ಸ್ವಾತಂತ್ರ್ಯ ಹೋರಾಟ: ಮುಸ್ಲಿಮರಿಗೆ ಸಂಬಂಧಿಸಿದ ಕೆಲವು ವಿಚಾರಗಳು

Prasthutha|

– ಟಿ.ಕೆ. ಆಟಕೋಯ

ಭಾರತದ ರಾಷ್ಟ್ರೀಯ ಆಂದೋಲನ, ಸ್ವಾತಂತ್ರ್ಯ ಹೋರಾಟ, ಪ್ರತಿರೋಧ ಮತ್ತು ವಸಾಹತುಶಾಹಿ ವಿರೋಧಿ ಹೋರಾಟ ಮೊದಲಾದವುಗಳಿಗೆ ಸಂಬಂಧಿಸಿದಂತೆ ಮುಸ್ಲಿಮ್ ಹೋರಾಟಗಾರರು, ಆಡಳಿತಗಾರರು ಹಾಗೂ ನಾಯಕರು ಹಲವಾರು ರೀತಿಯ ವಿಮರ್ಶೆಗಳಿಗೆ ಗುರಿಯಾಗಿದ್ದಾರೆ. ಮುಸ್ಲಿಮರ ಮತ್ತು ಅವರ ಕಾರ್ಯಚಟುವಟಿಕೆಗಳ ಮೇಲೆ ದ್ವೇಷ ಮೂಡಿಸುವ ಸಾಮಾಜಿಕ ಪ್ರಜ್ಞೆ ಬೆಳೆಸುವಂತಹ ಅದ್ಭುತ ಪ್ರತಿಪಾದನೆಗಳೂ ಆ ಗುಂಪಿನಲ್ಲಿವೆ. ಇಂತಹ ಸನ್ನಿವೇಶ ಭಾರತ ಸೇರಿದಂತೆ ಜಗತ್ತಿನಾದ್ಯಂತ ಕಂಡು ಬರುತ್ತಿದೆ. ಸಾಮ್ರಾಜ್ಯಶಾಹಿ ಮತ್ತು ಸರ್ವಾಧಿಕಾರದ ವಿರುದ್ಧ  ನಡೆಸಿದ ಆಂದೋಲನದಲ್ಲಿದ್ದ  ಪ್ರತಿಯೊಬ್ಬ ಮುಸ್ಲಿಮನನ್ನು ದುಷ್ಟರ ಸಾಲಿಗೆ  ಸೇರಿಸಲಾಗಿದೆ.

- Advertisement -

 ಇಸ್ಲಾಮಿನ ಜಾಗತಿಕ ದೃಷ್ಟಿಕೋನವು ವಿಮೋಚನೆ, ಸ್ವಾತಂತ್ರ್ಯ ಮತ್ತು ಮೋಕ್ಷವಾಗಿದೆ. ಇದು  ಮುಸ್ಲಿಮರ ಪರಿಕಲ್ಪನೆಗೆ ಸಂಬಂಧಪಟ್ಟಿದೆ. ಕಮ್ಯೂನಿಸ್ಟ್, ಸಮಾಜವಾದ, ಗಾಂಧೀವಾದ ಮತ್ತು ಹಿಂದುತ್ವ ವಿಮೋಚನಾ ಪರಿಕಲ್ಪನೆಗಿಂತ ಇದು ಭಿನ್ನವಾಗಿದೆ. ವಿಮೋಚನಾ ಪರಿಕಲ್ಪನೆಗಳು ಮತ್ತು ಅವುಗಳ ಪ್ರಾಯೋಗಿಕತೆಯ ಬಳಿಕದ ಪರಿಣಾಮಗಳ ಕುರಿತಾದ ಅವಲೋಕನ ನಿರಪಾಯಕಾರಿಯಂತೆ ಕಂಡು ಬಂದರೂ ಅವುಗಳಲ್ಲಿ ಹೆಚ್ಚಿನವುಗಳು ದ್ವೇಷದಿಂದ ಕೂಡಿರುವುದರಿಂದ ಅಪಾಯಕಾರಿಯಾಗಿದೆ. ಇಸ್ಲಾಮ್ ಎಲ್ಲಾ ರೀತಿಯ  ದಾಸ್ಯತನಗಳಿಂದ ಮಾನವರ  ವಿಮೋಚನೆಯನ್ನು ಬಯಸಿದೆ. ಅದನ್ನು ತನ್ನ ಆದರ್ಶ ದೌತ್ಯವಾಗಿ ಕಂಡಿದೆ. ಪರ್ಷ್ಯಾ, ರೋಮ್,  ಸ್ಪೈನ್, ಭಾರತ ಹೀಗೆ ಎಲ್ಲೆಡೆ ಜನರ ಮೋಕ್ಷ, ವಿಮೋಚನೆ ಮತ್ತು ಸ್ವಾತಂತ್ರ್ಯಕ್ಕಾಗಿ ಇಸ್ಲಾಮಿನ ಆಗಮನವಾಗಿತ್ತು. ವಿವಿಧ ಪ್ರದೇಶಗಳಿಗೆ ಇಸ್ಲಾಮ್ ತ್ವರಿತಗತಿಯಲ್ಲಿ ತಲುಪಿತು. ವಿಮೋಚನೆಯನ್ನು ಬಯಸಿದ ದಮನಿತ ಜನರು ಆಯಾ ಪ್ರದೇಶಗಳಲ್ಲಿ ಇಸ್ಲಾಮಿನ ದೌತ್ಯವನ್ನು ಯಶಸ್ವಿಗೊಳಿಸಿದ್ದರು. ಅಬ್ಬಾಸಿಯಾ ಕಾಲದ ವರೆಗಿನ ಇಸ್ಲಾಮೀ ಇತಿಹಾಸದಲ್ಲಿ  ಅತಿಕ್ರಮಣದ ಮೂಲಕ ವಶಪಡಿಸಿಕೊಳ್ಳುವುದು (Conquer) ಎಂಬ ಪದ ಪ್ರಯೋಗ ಅಪರಿಚಿತವಾಗಿತ್ತು. ಗೆಲುವು ಪಡೆದ ಜೈತ್ರಯಾತ್ರೆಗಳನ್ನು ಅಲ್ ಫುತೂಹಾತುಲ್ ಇಸ್ಲಾಮಿಯ್ಯ  ಎಂದು ಇತಿಹಾಸ ವರ್ಣಿಸಿತ್ತು. ಈ ಘೋಷಣೆಯು ಆಕ್ರಮಣಕಾರಿ ಮನೋಭಾವಕ್ಕಿಂತ ಭಿನ್ನವಾಗಿದೆ. ಇದು ಮುಸ್ಲಿಮ್ ಯೋಧ ಅಥವಾ ಹೋರಾಟಗಾರನ ಮಾನವೀಯ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಒಂದು ಪ್ರದೇಶ ವಶವಾದರೆ ಅದು ಮುಸ್ಲಿಮ್ ಸಮಾಜದ ಭಾಗವಾಗಿ,  ಅಲ್ಲಿನ  ಜನರಿಗೆ ಸಂಪೂರ್ಣ ರಕ್ಷಣೆ ಮತ್ತು ಆಶ್ರಯವನ್ನು ನೀಡುತ್ತಿತ್ತು.

 ಬಲವಂತದ ಮತಾಂತರ, ತೆರಿಗೆ ಭಾರ ಮತ್ತು ಕ್ರೈಸ್ತರಿಗೆ ಅಡಿಯಾಳಾಗಿ ಜೀವಿಸಬೇಕಾಗಿ ಬಂದಿದ್ದ ಯಹೂದಿಯರ ಆಹ್ವಾನದ ಮೇರೆಗೆ ಮುಸ್ಲಿಮರು ಸ್ಪೈನ್‌ಗೆ ಆಗಮಿಸಿದ್ದರು. ಸ್ಪೈನ್ ದೇಶವನ್ನು  ವಶಪಡಿಸಿಕೊಂಡಿರುವುದರ ಕುರಿತಂತೆ ಇತಿಹಾಸವು ವಸಾಹತುಶಾಹಿ ಎಂಬುದರ ಬದಲಿಗೆ  ಸಿವಿಲೈಸ್‌ಡ್ ಎಕ್ಸ್‌ಪಡಿಷನ್ ಎಂದು ಕರೆದಿದ್ದರು. ಧರ್ಮ ಮತ್ತು ಜನಾಂಗೀಯ ಸಹಿಷ್ಣುತೆ, ಗ್ರಂಥಾಲಯ, ಶಿಕ್ಷಣ ಸಂಸ್ಥೆಗಳು, ಉದ್ಯಾನಗಳು, ಸಾರ್ವಜನಿಕ ಪ್ರದೇಶಗಳು, ಕವಿತೆ, ಶಿಲ್ಪಕಲೆ, ಸಂವಾದ ಮೊದಲಾದವುಗಳು ಆಧುನಿಕತೆಯ ಗುಣವಾಗಿದ್ದರೆ ಅದಕ್ಕಿರುವ ದೊಡ್ಡ ಉದಾಹರಣೆ ಮುಸ್ಲಿಮ್ ಸ್ಪೈನ್ ಆಗಿದೆ ಎಂದು ಅಕ್ಬರ್ ಎಸ್.ಅಹ್ಮದ್ ತನ್ನ ಡಿಸ್ಕವರಿಂಗ್ ಇಸ್ಲಾಮಿನಲ್ಲಿ ಹೇಳಿದ್ದಾರೆ.

 ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೆ ಇಸ್ಲಾಮ್ ಭಾರತಕ್ಕೆ ಕಾಲಿರಿಸಿತ್ತು. ಇತರ ಕಡೆಗಳಂತೆ ಭಾರತದಲ್ಲೂ ಇಸ್ಲಾಮಿನ ಯಶಸ್ಸಿಗೆ ಅದರ ಆದರ್ಶ, ಮಾನವೀಯತೆ, ಸ್ವಾತಂತ್ರ, ಸಮಾನತೆಯ ಸಂಸ್ಕೃತಿ ಕಾರಣವಾಗಿತ್ತು. ಭಾರತದಲ್ಲಿ ಮೊದಲ ಇಸ್ಲಾಮೀ ಆಡಳಿತ ವ್ಯವಸ್ಥೆಯನ್ನು ಬಿನ್‌ಖಾಸಿಂರವರು  ಪ್ರಾರಂಭಿಸಿದರು. ಪ್ರಜೆಗಳ ಧಾರ್ಮಿಕ ಸ್ವಾತಂತ್ರದಲ್ಲಿ ಅವರೆಂದೂ ಹಸ್ತಕ್ಷೇಪ ನಡೆಸಲಿಲ್ಲ. ಸಿಂಧ್‌ನ ಮುಸ್ಲಿಮ್ ಆಡಳಿತಗಾರರು ಹಿಂದೂಗಳೊಡನೆ ತೋರಿದ ಔದಾರ್ಯ, ಸಹಿಷ್ಣುತೆ ಇತರ ಯಾವ ಪ್ರದೇಶದಲ್ಲೂ ಕಾಣಲು ಸಾಧ್ಯವಿಲ್ಲ ಎಂದು  ತಾರಾನಾಥ್ ಹೇಳುತ್ತಾರೆ. ಮುಹಮ್ಮದ್ ಘೋರಿ ನಡೆಸಿದ ಸೇನಾ ದಾಳಿಯು ನೂರಾರು ವರ್ಷಗಳ ಕಾಲದ ಶಕ್ತ ಮುಸ್ಲಿಮ್ ಆಡಳಿತಕ್ಕೆ ಭದ್ರ ಬುನಾದಿ ಹಾಕಿತು. ಗುಲಾಮಿ, ಖಿಲ್ಜಿ, ಸಯ್ಯಿದ್, ತುಘ್ಲಕ್, ಲೋಧಿ ಮೊದಲಾದ ವಂಶಗಳು ಒಂದರ ಹಿಂದೆ ಒಂದರಂತೆ ದೆಹಲಿಯನ್ನು ಆಳಿದವು. ದೆಹಲಿ ಸುಲ್ತಾನೇಟ್ ಸ್ಥಾಪನೆಗೊಂಡ ತಕ್ಷಣ ರಾಜರುಗಳ ದುರಾಡಳಿತ ಕೊನೆಗೊಂಡಿತು. ಭಾರತದ ಆಡಳಿತ ವ್ಯವಸ್ಥೆಯು ದೆಹಲಿ ಸುಲ್ತಾನರ ಕೊಡುಗೆಯಾಗಿದೆ.

 1525ರಲ್ಲಿ ಇಬ್ರಾಹೀಮ್ ಲೋಧಿಯನ್ನು ಬಾಬರ್ ಸೋಲಿಸುತ್ತಾನೆ. ಅದರೊಂದಿಗೆ ಮೊಘಲ್ ಆಡಳಿತ ಪ್ರಾರಂಭವಾಯಿತು. ಅದು ಎರಡು ಶತಮಾನಗಳ ಕಾಲ ಮುಂದುವರಿದಿತ್ತು. ಮೊಘಲರನ್ನು ಆಧುನಿಕ ಇಂಡಿಯಾದ ಶಿಲ್ಪಿಗಳೆಂದು ಪರಿಗಣಿಸಲಾಗಿದೆ.

 ತನ್ನ ಧಾರ್ಮಿಕ ಅಧಿಕಾರವನ್ನು ಬಳಸಿಕೊಂಡ ಪೋಪ್‌ರವರು ಅರಬಿಗಳು ಮತ್ತು ಕ್ರೈಸ್ತರ ಶತ್ರುಗಳಾದ ಜನರನ್ನು ಹಿಡಿದು ಗುಲಾಮರನ್ನಾಗಿ ಮಾಡಲು ಪೂರ್ಣ ಸ್ವಾತಂತ್ರ್ಯದ ಕರೆ ನೀಡುತ್ತಾರೆ. ಈ ಕರೆಯು ವಸಾಹತುಶಾಹಿಯ ಹುಟ್ಟಿಗೆ ಕಾರಣವಾಯಿತು. ಈ ಪ್ರೇರಣೆಯಿಂದ 1497ರಲ್ಲಿ ಸೈಂಟ್ ರಫೇಲ್ ಎಂಬ ಹಡಗಿನಲ್ಲಿ ಹೊರಟ ವಾಸ್ಗೋಡಗಾಮ 1498ರಲ್ಲಿ ಕೋಯಿಕ್ಕೋಡ್ ತಲುಪುತ್ತಾನೆ. ಪೋರ್ಚುಗೀಸರ ಆಳ್ವಿಕೆಯ ಬಳಿಕ ಭಾರತ ಬ್ರಿಟಿಷರ ಅಧೀನಕ್ಕೆ ಬಂತು. ಈ ವಸಾಹತುಶಾಹಿಯ 500 ವರ್ಷಗಳ ಕಾಲ ಮುಸ್ಲಿಮರ ನಾಯಕತ್ವದ ಯುದ್ಧ ಮತ್ತು ಹೋರಾಟಗಳಿಗೆ ಸಾಕ್ಷಿಯಾದವು. ಭಾರತ ಸ್ವಾತಂತ್ರ್ಯ ಗಳಿಸುವ ತನಕ ಮುಸ್ಲಿಮರು ಒಂದು ಸಮಾಜ ಎಂಬ ನೆಲೆಗಟ್ಟಿನಲ್ಲಿ ಹೋರಾಟ ಭೂಮಿಯಲ್ಲಿ ಸ್ಥಿರವಾಗಿ ನೆಲೆನಿಂತಿತು.

 ಕುಂಞಾಲಿ ಮರಕ್ಕಾರ್ ನಾಯಕತ್ವದ ನಾವಿಕ ಪಡೆಯು ಪೋರ್ಚುಗೀಸರ ವಿರುದ್ಧ  ಸುದೀರ್ಘ ಯುದ್ಧ ನಡೆಸಿತು. ಕುಂಞಾಲಿ ಮರಕ್ಕಾರ್‌ರವರ ದೇಶಾಭಿಮಾನದ ಪರಾಕ್ರಮವು ಇಂದಿಗೂ ಕೇರಳ ಜನತೆಯ ಧೀರ ಸ್ಮರಣೆಯಾಗಿ ಉಳಿದುಕೊಂಡಿದೆ. ಈ ಧೀರ ಸೇನಾನಿಗಳ ಜೀವನ ಚರಿತ್ರೆಯು ಇಡೀ ಕೇರಳಕ್ಕೆ ಕೀರ್ತಿ ಮತ್ತು ಅಭಿಮಾನವನ್ನು ನೀಡಿತು. ಪೋರ್ಚುಗೀಸರ ನಾವಿಕ ಪ್ರಭುತ್ವದ ವಿರುದ್ಧ ಅವರು ಗಳಿಸಿದ ವಿಜಯವು ಕೇರಳದ ಇತಿಹಾಸದ ಮಹತ್ವದ ಅಧ್ಯಾಯವಾಗಿದೆ ಎಂದು ಇತಿಹಾಸ ತಜ್ಞರಾದ ಶ್ರೀಧರನ್ ಮೆನನ್ ಹೇಳುತ್ತಾರೆ.

ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಭಾರತದ ಇತರ ಆಡಳಿತಗಾರರಿಗಿಂತ ಭಿನ್ನರಾಗಿದ್ದಾರೆ. ಅವರು ಭಾರತದಲ್ಲಿನ ಬ್ರಿಟಿಷರ ದೊಡ್ಡ ವಿರೋಧಿಗಳಾಗಿದ್ದರು. ಸಾಮ್ರಾಜ್ಯಶಾಹಿಗಳ ವಿರುದ್ಧ ನಡೆಯಲಿರುವ ಯುದ್ಧಗಳ ಬಗ್ಗೆ ಟಿಪ್ಪುವಿಗೆ ಅರಿವಿತ್ತು. ಬ್ರಿಟನ್ ವಿರುದ್ಧ ಫ್ರಾನ್ಸ್, ತುರ್ಕಿ ಮತ್ತು ಅಫ್ಘಾನಿನ ಸಹಾಯವನ್ನು ಅವರು ನಿರೀಕ್ಷಿಸಿದ್ದರು. ಮರಾಠಿ ಮತ್ತು ನಿಝಾಮರ ಬೆಂಬಲವನ್ನು ಅವರು ಬಯಸಿದ್ದರು. ಆದರೆ ಅದಕ್ಕಾಗಿ ನಡೆಸಿದ ಪ್ರಯತ್ನಗಳೆಲ್ಲವೂ ವಿಫಲವಾದವು. 1799ರ ಮೇ 4ರಂದು ಟಿಪ್ಪು ರಣಾಂಗಣದಲ್ಲಿ ಹುತಾತ್ಮರಾಗುತ್ತಾರೆ. ಅದರೊಂದಿಗೆ ಬ್ರಿಟಷರ ಸಾಮ್ರಾಜ್ಯಶಾಹಿ ಕನಸುಗಳು ನನಸಾಗತೊಡಗಿದವು.

 ಶಾಹ್ ವಲಿಯುಲ್ಲಾಹಿ ದಹ್ಲವಿ ಮಾರ್ಗದರ್ಶನದಲ್ಲಿ ಸಯ್ಯಿದ್ ಅಹ್ಮದ್ ಶಹೀದ್‌ರ ನಾಯಕತ್ವದಲ್ಲಿ ರೂಪುಗೊಂಡ ಮುಜಾಹಿದ್ ಪ್ರಸ್ಥಾನ, ಹಾಜಿ ಶರೀಅತುಲ್ಲಾ ಸ್ಥಾಪಿಸಿದ ಪರಾಇಝೀ ಪ್ರಸ್ಥಾನ, 1857ರ ಒಂದನೇ ಸ್ವಾತಂತ್ರ ಹೋರಾಟ, ಅಲಿ ಸಹೋದರರು ನಾಯಕತ್ವದಲ್ಲಿ ನಡೆದ ಖಿಲಾಫತ್ ಚಳವಳಿ, ಮಹ್ಮೂದ್ ಹಸನ್ ನಾಯಕತ್ವದಲ್ಲಿ ನಡೆದ ಪಟ್ಟ್‌ತುವಾಲ್ ಕ್ರಾಂತಿ, ಖಾನ್ ಅಬ್ದುಲ್ ಗಫ್ಫಾರ್ ಖಾನ್ ರೂಪಿಸಿದ ರೆಡ್‌ಶರ್ಟ್ಸ್, ಇನಾಯತುಲ್ಲಾ ಖಾನ್ ಮಷ್‌ರಿಖಿ ರೂಪಿಸಿದ ಖಾಕ್‌ಸರ್ ಹೋರಾಟ ಮೊದಲಾದ ಬ್ರಿಟಿಷ್ ವಿರೋಧಿ ಆಂದೋಲನಗಳು ಭಾರತದ ಸ್ವಾತಂತ್ರ್ಯದ ಕನಸನ್ನು ನನಸಾಗಿಸಲು ಮುಖ್ಯ ಪಾತ್ರವಹಿಸಿದವು.

 1857ರ ಒಂದನೇ ಸ್ವಾತಂತ್ರ್ಯ ಹೋರಾಟವು ಭಾರತದ ಜನತೆಯ ಸಾಮ್ರಾಜ್ಯಶಾಹಿ, ವಸಾಹತುಶಾಹಿ ವಿರೋಧ ಮತ್ತು ಅದರ ಮೇಲಿನ ದ್ವೇಷದ ಪ್ರತಿಫಲನವಾಗಿತ್ತು. ಆ ಐತಿಹಾಸಿಕ ಹೋರಾಟದ ನೇತೃತ್ವವನ್ನು ಭಾರತದ ಜನತೆ ಬಹಾದ್ದೂರ್ ಶಾ ಝಫರ್‌ಗೆ ವಹಿಸಿಕೊಟ್ಟಿದ್ದರು.  ಮೌಲಾನ ಅಹದುಲ್ಲಾ ಖಾನ್, ಹಾಜಿ ಇಮಾದುಲ್ಲಾ, ಮೌಲಾನ ರಶೀದ್ ಅಹ್ಮದ್ ಗಂಗೋಯಿ, ಮೌಲಾನ ಫಝ್‌ಲುಲ್ ಹಖ್ ಖೈರಾಬಾದಿ ಮೊದಲಾದ ವಿದ್ವಾಂಸರು ಹೋರಾಟದ ಮುಂಚೂಣಿಯಲ್ಲಿದ್ದರು. 1858 ಜೂನ್ 20ರ ವರೆಗೆ ನಡೆದ ಈ ಹೋರಾಟವನ್ನು ಬ್ರಿಟಿಷರು ಕ್ರೂರವಾಗಿ ದಮನಿಸಿದರು.

 ಅದರೊಂದಿಗೆ ಮುಸ್ಲಿಮ್ ಪ್ರತಾಪವು ದೆಹಲಿ ಇತಿಹಾಸದ ಪುಟ ಸೇರಿತು. ಆ ಬಗ್ಗೆ ಹ್ಯಾಲಿಯವರು ಹೀಗೆ ಬರೆದಿದ್ದಾರೆ. ಗೆಳೆಯಾ, ದೆಹಲಿಯ ಬಗ್ಗೆ ಇನ್ನು ನಾವು ಮಾತನಾಡುವುದು ಬೇಡ. ನೋವುಣಿಸುವ ಆ ಕತೆಯನ್ನು ಕೇಳಲು ನಮ್ಮಿಂದಾಗದು.

 ವಾಸ್ತವ ಹೀಗಿದ್ದರೂ ಮುಸ್ಲಿಮ್ ಯೋಧರು, ವಿದ್ವಾಂಸರನ್ನು ಸಂಪ್ರದಾಯಸ್ಥರು, ಅನಾಗರಿಕರು, ಮತಾಂಧರು, ಉಗ್ರವಾದಿಗಳೆಂದು ಬಿಂಬಿಸಲಾಗುತ್ತಿದೆ. ಅದರ ಉತ್ತರ ಸರಳವಾಗಿದೆ. ಮುಸ್ಲಿಮರ ಸಾಮ್ರಾಜ್ಯಶಾಹಿ ವಿರೋಧಿ ಹೋರಾಟಗಳ ಆದರ್ಶದಲ್ಲಿ ಆರ್ಯರ, ಪಾಳೆಯಗಾರರ ಮತ್ತು ದುಷ್ಟ ಆಡಳಿತಗಾರರ ವಿರುದ್ಧವಾದ ತತ್ವ ಮತ್ತು ನೀತಿ ಅಂತರ್ಲೀನವಾಗಿತ್ತು.

 ಅನಾಗರಿಕರೂ, ಅಸಹಿಷ್ಣುಗಳೂ ಆಗಿದ್ದ ಆರ್ಯರ ರಂಗಪ್ರವೇಶದೊಂದಿಗೆ ದೇವಧರ್ಮದ ಇತಿಹಾಸ ಆರಂಭವಾಗುತ್ತದೆ. ಬ್ರಾಹ್ಮಣ ಪೌರೋಹಿತ್ವ ಮತ್ತು ವರ್ಣ ವ್ಯವಸ್ಥೆ ಈ ಧರ್ಮದ ತಳಹದಿ. ಮೃಗೀಯವಾದ ಕಾಮತೃಷೆ, ನಿಕೃಷ್ಟವಾದ ಅತ್ಯಾಗ್ರಹ ಮತ್ತು ಸಾರ್ವಜನಿಕ ಸಂಪತ್ತಿನ ಕಬಳಿಕೆ ಮೊದಲಾದವುಗಳು ಈ ಧರ್ಮದ ಮೂಲವಾಗಿತ್ತು. ಬ್ರಿಟಿಷರ ವಿರುದ್ಧವಾದ ಮುಸ್ಲಿಮರ ಹೋರಾಟವು ತಮ್ಮ ಹಿತಾಸಕ್ತಿಗೆ ವಿರುದ್ಧ ಎಂಬುದನ್ನು ಅವರು ತಿಳಿದುಕೊಂಡರು. ಮುಸ್ಲಿಮರ ಕೊಡುಗೆಗಳಿಗೆ ಬೆಲೆ ಕಲ್ಪಿಸಲು ಹಿಂದುತ್ವವಾದಿಗಳು ಮತ್ತು ಅವರ  ಬೆಂಬಲಿಗರು ಸಿದ್ಧರಾಗದಿರುವುದು ಇದೇ ಕಾರಣಕ್ಕಾಗಿದೆ.

 ಒಂದು ಸಮಾಜ ಎಂಬ ನೆಲೆಯಲ್ಲಿ ಮುಸ್ಲಿಮರ ಕೊಡುಗೆಗಳು ಮತ್ತು ಸಹಭಾಗಿತ್ವವನ್ನು ನಿರ್ಲಕ್ಷಿಸಿ ಭಾರತದ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸಿದರೆ ಅದು ಅಪೂರ್ಣ ಮತ್ತು ಇತಿಹಾಸಕ್ಕೆ ವಿರುದ್ಧವೂ ಆಗಿರುತ್ತದೆ.

- Advertisement -