ಸ್ವಾತಂತ್ರ್ಯ ಕಾಯುವ ಕಾಯಕ

0
114

♦ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ

1947 ಆಗಸ್ಟ್ 15 ದೇಶಕ್ಕೆ ಸ್ವಾತಂತ್ರ ಲಭಿಸಿದ ದಿನವಾಗಿದೆ. ಬ್ರಿಟಿಷರ ಅಧೀನದಲ್ಲಿ ಜರ್ಜರಿತಗೊಂಡ ದೇಶ ಅಂದು ಸ್ವತಂತ್ರಗೊಂಡಿತು. ಸ್ವಾತಂತ್ರವು ಮಾನವರ ಪ್ರಕೃತಿದತ್ತ  ಹಕ್ಕು. ಸ್ವಾತಂತ್ರವಿಲ್ಲದಿದ್ದರೆ  ಜೀವನ ಅರ್ಥಶೂನ್ಯ. ಸ್ವತಂತ್ರನಲ್ಲದ ವ್ಯಕ್ತಿ ಮಾನಸಿಕವಾಗಿ ಸತ್ತಿರುತ್ತಾನೆ.

ಆದುದರಿಂದಲೆ ಸ್ವಾತಂತ್ರಕ್ಕಾಗಿ ಸಾವಿರಾರು ಮಂದಿ ಬರೆದಿದ್ದಾರೆ, ಭಾಷಣ ಮಾಡಿದ್ದಾರೆ, ಹೋರಾಟ ಮಾಡಿ ಪ್ರಾಣ ತೆತ್ತಿದ್ದಾರೆ. ಮಾನವನು ಸದಾ ಸ್ವಾತಂತ್ರ ಬಯಸುತ್ತಾನೆ ಎಂಬುದಕ್ಕೆ ಇದು ಪುರಾವೆಯಾಗಿವೆ.

ಬುದ್ಧಿಯುಳ್ಳವರೆಲ್ಲರೂ ಸ್ವಾತಂತ್ರವನ್ನು ಬಯಸುತ್ತಾರೆ. ಸ್ವತಂತ್ರನು ಆರೋಗ್ಯವಂತ ಮನಸ್ಸನ್ನು ಹೊಂದಿರುತ್ತಾನೆ. ಮಾನವರನ್ನು  ಅಲ್ಲಾಹನು  ಸ್ವತಂತ್ರನಾಗಿ ಸೃಷ್ಟಿಸುವ ಮೂಲಕ ಅವನಿಗೆ ಉನ್ನತ ಸ್ಥಾನಗಳನ್ನು ನೀಡಿದ್ದಾನೆ. ಆ ಸ್ವಾತಂತ್ರವನ್ನು ಸರಿಯಾದ ತಿಳುವಳಿಕೆಗೆ ಮತ್ತು ಉತ್ತಮ ಕೆಲಸಕಾರ್ಯಗಳಿಗೆ ವಿನಿಯೋಗಿಸಬೇಕೆಂಬುದು ಪ್ರವಾದಿ(ಸ)ಯ ಇಂಗಿತವಾಗಿದೆ.

ಪ್ರವಾದಿ(ಸ)ಯವರೊಡನೆ ಓರ್ವನು ‘‘ಯಾರಾದರೂ ನನ್ನ ಸಂಪತ್ತನ್ನು ಬಲವಂತ ವಶಪಡಿಸಲು ಮುಂದಾದರೆ ನಾನೇನು ಮಾಡಬೇಕು?’’ ಎಂದು ಕೇಳಿದಾಗ ಪ್ರವಾದಿ(ಸ) ‘‘ನಿನ್ನ ಸಂಪತ್ತನ್ನು  ಅವರಿಗೆ ಬಿಟ್ಟುಕೊಡಬಾರದು’’ ಎಂದು ತಿಳಿಸುತ್ತಾರೆ. ‘‘ಆತ ನನ್ನೊಡನೆ ಹೋರಾಟಕ್ಕೆ ಮುಂದಾದರೆ?’ ಎಂದು ವ್ಯಕ್ತಿ ತನ್ನ ಸಂದೇಹ  ವ್ಯಕ್ತಪಡಿಸಿದಾಗ ಪ್ರವಾದಿ(ಸ) ‘‘ನೀನು ಅವನೊಡನೆ ಹೋರಾಡು’’ ಎಂದು ಹೇಳುತ್ತಾರೆ: ‘‘ಒಂದು ವೇಳೆ ಆತ ನನ್ನನ್ನು ಕೊಂದರೆ?’’ ಎಂಬ ಆ ವ್ಯಕ್ತಿಯ ಸಂದೇಹಕ್ಕೆ ಪ್ರವಾದಿ(ಸ)  ‘‘ನೀನು ಹುತಾತ್ಮನಾಗುವಿ’’  ಎಂದು ಹೇಳಿದ್ದರು.

ಪ್ರವಾದಿ(ಸ)ಯವರ ಮಾತು ಜಗಳ, ರಕ್ತಪಾತವನ್ನು ಬೆಂಬಲಿಸುವುದಾಗಿರಲಿಲ್ಲ. ತನ್ನ ಸ್ವತಂತ್ರ ಜೀವನಕ್ಕೆ ಯಾರೇ ಅಡ್ಡಿ ಬಂದರೂ ಅದನ್ನು  ತಡೆಯಲೇಬೇಕು. ಒಂದು ವೇಳೆ ತಡೆಯದಿದ್ದಲ್ಲಿ ಬಲಾಢ್ಯನು ದುರ್ಬಲನ  ಸ್ವಾತಂತ್ರವನ್ನು ಕಸಿಯುತ್ತಾನೆ. ಆತನನ್ನು ತನ್ನ ಗುಲಾಮನನ್ನಾಗಿಸುತ್ತಾನೆ. ಇಂತಹ ಜೀವನಕ್ಕಿಂತ ಆತನಿಗೆ ಮರಣವೇ ಲೇಸು ಎಂಬುದನ್ನು ಪ್ರವಾದಿ(ಸ) ಪರೋಕ್ಷವಾಗಿ ಸೂಚಿಸಿದ್ದರು.

ನಂಬಿಕೆ ಎಂಬುದು ವೈಯಕ್ತಿಕ ಸ್ವಾತಂತ್ರ. ಅದನ್ನು ಬಲವಂತವಾಗಿ ಹೇರಲಾಗದು. ಇಸ್ಲಾಮ್ ನಂಬಿಕೆಯನ್ನು ಎಂದೂ ಬಲವಂತವಾಗಿ ಹೇರಿಲ್ಲ. ಕುರ್‌ಆನ್ ಈ ವಿಚಾರ ಪುನರಾವರ್ತಿಸಿ ಹೇಳಿದೆ.

ಧರ್ಮದಲ್ಲಿ ಬಲವಂತವಿಲ್ಲ. ಖಂಡಿತವಾಗಿಯೂ ಸರಿದಾರಿಯು ತಪ್ಪು ದಾರಿಗಳಿಂದ ಪ್ರತ್ಯೇಕವಾಗಿದೆ. (2:256)

(ದೂತರೇ) ನೀವು ಬೋಧಿಸಿರಿ, ಏಕೆಂದರೆ ನೀವು ಬೋಧಕರೇ ಆಗಿದ್ದೀರಿ. ನೀವು ಅವರ ಕಾವಲುಗಾರರೇನಲ್ಲ (88:21,22)

ಅದೇ ರೀತಿ ನಮ್ಮ ದೇಶದ ಸಂವಿಧಾನ ನಂಬಿಕೆಯ ಸ್ವಾತಂತ್ರಕ್ಕೆ ಅನುಮತಿಸಿದೆ. ಆದರೆ ಇಂದು ದೇಶದಲ್ಲಿ ಕೆಲವೆಡೆ ಧಾರ್ಮಿಕ ನಂಬಿಕೆಯನ್ನು ಬಲವಂತವಾಗಿ ಹೇರುವ, ಆ ಕಾರಣಕ್ಕೆ ಹಿಂಸಿಸುವ ಪ್ರಕರಣಗಳು ವ್ಯಾಪಕವಾಗಿವೆ. ಅಧಿಕಾರ, ಜನಬಲ ಶಕ್ತಿಗಳನ್ನು ಬಳಸಿಕೊಂಡು ಬಲವಂತದ ಮತಾಂತರ ಪ್ರಯತ್ನ ನಡೆಯುತ್ತಿದೆ. ಇದರ ಬಗ್ಗೆ ಪವಿತ್ರ ಕುರ್‌ಆನ್ ಮುನ್ನೆಚ್ಚರಿಕೆಯನ್ನು ನೀಡಿದೆ. ಅಂತಹ ಸಂದರ್ಭದಲ್ಲಿ  ತನ್ನ ನಂಬಿಕೆಯನ್ನು ಉಳಿಸಿಕೊಳ್ಳುವ ಬಗ್ಗೆ ದೃಢತೆ ತೋರುವುದು ಸತ್ಯವಿಶ್ವಾಸಿಯ ಕರ್ತವ್ಯವಾಗಿದೆ.

ತಮಗೆ ಸಾಧ್ಯವಾದರೆ, ನಿಮ್ಮನ್ನು ನಿಮ್ಮ ಧರ್ಮದಿಂದ ವಿಮುಖರಾಗಿಸಿ ಬಿಡುವ ತನಕವೂ ನಿಮ್ಮ ವಿರುದ್ಧ ಯುದ್ಧ ಹೂಡುತ್ತಲೇ ಇರುವರು. ಇನ್ನು ನಿಮ್ಮ ಪೈಕಿ, ಧರ್ಮದಿಂದ ವಿಮುಖನಾದವನ ಮತ್ತು (ಅದೇ ಸ್ಥಿತಿಯಲ್ಲಿ) ಮೃತನಾದವನ ಕರ್ಮಗಳೆಲ್ಲಾ ಈ ಲೋಕದಲ್ಲೂ ಪರಲೋಕದಲ್ಲೂ ವ್ಯರ್ಥವಾಗಿ ಬಿಟ್ಟವು. ಅಂಥವರು ನರಕದವರು ಮತ್ತು ಅವರು ಅಲ್ಲೇ ಸದಾಕಾಲ ಇರುವರು (2:217)

ಧಾರ್ಮಿಕ ಸ್ವಾತಂತ್ರ ಸಂವಿಧಾನ ನೀಡಿದ ಹಕ್ಕು. ಅದಕ್ಕೆ ಧಕ್ಕೆ ತರುವ ಯಾವುದೇ ಪ್ರಯತ್ನವು ಸ್ವಾತಂತ್ರದ ನಿರಾಕರಣೆಯಾಗಿರುತ್ತದೆ. ಅಂತಹ ಪ್ರಯತ್ನಗಳನ್ನು ತಡೆಯಲೇಬೇಕು. ಇಲ್ಲದಿದ್ದಲ್ಲಿ ಅದು ಎಲ್ಲೆಡೆ ಕ್ಷೋಭೆಯನ್ನು ಹರಡಬಹುದು.

ಇಸ್ಲಾಮ್ ನ್ಯಾಯ, ನೀತಿ, ಸಮಾನತೆ ಮತ್ತು ಸ್ವಾತಂತ್ರವನ್ನ್ನು ಪ್ರತಿಪಾದಿಸುತ್ತದೆ. ಜನರ ದಾಸ್ಯತನವನ್ನು ಮತ್ತು ತಾರತಮ್ಯ ನೀತಿಯನ್ನು ಇಸ್ಲಾಮ್ ಎಂದೂ ಅಂಗೀಕರಿಸಿಲ್ಲ. ಏಕೆಂದರೆ ದಾಸ್ಯತನ ಸ್ವಾತಂತ್ರದ ನಿರಾಕರಣೆಯಾಗಿರುತ್ತದೆ.

ಜಗತ್ತಿಗೆ ಆಗಮಿಸಿದ ಪ್ರವಾದಿಗಳು ಜನರ ಎಲ್ಲಾ ರೀತಿಯ ದಾಸ್ಯ ಬಂಧನಗಳಿಂದ ವಿಮೋಚಿಸುವ ದೌತ್ಯಗಳನ್ನು  ನಿರ್ವಹಿಸಿದ್ದರು. ಅದರ ಪೂರ್ಣ ರೂಪವನ್ನು ಪ್ರವಾದಿ ಮುಹಮ್ಮದ್(ಸ) ತೋರಿಸಿ ಕೊಟ್ಟಿದ್ದರು. ಅದೇ ವೇಳೆ ಧಾರ್ಮಿಕ, ಶ್ರೀಮಂತ, ರಾಜಕೀಯ ನಾಯಕರು ಎಲ್ಲಾ ಕಾಲದಲ್ಲೂ ಪರಸ್ಪರ ಇದರ ವಿರುದ್ಧ ಒಗ್ಗಟ್ಟಿನಲ್ಲಿರುತ್ತಾರೆ. ಅವರಿಂದ ಜಗತ್ತನ್ನು ವಿಮೋಚಿಸಿ ಸ್ವತಂತ್ರಗೊಳಿಸುವ ಗುರಿಯನ್ನು ಪ್ರವಾದಿ(ಸ) ಎಂದೋ ಸಾಧಿಸಿದ್ದರು. ಇಂತಹ  ಕೆಲಸ ಕಾರ್ಯದಲ್ಲಿ ರಾಜಿ ಮಾಡಿಕೊಳ್ಳುವ ಕುರಿತಂತೆ ಅಬೂತಾಲಿಬ್‌ರವರು ಪ್ರವಾದಿ(ಸ)ಯವರಲ್ಲಿ ಕೇಳಿಕೊಂಡಾಗ ಪ್ರವಾದಿ(ಸ)ಯ ದೃಢವಾದ ಮಾತು ಹೀಗಿತ್ತು:

‘‘ತಾವು ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಯಾಗಿದ್ದೀರಿ. ಆದರೆ ನನ್ನ ಬಲಗೈಯ್ಯಲ್ಲಿ ಸೂರ್ಯನನ್ನೂ ಎಡಗೈಯ್ಯಲ್ಲಿ ಚಂದ್ರನನ್ನೂ ತಂದಿಟ್ಟರೂ ನಾನು ಈ ದೌತ್ಯದಿಂದ ಹಿಂದೆ ಸರಿಯಲಾರೆ. ಒಂದೋ ಅಲ್ಲಾಹನು ನನ್ನನ್ನು ಯಶಸ್ವಿಯಾಗಿಸುವನು, ಅಥವಾ ನಾನು ಇದರಲ್ಲಿ ಮರಣ ಹೊಂದುವೆನು’’

ಮಾನವರ ದಾಸ್ಯ ವಿಮೋಚನೆಯ ಕೆಲಸಕಾರ್ಯ ಮಾಡುವ ತನ್ನ  ಸ್ವಾತಂತ್ರವನ್ನು ತೊರೆಯಲು ಪ್ರವಾದಿ(ಸ) ಎಂದೂ ಸಿದ್ಧರಾಗಲಿಲ್ಲ. ಅದನ್ನು ತೊರೆಯುವುದಕ್ಕಿಂತ ಮರಣ ಲೇಸು ಎಂಬ ನಿಲುವನ್ನು ಅವರು ತಳೆದಿದ್ದರು. ಮಕ್ಕಾ ಕುರೈಶರು ಪ್ರವಾದಿ ಅನುಯಾಯಿಗಳ ವಿರುದ್ಧ ಹಿಂಸೆಯನ್ನು ತೀವ್ರಗೊಳಿಸಿದ ಸಮಯದಲ್ಲೂ ಶತ್ರುವಿಗೆ ಮಣಿಯಬಾರದು ಎಂಬ ದಿಟ್ಟ ನಿಲುವು ತೋರಲು ಅಲ್ಲಾಹನಿಂದ ಸಂದೇಶ ಲಭಿಸಿತ್ತು. ಕುರ್‌ಆನ್ ಅದನ್ನು ಹೀಗೆ ತಿಳಿಸಿದೆ:

ಅಕ್ರಮವೆಸಗಿದವರ ಕಡೆಗೆ ನೀವು ವಾಲಬೇಡಿ, (ಅನ್ಯಥಾ) ಬೆಂಕಿಯು ನಿಮಗೆ ತಗಲುವುದು ಮತ್ತು ನಿಮಗೆ ಅಲ್ಲಾಹನ ಹೊರತು ಬೇರಾರೂ ಪೋಷಕರು ಸಿಗಲಾರರು, ನಿಮಗೆ ಸಹಾಯವೂ ಸಿಗದು (11:113)

ಸ್ವಾತಂತ್ರಕ್ಕೆ ಇಸ್ಲಾಮ್ ನೀಡುವ ಸ್ಥಾನ ಏನೆಂಬುದನ್ನು ಅರಿತುಕೊಂಡು ಅದನ್ನು ಕಾಪಾಡಲು ದೇಶದ ಜನರು ಜಾಗೃತರಾಗಬೇಕಾಗಿದೆ.

***

LEAVE A REPLY

Please enter your comment!
Please enter your name here