ಸ್ಪಷ್ಟಗೊಂಡದ್ದು ವಿಶ್ವಾಸಮತವಲ್ಲ: ವಿಶ್ವಾಸಘಾತಕ

0
149

 

ಕರ್ನಾಟಕದ ನಾಟಕೀಯ ರಾಜಕೀಯವು ಸದ್ಯಕ್ಕೆ ತಾರ್ಕಿಕ ಅಂತ್ಯ ಕಂಡಿದೆ. ವಿಶ್ವಾಸಮತದ ಪರೀಕ್ಷೆಯಲ್ಲಿ ಯಾರು ಗೆದ್ದರೋ  ಸೋತರೋ ಎಂಬ ಲೆಕ್ಕಾಚಾರಕ್ಕಿಂತ ರಾಜಕೀಯ ಪಕ್ಷಗಳ ವಿಶ್ವಾಘಾತಕ ನಡೆಯಂತೂ ಸ್ಪಷ್ಟಗೊಂಡಿದೆ. ನಿರ್ಜೀವ ಇವಿಯಂನ ಮೇಲೆ ಸೋಲಿನ ಹೊಣೆಯನ್ನು ಹೊರಿಸಿದ್ದ ಜಾತ್ಯತೀತ ಸೋಗಿನ ಪಕ್ಷದ ಶಾಸಕರೇ ತಂಡೋಪತಂಡವಾಗಿ ಬಿಜೆಪಿಯನ್ನು ಸೇರಿಕೊಳ್ಳುತ್ತಿದ್ದಾರೆ. ಕೆಟ್ಟು ಹೋಗಿರುವುದು ಕೇವಲ ಯಂತ್ರ ಮಾತ್ರವಲ್ಲ,  ಅದರ ಜಾತ್ಯತೀತ ಮಂತ್ರವು ಸಂಪೂರ್ಣವಾಗಿ ಕೆಟ್ಟುಹೋಗಿದೆ. ಕಾಂಗ್ರೆಸ್ ಮುಕ್ತ ಮಾಡಲು ಹೊರಟ ಬಿಜೆಪಿಯು ಈಗ ಕಾಂಗ್ರೆಸ್‌ಯುಕ್ತ ಬಿಜೆಪಿಯಾಗಿ ಮಾರ್ಪಟ್ಟಿದೆ. ಇತ್ತೀಚೆಗಿನ ಅಂಕಿಅಂಶಗಳನ್ನು ಗಮನಿಸಿದರೆ ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್‌ಯುಕ್ತ ಬಿಜೆಪಿಯನ್ನು ಕಾಣಬಹುದು. ಉತ್ತರಖಾಂಡ್‌ನಲ್ಲಿ 9 ಮಂದಿ ಶಾಸಕರು, ಅರುಣಾಚಲ ಪ್ರದೇಶದಲ್ಲಿ 43 ಶಾಸಕರು, ಮಣಿಪುರದಲ್ಲಿ 8 ಶಾಸಕರು, ತ್ರಿಪುರದಲ್ಲಿ 6 ಶಾಸಕರು, ಗುಜರಾತ್‌ನಲ್ಲಿ 5, ಗೋವಾದಲ್ಲಿ 10 ಮಂದಿ ಶಾಸಕರು ಬಿಜೆಪಿಯನ್ನು ಸೇರಿಕೊಂಡಿದ್ದಾರೆ. ಇನ್ನು ನಮ್ಮ ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಸುಮಾರು 14ರಷ್ಟು ಮಂದಿ ಶಾಸಕರು ಅತೃಪ್ತಗೊಂಡು ಇನ್ನೂ ಹೆಚ್ಚಿನ ತೃಪ್ತಿಗಾಗಿ ಬಿಜೆಪಿಯ ಬಾಗಿಲ ಬಳಿ ನಿಂತು ಚೌಕಿದಾರನ ಪಾತ್ರ ನಿರ್ವಹಿಸುತ್ತಿದ್ದಾರೆ. ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬುದನ್ನು ನಾವು ಕೇಳಿದ್ದೆವು. ಕರ್ನಾಟಕದ ರಾಜಕೀಯದಲ್ಲಿ ಕಾಂಚಾಣ ಮಾತನಾಡುತ್ತಿದೆ, ಶಾಸಕರು ‘ಕೈ’ಬಿಟ್ಟಿದ್ದಾರೆ ಅಷ್ಟೇ.

ಕಾಂಗ್ರೆಸಿಗರು ಅಥವಾ ಜಾತ್ಯತೀತ ಜನತಾದಳದ ಪ್ರಮುಖರು ಬಿಜೆಪಿ ಸೇರಿಕೊಳ್ಳುವುದು ಅಚ್ಚರಿಯ ಸಂಗತಿಯೇನೂ ಅಲ್ಲ. ಈ ಹಿಂದೆ ಕಾನೂನು ಮಂತ್ರಿಯಾಗಿದ್ದ ಡಿ.ಬಿ.ಚಂದ್ರೇಗೌಡ, ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣರಂತಹ ಘಟಾನುಘಟಿಗಳು ಸಂಘಪರಿವಾರದ ಫರ್ಮಾನು ಬಂದಾಗ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಕಾಂಗ್ರೆಸ್‌ನಲ್ಲಿ ಎಷ್ಟು ವರ್ಷ ದುಡಿಯಬೇಕು, ಯಾವೆಲ್ಲಾ ಜವಾಬ್ದಾರಿಗಳನ್ನು ನಿರ್ವಹಿಸಬೇಕು, ಯಾವಾಗ ಅದರಿಂದ ಹೊರ ಬರಬೇಕು ಎಂಬಿತ್ಯಾದಿ ಷರತ್ತುಗಳೊಂದಿಗೆ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಸಂಘಪರಿವಾರದ ಪ್ರತಿನಿಧಿಗಳೇ ಕಾಂಗ್ರೆಸ್‌ನಂತಹ ಪ್ರಮುಖ ಜಾತ್ಯತೀತ ಪಕ್ಷಗಳಲ್ಲಿ ತುಂಬಿಕೊಂಡಿದ್ದಾರೆ. ಹೀಗೆ ಪಕ್ಷ ತೊರೆದು ಬರುವವರು ಯಾರೂ ಅತೃಪ್ತರಲ್ಲ. ಗುತ್ತಿಗೆ ಸ್ವಯಂಸೇವಕರು. ಆರೆಸ್ಸೆಸ್ ಎಂದರೆ ಅದು ಬಿಜೆಪಿಯಲ್ಲಿ ಮಾತ್ರ ಇರಬೇಕೆಂದೇನಿಲ್ಲ. ಕಾಂಗ್ರೆಸ್, ಜೆಡಿಎಸ್, ಕಮ್ಯುನಿಸ್ಟ್, ಅಷ್ಟೇ ಯಾಕೆ ಮುಸ್ಲಿಮ್ ಲೀಗಿನಲ್ಲಿ ಇರುವುದಕ್ಕೂ ಅಡ್ಡಿ ಇಲ್ಲ. ಅದರ ಅಂತಿಮ ಫಲಿತಾಂಶವನ್ನು ಇದೀಗ ಎರಡನೆ ಮೋದಿ ಅವಧಿಯಲ್ಲಿ ಕಾಣುತ್ತಿದ್ದೇವೆ.

ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಬರಬಾರದು ಎಂದು ಜಾತ್ಯತೀತ ಪಕ್ಷಗಳೊಂದಿಗೆ ಸಾಥ್ ನೀಡಿದ್ದ ಮತದಾರರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ರಾಜ್ಯ ನಾಯಕರು ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ. ಫಲಿತಾಂಶದ ಆರಂಭದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮಾಡಿಕೊಂಡಿದ್ದ ಮೈತ್ರಿಯನ್ನು ಫ್ಯಾಷಿಸ್ಟ್ ಬಿಜೆಪಿಯನ್ನು ದೂರ ಇಡುವುದಕ್ಕಾಗಿ ಎಂದು ಆ ಎರಡೂ ಪಕ್ಷಗಳು ಬಹಿರಂಗವಾಗಿ ಘೋಷಿಸಿದ್ದವು. ಹಾಗಾದರೆ ಫ್ಯಾಷಿಸ್ಟರನ್ನು ಅಧಿಕಾರದಿಂದ ದೂರ ಇಡುವ ನಿಲುವಿಗೆ ಅದರದ್ದೇ ಶಾಸಕರು ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ ಎಂದು ಸದ್ಯದ ರಾಜಕೀಯ ವಿದ್ಯಮಾನವನ್ನು ವ್ಯಾಖ್ಯಾನಿಸಬಹುದಲ್ಲವೇ? ಅಲ್ಲವೆಂದಲ್ಲಿ ಅತೃಪ್ತಿಯ ವ್ಯಾಖ್ಯಾನ ಮತ್ತು ವ್ಯಾಪ್ತಿಯನ್ನು ಜನತೆಯ ಮುಂದೆ ಬಹಿರಂಗಪಡಿಸಲೇಬೇಕು. ಇಂತಹ ‘ಅತೃಪ್ತ’ರ ಗುತ್ತಿಗೆಯನ್ನೂ ಸಂಘಪರಿವಾರ ಹೊತ್ತುಕೊಂಡಿದೆ. ಸಂವಿಧಾನ,  ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಲೆಂದು ನಾವು ಗುತ್ತಿಗೆ ನೀಡಿದ್ದ ರಾಜಕೀಯ ಪಕ್ಷಗಳು ದ್ರೋಹವೆಸಗಿವೆ. ಹೀಗಾಗಿ ನಂಬಿಕೊಂಡು ಬಂದಿದ್ದ ಗುತ್ತಿಗೆಯನ್ನು ಹಿಂಪಡೆದು ಪರ್ಯಾಯ ರಾಜಕೀಯದತ್ತ ಸಿದ್ಧತೆ ನಡೆಸುವುದು ಅತ್ಯಗತ್ಯ. ಸದ್ಯಕ್ಕೆ ಪರೋಕ್ಷವಾಗಿ ನಾವು ಬಿಜೆಪಿಗೆ ಮತ ಹಾಕುವ ಪ್ರಮೇಯದಿಂದ ತಪ್ಪಿಸಿಕೊಂಡತಾಗುತ್ತದೆ. ಇಲ್ಲದಿದ್ದಲ್ಲಿ ನಾವು ಕಾಂಗ್ರೆಸ್ ಅಥವಾ ಜೆಡಿಎಸ್‌ಗೆ ಹಾಕಿದ ಮತಗಳು ಬಿಜೆಪಿ ಪಾಲಾಗಲು ಇವಿಎಂ ಯಂತ್ರವೇ ಬೇಕೆಂದಿಲ್ಲ. ಆ ಕೆಲಸವನ್ನು ಸ್ವತಹ ನಮ್ಮ ಮತಗಳನ್ನು ಕಸಿದುಕೊಂಡ ಜನಪ್ರತಿಧಿಗಳೇ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ.

ಸಕಾರಾತ್ಮಕ ರಾಜಕೀಯ ಮತ್ತು ಪರ್ಯಾಯ ರಾಜಕೀಯದತ್ತ ಜನತೆಯನ್ನು ಜಾಗೃತಿಗೊಳಿಸುವುದು ಪ್ರಗತಿಪರರ, ಹೋರಾಟಗಾರರ ಆದ್ಯತೆಯ ಅಜೆಂಡಾವಾಗಿರಲಿ. ಇನ್ನೆಂದೂ ನಮ್ಮ ರಾಜಕೀಯ ಹೋರಾಟವನ್ನು ಅಧಿಕಾರದ ದಾಹ ಇರುವ ಮತ್ತು ಹೋರಾಟದ ಮನೋಭಾವವಿಲ್ಲದ ಮೈಗಳ್ಳ ರಾಜಕೀಯ ಪಕ್ಷಗಳಿಗೆ ಅಡವಿಡದಿರೋಣ. ಬಿಜೆಪಿಯನ್ನು ಸೋಲಿಸುವುದು ಎಷ್ಟು ಮುಖ್ಯವೋ, ಬಿಜೆಪಿಯ ಸೋಲನ್ನು ತಡೆಹಿಡಿಯುತ್ತಿರುವ  ಜಾತ್ಯತೀತ ಸೋಗಿನ ಪಕ್ಷಗಳನ್ನೂ ಜಾಲಾಡಿಸುವುದು ಹೊಸ ರಾಜಕೀಯ ಹೋರಾಟದ ಗುರಿ ಆಗಿರಲಿ. ಎಲ್ಲ ಕಾಲದಲ್ಲಿ ಎಲ್ಲರನ್ನೂ ಏಕ ಕಾಲಕ್ಕೆ ಮೋಸಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ಅಬ್ರಹಾಂ ಲಿಂಕನ್; ನನಗೆ ಒಂದು ಮರವನ್ನು ಕಡಿಯುವ ಕೆಲಸವನ್ನು ವಹಿಸಿದರೆ ನಾನು ಹೆಚ್ಚಿನ ಸಮಯವನ್ನು ಕೊಡಲಿಯನ್ನು ಹರಿತಗೊಳಿಸಲು ವಿನಿಯೋಗಿಸುವೆ. ಇದರಿಂದ ಮರ ಉರುಳಿಸಲು ಸುಲಭ ಮತ್ತು ಹೆಚ್ಚು ಸಮಯ ಬೇಕಾಗದು ಎಂದು ಹೇಳಿದ್ದ ಈ ಮಾತು ಬಹಳ ಮಾರ್ಮಿಕವಾದುದು. ಅಂದರೆ ಫ್ಯಾಷಿಸಮ್ನ್ನು ನಿರ್ಮೂಲನೆ ಮಾಡುವ ಮೊದಲು ಹೋರಾಟವನ್ನು ತೀವ್ರಗೊಳಿಸಬೇಕು ಮತ್ತು ಪ್ರಜಾಪ್ರಭುತ್ವವನ್ನು ಇನ್ನಷ್ಟು ಹರಿತಗೊಳಿಸಬೇಕು. ಅದು ರಂಗಕ್ಕಿಳಿದು ನಡೆಸುವ ಹೋರಾಟದಿಂದ ಮಾತ್ರ ಸಾಧ್ಯ.  ಅಂತಹ ಗುಣವಿಶೇಷ ಇರುವ ಪರ್ಯಾಯ ರಾಜಕೀಯ ಸಿದ್ಧಾಂತವು ನಮ್ಮ ಆಯ್ಕೆಯಾಗಿರಲಿ.

LEAVE A REPLY

Please enter your comment!
Please enter your name here