಂಡೊಯ್ದರು ಮತ್ತು ಅಲ್ಲಿ ಅವರನ್ನು ಒಬ್ಬೊಬ್ಬನನ್ನಾಗಿ ಎಲ್ಲರನ್ನೂ ಕೊಲ್ಲಲು ಪ್ರಾರಂಭಿಸಿದರು.’’ ಶೂಟೌಟ್ ನಡೆಸಲು ಆದೇಶ ನೀಡಿದ ಆರೋಪ ಎಸ್.ಪಿ.ಸಿಂಗ್ ಮೇಲಿತ್ತು. ಆದರೆ ಅವರನ್ನು ರಕ್ಷಿಸುವ ಪ್ರಯತ್ನಗಳು ಸಾಗಿದ್ದವು. ಗಮನಾರ್ಹವೆಂದರೆ, ಹಾಶಿಂಪುರ ಹತ್ಯಾಕಾಂಡದ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿತ್ತು ಮತ್ತು ಕೇಂದ್ರದಲ್ಲೂ ಅಧಿಕಾರದಲ್ಲಿತ್ತು.

ಮೊದಲು ಈ ಪ್ರಕರಣವು ಉತ್ತರ ಪ್ರದೇಶದ ಗಾಝಿಯಾಬಾದ್‌ನಲ್ಲಿ ವಿಚಾರಣೆಯಲ್ಲಿತ್ತು. ನಂತರ ವಿಚಾರಣೆಯ ವಿಳಂಬದ ಕಾರಣದಿಂದಾಗಿ ಪ್ರಾಣ ಕಳೆದುಕೊಂಡ ಕುಟುಂಬದ ಸಂತ್ರಸ್ತರು ಸುಪ್ರೀಂ ಕೋರ್ಟ್‌ನ ಕದ ತಟ್ಟಿದ್ದರು. ನಂತರ ದಿಲ್ಲಿಯ ದಿಲ್ಲಿಯ ವಿಚಾರಣಾ ನ್ಯಾಯಾಲಯವು 2015ರಲ್ಲಿ ಆರೋಪಿಗಳಾದ ಎಲ್ಲಾ 19 ಪಿಎಸಿ ಪೊಲೀಸರನ್ನು ಖುಲಾಸೆಗೊಳಿಸಿತ್ತು. ಇದರಲ್ಲಿ ಮೂವರು ವಿಚಾರಣೆಯ ವೇಳೆಯೇ ಸಾವನ್ನಪ್ಪಿದ್ದರು. ನಂತರ ಸಂತ್ರಸ್ತ ಕುಟುಂಬದವರು ಇತರರ ಸಹಾಯದಿಂದ ದಿಲ್ಲಿ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಒಂದೆಡೆ ಈ ಘಟನೆಯಲ್ಲಿ ಸೇನೆಯ ಅಪರಾಧಿಕ ಪಾತ್ರವೂ ಇತ್ತು. ಇಂದಿನ ವರೆಗೂ ಹಾಶಿಂಪುರ್-ಮಾಲಿಯಾನ ಹತ್ಯಾಕಾಂಡದ ಆಯೋಗಗಳ ವರದಿಗಳನ್ನು ಅದುಮಿಡಲಾಯಿತು. ಅದೇ ವೇಳೆ ಕಾಂಗ್ರೆಸ್ ಕೂಡ ಈ ಘಟನೆಗೆ ಹೊಣೆಯಾಗಿತ್ತು. ಆದರೂ ಇದು ಘಟನೆಗೆ ಸಂಬಂಧಿಸಿದಂತೆ ಈ ವರೆಗೆ ಯಾವುದೇ ಕ್ಷಮೆಯನ್ನು ಕೇಳಿಲ್ಲ ಎಂಬುದು ನಿರಾಶಾದಾಯಕವಾಗಿದೆ.

ಗುಂಡೇಟಿಗೆ ಒಳಗಾಗಿಯೂ ಬದುಕುಳಿದ ಝುಲ್ಫಿಕರ್ ನಾಸಿರ್, ಮುಹಮ್ಮದ್ ನಯೀಮ್, ಮುಹಮ್ಮದ್ ಉಸ್ಮಾನ್ ಮತ್ತು ಮುಜೀಬುರ್ರಹ್ಮಾನ್‌ರವರ ಹೇಳಿಕೆಗಳು ಆರೋಪಿಗಳನ್ನು ದೋಷಿಗಳೆಂದು ತೀರ್ಮಾನಿಸಲು ಧಾರಾಳ ಸಾಕ್ಷಗಳಾಗಿದ್ದವು.ಇದೀಗ ಹಾಶಿಂಪುರದ ಬರ್ಬರ ಹತ್ಯೆಯ ಕುರಿತು ತೀರ್ಪು ನೀಡುತ್ತಾ ಹೈಕೋರ್ಟ್, ‘‘ಇಂಥಾ ಹೀನಾಯ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣಕರ್ತರಾಗಿರುವವರನ್ನು ಪರಿಣಾಮಕಾರಿಯಾಗಿ ಕಾನೂನುಕ್ರಮಕ್ಕೆ ಒಳಪಡಿಸುವಲ್ಲಿ ನಮ್ಮ ಕಾನೂನು ವ್ಯವಸ್ಥೆಯ ವೈಫಲ್ಯವೂ ಆಗಿದೆ’’ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಹಾಶಿಂಪುರ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ತೀರ್ಪು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಿದೆ. ಜೊತೆಗೆ ಪ್ರಜಾಸತ್ತಾತ್ಮಕ ಪಕ್ಷಗಳ ಮೇಲೆ ಹೊಂದಿದ್ದ ಕಳಂಕವನ್ನು ತೆರೆದಿಟ್ಟಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ಅಪಾರ ಗೌರವವಿರಿಸುವ ಸಮುದಾಯಕ್ಕೆ 31 ವರ್ಷಗಳ ಬಳಿಕವಾದರೂ ನ್ಯಾಯ ದಕ್ಕಿರುವುದು ನ್ಯಾಯಾಂಗದ ಮೇಲಿನ ಭರವಸೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

LEAVE A REPLY

Please enter your comment!
Please enter your name here