ಸಾಧನೆ ಗೆ ಬೇಕಾಗಿದೆ ಸಂಕಲ್ಪ

0
24

ಜಾಗತಿಕ ಮಕ್ಕಳ ಹಕ್ಕುಗಳ  ಒಪ್ಪಂದಕ್ಕೆ 30 ವರುಷಗಳು

-ಜಾವೇದ್ ಅನೀಸ್, ಭೋಪಾಲ್, ಹೋರಾಟಗಾರು

ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಮೂವತ್ತು ವರುಷಗಳು ಪೂರ್ಣಗೊಂಡಿತು. ನವೆಂಬರ್ 20, 1989ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ‘ಮಕ್ಕಳ ಹಕ್ಕುಗಳ ಒಪ್ಪಂದ’ವನ್ನು ಪಾಸು ಮಾಡಲಾಯಿತು. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನವ ಹಕ್ಕುಗಳಿಗೆ ಸಂಬಂಧಿಸಿ ನಡೆಯುವ ಒಪ್ಪಂದಗಳ ಪೈಕಿ ಅತ್ಯಂತ ಹೆಚ್ಚು ರಾಷ್ಟ್ರಗಳಿಂದ ಸ್ವೀಕೃತಗೊಂಡ ಒಪ್ಪಂದವಾಗಿದೆ. ಇದು ಎಲ್ಲಾ ಮಕ್ಕಳಿಗೂ ನಾಗರಿಕ, ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಹಕ್ಕುಗಳಿಗೆ ಮಾನ್ಯತೆ ನೀಡುವಂತಹ ಒಂದು ಮಕ್ಕಳ ಹಕ್ಕುಗಳ ಒಪ್ಪಂದವಾಗಿದೆ. ಈ ಒಪ್ಪಂದದಲ್ಲಿ ಜಗತ್ತಿನ 193 ರಾಷ್ಟ್ರಗಳ ಸರಕಾರಗಳು ಸಹಿ ಹಾಕುತ್ತಾ, ತನ್ನ ದೇಶದಲ್ಲಿ ಎಲ್ಲಾ ಮಕ್ಕಳಿಗೂ ಜಾತಿ, ಧರ್ಮ, ಲಿಂಗ, ಭಾಷೆ, ಸಂಪತ್ತು, ಅರ್ಹತೆ ಮೊದಲಾದವುಗಳ ಆಧಾರದಲ್ಲಿ ಯಾವುದೇ ತಾರತಮ್ಯವಿಲ್ಲದೆ ರಕ್ಷಣೆ ನೀಡುವುದಾಗಿ ಭರವಸೆ ನೀಡಿವೆ. ಕೇವಲ ಅಮೆರಿಕಾ ಮತ್ತು ಸೋಮಾಲಿಯ ದೇಶಗಳು ಈವರೆಗೂ ಇದಕ್ಕೆ ಸಹಿ ಹಾಕಿಲ್ಲ. ಈ ಮಕ್ಕಳ ಹಕ್ಕುಗಳ ಒಪ್ಪಂದಕ್ಕೆ ಭಾರತವು 1992ರಲ್ಲಿ ಸಹಿ ಮಾಡುತ್ತಾ ತನ್ನ ಬದ್ಧತೆಯನ್ನು ವ್ಯಕ್ತಪಡಿಸಿದೆ. ಮಕ್ಕಳ ಈ ಹಕ್ಕುಗಳು ನಾಲ್ಕು ಮೂಲ ಸಿದ್ಧಾಂತಗಳ ಮೇಲೆ ಆಧಾರಿತವಾಗಿದೆ. ಇದರಲ್ಲಿ ಜೀವಿಸುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿ ಮತ್ತು ಸಹಭಾಗಿತ್ವದ ಹಕ್ಕುಗಳು ಸೇರಿವೆ.

ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದದ 30 ವರುಷಗಳ ಪ್ರಯಾಣವು ಬಹಳಷ್ಟು ಏಳು-ಬೀಳುಗಳನ್ನು ಕಂಡಿದೆ. ಇದು ಜಗತ್ತಿನ ಪ್ರಮಾಣದಲ್ಲಿ ಅತ್ಯಂತ ಅಧಿಕ ಸರ್ವಸ್ವೀಕೃತ ಮಾನವ ಹಕ್ಕು ಒಪ್ಪಂದವಾಗಿದೆ. ಈ ಒಪ್ಪಂದವು ಭಾರತ ಸೇರಿದಂತೆ ಜಗತ್ತಿನಾದ್ಯಂತವಿರುವ ಜನರಲ್ಲಿ ಮಕ್ಕಳ ಕುರಿತಾದ ದೃಷ್ಟಿಕೋನ ಮತ್ತು ವಿಚಾರಗಳನ್ನು ಮೂಲಭೂತವಾಗಿ ಬದಲಿಸುವ ಕೆಲಸವನ್ನು ಮಾಡಿದೆ. ಇಂದು ಈ ಒಪ್ಪಂದದ ಪರಿಣಾಮವು ಎಲ್ಲಾ ದೇಶಗಳ ಕಾನೂನುಗಳು ಮತ್ತು ನೀತಿಗಳ ಮೇಲೆ ಸ್ಪಷ್ಟವಾಗಿ ಕಾಣಬಹುದಾಗಿದೆ. ಇದರಿಂದಾಗಿ ಮಕ್ಕಳ ಸ್ಥಿತಿಗತಿಯಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ಕಾಣಲು ಸಾಧ್ಯವಾಗಿದೆ. ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಪ್ರಕಾರ, ವಿಶ್ವ ವೇದಿಕೆಯಲ್ಲಿ ಯುಎನ್‌ಸಿಆರ್‌ಸಿ (United Nations Convention on the Rights of the Child)ಯನ್ನು ಸ್ವೀಕರಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಐದು ವರ್ಷಗಳಿಗಿಂತ ಕಡಿಮೆ ಪ್ರಾಯದ ಮಕ್ಕಳ ಸಾವಿನ ಪ್ರಮಾಣದಲ್ಲಿ ಸುಮಾರು ಶೇ.60ರಷ್ಟು ಕುಸಿತ ಕಂಡಿದೆ.

ಈ ಸಾಧನೆಗಳು ಮತ್ತು ಈ ಒಪ್ಪಂದಕ್ಕೆ ಜಗತ್ತಿನ ಸುಮಾರು ಎಲ್ಲಾ ದೇಶಗಳಿಂದ ಒಪ್ಪಿಗೆ ದೊರಕಿದ ಹೊರತಾಗಿಯೂ, ಜಾಗತಿಕ ಮಟ್ಟದಲ್ಲಿ ಈಗಲೂ ಮಕ್ಕಳ ಪರಿಸ್ಥಿತಿಯು ಚಿಂತಾಜನಕವಾಗಿಬಿಟ್ಟಿದೆ. ಇಂದು ಜಗತ್ತಿನಲ್ಲಿ ಸರಿಸುಮಾರು ಎಲ್ಲಾ ಮೂಲೆಗಳಲ್ಲಿ ಮಕ್ಕಳ ಧ್ವನಿಯನ್ನು ನಿಷ್ಕ್ರಿಯಗೊಳಿಸಲಾಗುತ್ತಿದೆ. ಕಳೆದ ಮೂವತ್ತು ವರುಷಗಳಲ್ಲಿ ಮಾನವೀಯತೆಯು ಮುಂದೆ ಸಾಗಿದೆ ಮತ್ತು ಇದರಲ್ಲಿ ಹಲವು ಎತ್ತರಗಳನ್ನು ನಿರ್ಧರಿಸಿದ್ದೇವೆ. ಆದರೆ ಈಗಲೂ ನಮಗೆ, ಮಕ್ಕಳ ಹಿತಾಸಕ್ತಿ ಮತ್ತು ಅವರ ಸುರಕ್ಷತೆಗಾಗಿ ಇರುವ ಜಗತ್ತನ್ನು ರೂಪಿಸಲು ಸಾಧ್ಯವಾಗಿಲ್ಲ. ವಿಶ್ವಸಂಸ್ಥೆಯ ಮಕ್ಕಳ ನಿಧಿ(ಯುನಿಸೆಫ್)ಯ ವರದಿಯು ಎಚ್ಚರಿಸಿರುವಂತೆ, 2017ರಿಂದ 2030ರ ನಡುವೆ ಜಾಗತಿಕ ಮಟ್ಟದಲ್ಲಿ 5 ವರ್ಷದ ಕಡಿಮೆ ಪ್ರಾಯದ 6 ಕೋಟಿಗಿಂತಲೂ ಹೆಚ್ಚು ಮಕ್ಕಳು ತಪ್ಪಿಸಲು ಸಾಧ್ಯವಿರುವ ಸಾವಿಗೆ ಕಾರಣವಾಗಬಹುದು. ಇಂದು ಮಾನವ ಕಳ್ಳ ಸಾಗಾಟದ ಸಂತ್ರಸ್ತರಲ್ಲಿ ಸುಮಾರು ಮೂರನೇ ಒಂದು ಭಾಗ ಮಕ್ಕಳಾಗಿದ್ದಾರೆ.

ಇತ್ತ ಡಿಜಿಟಲ್ ತಂತ್ರಜ್ಞಾನ ಬಂದಿರುವುದರಿಂದ ಮಕ್ಕಳ ಕಳ್ಳತನದ ಸಮಸ್ಯೆ ಮತ್ತಷ್ಟು ಜಟಿಲವಾಗಿದೆ. ಜಾಗತಿಕ ಮಟ್ಟದಲ್ಲಿ ಪ್ರವಾಸಿ ಮತ್ತು ದೇಶದೊಳಗಡೆಯೇ ಸ್ಥಳಾಂತರಕ್ಕೆ ನಿರ್ಬಂಧಿತರಾಗುತ್ತಿರುವ ಮಕ್ಕಳ ಸಂಖ್ಯೆಯು ನಿರಂತರವಾಗಿ ಅಧಿಕವಾಗುತ್ತಿದೆ. ಅವರು ನಿರಂತರವಾಗಿ ಅಪಾಯಕಾರಿ ಬದುಕನ್ನು ಸಾಗಿಸುತ್ತಿದ್ದಾರೆ. ಯುದ್ಧ ಮತ್ತು ಸಶಸ್ತ್ರ ಸಂಘರ್ಷಗಳಲ್ಲೂ ಅತ್ಯಂತ ಹೆಚ್ಚು ಪರಿಣಾಮ ಮಕ್ಕಳ ಮೇಲೆಯೇ ಬೀರುತ್ತದೆ. ಇದರ ಆಘಾತವನ್ನಂತೂ ಮಕ್ಕಳೇ ತೆರಬೇಕಾಗುತ್ತದೆ. ಜೊತೆಗೆ ಸಶಸ್ತ್ರ ಗುಂಪುಗಳು ಮಕ್ಕಳನ್ನು ಒತ್ತಾಯಪೂರ್ವಕವಾಗಿ ತಮ್ಮ ಗುಂಪುಗಳಿಗೆ ಸೇರಿಸಿ ಬಳಸಿಕೊಳ್ಳುತ್ತವೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, 2018ರಲ್ಲಿ ಸಶಸ್ತ್ರ ಸಂಘರ್ಷಗಳ ವೇಳೆ ಜಗತ್ತಿನಾದ್ಯಂತ ಸುಮಾರು 12 ಸಾವಿರ ಮಕ್ಕಳು ಒಂದೋ ಸಾವನ್ನಪ್ಪುತ್ತಾರೆ ಅಥವಾ ಇಲ್ಲವೇ ಅಂಗವೈಕಲ್ಯಕ್ಕೆ ತುತ್ತಾಗುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ನಿಗಾವಣೆ ಪ್ರಾರಂಭಿಸಿದ ನಂತರದಿಂದ ಇದು ಈವರೆಗಿನ ಅತ್ಯಂತ ದೊಡ್ಡ ಸಂಖ್ಯೆಯಾಗಿದೆ.

ಇಂದು ಜಗತ್ತಿನಾದ್ಯಂತ ಮಕ್ಕಳು ಹಳೆಯ ಅಪಾಯಗಳಿಂದಂತೂ ಬಳಲುತ್ತಿದ್ದಾರೆ, ಜೊತೆಗೆ ಅವರು ಹೊಸ ಅಪಾಯಗಳನ್ನೂ ಎದುರಿಸಬೇಕಾಗಿದೆ. ಇದೀಗ ಅವರು ನೈರ್ಮಲ್ಯ, ಪೋಷಣೆ, ಶಿಕ್ಷಣ ಮತ್ತು ಭದ್ರತೆಯಂತಹ ಪರಂಪರಾಗತ ಸವಾಲುಗಳೊಂದಿಗೆ ಹವಾಮಾನ ವೈಪರಿತ್ಯ, ಸೈಬರ್ ಕ್ರೈಂನಂತಹ ಹೊಚ್ಚಹೊಸದಾದ ಸಮಸ್ಯೆಗಳಿಂದಲೂ ಬಳಲಬೇಕಾಗಿ ಬಂದಿದೆ.

ಭಾರತೀಯ ಸನ್ನಿವೇಶದ ಕುರಿತು ಹೇಳುವುದಾದರೆ, ಸಮಾಜ ಮತ್ತು ಸರಕಾರಗಳ ಮಕ್ಕಳ ಕುರಿತಾದ ದೃಷ್ಟಿಕೋನಗಳು ಅನಾಸಕ್ತಿಯಿಂದ ಕೂಡಿದೆ. ನಾವು ನಮ್ಮ ಸುತ್ತಮುತ್ತಲ ಮಕ್ಕಳನ್ನು ನೋಡುತ್ತಲೇ ಮಕ್ಕಳ ಸ್ಥಿತಿಗತಿಯನ್ನು ಅಂದಾಜಿಸಬಹುದಾಗಿದೆ. ತಮ್ಮ ಆಸುಪಾಸಿನಲ್ಲಿ ನೋಡುವುದಾದರೆ; ಸಣ್ಣ ಮಕ್ಕಳು ಶಾಲೆ ಹೋಗುವುದರ ಬದಲು ಕೂಲಿ ಕೆಲಸದಲ್ಲಿ ತೊಡಗಿದ್ದಾರೆ, ಮಕ್ಕಳಿಗೆ ಅತ್ಯಂತ ಸುರಕ್ಷಿತ ಸ್ಥಳ ಎಂದು ಭಾವಿಸಲಾಗುವ ಅವರ ಸ್ವಂತ ಮನೆ ಮತ್ತು ಶಾಲೆಯಲ್ಲಿ ಲೈಂಗಿಕ ದೌರ್ಜನ್ಯದಂತಹ ಘಟನೆಗಳು ನಡೆಯುತ್ತಿವೆ. ಮನೆಯಲ್ಲಿ ತಂದೆ-ತಾಯಿ ಮತ್ತು ತರಗತಿಯಲ್ಲಿ ಶಿಕ್ಷಕರು ಮಕ್ಕಳಿಗೆ ಥಳಿಸುತ್ತಿದ್ದಾರೆ. ಹೆಣ್ಮಕ್ಕಳು ಜನಿಸುವುದನ್ನು ತಡೆಯಲಾಗುತ್ತದೆ ಮತ್ತು ಇದಕ್ಕಾಗಿ ಅವರನ್ನು ಗರ್ಭದಲ್ಲಿ ಅಥವಾ ಜನನದ ಬಳಿಕ ಹತ್ಯೆ ನಡೆಸಲಾಗುತ್ತದೆ.

2011ರ ಜನಗಣತಿ ಪ್ರಕಾರ, ಭಾರತದಲ್ಲಿ 10ರಿಂದ 18 ಹರೆಯದ ಗುಂಪಿನ 472 ದಶಲಕ್ಷ ಮಕ್ಕಳಿದ್ದಾರೆ. ನಮ್ಮ ದೇಶದಲ್ಲಿ ಸರಕಾರದ ವತಿಯಿಂದ ಮಕ್ಕಳ ಪರವಾಗಿ ಸಕಾರಾತ್ಮಕ ಹೆಜ್ಜೆಗಳನ್ನಿಡಲಾಗಿದೆ. ಆದರೆ ಒಂದು ಸಮಾಜ ಎಂಬ ನಿಟ್ಟಿನಲ್ಲಿ ನಾವು ಈಗಲೂ ಮಕ್ಕಳು ಮತ್ತು ಅವರ ಹಕ್ಕುಗಳಿಗೆ ಸಂಬಂಧಿಸಿ ಬೇಜವಾಬ್ದಾರಿ ಮತ್ತು ಸಂವೇದನಾರಹಿತರಾಗಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಕೆಲವು ಕ್ಷೇತ್ರಗಳಲ್ಲಿ ಅಭೂತಪೂರ್ವ ಅಭಿವೃದ್ಧಿಯನ್ನು ಸಾಧಿಸಿದೆ. ಆದರೆ ಈ ಬಿಳಿಚಿತ್ರದಲ್ಲಿ ಕೆಲವು ಚುಕ್ಕೆಗಳೂ ಇವೆ. ನಮ್ಮ ದೇಶವು ಈಗಲೂ ಭ್ರೂಣ ಹತ್ಯೆ, ಮಕ್ಕಳ ವ್ಯಾಪಾರ, ಲೈಂಗಿಕ ಕಿರುಕುಳ, ಲಿಂಗಾನುಪಾತ, ಬಾಲ್ಯ ವಿವಾಹ, ಬಾಲ ಕಾರ್ಮಿಕ, ನೈರ್ಮಲ್ಯ, ಶಿಕ್ಷಣ, ಅಪೌಷ್ಟಿಕತೆ, ಮಲೇರಿಯಾ, ದಡಾರ ಮತ್ತು ನ್ಯೂಮೋನಿಯಾದಂತಹ ಕಾಯಿಲೆಗಳಿಂದ ಸಾವನ್ನಪ್ಪುವ ಮಕ್ಕಳ ವಿಚಾರದಲ್ಲಿ ಜಗತ್ತಿನ ಕೆಲವು ಕೆಟ್ಟ ದೇಶಗಳ ಸಾಲಿನಲ್ಲಿ ಸೇರಿದೆ.

ನಾವು ಒಂದು ರಾಷ್ಟ್ರ ಮತ್ತು ಸಮಾಜವಾಗಿರುವ ನಿಟ್ಟಿನಲ್ಲಿ ತಮ್ಮ ಮಕ್ಕಳನ್ನು ಹಿಂಸೆ, ಭೇದಭಾವ, ನಿರ್ಲಕ್ಷ, ನಿಂದನೆಯನ್ನು ತೊಡೆದುಹಾಕುವಲ್ಲಿ ಸಫಲರಾಗಿಲ್ಲ. ಭಾರತವು ಮಕ್ಕಳ ಹಕ್ಕಿನ ಒಪ್ಪಂದವನ್ನು ಅಂಗೀಕರಿಸಿದ ಬಳಿಕ ಮಕ್ಕಳ ಹಿತದೃಷ್ಟಿಯಿಂದ ರೂಪಿಸಿದ ಕ್ರಮಗಳ ಯಶಸ್ಸು ಮತ್ತು ವೈಫಲ್ಯಗಳ ಕುರಿತು ಅವಲೋಕಿಸಿದರೆ, ನಾವು ಕೆಲವು ಹೆಜ್ಜೆ ಮುಂದೆ ಸಾಗಿದ್ದೇವೆಯಾದರೂ, ಇನ್ನು ಕೂಡ ನಮ್ಮ ದೇಶದಲ್ಲಿ ಮಕ್ಕಳ ಅಭಿವೃದ್ಧಿ ಮತ್ತು ಸುರಕ್ಷೆಗೆ ಸಂಬಂಧಿಸಿದಂತೆ ಸವಾಲುಗಳ ಬೆಟ್ಟವೇ ನಿಂತಿರುವುದನ್ನು ಕಾಣಬಹುದಾಗಿದೆ.

ಶಿಕ್ಷಣ ಕುರಿತು ಮಾತನಾಡುವುದಾದರೆ, ಭಾರತದಲ್ಲಿ ಮಕ್ಕಳಿಗೆ ಶಿಕ್ಷಣ  ತಲುಪುವಿಕೆಯಲ್ಲಿ ಸುಧಾರಣೆ ಕಂಡು ಬಂದಿದೆ. ಆದರೆ ಇದರ ಗುಣಮಟ್ಟವು ನಿರಂತರವಾಗಿ ಕಡಿಮೆಯಾಗುತ್ತಿದೆ. ನಮ್ಮ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ನಿರಂತರವಾಗಿ ನಾಶವಾಗುತ್ತಿದೆ ಮತ್ತು ಇದು ಖಾಸಗಿಯವರ ಕೈಗೆ ತಲುಪುತ್ತಾ ದೊಡ್ಡ ಲಾಭದಾಯಕ ಉದ್ಯಮವಾಗಿ ಮಾರ್ಪಟ್ಟಿದೆ. ಶಿಕ್ಷಣಕ್ಕಾಗಿ ಸರಕಾರಗಳು ಖರ್ಚುಗಳನ್ನು ಕಡಿಮೆಗೊಳಿಸುತ್ತಿದೆ. ‘ವಿಶ್ವಸಂಸ್ಥೆಯ ವರದಿ’ಯ ಪ್ರಕಾರ, 1994ರಲ್ಲಿ ಭಾರತದ ಒಟ್ಟು ಜಿಡಿಪಿಯ ಶೇ.4.34ರಷ್ಟು ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತಿತ್ತು. ಅದೇ 2010ರಲ್ಲಿ ಕಡಿಮೆಯಾಗಿ ಇದು ಶೇ.3.35ರಷ್ಟಾಗಿದೆ.

ಬದುಕುವ ಹಕ್ಕಿನ ಕುರಿತು ಮಾತನಾಡುವುದಾದರೆ, ಗ್ಲೋಬಲ್ ನ್ಯೂಟ್ರೀಷನ್ ರಿಪೋರ್ಟ್ 2018ರ ಪ್ರಕಾರ, ಜಗತ್ತಿನಲ್ಲಿ ಒಟ್ಟು ಅಭಿವೃದ್ಧಿಯಾಗದ ಮಕ್ಕಳ ಮೂರನೇ ಒಂದು ಭಾಗವು ನಮ್ಮ ದೇಶ ಭಾರತದಲ್ಲಿದೆ. ಗ್ಲೋಬಲ್ ಹಂಗರ್ ಇಂಡೆಕ್ಸ್ 2018ರ ಪ್ರಕಾರ, ಭಾರತವು 119 ದೇಶಗಳ ಪಟ್ಟಿಯಲ್ಲಿ 103ನೇ ಸ್ಥಾನದಲ್ಲಿದೆ.

ಮಕ್ಕಳ ಸುರಕ್ಷತೆಯ ಸ್ಥಿತಿಯನ್ನು ಗಮನಿಸಿದರೆ, ನಮ್ಮ ದೇಶದಲ್ಲಿ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋದ ಅಂಕಿಅಂಶಗಳ ಪ್ರಕಾರ, ಕಳೆದ ಒಂದು ದಶಕ(2007ರಿಂದ 2017)ದ ಮಧ್ಯೆ ಮಕ್ಕಳ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ಪ್ರಚಂಡ ವೇಗ ಕಂಡು ಬಂದಿದೆ ಮತ್ತು ಈ ಅಂಕಿಅಂಶ 1.8ರಿಂದ ಹೆಚ್ಚಾಗಿ ಶೇ.28.9ರಷ್ಟು ಏರಿಕೆ ಕಂಡಿದೆ. ಇದು ನಮ್ಮ ದೇಶದಲ್ಲಿ ಮಕ್ಕಳ ಅಭದ್ರತೆಯ ಭಯಾನಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದೇ ರೀತಿ ಮಕ್ಕಳ ಲಿಂಗಾನುಪಾತದ ಕುರಿತು ಹೇಳುವುದಾದರೆ, ದೇಶದಲ್ಲಿ 0-6ರ ಹರೆಯದ ಗುಂಪಿನ ಮಕ್ಕಳ ಲಿಂಗಾನುಪಾತದಲ್ಲಿ 1961ರಲ್ಲಿ ನಿರಂತರವಾಗಿ ಇಳಿಕೆ ಕಂಡು ಬಂದಿದೆ. 2001ರಲ್ಲಿ ಜನಗಣತಿಯಲ್ಲಿ 6 ವರ್ಷದ ವರೆಗಿನ ಹರೆಯದ ಮಕ್ಕಳಲ್ಲಿ ಪ್ರತಿ 1000 ಬಾಲಕರಿಗೆ ಹೋಲಿಸಿದರೆ, ಬಾಲಕಿಯರ ಸಂಖ್ಯೆ 927ರಷ್ಟಿತ್ತು. ಅದೇ 2011ರ ಜನಗಣತಿಯಲ್ಲಿ ಈ ಅನುಪಾತವು ಕಡಿಮೆಯಾಗಿ 914ಕ್ಕೆ ತಲುಪಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ ಮಟ್ಟದಲ್ಲಿ ನೋಡುವುದಾದರೆ, ಒಂದು ರಾಷ್ಟ್ರ  ಎಂಬ ನಿಟ್ಟಿನಲ್ಲಿ ಮೇಲಿನ ಅಂಕಿಅಂಶಗಳು ನಮಗೆ ಒಂದು ರಾಷ್ಟ್ರೀಯ ದುರಂತದಂತೆ ಕಾಣಬೇಕು. ಆದರೆ ದುರದೃಷ್ಟಕರವೆಂದರೆ, ಇದರ ಕುರಿತು ನಾವು ನಿರಾಳರಾಗಿದ್ದೇವೆ. ಅದಾಗ್ಯೂ, ಯುಎನ್‌ಸಿಆರ್‌ಸಿಯನ್ನು ಸ್ವೀಕರಿಸಿದ ನಂತರ ಭಾರತವೂ ತನ್ನ ಕಾನೂನುಗಳಲ್ಲಿ ಬಹಳಷ್ಟು ಬದಲಾವಣೆ ತಂದಿದೆ. ಮಕ್ಕಳನ್ನು ಗಮನದಲ್ಲಿರಿಸಿಕೊಂಡು ಹೊಸ ಕಾನೂನು, ನೀತಿಗಳು ಮತ್ತು ಯೋಜನೆಗಳನ್ನು ರೂಪಿಸಲಾಗಿದೆ. ಇದರಿಂದಾಗಿ ಮಕ್ಕಳಿಗೆ ಸಂಬಂಧಿಸಿದ ಹಲವು ಸೂಚ್ಯಂಕಗಳಲ್ಲಿ ಮೊದಲಿಗೆ ಹೋಲಿಸಿದರೆ ಸುಧಾರಣೆಗಳೂ ಕಂಡು ಬಂದಿವೆ. ಆದರೆ ಇವೆಲ್ಲವುಗಳ ಹೊರತಾಗಿಯೂ ಭಾರತಕ್ಕೆ ಈಗಲೂ ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಪ್ಪಂದದ ಪ್ರಕಾರ ಮಾಡಲಾದ ಭರವಸೆಗಳನ್ನು ಪೂರ್ಣಗೊಳಿಸಲು ಸುದೀರ್ಘ ಯಾನ ನಿರ್ಧರಿಸುವುದು ಬಾಕಿವುಳಿದಿದೆ. ಈ ಯಾನದಲ್ಲಿ ಹಲವು ಕಾನೂನಾತ್ಮಕ, ಆಡಳಿತಾತ್ಮಕ ಸೇರಿದಂತೆ ವಿತ್ತೀಯ ತೊಡಕುಗಳಿವೆ. ಇದನ್ನು ದೂರ ಮಾಡಬೇಕಾಗಿದೆ ಮತ್ತು ಒಂದು ರಾಷ್ಟ್ರವೆಂಬ ನಿಟ್ಟಿನಲ್ಲಿ ನಾವು ಮಕ್ಕಳಿಗೆ ಹಕ್ಕುಗಳನ್ನು ನೀಡಲು ಮತ್ತಷ್ಟು ಸಕಾರಾತ್ಮಕ ದೃಷ್ಟಿಕೋನ ಮತ್ತು ವಾತಾವರಣವನ್ನು ನಿರ್ಮಿಸಬೇಕಾದ ಅಗತ್ಯವಿದೆ.

ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮ್ಮೇಳನಕ್ಕೆ 30 ವರುಷಗಳು ಪೂರ್ಣವಾಗುತ್ತಿರುವ ಈ ವೇಳೆಯಲ್ಲಿ, ಒಂದು ಜಾಗತಿಕ ಸಮುದಾಯವೆಂಬ ನಿಟ್ಟಿನಲ್ಲಿ ನಾವು ಈ ಒಪ್ಪಂದದಲ್ಲಿ ಮಾಡಿದ ಭರವಸೆಗಳನ್ನು ಹೊಸ ಸಂಕಲ್ಪಗಳೊಂದಿಗೆ ಅಳವಡಿಸಿಕೊಳ್ಳುವ ಅಗತ್ಯವಿದೆ. ಇದರಲ್ಲಿ ಹವಾಮಾನ ವೈಪರೀತ್ಯ, ಸೈಬರ್ ಕ್ರೈಂ, ಹೆಚ್ಚುತ್ತಿರುವ ಅಸಮಾನತೆ ಮತ್ತು ಅಸಹಿಷ್ಣುತೆಯಂತಹ ಹೊಸ ಸವಾಲುಗಳನ್ನು ಎದುರಿಸುವ ಪರಿಹಾರಗಳನ್ನು ಒಳಗೊಂಡಿರಬೇಕು.

 

LEAVE A REPLY

Please enter your comment!
Please enter your name here