ಹಜ್ಜ್ ಆದರ್ಶದ ಪಾಠ

0
12

♦ಕೆ.ವೈ. ಹಮೀದ್, ಕುಕ್ಕಾಜೆ

ಸಹಸ್ರಾರು ವರ್ಷಗಳ ಬಳಿಕವೂ ನೆನಪಿನಲ್ಲಿ ಉಳಿಯುವ ಕೆಲವು ಅಪೂರ್ವ ಆದರ್ಶ ವ್ಯಕ್ತಿಗಳಿದ್ದಾರೆ. ಅವರು ನಮ್ಮ ಮನಸಿನಿಂದ ಅಳಿಯುವುದಿಲ್ಲ. ಮಹೋನ್ನತ ವ್ಯಕ್ತಿತ್ವದ ಅವರು ಅಸ್ತಮಿಸದ ಸೂರ್ಯನಂತೆ ನಿರಂತರ ಪ್ರಕಾಶಿಸುತ್ತಿರುತ್ತಾರೆ. ಕೆಲವು ವ್ಯಕ್ತಿಗಳು ಈ ರೀತಿಯಲ್ಲಿ ಇತಿಹಾಸದ ಬುನಾದಿಯಾಗಿ ಜನರಿಗೆ ಆಧ್ಯಾತ್ಮಿಕ ಶಕ್ತಿಗಳನ್ನು ನೀಡಿದ್ದಾರೆ.

ಇಸ್ಲಾಮ್ ಯುದ್ಧಗಳ, ರಣಕಹಳೆಗಳ ಇತಿಹಾಸವೆಂದು ಭಾವಿಸಿದವರಿದ್ದಾರೆ. ಇಸ್ಲಾಮ್‌ನ ಇತಿಹಾಸದಲ್ಲಿ ಬೆಂಕಿಯ ಕಿಡಿ ಹಾರಿಸಿದ ಯುದ್ಧಗಳೂ, ಬೆಂಕಿಯಲ್ಲಿ ಬೆಂದ ಜೀವನವೂ ಇತ್ತು. ಯುದ್ಧಗಳಿಲ್ಲದ ಕಾಲದ ನಿರ್ಮಾಣಕ್ಕಾಗಿ ಇಸ್ಲಾಮಿನಲ್ಲಿ ಯುದ್ಧಗಳು ನಡೆದಿದ್ದವು. ಪ್ರವಾದಿಗಳ ಜೀವನ ಇಸ್ಲಾಮಿನ ಬೆಳವಣಿಗೆ ತಿಳಿಸುವ ಮತ್ತು ಪ್ರಭೋದನೆಯ ಇತಿಹಾಸವಾಗಿದೆ.

ಆದರ್ಶದಲ್ಲಿ ಮುಂದುವರಿಯುವ ಹಾದಿ ಎಂದೂ ಹೂವಿನ ಹಾಸಿಗೆಯಾಗಿರುವುದಿಲ್ಲ. ಅದು ಕಲ್ಲು ಮುಳ್ಳುಗಳಿಂದ ತುಂಬಿರುತ್ತದೆ. ಆ ಮಾರ್ಗದಲ್ಲಿ ನಿರ್ಭೀತಿಯಿಂದ  ಮುನ್ನಡೆದವರು ಇಹಪರ ಯಶಸ್ಸು ಗಳಿಸುತಾರೆ. ದೃಢ ನಿರ್ಧಾರದಿಂದ ಮುನ್ನಡೆದರೆ ದುರ್ಗಮ ಹಾದಿಯಲ್ಲೂ ಯಶಸ್ಸು ಶತಸಿದ್ಧ ಎಂಬುದನ್ನು ಪ್ರವಾದಿ ಇಬ್ರಾಹೀಮ(ಅ)ರು ಜಗತ್ತಿಗೆ ತೋರಿಸಿ ಕೊಟ್ಟಿದ್ದಾರೆ.

ಆದರ್ಶಕ್ಕಾಗಿ ಐಹಿಕ ವ್ಯಾಮೋಹಗಳನ್ನು ಕಡೆಗಣಿಸಿದ ಹಝ್ರತ್ ಇಬ್ರಾಹೀಮ(ಅ)ರು, ಅಲ್ಲಾಹನ ಹಾದಿಗೆ ತನ್ನ ಜೀವನ ಮುಡಿಪಾಗಿಡುತ್ತಾರೆ. ತನ್ನ ಪುಟ್ಟ ಜೀವನದಲ್ಲಿ ಅವರು ಮಾಡಿದ ಕ್ರಾಂತಿ ಅದ್ಬುತ. ಒಂದು ಆಂದೋಲನವು ಒಬ್ಬ ವ್ಯಕ್ತಿಯ ಮಟ್ಟಕ್ಕೆ ಇಳಿದ ಉದಾಹರಣೆಗಳು ಹಲವು. ಆದರೆ ಹಝ್ರತ್ ಇಬ್ರಾಹೀಮ(ಅ)ರ ಜೀವನವೇ ಒಂದು ಮಹಾ ಆಂದೋಲನವಾಗಿ ವಿಕಾಸಗೊಂಡಿತು. ವ್ಯವಸ್ಥಿತವಾಗಿ ಬೆಳೆಯಬೇಕಾದ ಒಂದು ಸಮುದಾಯದ ಕೆಲಸವನ್ನು ಹಝ್ರತ್ ಇಬ್ರಾಹೀಮ(ಅ)ರು ಏಕಾಂಗಿಯಾಗಿ  ನಿರ್ವಹಿಸಿದರು. ಬಾಲ್ಯದಲ್ಲೆ ವೃದ್ಧರಂತಾಗುವ ಇಂದಿನ ಕಾಲದಲ್ಲಿ ಹಝ್ರತ್ ಇಬ್ರಾಹೀಮ(ಅ)ರ ಇತಿಹಾಸ ವೃದ್ದಾಪ್ಯದಲ್ಲೂ ಯುವಕರಂತೆ ಕೆಲಸ ಮಾಡಬಹುದೆಂಬ ಪಾಠವನ್ನು ಕಲಿಸುತ್ತದೆ.

ಹಝ್ರತ್ ಇಬ್ರಾಹೀಮ(ಅ)ರ ಎಲ್ಲಾ ಹೋರಾಟಗಳಿಗೆ ಪತ್ನಿ ಹಾಜರ(ರ) ಮತ್ತು ಪುತ್ರ ಇಸ್ಮಾಯೀಲ್(ಅ)ರ  ಬೆಂಬಲ ಲಭಿಸಿತ್ತು. ಇದು  ಅವರಿಗೆ ಲಭಿಸಿದ ಶಿಕ್ಷಣದ ಮಹತ್ವವನ್ನು ತಿಳಿಸುತ್ತದೆ. ಸಾಮಾನ್ಯ ಮಹಿಳೆಯರಂತೆ ಹಾಜರ(ರ)ರ ಜೀವನ ಪತ್ನಿ, ಗೃಹಿಣಿ, ತಾಯಿ ಮೊದಲಾದ ಕ್ಷೇತ್ರಗಳಲ್ಲೆ ಇತ್ತು. ಆದರೆ ಅವರು ಪ್ರವಾದಿಯ ಪತ್ನಿಯಾಗಿದ್ದರು. ಆದುದರಿಂದ ಅವರು ನೋವು, ವಿರಹ, ಬಡತನ, ಸಂಕಷ್ಟಗಳ ಸರಮಾಲೆಗಳನ್ನೆ ಅನುಭವಿಸಬೇಕಾಯಿತು. ಪರೀಕ್ಷೆಗಳ ಬೆಂಕಿಯ ಜ್ವಾಲೆಗೆ ಅವರೆಂದೂ ಬಾಡಲಿಲ್ಲ.

ದಾಸಿಯಾದ ಮಹಿಳೆ  ತುಳಿತಕ್ಕೊಳಗಾಗುವುದು ಸಾಮಾನ್ಯ. ಹಾಜರ(ರ) ಓರ್ವ ದಾಸಿಯಾಗಿದ್ದರು. ಅವರಿಗೆ ಅಳಲು, ನಗಲು ಸ್ವಾತಂತ್ರವಿರಲಿಲ್ಲ. ಎಲ್ಲವೂ ಮಾಲೀಕನ ಬೆರಳ ಸಂಜ್ಞೆಯನುಸಾರದ ಚಲನೆ ಮಾತ್ರ. ಹಾಜರ(ರ)ರ ಅಪಾರ ದೌರ್ಜನ್ಯ, ತುಳಿತಕ್ಕೊಳಗಾದ ದಾಸಿಯರ ಪ್ರತಿನಿಧಿಯಾಗಿದ್ದರು. ಮೇಲು ಕೀಳುಗಳಿರುವ ಸಮಾಜದ ಬಹಿಷ್ಕೃತ ಕರಿಯ ವರ್ಗದ ಪ್ರತಿನಿಧಿಯಾಗಿದ್ದರು  ಹಾಜರ(ರ). ಸ್ವಯಂ ಘೋಷಿತ ನಾಗರಿಕರೂ ಕರಿಯರನ್ನು ಎಷ್ಟು ಅಸಹ್ಯ ಪಡುತ್ತಾರೆಂದು ಇಂದಿನ ವಿದ್ಯಮಾನಗಳೇ ಸಾಕ್ಷಿ. ಹಾಜರ(ರ) ಓರ್ವ ಮಹಿಳೆಯಾಗಿದ್ದರು. ಇಂದಿನ ಆಧುನಿಕ ಜಗತ್ತಿನಲ್ಲೂ  ಹೆಣ್ಣು ಎಂಬ ಪದವನ್ನು  ಸಮಾಜ ಭಯಾತಂಕದಿಂದ ಕಾಣುತ್ತಿದೆ. ಗರ್ಭದಲ್ಲೆ ಅವಳನ್ನು ಹೊಸಕಿ ಹಾಕಲು ಸಮಾಜ ಹೊಂದು ಹಾಕುತ್ತಿದೆ. ಹುಟ್ಟಿದರೆ ಜೀವಂತ ಹೂಳಲು ಹಿಂಜರಿಯದ ಸಮಾಜ. ಹುಟ್ಟಿನಿಂದ ಸಾಯುವ ತನಕ ಅವಳನ್ನು ಕಹಿಯಾಗಿ ಕಾಣುವ ಸಮಾಜ. ಸಾಮಾಜಿಕ ಜೀವನದ ಪಾತಾಳಕ್ಕೆ ತಳ್ಳಲ್ಪಟ್ಟ ಮಹಿಳೆಯರ ಪ್ರತಿನಿಧಿಯಾಗಿದ್ದರು ಹಾಜರ(ರ).

ಪ್ರವಾದಿ ಇಬ್ರಾಹೀಮ(ಅ)ರ ಪತ್ನಿಯಾದ ಹಾಜರ(ರ) ಇತಿಹಾಸಕ್ಕೆ  ಮರೆಯಲಾಗದ ಕಾಣಿಕೆಗಳನ್ನು ನೀಡಿದರು. ಹಾಜರ(ರ) ಸಫಾ ಮತ್ತು ಮರ್ವಾ ಬೆಟ್ಟಗಳನ್ನು ದಾಹದಿಂದ ಬಸವಳಿದು ಅತ್ತು ಕರೆದ ತನ್ನ ಮಗುವಿಗೆ ತೊಟ್ಟು ನೀರನ್ನು ನೀಡುವ ಉದ್ದೇಶದಿಂದ ಏರಿದ್ದರು. ಅದರೊಂದಿಗೆ ಆ ಎರಡು ಬೆಟ್ಟಗಳೂ ದೇವನ ಸಂಕೇತಗಳಾಗಿ ಮಾರ್ಪಟ್ಟವು. ದಾಸಿಯಾದ ಆ ಕರಿ ಮಹಿಳೆಯ ಪಾದಸ್ಪರ್ಶದಿಂದ ಆ ಬೆಟ್ಟಗಳು ಪವಿತ್ರ ಪ್ರದೇಶಗಳಾಗಿ ಬದಲಾದವು. ಆ ಬೆಟ್ಟಗಳು ಹಜ್ಜ್‌ನ ಸಂದರ್ಭದಲ್ಲಿ ಹಾಜಿಗಳು ಏರಬೇಕಾದ ಪ್ರದೇಶಗಳಾದವು. ಸಾವಿರಾರು ವರ್ಷಗಳಿಂದ ಹಜ್ಜಾಜಿಗಳು ಆ ಸ್ಮರಣೆಯನ್ನು ನಿರಂತರ ಮುಂದುವರಿಸುತ್ತಲೆ ಇದ್ದಾರೆ. ‘‘ಖಂಡಿತವಾಗಿಯೂ ಸಫಾ ಮತ್ತು ಮರ್ವಾಗಳು ಅಲ್ಲಾಹನ ಸಂಕೇತಗಳ ಸಾಲಿಗೆ ಸೇರಿವೆ’’(ಅಲ್ ಬಖರ: 158)

ನಾಲ್ಕು ಸಾವಿರ ವರ್ಷಗಳ ಹಿಂದೆ ಹಾಜರ(ರ) ಎಂಬ ಕರಿಯ ದಾಸಿ ನಡೆದ ಆ ದಾರಿಯಲ್ಲಿ ಅವರಂದು ನಡೆದಂತೆ ಪ್ರತಿಯೊಬ್ಬ ಹಾಜಿಯೂ ಇಂದಿಗೂ ಅತ್ಯಂತ ವಿನಯದಿಂದ ನಡೆಯುತ್ತಾರೆ. ಆ ಮಹಿಳೆ ನಿಂತಲ್ಲಿ ನಿಲ್ಲುತ್ತಾರೆ. ಹಾಗೆ ನಡೆಯುವವರಲ್ಲಿ ದೇಶವನ್ನು  ಆಳಿದ ರಾಜರಿದ್ದಾರೆ, ಅಧಿಕಾರಿಗಳಿದ್ದಾರೆ, ಶ್ರೀಮಂತರಿದ್ದಾರೆ. ಎಲ್ಲರೂ ಆ ಕರಿಯ ದಾಸಿಯ ಹೆಜ್ಜೆಯನ್ನು ಅನುಸರಿಸುತ್ತಿದ್ದಾರೆ. ಹಜ್ಜ್ ಎಂಬ ಪುಣ್ಯ ಕರ್ಮ ನಿರ್ಲಕ್ಷಿಸಲ್ಪಟ್ಟ ದಾಸಿಯರ ಪ್ರತಿನಿಧಿಯಾದ ಹಾಜರ(ರ)ರ ಸ್ಮರಣೆಯಲ್ಲಿ ಸಾಮಾಜಿಕ ಸಮಾನತೆಯ ಘೋಷಣೆಯಾಗಿದೆ.

ಪ್ರವಾದಿ ಇಬ್ರಾಹೀಮ್(ಅ)ರ ಪತ್ನಿಯಾಗಿ, ಪ್ರವಾದಿ ಇಸ್ಮಾಯೀಲ್(ಅ)ರನ್ನು ಆ ನಿಟ್ಟಿನಲ್ಲಿ ಪ್ರೀತಿ ವಾತ್ಸಲ್ಯ ನೀಡಿ ಬೆಳೆಸಿದ ತಾಯಿಯಾಗಿ ಹಾಜರ(ರ)  ಮಹಿಳೆ, ದಾಸಿ, ಕರಿಯ ಹೀಗೆ ಎಲ್ಲಾ ವಿಭಾಗದ ಸ್ವಾಭಿಮಾನ ಪ್ರಜ್ಞೆಯನ್ನು ಔನ್ನತ್ಯಕ್ಕೇರಿಸಿದರು.

ಪತ್ನಿ ಎಂಬ ಸ್ಥಾನದ ಗುರಿ ಏನೆಂಬುದನ್ನು ಅವರು ಸಾಕ್ಷಾತ್ಕರಿಸಿದರು. ದೇಹ ಸೌಂದರ್ಯಕ್ಕಿಂತ ಹೃದಯ ಸೌಂದರ್ಯಕ್ಕೆ ಪ್ರಾಮುಖ್ಯತೆ ಇದೆ ಎಂಬುದನ್ನು ಆ ನಿಗ್ರೋ ಮಹಿಳೆ ತೋರಿಸಿ ಕೊಟ್ಟರು. ತನ್ನ ಪತಿಯ ದೌತ್ಯವನ್ನು ಅವರು ಸರಿಯಾಗಿ ತಿಳಿದುಕೊಂಡಿದ್ದರು. ಎದುರಾಗುವ ಬೆಂಕಿಯ ಜ್ವಾಲೆಗಳಂತಹ ಸಂಕಷ್ಟಗಳ ಮುಂದೆ ಸೋಲಬಾರದೆಂಬ ದೃಢ ನಿಲುವನ್ನು ಅವರು ತಾಳಿದ್ದರು. ಸಮಸ್ಯೆಗಳಿಗೆ ಹೆದರಿ ಪಲಾಯನ ಮಾಡುವ ಬದಲು ಅದರ ವಿರುದ್ಧ ನಿಂತು ಹೋರಾಡುವ ಎದೆಗಾರಿಕೆ, ದೃಢವಿಶ್ವಾಸವನ್ನು  ಆ ಕುಟುಂಬ ತೋರಿತು. ಅಲ್ಲಾಹನ ಇಚ್ಛೆ ತನ್ನ ಇಚ್ಛೆ ಎಂದು ಪರಿಗಣಿಸಿದ ಅವರು ಎಲ್ಲಾ ವಿಚಾರದಲ್ಲೂ ಇಬ್ರಾಹೀಮ್(ಅ)ರ ಬೆಂಬಲಿಗರಾದರು.

ಅವರ ಕುಟುಂಬ ಪರೀಕ್ಷೆಗಳ ಬೆಂಕಿಯಲ್ಲಿ ನಿರಂತರ ಬೇಯುತ್ತಿತ್ತು. ವಿಶ್ರಾಂತಿ ರಹಿತವಾದ ಆ ಜೀವನದಲ್ಲಿ ಒಂದರ ಮೇಲೆ ಒಂದರಂತೆ ಸಂಕಷ್ಟಗಳು ಎದುರಾಗುತ್ತಿದ್ದವು. ದೀರ್ಘ ಸಮಯದ ಕಾತರದ ನಂತರ ಇಸ್ಮಾಯೀಲ(ಅ)ರು ಜನಿಸುತ್ತಾರೆ. ಆ ಪುಟ್ಟ ಮಗುವಿನ ತುಂಟಾಟಗಳನ್ನು ಹೆಚ್ಚು ಸಮಯ ಕಾಣುವ ಭಾಗ್ಯ ಪ್ರವಾದಿ ಇಬ್ರಾಹೀಮ(ಅ)ರಿಗಿರಲಿಲ್ಲ. ಹಸುಗೂಸಿನೊಂದಿಗೆ  ಹಾಜರ(ಅ) ಮಕ್ಕಾ ಎಂಬ ನಿರ್ಜನ ಪ್ರದೇಶಕ್ಕೆ ಹೋಗಲು ನಿರ್ಬಂಧಿತರಾಗುತ್ತಾರೆ. ಇದು ಪ್ರವಾದಿ ಇಬ್ರಾಹೀಮ(ಅ)ರಿಗೆ ಅಲ್ಲಾಹನ ಆಜ್ಞೆಯಾಗಿತ್ತು. ಅದನ್ನವರು ಶಿರಸಾ ಪಾಲಿಸುತ್ತಾರೆ. ನೀರಿಲ್ಲದ ನಿರ್ಜನ ಮರುಭೂಮಿಯಲ್ಲಿರುವ ಸಫಾ ಮರ್ವಾ ಬೆಟ್ಟದ ಮಧ್ಯೆ ಆ ತಾಯಿ ಮತ್ತು ಮಗು ಏಕಾಂಗಿಯಾಗುತ್ತಾರೆ. ಆಶ್ಚರ್ಯಕರವಾಗಿ ಅಲ್ಲಿ ಝಂಝಂ ಹರಿಯುತ್ತದೆ. ಜನವಾಸ ಆರಂಭವಾಗುತ್ತದೆ.  ಮಗು ಬೆಳೆದು ದೊಡ್ಡವನಾದಾಗ ಪ್ರವಾದಿ ಇಬ್ರಾಹೀಮ(ಅ)ರ ಆಗಮನವಾಗುತ್ತದೆ.

ಈ ಬಾರಿ ಪ್ರವಾದಿ ಇಬ್ರಾಹೀಮ(ಅ)ರು ಬಂದಿರುವುದು ಅಲ್ಲಾಹನ ಆಜ್ಞೆಯಂತೆ ಬಲಿಯರ್ಪಿಸಲು! ಮಗುವನ್ನು ಸ್ನಾನ ಮಾಡಿಸಿ ಬಲಿಗಾಗಿ ಸಿದ್ಧಗೊಳಿಸುವ ಆ ತಾಯಿಯ ಮನಸ್ಸು ಹೇಗಿರಬಹುದು? ಒಮ್ಮೆ ಊಹಿಸಿ ನೋಡಿ.  ಆ ಪರೀಕ್ಷೆಯಲ್ಲಿ ಕುಟುಂಬದ ಮೂವರೂ ವಿಜಯಿಗಳಾಗುತ್ತಾರೆ. ಇಸ್ಮಾಯೀಲ(ಅ)ರ ಬದಲಿಗೆ ಬಲಿಗಾಗಿ ಅಲ್ಲಾಹನು ಸ್ವರ್ಗದ ಆಡನ್ನು ಇಳಿಸಿ ಕರುಣಿಸುತ್ತಾನೆ.

ಇರಾಕ್‌ನ ಬಗ್ದಾದ್ ನಗರದಿಂದ 400 ಕಿ.ಮೀಟರ್ ದೂರದ ಉರ್ ಎಂಬ ಪ್ರದೇಶದಲ್ಲಿ  ಪ್ರವಾದಿ ಇಬ್ರಾಹೀಮ್(ಅ) ಕುಟುಂಬ ವಾಸಿಸುತ್ತಿತ್ತು. ಆ ಬಳಿಕ ಅವರು ಫೆಲೆಸ್ತೀನ್‌ಗೆ ಹಿಜ್ರಾ ಹೋಗುತ್ತಾರೆ.  ಅಲ್ಲಿ ಅವರು ಬೈತುಲ್ ಐನ್, ಬಿಅ್ರುಸ್ಸಬ್‌ಅ್ ಮೊದಲಾದ ಪ್ರಬೋಧನ ಕೇಂದ್ರಗಳನ್ನು ಸ್ಥಾಪಿಸುತ್ತಾರೆ. ಪತ್ನಿ ಮತ್ತು ಮಗುವನ್ನು ಬಿಟ್ಟುಬರಲು, ಬಲಿಯರ್ಪಿಸಲು, ಕಅಬ ಪುನರ್ ನಿರ್ಮಿಸಲು ಅವರು ಅಲ್ಲಿಂದ ಮೂರು ಬಾರಿ ಮಕ್ಕಾಗೆ ಪಯಣಿಸಿದ್ದರು.

ಪ್ರವಾದಿ ಇಬ್ರಾಹೀಮ(ಅ)ರು ಅಲ್ಲಾಹನ ಸ್ನೇಹಿತನಾಗಿ  ಆರಿಸಲ್ಪಟ್ಟವರು. ಇಂತಹ ಉನ್ನತ ಸ್ಥಾನಮಾನ ಅವರಿಗೆ ಲಭಿಸಲು ಕಾರಣವೇನು? ಇತರ ಪ್ರವಾದಿಗಳಿಗಿಂತ ಅವರಲ್ಲಿರುವ ವ್ಯತ್ಯಾಸವೇನು? ಅಲ್ಲಾಹನ ಸ್ನೇಹಿತನಾಗಲು ಅವರಿಗೆ ಹೇಗೆ ಸಾಧ್ಯವಾಯಿತು? ಇಂತಹ ಪ್ರಶ್ನೆಗಳಿಗೆ ಪವಿತ್ರ ಕುರ್‌ಆನ್ ಪ್ರವಾದಿ ಇಬ್ರಾಹೀಮ(ಅ)ರ ಇತಿಹಾಸ ತಿಳಿಸುವ ಮೂಲಕ ಉತ್ತರಿಸುತ್ತದೆ. ಒಂದು ಆದರ್ಶವನ್ನು ಸ್ವೀಕರಿಸಿದ ಆ ಕುಟುಂಬ ನಡೆದ ಬೆಂಕಿಯ ಹಾದಿಯ ಸ್ಪಷ್ಟ ಚಿತ್ರಣವನ್ನು ಅದು ನಮಗೆ ನೀಡುತ್ತದೆ. ಒಂದು ಆಯುಷ್ಕಾಲದಲ್ಲಿ ಅಪಾರ ಕರ್ಮಗಳನ್ನು ಗಳಿಸಬಹುದೆಂದು ಆ ಇತಿಹಾಸ ತಿಳಿಸುತ್ತದೆ.

ಹಜ್ಜ್  ಪ್ರವಾದಿ ಇಬ್ರಾಹೀಮ್(ಅ), ಪ್ರವಾದಿ ಇಸ್ಮಾಯೀಲ್(ಅ), ಹಾಜರ(ರ) ಈ ಮೂವರು ಮಹಾನ್ ವ್ಯಕ್ತಿಗಳ ನೆನಪನ್ನು ನಮಗೆ ಮರುಕಳಿಸುತ್ತದೆ. ಅವರು ನಡೆದ ಹಾದಿಯಲ್ಲಿ ಹಾಜಿಗಳೂ ನಡೆಯುತ್ತಾರೆ. ಆ ಮೂಲಕ ಆದರ್ಶಕ್ಕಾಗಿ ಸರ್ವತ್ಯಾಗಕ್ಕೆ ಸಿದ್ಧರಾಗಿದ್ದ ಮಹಾನುಭಾವರನ್ನು ಜಾಗತಿಕವಾಗಿ ಸ್ಮರಿಸಲಾಗುತ್ತದೆ. ಆ ಬಾರಿಯ ಹಜ್ಜ್ ಮನುಕುಲದ ಶಾಂತಿಗೆ ಹಾದಿ ತೆರೆಯಲಿ.

LEAVE A REPLY

Please enter your comment!
Please enter your name here