ಹಜ್: ಕೆಡುಕಿನ ವಿರುದ್ಧ ಸಂಘರ್ಷ

0
359

-ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ

ಇಸ್ಲಾಮಿನ ಕಡ್ಡಾಯ ಕರ್ಮವಾದ ಹಜ್‌ನ ದಿನ ಮಕ್ಕಾ ಪರಿಸರವು ಜಾಗತಿಕ ಮುಸ್ಲಿಮರ ಒಗ್ಗೂಡುವಿಕೆಗೆ ಸಾಕ್ಷಿಯಾಗಲಿದೆ. ಹಝ್ರತ್ ಇಬ್ರಾಹೀಮ್(ಅ), ಇಸ್ಮಾಯೀಲ್(ಅ) ಮತ್ತು ಹಾಜರಾ(ರ)ರ ಪಾದ ಸ್ಪರ್ಶದಿಂದ ಪಾವನಗೊಂಡ ಪವಿತ್ರ ಸ್ಥಳಗಳಲ್ಲಿ ಹಜ್ಜಾಜಿಗಳು ಹಜ್‌ನ ಪ್ರತಿಯೊಂದು ಕರ್ಮಗಳನ್ನು ಶಿಸ್ತು ಬದ್ಧತೆಯಿಂದ ನಿರ್ವಹಿಸುವ ಮೂಲಕ ಸಾಮಾಜಿಕ ಕರ್ತವ್ಯಗಳ ಬಗ್ಗೆ ಪ್ರತಿಜ್ಞಾಬದ್ಧರಾಗುತ್ತಾರೆ ಮತ್ತು ತಮ್ಮ ವ್ಯಕ್ತಿತ್ವವನ್ನು ಬೆಳಗಿಸಿಕೊಳ್ಳುತಾರೆ. ತ್ಯಾಗ, ಸಹನೆ, ಬದ್ಧತೆಯ ಸಂಕೇತವಾದ ಹಜ್ ಜಾಗತಿಕ ಮುಸ್ಲಿಮರಿಗೆ ನೀಡುವ ಸಂದೇಶ ಅಪಾರವಾದುದು. ಹಜ್, ಪ್ರವಾದಿ ಇಬ್ರಾಹೀಮ್(ಅ)ರು ಆದರ್ಶ ಸಂರಕ್ಷಣೆಗಾಗಿ ಸಹಿಸಿದ ಅಪಾರ ತ್ಯಾಗದ ಸಂಕೇತವೂ ಹೌದು.

ಇಸ್ಲಾಮಿನ ಇತಿಹಾಸದಲ್ಲಿ ಅತ್ಯಪೂರ್ವವಾದ ವ್ಯಕ್ತಿತ್ವದ ಹಝ್ರತ್ ಇಬ್ರಾಹೀಮ್(ಅ)ರು ಸತ್ಯವಿಶ್ವಾಸಿಗಳಿಗೆ ಸದಾ ಪ್ರೇರಣಾ ಶಕ್ತಿಯಾಗಿದ್ದಾರೆ. ಇತಿಹಾಸ ಕೆಲವರ ಅನಿಸಿಕೆಯಂತೆ ಕೇವಲ ರಣಕಹಳೆಗಳೆಂದು ಭಾವಿಸಿದ್ದಾರೆ. ಆದರೆ ಇತಿಹಾಸಗಳಲ್ಲಿ ರಕ್ತ ಹರಿಸಿದ ಯುದ್ಧಗಳೊಂದಿಗೆ ಬೆಂಕಿಯಲ್ಲಿ ಬೆಂದ ಜೀವನವೂ ಇತ್ತು. ಇಸ್ಲಾಮಿನಲ್ಲಿ ನಡೆದ ಯುದ್ಧಗಳು, ಯುದ್ಧ ರಹಿತವಾದ ಒಂದು ಕಾಲಕ್ಕಾಗಿ ನಡೆದಿದ್ದವು.

ಆದರ್ಶದ ಹಾದಿ ಎಲ್ಲಾ ಕಾಲಗಳಲ್ಲೂ ಕಲ್ಲು ಮುಳ್ಳುಗಳಿಂದ ತುಂಬಿರುತ್ತಿತ್ತು. ಆ ಮಾರ್ಗದಲ್ಲಿ ನಿರ್ಭೀತನಾಗಿ ಮುನ್ನಡೆದವನು ಯಶಸ್ಸು ಗಳಿಸುತ್ತಾನೆ. ಹಾದಿ ಎಷ್ಟೇ ದುರ್ಗಮವಾಗಿದ್ದರೂ ದಢನಿರ್ಧಾರ, ಸಹನೆ, ತ್ಯಾಗದಿಂದ ಮುನ್ನಡೆದರೆ ಯಶಸ್ಸು ಶತಸಿದ್ಧ ಎಂಬುದನ್ನು ಪ್ರವಾದಿ ಇಬ್ರಾಹೀಮ್(ಅ)ರು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ.

ಐಹಿಕ ವ್ಯಾಮೋಹಗಳಿಂದ ಮುಕ್ತರಾಗಿದ್ದ ಹಝ್ರತ್ ಇಬ್ರಾಹೀಮ್(ಅ)ರು ಅಲ್ಲಾಹನ ಮಾರ್ಗದಲ್ಲಿ ತನ್ನ ಜೀವನವನ್ನು ಮುಡಿಪಾಗಿಟ್ಟರು. ತನ್ನ ಪುಟ್ಟ ಜೀವನದಲ್ಲಿ ಅವರು ಮಾಡಿದ ಕ್ರಾಂತಿ ಅದ್ಭುತ. ಆಂದೋಲನವೊಂದು ವ್ಯಕ್ತಿಯ ಮಟ್ಟಕ್ಕೆ ಇಳಿಯುವ ಈ ಕಾಲದಲ್ಲಿ ಹಝ್ರತ್ ಇಬ್ರಾಹೀಮ್(ಅ)ರ ಜೀವನ ಮಹಾ ಆಂದೋಲನವಾಗಿ ವಿಕಾಸಗೊಂಡಿತ್ತು. ಒಂದು ಸಮಾಜ ನಿರ್ವಹಿಸುವ ಕೆಲಸವನ್ನು ಹಝ್ರತ್ ಇಬ್ರಾಹೀಮ್(ಅ)ರು ಏಕಾಂಗಿಯಾಗಿ ನಿರ್ವಹಿಸಿದರು. ತಾರುಣ್ಯದಲ್ಲೆ ವದ್ಧರಂತೆ ಆಸಕ್ತಿ ಕಳೆದುಕೊಳ್ಳುವ ಇಂದಿನ ಯುವಕರಿಗೆ ವದ್ಧಾಪ್ಯದಲ್ಲೂ ಯವ್ವನದಂತೆ ಕೆಲಸ ಮಾಡಬಹುದೆಂಬ ಪಾಠವನ್ನು ಪ್ರವಾದಿ ಇಬ್ರಾಹೀಮ್(ಅ)ರು ಕಲಿಸಿದರು.

ಹಝ್ರತ್ ಇಬ್ರಾಹೀಮ್(ಅ)ರ ಆದರ್ಶದ ಹೋರಾಟಗಳಿಗೆ ಪತ್ನಿ ಹಾಜರ(ರ)ರ ಮತ್ತು ಮಗನಾದ ಹಝ್ರತ್ ಇಬ್ರಾಹೀಮ್(ಅ)ರು ನಿರಂತರ ಬೆಂಬಲ ನೀಡಿದರು. ಪ್ರವಾದಿ ಇಬ್ರಾಹೀಮ್(ಅ)ರ ಪತ್ನಿ ಹಾಜರ(ರ)ರ ಆದರ್ಶದ ಹಾದಿಯಲ್ಲಿ ನೋವು, ಬಡತನ, ಸಂಕಷ್ಟಗಳ ಸರಮಾಲೆಗಳನ್ನೆ ಅನುಭವಿಸಿದರು. ಪರೀಕ್ಷೆಗಳ ಬೆಂಕಿಯ ಜ್ವಾಲೆಯಲ್ಲಿ ಸಿಲುಕಿದ್ದರು. ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿದ್ದವು. ದೀರ್ಘ ಸಮಯದ ಕಾತರದ ನಂತರ ಜನಿಸಿದ ಇಸ್ಮಾಯೀಲ್(ಅ) ಎಂಬ ಪುಟ್ಟ ಮಗುವನ್ನು ಹಾಜರ(ಅ)ರೊಂದಿಗೆ ಮಕ್ಕಾ ಎಂಬ ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಬೇಕಾಯಿತು. ಇದು ಅಲ್ಲಾಹನ ಆಜ್ಞೆಯಾಗಿತ್ತು.ಅದನ್ನವರು ಶಿರಸಾ ಪಾಲಿಸುತ್ತಾರೆ. ನೀರಿಲ್ಲದ ನಿರ್ಜನ ಮರುಭೂಮಿಯಲ್ಲಿರುವ ಸಫಾ ಮರ್ವಾ ಬೆಟ್ಟದ ಮಧ್ಯೆ ಆ ತಾಯಿ ಮತ್ತು ಮಗು ಏಕಾಂಗಿಯಾಗಿದ್ದರು.

 

 

 ಹಾಜರ(ರ) ಇತಿಹಾಸದಲ್ಲಿ ಅಚ್ಚಳಿಯದಂತಹ ಕುರುಹುಗಳನ್ನು ಸಷ್ಟಿಸಿದ್ದರು. ದಾಹದಿಂದ ಬಸವಳಿದು ಅತ್ತು ಕರೆದ ತನ್ನ ಮಗುವಿಗೆ ತೊಟ್ಟು ನೀರನ್ನು ನೀಡಲು ಅವರು ಸಫಾ ಮತ್ತು ಮರ್ವಾ ಬೆಟ್ಟಗಳನ್ನು ಏರುತ್ತಾರೆ. ಹಾಜರ (ರ) ಬೆಟ್ಟವನ್ನು ಏರಿರುವುದು ದೇವನ ಆರಾಧನೆಗಾಗಿ ಅಥವಾ ಪ್ರಾರ್ಥನೆ ನಡೆಸಲಾಗಿರಲಿಲ್ಲ. ಅಲ್ಲಾಹನ ಆದೇಶ ಪ್ರಕಾರ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿ ವಾಸಿಸುವ ವೇಳೆ ತನ್ನ ಮಗುವಿನ ಪ್ರಾಣ ರಕ್ಷಣೆಗಾಗಿ ಪ್ರಯತ್ನಿಸುವುದು ಕರ್ತವ್ಯವೆಂದು ತಿಳಿದ ಹಾಜರ(ರ) ದಿಟ್ಟತನದಿಂದ ಅದನ್ನು ನಿರ್ವಹಿಸುತ್ತಾರೆ. ದೇಹ ಸೌಂದರ್ಯಕ್ಕಿಂತ ಹದಯ ಸೌಂದರ್ಯಕ್ಕೆ ಪ್ರಾಮುಖ್ಯತೆ ಇದೆ ಎಂಬುದನ್ನು ಆ ನಿಗ್ರೋ ಮಹಿಳೆ ತೋರಿಸಿಕೊಟ್ಟರು. ತನ್ನ ಪತಿಯ ದೌತ್ಯವನ್ನು ಅವರು ಸರಿಯಾಗಿ ತಿಳಿದುಕೊಂಡಿದ್ದರು. ಎದುರಾಗುವ ಬೆಂಕಿಯ ಜ್ವಾಲೆಗಳಂತಹ ಸಂಕಷ್ಟಗಳ ಮುಂದೆ ಸೋಲಬಾರದೆಂಬ ದಢ ನಿಲುವು ಅವರದಾಗಿತ್ತು. ಸಮಸ್ಯೆಗಳಿಗೆ ಹೆದರಿ ಪಲಾಯನ ಮಾಡುವ ಬದಲು ಅದರ ವಿರುದ್ಧ ನಿಂತು ಹೋರಾಡುವ ಎದೆಗಾರಿಕೆ, ದಢವಿಶ್ವಾಸವನ್ನು ಅವರು ತೋರಿದರು. ಪತಿಯ ಇಚ್ಛೆ ತನ್ನ ಇಚ್ಛೆಯಾಗಿ ಪರಿಗಣಿಸಿದ ಅವರು ಎಲ್ಲಾ ವಿಚಾರದಲ್ಲೂ ಅವರಿಗೆ ಪ್ರೇರಕರಾದರು. ಸಂಕಷ್ಟದ ಸಂದರ್ಭದಲ್ಲಿ ದಿಟ್ಟ ನಿಲುವನ್ನು ಅವರು ತೋರಿದರು. ಈ ರೀತಿಯ ಅನುಸರಣೆ ಅವರ ವ್ಯಕ್ತಿತ್ವದ ಅಂದವನ್ನು ಮತ್ತಷ್ಟು ಬೆಳಗಿಸಿತು. ಅದರೊಂದಿಗೆ ಆ ಎರಡು ಬೆಟ್ಟಗಳೂ ದೇವನ ಸಂಕೇತಗಳಾಗಿ ಮಾರ್ಪಟ್ಟವು. ದಾಸಿಯಾಗಿದ್ದ ಆ ಕರಿಯ ಮಹಿಳೆಯ ಪಾದಸ್ಪರ್ಶದಿಂದ ಆ ಬೆಟ್ಟಗಳು ಪವಿತ್ರ ಸಂಕೇತಗಳಾಗಿ ಬದಲಾದವು. ಹಜ್‌ನ ಸಂದರ್ಭದಲ್ಲಿ ಹಾಜಿಗಳು ಕಡ್ಡಾಯವಾಗಿ ಏರಬೇಕಾದ ಪ್ರದೇಶಗಳಾದವು. ಸಾವಿರಾರು ವರ್ಷಗಳಿಂದ ಹಜ್ಜಾಜಿಗಳು ಅದನ್ನು ಮುಂದುವರಿಸುತ್ತಲೆ ಇದ್ದಾರೆ. ಆ ಮೂಲಕ ಸತ್ಯವಿಶ್ವಾಸಿಯಾದವನು ಏಕಾಂಗಿಯಾಗಿದ್ದೂ ಯಾರೂ ಸಹಾಯಕರಿಲ್ಲದಿದ್ದರೂ ಈ ಲೋಕದ ತನ್ನ ಮೇಲಿನ ಕರ್ತವ್ಯವನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸ ಬಾರದೆಂಬ ಸಂದೇಶವನ್ನು ಪಡೆದುಕೊಳ್ಳುತ್ತಾನೆ. ”ಖಂಡಿತವಾಗಿಯೂ ಸಫಾ ಮತ್ತು ಮರ್ವಾಗಳು ಅಲ್ಲಾಹನ ಸಂಕೇತಗಳ ಸಾಲಿಗೆ ಸೇರಿವೆ” (ಅಲ್ ಬಖರ: 158)

ಓರ್ವ ದಾಸಿಯೂ ಕರಿಯಳೂ ಆಗಿದ್ದ ಹಾಜರ(ರ)ಎಲ್ಲಾ ಕಾಲದ ತುಳಿತಕ್ಕೊಳಗಾದ ಮಹಿಳೆಯರ ಪ್ರತಿನಿಧಿಯಾಗಿದ್ದರು. ಸ್ವಯಂ ಘೋಷಿತ ನಾಗರಿಕರೂ ಕರಿಯರನ್ನು ಎಷ್ಟು ಅಸಹ್ಯ ಪಡುತ್ತಾರೆಂದು ಇಂದಿನ ವಿದ್ಯಮಾನಗಳೇ ಸಾಕ್ಷಿ. ಮೇಲು-ಕೀಳುಗಳ ಆಧಾರದಲ್ಲಿ ಸಮಾಜ ಬಹಿಷ್ಕೃತರಾದ ಕರಿಯ ವರ್ಗದ ಪ್ರತಿನಿಧಿಯಾಗಿದ್ದ ಹಾಜರ(ರ) ಅಲ್ಲಾಹನ ಮಾರ್ಗದಲ್ಲಿ ಸಹಿಸಿದ ತ್ಯಾಗಗಳಿಂದ ಕರಿಯ ವರ್ಗದ ಜನರಿಗೆ ಸ್ವಾಭಿಮಾನವನ್ನು ಗಳಿಸಿಕೊಟ್ಟರು.

ಓರ್ವ ಮಹಿಳೆಯಾಗಿದ್ದೂ ಹಾಜರ(ರ) ಸವೆಸಿದ ಹಾದಿ ವಿಶ್ವದ ಮಹಿಳೆಯರಿಗೆ ಹೆಮ್ಮೆ ಪಡುವಷ್ಟು ಸಂಕೀರ್ಣವಾಗಿತ್ತು.ಇಂದಿನ ಆಧುನಿಕ ಜಗತ್ತಿನಲ್ಲೂ ಹೆಣ್ಣು ಎಂಬ ಪದವನ್ನು ಸಮಾಜ ಭಯಾತಂಕದಿಂದ ಕಾಣುತ್ತಿದೆ. ಗರ್ಭದಲ್ಲೆ ಅವಳನ್ನು ಹೊಸಕಿ ಹಾಕಲು, ಹುಟ್ಟಿದರೆ ಜೀವಂತ ಹೂಳಿ ಬಿಡಲೂ, ಹುಟ್ಟಿನಿಂದ ಸಾಯುವ ತನಕ ಅವಳನ್ನು ಕಹಿಯಾಗಿ ಕಾಣುವ ಸಮಾಜ. ಸಾಮಾಜಿಕ ಜೀವನದ ಪಾತಾಳಕ್ಕೆ ತಳ್ಳಲ್ಪಟ್ಟ ಜಾಗತಿಕ ಮಹಿಳೆಯರ ಪ್ರತಿನಿಧಿಯಾಗಿದ್ದರು ಹಾಜರ(ರ).

ನಾಲ್ಕು ಸಾವಿರ ವರ್ಷಗಳ ಹಿಂದೆ ಹಾಜರ(ರ) ಎಂಬ ಕರಿಯ ದಾಸಿ ನಡೆದ ಆ ದಾರಿಯಲ್ಲಿ ಪ್ರತಿಯೊಬ್ಬ ಹಾಜಿಯೂ ಅತ್ಯಂತ ವಿನಯದಿಂದ ನಡೆಯುತ್ತಾರೆ. ಹಾಗೆ ನಡೆಯುವವರಲ್ಲಿ ದೇಶವನ್ನು ಆಳಿದ ರಾಜರಿದ್ದಾರೆ, ಅಧಿಕಾರಿಗಳಿದ್ದಾರೆ, ಶ್ರೀಮಂತರಿದ್ದಾರೆ. ಎಲ್ಲರೂ ಆ ಕರಿಯ ದಾಸಿಯ ಹೆಜ್ಜೆಯನ್ನು ಅನುಸರಿಸುತ್ತಿದ್ದಾರೆ. ಹಜ್ ಎಂಬ ಪುಣ್ಯ ಕರ್ಮ ನಿರ್ಲಕ್ಷಿಸಲ್ಪಟ್ಟ ದಾಸಿಯರ ಪ್ರತಿನಿಧಿಯಾದ ಹಾಜರ(ರ)ರ ಸ್ಮರಣೆಯಲ್ಲಿ ಸಾಮಾಜಿಕ ಸಮಾನತೆ ಮತ್ತು ಕರ್ತವ್ಯದ ಕುರುಹನ್ನು ಕಾಣಬಹುದಾಗಿದೆ.

ಹಝ್ರತ್ ಇಬ್ರಾಹೀಮ್(ಅ)ರ ಕುಟುಂಬದ ಮೇಲಿನ ಅಲ್ಲಾಹನ ಪರೀಕ್ಷೆ ಮುಂದುವರಿಯುತ್ತದೆ. ತನ್ನ ಮಗನಾದ ಹಝ್ರತ್ ಇಸ್ಮಾಈಲ್ (ಅ)ರನ್ನು ಬಲಿಯರ್ಪಿಸುವಂತೆ ಅಲ್ಲಾಹನ ಆಜ್ಞೆಯಾಗಿತ್ತು. ಅದಕ್ಕಾಗಿ ಅವರು ಇರಾಕ್‌ನ ಬಗ್ದಾದ್‌ನಿಂದ 400 ಕಿ.ಮೀಟರ್ ದೂರದ ಊರ್ ಎಂಬ ಪ್ರದೇಶದಿಂದ ಮಕ್ಕಾಗೆ ಆಗಮಿಸಿದ್ದರು. ಮಗುವನ್ನು ಸ್ನಾನ ಮಾಡಿಸಿ ಬಲಿಗಾಗಿ ಸಿದ್ಧಗೊಳಿಸಲಾಗಿತ್ತು. ಅಲ್ಲಾಹನ ಕಠಿಣ ಪರೀಕ್ಷೆಯ ನಿರ್ವಹಣೆಯ ಆ ಕ್ಷಣದಲ್ಲಿ ಸೈತಾನನು ಹಝ್ರತ್ ಇಬ್ರಾಹೀಮ್(ಅ)ರನ್ನು ವಿಧವಿಧವಾಗಿ ಹಿಂಜರಿಸಲು ಪ್ರಯತ್ನಿಸುತ್ತಾನೆ. ಆ ಸಂದರ್ಭದಲ್ಲಿ ಅವರು ಸೈತಾನನಿಗೆ ಕಲ್ಲೆಸೆಯುವ ಮೂಲಕ ಕರ್ತವ್ಯ ನಿರ್ವಹಣೆಯಲ್ಲಿ ದಢ ನಿಲುವು ತಾಳುತ್ತಾರೆ. ಇಂದು ಸತ್ಯವಿಶ್ವಾಸಿಗಳು ಹಜ್ ನಿರ್ವಹಣೆಯ ಭಾಗವಾಗಿ ಜಂರಾಗಳಿಗೆ ಕಲ್ಲೆಸೆಯುವ ಮೂಲಕ ಆ ಸ್ಮರಣೆಯನ್ನು ಜೀವಂತಗೊಳಿಸುತ್ತಾರೆ. ಅದರ ಜತೆಗೆ ಸತ್ಯದ ಕಠಿಣ ಹಾದಿಗೆ ತಡೆಯಾಗುವ ಸೈತಾನನ ಪ್ರೇರಣೆಗಳಿಂದ ಮುಕ್ತರಾಗುವ ದಢ ನಿಲುವನ್ನು ತಾಳುತ್ತಾರೆ. ಕೆಡುಕೆಂಬ ಸೈತಾನ ಇಂದು ಎಲ್ಲೆಡೆ ವ್ಯಾಪಕವಾಗಿದೆ. ಅದನ್ನು ತಡೆದು ನಿಲ್ಲಿಸಿ ಒಳಿತನ್ನು ಹರಡಿ ಸಾಮಾಜಿಕ ಶಾಂತಿಯ ಸ್ಥಾಪನೆ ಮಾಡುವುದು ಸತ್ಯವಿಶ್ವಾಸಿಗಳ ಮೇಲಿನ ಕರ್ತವ್ಯವಾಗಿದೆ. ಅದಕ್ಕೆ ಅಪಾರ ತ್ಯಾಗ-ಸಮರ್ಪಣೆಯ ಅಗತ್ಯವಿದೆ. ಹಜ್ ಕರ್ಮವು ಅದಕ್ಕೆ ಪ್ರೇರಣೆಯಾಗಿದೆ.

ಪ್ರವಾದಿ ಇಬ್ರಾಹೀಮ್(ಅ)ರು ಅಲ್ಲಾಹನ ಸ್ನೇಹಿತನಾಗಿ ಆರಿಸಲ್ಪಟ್ಟರು. ಅಂತಹ ಉನ್ನತ ಸ್ಥಾನಮಾನ ಅವರಿಗೆ ಲಭಿಸಿತು. ಇದು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಅವರ ತ್ಯಾಗ, ಸಮರ್ಪಣೆಯ ಜೀವನವೇ ಸಾಕ್ಷಿ. ಸತ್ಯದ ಪರವಾಗಿ ನಿಂತಾಗ ಏಕಾಂಗಿಯಾಗಿ ಬಿಟ್ಟರೂ ವಿಚಲಿತನಾಗದೆ, ದುಷ್ಟ ಶಕ್ತಿಗಳನ್ನು ನಿರ್ಭೀತಿಯಿಂದ ಎದುರಿಸಿ ಪರೀಕ್ಷೆಗಳ ಕುಲುಮೆಗಳಲ್ಲಿ ಬೆಂದು ಬೆಂಕಿಯ ಹೂವಾಗಿ ಅರಳಿದ ಹಝ್ರತ್ ಇಬ್ರಾಹೀಮ್(ಅ)ರ ಜೀವನದಲ್ಲಿ ಜಾಗತಿಕ ಮುಸ್ಲಿಮರಿಗೆ ಸರಿಸಾಟಿಯಿಲ್ಲದ ಪಾಠವಿದೆ.

ಆದರ್ಶಕ್ಕಾಗಿ ಯಾವುದೇ ತ್ಯಾಗಕ್ಕೂ, ಸಮರ್ಪಣೆಗೂ ಸಿದ್ಧರಾಗದೆ ಜೀವನವನ್ನು ಧನ್ಯಗೊಳಿಸಲಾಗದು ಎಂಬುದನ್ನು ಹಜ್ ಕರ್ಮ ನಮಗೆಲ್ಲರಿಗೂ ನೆನಪಿಸುತ್ತದೆ. ಮನುಕುಲದ ಶಾಂತಿಗೆ ಹಾದಿ ತೆರೆಯಲು ಹಜ್ ಮುಸ್ಲಿಮರಿಗೆ ಪ್ರೇರಣೆಯಾಗಲಿ.

***

 

 

LEAVE A REPLY

Please enter your comment!
Please enter your name here