ಹಜ್ಜತುಲ್ ವಿದಾ

0
101

♦ಮುರ್ಷಿದ್

ಇಪ್ಪತ್ತ ಮೂರು ವರ್ಷಗಳ ಸಂಘರ್ಷಭರಿತ ದೌತ್ಯ ನಿರ್ವಹಣೆಯ ಕೊನೆಗೆ ಒಂದು ನವ ಸಮಾಜ ನಿರ್ಮಾಣವಾಗಿದೆ. ಆ ಸುಂದರ ಸಮಾಜವು  ಒಂದೇ ರೀತಿಯ ವೇಷಭೂಷಣಗಳಲ್ಲಿ, ಒಂದೇ ಗುರಿಯನ್ನಿರಿಸಿಕೊಂಡು ಒಂದೇ ರೀತಿಯ  ಘೋಷಣೆಯನ್ನು ಮೊಳಗಿಸುತ್ತಾ ಅರಫಾದಲ್ಲಿ ನೆರೆದಿದೆ. ಆ ಗುಂಪಿನಲ್ಲಿದ್ದ ಯಾರನ್ನು ವಿಚಾರಿಸಿದರೂ ಆತನಲ್ಲಾದ ವೈಯಕ್ತಿಕ, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ವಲಯಗಳ ಬದಲಾವಣೆಯ ಬಗ್ಗೆ ಬೇಕಾದಷ್ಟು ಹೇಳಲು ಆತನಿಗೆೆ ಸಾಧ್ಯವಿತ್ತು. ಇದೀಗ  ಆ ಬದಲಾವಣೆ ಮತ್ತು ಸಂದೇಶದ ನೈಜ ಕಾವಳಾಲುಗಳಾಗುವಂತೆ ಪ್ರವಾದಿ(ಸ)  ಆಹ್ವಾನ ಮಾಡಲಿದ್ದಾರೆ. ವಿದಾಯದ ದುಖಃ ಆ ಮಾತುಗಳಲ್ಲಿ ಎದ್ದು ಕಾಣುತ್ತಿದ್ದವು. ದುಲ್‌ಹಜ್ಜ್ ಒಂಭತ್ತರಂದು ಒಂಟೆಯ ಮೇಲೆರಿ  ಪ್ರವಾದಿ(ಸ) ಜನರ ಮಹಾಸಾಗರವನ್ನು ವೀಕ್ಷಿಸುತ್ತಾ ಮಿಡಿಯುವ ಹೃದಯದೊಂದಿಗೆ ಸ್ಪಷ್ಟವಾದ ಮಾತುಗಳಲ್ಲಿ ಭಾಷಣ ಪ್ರಾರಂಭಿಸುತ್ತಾರೆ. ರಬೀಅ್ ಬಿನ್ ಉಮಯ್ಯ(ರ) ಪ್ರವಾದಿ ವಚನವನ್ನು ಅತ್ಯುಚ್ಛ ಸ್ವರದಲ್ಲಿ ಜನರಿಗೆ ಕೇಳಿಸುತ್ತಿದ್ದು:

ಜನರೇ,  ನನ್ನ ಮಾತುಗಳನ್ನು ಗಮನವಿಟ್ಟು ಕೇಳಿ. ಇಲ್ಲಿ ಇನ್ನೊಮ್ಮೆ ನಿಮ್ಮನ್ನು ಭೇಟಿಯಾಗಲು ಸಾಧ್ಯವಿದೆಯೇ ಎಂದು ನನಗೆ ತಿಳಿಯದು. ಜನರೇ, ನಿಮ್ಮ ಈ ದಿನದ ಪಾವಿತ್ರದಂತೆ, ನಿಮ್ಮ ಈ ತಿಂಗಳ ಪಾವಿತ್ರದಂತೆ, ನಿಮ್ಮ ಈ ನಾಡಿನ ಪಾವಿತ್ರದಂತೆ ನಿಮ್ಮ ರಕ್ತ, ಅಭಿಮಾನ, ಸಂಪತ್ತು ನಿಮಗೆ ಪವಿತ್ರವಾಗಿದೆ. ತಿಳಿಯಿರಿ! ಅಜ್ಞಾನ ಕಾಲದ ಎಲ್ಲವನ್ನು ನಾನು ನನ್ನ ಕಾಲ ಪಾದದಡಿ ಹಾಕಿ ತುಳಿದಿದ್ದೇನೆ. ನಿಶ್ಚಯವಾಗಿ, ನೀವು ನಿಮ್ಮ ಒಡೆಯನನ್ನು ಕಾಣಲಿದ್ದೀರಿ. ಆ ಸಂದರ್ಭದಲ್ಲಿ ನಿಮ್ಮ ಕರ್ಮಗಳ ಕುರಿತು ಅವನು ನಿಮ್ಮಲ್ಲಿ ಪ್ರಶ್ನಿಸಲಿದ್ದಾನೆ. ಈ ಸಂದೇಶವನ್ನು ನಿಮಗೆ ತಲುಪಿಸುವ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ಅಜ್ಞಾನ ಕಾಲದ ಸೇಡನ್ನು ನಾನು ದುರ್ಬಲಗೊಳಿಸಿದ್ದೇನೆ. ಇಬ್ನು ರಬೀಅರ ರಕ್ತದ ಸೇಡನ್ನು ಮೊದಲು ನಾನು ರದ್ದು ಗೊಳಿಸುತ್ತಿದ್ದೇನೆ. ಜಾಹಿಲಿಯ್ಯ ಸಂಸ್ಕೃತಿಯ ಬಡ್ಡಿಯನ್ನು ಇದೋ ನಾನು ರದ್ದುಗೊಳಿಸುತ್ತಿದ್ದೇನೆ. ಯಾರ ಬಳಿಯಾದರೂ ಇತರರು ನಂಬಿಕೆ ಇಟ್ಟು ನೀಡಿದ ಹಣ, ಸಾಮಗ್ರಿಗಳಿದ್ದಲ್ಲಿ ಅದನ್ನು ಅದರ ಮಾಲೀಕನಿಗೆ ಮರಳಿ ಒಪ್ಪಿಸಬೇಕು.

ಜನರೇ, ನಿಮ್ಮ ಒಡೆಯ ಓರ್ವನು. ನಿಮ್ಮ ತಂದೆ ಓರ್ವನು, ತಿಳಿಯಿರಿ! ಅರಬೇತರನಿಗೆ ಅರಬಿಗಿಂತ, ಅರಬಿಗೆ ಅರಬೇತರನಿಗಿಂತ, ಕರಿಯನಿಗೆ ಕೆಂಪುಜನರಿಗಿಂತ, ಕೆಂಪು ಜನರಿಗೆ ಕರಿಯನಿಗಿಂತ ದೇವ ಭಯದ ಹೊರತು ಯಾವುದೇ ಶ್ರೇಷ್ಠತೆಯಿಲ್ಲ. ಮಹಿಳೆಯರ ವಿಚಾರದಲ್ಲಿ ನೀವು ಅಲ್ಲಾಹನ ಬಗ್ಗೆ ಎಚ್ಚರಿಕೆ ವಹಿಸಿರಿ. ಅಲ್ಲಾಹನ ಅಮಾನತು ಸೊತ್ತಾಗಿ ನೀವು ಅವರನ್ನು ಸ್ವೀಕರಿಸಿರುವಿರಿ. ದಿವ್ಯಆದೇಶ ಪ್ರಕಾರ ಅವರೊಡನೆ  ಲೈಂಗಿಕತೆ ನಿಮಗೆ ಅನುಮತಿಸಲಾಗಿದೆ. ಅನ್ಯರೊಡನೆ ಹಾಸಿಗೆಯನ್ನು ಹಂಚಿಕೊಳ್ಳದಿರುವುದು ಅವರ ಕರ್ತವ್ಯವಾಗಿದೆ. ಒಂದು ವೇಳೆ ಹಾಗೆ ಅವರು ನಡೆದರೆ   ಶಿಕ್ಷಾ ಕ್ರಮಗಳು ಕೈಗೊಳ್ಳಬೇಕು. ಅವರಿಗೆ ನ್ಯಾಯೋಚಿತವಾದ ಆಹಾರ, ಬಟ್ಟೆ ನೀಡುವುದು ನಿಮ್ಮ ಬಾಧ್ಯತೆಯಾಗಿದೆ.

ಜನರೇ, ನಿಮ್ಮ ಈ ಪುಣ್ಯ ಭೂಮಿಯಲ್ಲಿ ಆರಾಧನೆ ನಡೆಸುವ ವಿಚಾರದಲ್ಲಿ ಸೈತಾನನು ಇಂದಿನಿಂದ ನಿರಾಶೆ ಹೊಂದಿರುತ್ತಾನೆ. ಆದರೆ, ಸಣ್ಣಪುಟ್ಟ ವಿಚಾರದಲ್ಲಿ ಅವನಿಗೆ ಅನುಸರಿಸಿದರೂ ಅವನು ತೃಪ್ತನಾಗುವನು.

ಜನರೇ, ನನ್ನ ಮಾತುಗಳನ್ನು ಗಮನವಿಟ್ಟು ಕೇಳಿರಿ. ಸ್ಪಷ್ಟವಾದ ಎರಡು ವಿಚಾರಗಳನ್ನು ನಿಮ್ಮ ಬಳಿ ನಾನು ಬಿಟ್ಟು ಹೋಗುತ್ತಿದ್ದೇನೆ. ಅದನ್ನು ಬಲವಾಗಿ ಹಿಡಿಯುವ ತನಕ ನೀವು ದಾರಿತಪ್ಪಲಾರಿರಿ. ಅದು ಅಲ್ಲಾಹನ ಗ್ರಂಥ ಮತ್ತು ಪ್ರವಾದಿ ಚರ್ಯೆಯಾಗಿದೆ.

ಜನರೇ, ನನ್ನ ಬಳಿಕ ಬೇರೆ ಪ್ರವಾದಿಯ ಆಗಮನವಿಲ್ಲ. ನಿಮ್ಮ ಬಳಿಕ ಬೇರೆ ಸಮುದಾಯವಿಲ್ಲ. ತಿಳಿಯಿರಿ! ನಿಮ್ಮ ಒಡೆಯನನ್ನು ಮಾತ್ರ ಆರಾಧಿಸಿರಿ. ಐದು ವೇಳೆಗಳಲ್ಲಿ ನಮಾಝ್ ನಿರ್ವಹಿಸಿರಿ, ರಂಝಾನ್‌ನಲ್ಲಿ ಉಪವಾಸ ಆಚರಿಸಿರಿ, ಸಂಪತ್ತಿನ ಹಕ್ಕುಗಳನ್ನು ಪಾಲಿಸಿರಿ, ಕಅ್ಬಾದಲ್ಲಿ ಬಂದು ಹಜ್ಜ್ ನಿರ್ವಹಿಸಿರಿ, ನಿಮ್ಮ ನಾಯಕರನ್ನು ಅನುಸರಿಸಿರಿ. ಈ ರೀತಿ ನಿಮ್ಮ ಒಡೆಯನ ಸ್ವರ್ಗ ಪಡೆಯಿರಿ.

ಜನರೇ, ಯುದ್ಧ ನಿಷಿದ್ಧವಾದ ತಿಂಗಳುಗಳಲ್ಲಿ ತನ್ನಿಚ್ಛೆಯಂತೆ ಬದಲಾವಣೆ ಮಾಡುವುದು ಕಠೋರ ಅವಿಶ್ವಾಸವಾಗಿದೆ. ಅವಿಶ್ವಾಸಿಗಳು ಆ ಮೂಲಕ ಹಾದಿ ತಪ್ಪುತ್ತಾರೆ. ಅಲ್ಲಾಹನು ಪವಿತ್ರವೆಂದ ತಿಂಗಳಲ್ಲಿ ಯುದ್ಧವನ್ನು ಅನುಮತಿಸುವ ಮೂಲಕ, ಅಲ್ಲಾಹನು ಅನುಮತಿಸಿದ ತಿಂಗಳಲ್ಲಿ ಯುದ್ಧ ನಿಷಿದ್ಧ ಮಾಡುವ ಮೂಲಕ ದೇವನು ನಿಶ್ಚಯಿಸಿದ ಪುಣ್ಯ ತಿಂಗಳ ಸಂಖ್ಯೆಯನ್ನು ಪೂರ್ಣಗೊಳಿಸಿ, ಅವರು ಮೋಸ ಮಾಡುತ್ತಾರೆ.ಅಲ್ಲಾಹನು ಆಕಾಶ ಭೂಮಿಗಳನ್ನು ಸೃಷ್ಟಿಸಿದಂದಿನಿಂದ ಕಾಲ ಅದಕ್ಕೆ ನಿರ್ಣಯಿಸಿದ ರೀತಿಯಲ್ಲೇ ಭ್ರಮಣೆಗೊಳ್ಳುತ್ತಿದೆ.  ಅಲ್ಲಾಹನ ತಿಂಗಳ ಸಂಖ್ಯೆ ಹನ್ನೆರಡು. ಅವುಗಳಲ್ಲಿ ನಾಲ್ಕು ತಿಂಗಳು ಯುದ್ಧ ನಿಷಿದ್ಧವಾದ ಪವಿತ್ರ ತಿಂಗಳಾಗಿದೆ.

ಜನರೇ, ನನ್ನ ಮಾತನ್ನು ಸರಿಯಾಗಿ ಆಲಿಸಿರಿ. ಮುಸ್ಲಿಮರು ಪರಸ್ಪರ ಸಹೋದರರಾಗಿರುತ್ತಾರೆ. ತನ್ನ ಸಹೋದರ ಸಂತೃಪ್ತಿಯೊಂದಿಗೆ ನೀಡುವುದರ ಹೊರತಾದ ಯಾವುದೂ ಯಾರಿಗೂ ಅನುಮತಿಸಲ್ಪಟ್ಟಿಲ್ಲ. ಆದುದರಿಂದ ನೀವು ಆತ್ಮವಂಚನೆ ಮಾಡಿಕೊಳ್ಳಬೇಡಿ. ನನ್ನ ಬಳಿಕ ನೀವು ಪರಸ್ಪರ ಕೊರಳು ಕೊಯ್ದು ದಾರಿಗೆಡಬೇಡಿ. ನಿಮ್ಮ ಬಳಿ ಅಲ್ಲಾಹನು ನನ್ನ ಬಗ್ಗೆ ಪ್ರಶ್ನಿಸಿದರೆ ನೀವೇನು  ಉತ್ತರ ನೀಡುವಿರಿ?

‘‘ತಾವು ದೌತ್ಯವನ್ನು ಪೂರ್ಣವಾಗಿ ನಿರ್ವಹಿಸಿರುವಿರೆಂದೂ, ಬಾಧ್ಯತೆಯನ್ನು ನೆರವೇರಿಸಿರುವಿರೆಂದೂ, ಸಮಾಜಕ್ಕೆ ಉಪದೇಶ ನೀಡಿರುವಿರೆಂದೂ ನಾವು ಸಾಕ್ಷ್ಯ ವಹಿಸುತ್ತೇವೆ.’’ ಎಂದು ಅನುಚರರು ಒಕ್ಕೊರಳಿನಿಂದ ಹೇಳುತ್ತಾರೆ.

ಆ ವೇಳೆ ಪ್ರವಾದಿ(ಸ) ತಮ್ಮ ತೋರುಬೆರಳನ್ನು ಆಕಾಶದೆಡೆಗೆ ಎತ್ತಿ ಹಿಡಿದು ಜನರನ್ನು ನೋಡಿ ಹೀಗೆ ಹೇಳುತ್ತಾರೆ: ‘‘ಅಲ್ಲಾಹನೇ ನೀನು ಸಾಕ್ಷಿ. ಅಲ್ಲಾಹನೇ ನೀನು ಸಾಕ್ಷಿ’’ ‘‘ಇಲ್ಲಿ ಹಾಜರಿದ್ದವರು ಇತರರಿಗೆ ಇದನ್ನು ತಲುಪಿಸಲಿ. ಎಷ್ಟೋ ಮಂದಿ   ಕೇಳುವವರು ಕೇಳಿಸುವವರಿಗಿಂತ ವಿಜಯಿಗಳಾಗುವರು. ಪ್ರವಾದಿ(ಸ)ಯ ಭಾಷಣ ಕೊನೆಗೊಂಡ ತಕ್ಷಣ ಅಲ್ಲಾಹನ ವಚನ ಅವತೀರ್ಣಗೊಂಡಿತು:

‘‘ಇಂದು ನಾನು ನಿಮಗಾಗಿ ನಿಮ್ಮ ಧರ್ಮವನ್ನು ಪೂರ್ಣಗೊಳಿಸಿದ್ದೇನೆ ಮತ್ತು ನಿಮ್ಮ ಪಾಲಿಗೆ ನನ್ನ ಕೊಡುಗೆಯನ್ನು ಪೂರ್ತಿಗೊಳಿಸಿದ್ದೇನೆ. ಹಾಗೆಯೇ ನಿಮಗಾಗಿ ನಾನು ಇಸ್ಲಾಮ್ ಧರ್ಮವನ್ನು ಮೆಚ್ಚಿದ್ದೇನೆ’’ (ಕುರ್‌ಆನ್: 5:3)

ಈ ಸೂಕ್ತ ಅವತೀರ್ಣಗೊಂಡ ವೇಳೆ ಉಮರ್(ರ) ಸಂಕಟದಿಂದ ಅಳತೊಡಗಿದ್ದರು. ಪ್ರವಾದಿ(ಸ) ‘ಏನಿದು ಉಮರ್?’ ಎಂದು ಕೇಳುತ್ತಾರೆ. ಅದಕ್ಕೆ ಉಮರ್ ‘‘ನಾವು ಧರ್ಮದ ತಳಹದಿಯಲ್ಲಿ ಬೆಳೆಯುತ್ತಿದ್ದೆವು. ಆದರೆ ಅದು ಪೂರ್ಣಗೊಂಡಿದೆ. ಈ ಪರಿಸ್ಥಿತಿಯಲ್ಲಿ ನ್ಯೂನತೆಗಳು ನಡೆಯಬಹುದು’’ ಎಂದು ಹೇಳುತ್ತಾರೆ. ‘‘ತಾವು ಹೇಳಿರುವುದು ಸರಿ’’  ಎಂದು ಪ್ರವಾದಿ(ಸ)ತಿಳಿಸುತ್ತಾರೆ.

ಸಮಾಜದಲ್ಲಿ ಕಾಪಾಡಬೇಕಾದ ನ್ಯಾಯ, ರಕ್ಷಣೆೆ, ಸ್ವಾತಂತ್ರ ಮೊದಲಾದ ಮಾನವ ಹಕ್ಕುಗಳು ಮತ್ತು  ಅಲ್ಲಾಹನ ಹಕ್ಕುಗಳ ಬಗ್ಗೆ ಪ್ರವಾದಿ(ಸ) ತನ್ನ ಕೊನೆಯ ಭಾಷಣದಲ್ಲಿ ಒತ್ತಿ ಹೇಳಿದ್ದರು.

ವಿದಾಯ ಪಡೆಯುವ ತಮ್ಮ ಪ್ರಿಯರ ಕೊನೆಯಾಸೆೆಗೆ  ನೀಡುವ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಪ್ರಾಣಕ್ಕಿಂತ ಮಿಗಿಲಾಗಿ  ಪ್ರೀತಿಸುವ ಪ್ರವಾದಿ(ಸ)ಯ ಮಾನವ ವಿಮೋಚನಾ ಸಂದೇಶಗಳಿಗೆ ನಾವು ನೀಡಬೇಕಾಗಿದೆ. ಏಕೆಂದರೆ, ನೂರಾರು ವರ್ಷಗಳ ಹಿಂದೆ ಪ್ರವಾದಿ(ಸ) ಮಾಡಿದ ಈ ಮಾನವ ವಿಮೋಚನಾ ಭಾಷಣವು ಇಂದಿಗೂ ಪ್ರಸಕ್ತವಾಗಿದೆ. ಸಮಕಾಲೀನ ಸಮಸ್ಯೆಗಳ ಅಧ್ಯಯನ ನಡೆಸಿ ಪರಿಹಾರ ಸೂಚಿಸಿದಂತೆ  ಆ ಭಾಷಣ ಇಂದಿಗೂ ಪ್ರಸಕ್ತವಾಗಿದೆ. ಇದು ಪ್ರವಾದಿ ಸಂದೇಶದ ದೈವಿಕತೆಯನ್ನು ಎತ್ತಿ ತೋರಿಸುತ್ತದೆ. ವಿಶ್ವಸಂಸ್ಥೆ ಮಾನವ ಹಕ್ಕುಗಳನ್ನು ಘೋಷಣೆ ಮಾಡುವುದಕ್ಕಿಂತ ಹದಿನಾಲ್ಕು ಶತಮಾನಗಳ ಮೊದಲಿನ  ಭಾಷಣವಾಗಿತ್ತು ಇದು  ಎಂಬುದು ಗಮನಾರ್ಹವಾಗಿದೆ.

LEAVE A REPLY

Please enter your comment!
Please enter your name here