ಹಸುಗಳನ್ನು ಕೊಲ್ಲುವವರನ್ನು ಜೈಲಿಗೆ ಹಾಕಲಾಗುವುದು : ಯೋಗಿ ಆದಿತ್ಯನಾಥ್
Prasthutha: October 28, 2020

ಹಸುಗಳನ್ನು ಕೊಲ್ಲುವವರನ್ನು ಜೈಲಿಗೆ ಹಾಕಲಾಗುವುದು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪುನರುಚ್ಚರಿಸಿದ್ದಾರೆ. ಉತ್ತರಪ್ರದೇಶದಲ್ಲಿ ಗೋಹತ್ಯೆ ನಿಷೇಧವನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ಅಲಹಾಬಾದ್ ಹೈಕೋರ್ಟಿನ ಹೇಳಿಕೆಯ ನಂತರ ಯೋಗಿ ಈ ಹೇಳಿಕೆಯನ್ನು ನೀಡಿದ್ದಾರೆ. ನವೆಂಬರ್ 3ರ ಉಪಚುನಾವಣೆಯ ಅಂಗವಾಗಿ ರ‍್ಯಾಲಿಯಲ್ಲಿ ಭಾಗವಹಿಸಿದ ಯೋಗಿ ಈ ಪ್ರತಿಕ್ರಿಯೆ ನೀಡಿದ್ದಾರೆ.
“ನಾನು ಹಸುಗಳನ್ನು ಉಳಿಸಲು ಬದ್ಧನಾಗಿದ್ದೇನೆ. ಹಸುಗಳನ್ನು ಕೊಲ್ಲುವವರನ್ನು ಜೈಲಿಗೆ ಹಾಕಲಾಗುತ್ತದೆ. ಎಲ್ಲಾ ಜಿಲ್ಲೆಗಳಲ್ಲಿ ಹಸುಗಳಿಗೆ ಗೋಶಾಲೆ ಸ್ಥಾಪಿಸಲಾಗುವುದು. ಹಸುಗಳನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಯೋಗಿ ಅದಿತ್ಯನಾಥ್ ಹೇಳಿದ್ದಾರೆ.
ಗೋ ಹತ್ಯೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ರಹೀಮುದ್ದೀನ್ ಅವರ ಜಾಮೀನು ಅರ್ಜಿಯನ್ನು ಪರಿಗಣಿಸುವಾಗ ಗೋಹತ್ಯೆ ವಿರೋಧಿ ಕಾನೂನನ್ನು ದುರುಪಯೋಗಪಡಿಸಲಾಗುತ್ತಿದೆ ಎಂದು ನ್ಯಾಯಾಲಯವು ಹೇಳಿಕೆ ನೀಡಿತ್ತು. ಎಫ್ಐಆರ್ ನಲ್ಲಿ ಹೆಸರಿಲ್ಲದಿದ್ದರೂ ಒಂದು ತಿಂಗಳಿನಿಂದ ಜೈಲಿನಲ್ಲಿದ್ದೇನೆ ಎಂದು ರಹೀಮುದ್ದೀನ್ ನ್ಯಾಯಾಲಯವನ್ನು ಸಂಪರ್ಕಿಸಿದ್ದರು.
ಎಲ್ಲಿಯಾದರೂ ಯಾವ ಮಾಂಸವನ್ನು ಬೇಕಾದರೂ ಹಿಡಿದರೂ ಪರಿಶೀಲಿಸದೆ ಇದು ಗೋಮಾಂಸ ಎಂಬ ತೀರ್ಮಾನಕ್ಕೆ ಬರುವುದು ಯುಪಿಯಲ್ಲಿ ಸಾಮಾನ್ಯವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೆಚ್ಚಿನ ಸಂದರ್ಭಗಳಲ್ಲಿ ಮಾಂಸವನ್ನು ತಜ್ಞರ ಪರೀಕ್ಷೆಗೆ ಕಳುಹಿಸಲಾಗುವುದಿಲ್ಲ. ಮಾಡದ ತಪ್ಪಿಗೆ ಮುಗ್ಧ ಜನರನ್ನು ಜೈಲಿನಲ್ಲಿರಿಸಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ವಶಪಡಿಸಿದ ಹಸುಗಳು ಬೀದಿಗಳಲ್ಲಿ ಅಲೆದಾಡುತ್ತಿದೆ. ಸಾಕುವ ಹಸುಗಳನ್ನೂ ಸಹ ರಸ್ತೆಬದಿಯಲ್ಲಿ ಅಲೆದಾಡಲು ಬಿಡಲಾಗುತ್ತದೆ. ಇದು ಟ್ರಾಫಿಕ್ ಜಾಮ್ ಮತ್ತು ಅಪಘಾತಗಳಿಗೆ ಕಾರಣವಾಗುತ್ತದೆ. ನಂತರ ಆ ಎಲ್ಲಾ ಹಸುಗಳು ಎಲ್ಲಿಗೆ ಹೋಗುತ್ತವೆ ಎಂಬ ಬಗ್ಗೆ ಯಾವುದೇ ಲೆಕ್ಕವಿಲ್ಲ ಎಂದು ನ್ಯಾಯಾಲಯ ಹೇಳಿದೆ.
