ಸಿಜೆಐ ಬೋಬ್ಡೆ ಮಧ್ಯಪ್ರದೇಶ ಸರಕಾರದ ವಿಮಾನದಲ್ಲಿ ಪ್ರಯಾಣ | ಪ್ರಶಾಂತ್ ಭೂಷಣ್ ಟೀಕೆ

Prasthutha: October 22, 2020

ನವದೆಹಲಿ : ಸುಪ್ರೀಂ ಕೋರ್ಟ್ ಸಿಜೆಐ ಎಸ್.ಎ. ಬೋಬ್ಡೆ ವಿರುದ್ಧ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ. ಕನ್ಹಾ ನ್ಯಾಶನಲ್ ಪಾರ್ಕ್ ಮತ್ತು ತಮ್ಮ ತವರು ನಗರಕ್ಕೆ ಮಧ್ಯಪ್ರದೇಶ ಸರಕಾರ ಪ್ರಾಯೋಜಿಸಿದ ವಿಮಾನದಲ್ಲಿ ಸಿಜೆಐ ಬೋಬ್ಡೆ ಪ್ರಯಾಣಿಸಿರುವುದಕ್ಕೆ ಭೂಷಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಬಿಜೆಪಿ ಸರಕಾರದ ವಿವಾದ ಇನ್ನೂ ವಿಚಾರಣಾ ಹಂತದಲ್ಲಿರುವಾಗಲೇ ಸಿಜೆಐ ಅವರು ಸರಕಾರದ ವಿಮಾನದಲ್ಲಿ ಪ್ರಯಾಣಿಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ

“ಶಾಸಕರ ಅನರ್ಹತೆ ಪ್ರಕರಣದಂತ ಪ್ರಮುಖ ವಿಚಾರಣೆ ತಮ್ಮ ಮುಂದೆ ವಿಚಾರಣೆಗೆ ಬಾಕಿಯಿರುವಾಗ, ಕನ್ಹಾ ನ್ಯಾಶನಲ್ ಪಾರ್ಕ್ ಮತ್ತು ಅಲ್ಲಿಂದ ತಮ್ಮ ತವರು ನಗರ ನಾಗ್ಪುರಕ್ಕೆ ಪ್ರಯಾಣಿಸಲು ಸಿಜೆಐ ಅವರಿಗೆ ಮಧ್ಯಪ್ರದೇಶ ಸರಕಾರದ (ಮುಖ್ಯಮಂತ್ರಿಗಳಿಂದ ಅಧಿಕೃತಗೊಳಿಸಲ್ಪಟ್ಟ) ವಿಮಾನ ದೊರೆಯುತ್ತದೆ. ಮಧ್ಯಪ್ರದೇಶ ಸರಕಾರದ ಉಳಿಯುವಿಕೆ ಈ ಪ್ರಕರಣವನ್ನು ಆಧರಿಸಿದೆ’’ ಎಂದು ಭೂಷಣ್ ಟ್ವೀಟ್ ಮಾಡಿದ್ದಾರೆ.

ಸಿಜೆಐ ಬೋಬ್ಡೆ ಕನ್ಹಾ ಹುಲಿ ಉದ್ಯಾನವನಕ್ಕೆ ಭಾನುವಾರ ತೆರಳುತ್ತಾರೆ ಮತ್ತು ಮಂಗಳವಾರ ಅಲ್ಲಿಂದ ತಮ್ಮ ತವರೂರಿಗೆ ತೆರಳುತ್ತಾರೆ. ಕೋರ್ಟ್ ಕಲಾಪಗಳಿಗೆ ದಸರಾ ರಜೆಯಿರುವುದರಿಂದ ಸಿಜೆಐ ಈ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

ಸಿಜೆಐ ಅವರಿಗೆ ತಮ್ಮ ಸಾಂವಿಧಾನಿಕ ಹುದ್ದೆಯ ಘನತೆಗನುಗುಣವಾಗಿ ಕಾರು, ಹೆಲಿಕಾಪ್ಟರ್, ವಿಶೇಷ ವಿಮಾನ ಪ್ರಯಾಣದ ಅವಕಾಶವಿದೆ. ಭೂಷಣ್ ಅವರ ಟ್ವೀಟ್ ದುರುದ್ದೇಶದಿಂದ ಕೂಡಿದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ. ಈ ಹಿಂದೆ ಬಿಜೆಪಿ ನಾಯಕರೊಬ್ಬರಿಗೆ ಸೇರಿದ್ದ ಐಶಾರಾಮಿ ಬೈಕ್ ಒಂದರಲ್ಲಿ ಪ್ರಯಾಣಿಸಿದ್ದುದಕ್ಕಾಗಿ ಸಿಜೆಐ ಬೋಬ್ಡೆ ಅವರನ್ನು ಭೂಷಣ್ ಟೀಕಿಸಿ ಟ್ವೀಟ್ ಮಾಡಿ ನ್ಯಾಯಾಂಗ ನಿಂದನೆಗೆ ದೋಷಿತರಾಗಿ, 1 ರೂ. ದಂಡ ಪಾವತಿಯ ಶಿಕ್ಷೆ ಎದುರಿಸಿದ್ದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ