ಸಿಎಎ ವಿರೋಧಿ ಹೋರಾಟಗಾರ ಶರ್ಜಿಲ್ ಉಸ್ಮಾನಿ ಬಿಡುಗಡಗೆ 41 ಪ್ರಮುಖ ಸಾಮಾಜಿಕ, ವಿದ್ಯಾರ್ಥಿ ನಾಯಕರ ಒತ್ತಾಯ

Prasthutha|

ನವದೆಹಲಿ : ಅಲಿಗಢ ಜೈಲಿನಲ್ಲಿ ಬಂಧಿತರಾಗಿರುವ ಶರ್ಜಿಲ್ ಉಸ್ಮಾನಿ ಅವರ ಬಿಡುಗಡೆಗೆ ಒತ್ತಾಯಿಸಿ ದೇಶಾದ್ಯಂತದ ಸುಮಾರು ವಿವಿಧ ಕ್ಷೇತ್ರಗಳ ಸಾಮಾಜಿಕ ಹೋರಾಟಗಾರರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದೇಶದ ವಿವಿಧ ಭಾಗದ ಸುಮಾರು 41 ಮಂದಿ ಪ್ರತಿಷ್ಠಿತ ವ್ಯಕ್ತಿಗಳು ಈ ಹೇಳಿಕೆಗೆ ಸಹಿ ಮಾಡಿದ್ದಾರೆ.

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಯಾದ ಶರ್ಜಿಲ್ ಉಸ್ಮಾನಿಯ ಬಂಧನ, ಸಿಎಎ ವಿರೋಧಿ ಚಳವಳಿಗಾರರ ನಿರಂತರ ಬಂಧನದ ಭಾಗವಾಗಿ ನಡೆಸಲಾಗಿತ್ತು. ಮುಖ್ಯವಾಗಿ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಗುರಿಯಾಗಿಸುವ ಮೂಲಕ, ಯುವ ಕಾರ್ಯಕರ್ತರ ಧ್ವನಿಯನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆ ಪ್ರಯತ್ನಿಸುತ್ತಿದೆ ಎಂದು ಹೇಳಿಕೆಯಲ್ಲಿ ಆಪಾದಿಸಲಾಗಿದೆ. ಬಂಧಿತರನ್ನು ತಕ್ಷಣವೇ ಬೇಷರತ್ ಆಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಲಾಗಿದೆ.

- Advertisement -

ಫ್ರಾಟರ್ನಿಟಿ ಮೂವ್ ಮೆಂಟ್ ನ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಸಿಎಎ ವಿರೋಧಿ ಹೋರಾಟಗಾರ ಶರ್ಜಿಲ್ ಉಸ್ಮಾನಿ ಅವರನ್ನು ಒಂದು ತಿಂಗಳಿನಿಂದ ಆಲಿಗಢ ಜೈಲಿನಲ್ಲಿ ಬಂಧಿಸಲಾಗಿದೆ. ಕಳೆದ ಜು.8ರಂದು ಉತ್ತರ ಪ್ರದೇಶದ ಆಝಂಗಢದ ನಿವಾಸದಿಂದ ಅವರನ್ನು ಬಂಧಿಸಲಾಗಿದೆ. ಆ ದಿನ ಕ್ರೈಂ ಬ್ರಾಂಚ್ ಗೆ ಸೇರಿದವರು ಎನ್ನಲಾದ ಐವರು ಉಸ್ಮಾನಿ ಅವರನ್ನು ವಶಕ್ಕೆ ಪಡೆದಿದ್ದರು ಮತ್ತು ಅವರ ಪುಸ್ತಕಗಳು, ಲ್ಯಾಪ್ ಟಾಪ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಪ್ರಸ್ತುತ 2019, ಡಿ.15ರಂದು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ನಡೆದಿದ್ದ ಪೊಲೀಸ್ – ಅರೆಸೇನಾ ಪಡೆ ಹಿಂಸಾಚಾರಕ್ಕೆ ಸಂಬಂಧಿಸಿ 5 ಎಫ್ ಐಆರ್ ಗಳಲ್ಲಿ ಉಸ್ಮಾನಿ ಹೆಸರು ದಾಖಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಫ್ರಾಟರ್ನಿಟಿ ಮೂವ್ ಮೆಂಟ್ ನ ಅಧ್ಯಕ್ಷ ಅನ್ಸಾರ್ ಅಬೂಬಕರ್, ತಮಿಳುನಾಡು ರಾಡಿಕಲ್ ಸ್ಟುಡೆಂಟ್ಸ್ ಫೋರಂನ ರಾಜ್ಯ ಜಂಟಿ ಕಾರ್ಯದರ್ಶಿ ದಯಾ ನೆಪೋಲಿಯನ್, ದೆಹಲಿಯ ಎಐಎಸ್ ಎ ರಾಜ್ಯಾಧ್ಯಕ್ಷ ಕಾವಲ್ ಪ್ರೀತ್ ಕೌರ್, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಅಧ್ಯಕ್ಷ ಎಂ.ಎಸ್. ಸಾಜಿದ್ ಮುಂತಾದ 41 ಮಂದಿ ಪ್ರಮುಖ ಸಂಘಟನೆಗಳ ನಾಯಕರು ಉಸ್ಮಾನಿ ಬಿಡುಗಡೆಗೆ ಒತ್ತಾಯಿಸಿದ ಜಂಟಿ ಹೇಳಿಕೆಗೆ ಸಹಿ ಮಾಡಿದ್ದಾರೆ.

ಫೋಟೊ ಕೃಪೆ : ಟಿಡಿಎನ್ ವರ್ಲ್ಡ್

- Advertisement -