ಸತ್ಯಾಸತ್ಯತೆ ಬೇರ್ಪಡಿಸುವ ಮಾಸ

0
258

ಮಾನವ ಪಾಪಗಳನ್ನು ಮಾಡುತ್ತಾನೆ. ಅದು ಆತನ ಸಹಜ ಗುಣ. ಅಂತೆಯೇ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪಿಸುವುದು ಆಧ್ಯಾತ್ಮಗುಣ. ಪಶ್ಚಾತ್ತಾಪ ಪಡುವ ಮಂದಿಯನ್ನು ಅಲ್ಲಾಹನು ಮೆಚ್ಚುತ್ತಾನೆಂದು ಕುರ್‌ಆನ್ ಹೇಳುತ್ತದೆ. ಜಗದೊಡನೆಯನು ಮಾನವನಿಗೆ ಸ್ವೇಚ್ಛೆಯಿಂದ ಬದುಕುವ ಸ್ವಾತಂತ್ರವನ್ನು ನೀಡಲಿಲ್ಲ. ಆದರೆ ಇಸ್ಲಾಮ್ ಭೂಮಿಯ ಮೇಲೆ ತಿನ್ನುವ, ಉನ್ನುವ, ಕುಡಿಯುವ, ಸಂಪಾದಿಸುವ, ಪ್ರಯಾಣಿಸುವ, ನಿದ್ರಿಸುವ, ರತಿಕ್ರೀಡೆ ನಡೆಸುವ ಮೊದಲಾದ ಮಾನವ ಸಹಜ ಬಯಕೆಗಳಿಗೆ ಸ್ವಾತಂತ್ರವನ್ನು ನೀಡುತ್ತದೆ. ಮಾತ್ರವಲ್ಲ, ಇವೆಲ್ಲವನ್ನು ನಿರ್ವಹಿಸುವ ವೇಳೆ ಅದಕ್ಕಾಗಿ ಆತ ದೇವನಿಂದ ಪ್ರತಿಫಲವನ್ನೂ ಪಡೆಯುತ್ತಾನೆ! ಆದರೆ ಅವೆಲ್ಲವೂ ಇಸ್ಲಾಮೀ ಚೌಕಟ್ಟಿನಲ್ಲಿರಬೇಕು ಎಂಬುದು ಇಸ್ಲಾಮ್ ವಿಧಿಸುವ ಷರತ್ತು. ಒಂದೇ ವೇಳೆ ಇವೆಲ್ಲವನ್ನೂ ಆತ ಮೀರಿದರೆ ಒಮ್ಮೆಲೆ ಆತ ಪಾಪಿಯಾಗುತ್ತಾನೆ ಮತ್ತು ಶಿಕ್ಷೆಗೆ ಒಳಗಾಗುತ್ತಾನೆ. ಶಿಕ್ಷೆಯು ಭೂಲೋಕದಲ್ಲೂ ಆಗಿರಬಹುದು ಅಥವಾ ಪರಲೋಕದಲ್ಲೂ ಆಗಿರಬಹುದು. ಕೆಲವೊಮ್ಮೆ ಉಭಯಲೋಕದಲ್ಲೂ ಆತನಿಗೆ ಶಿಕ್ಷೆ ಕಾದಿರುತ್ತದೆ.

ಪವಿತ್ರ ರಮದಾನ್ ಪಾಪಮನ್ನಣೆಗೆ ವಂಸತ ಕಾಲ. ಪಶ್ಚಾತ್ತಾಪಪಡುವ ಸತ್ಯವಿಶ್ವಾಸಿಯು ಈ ಮಾಸದಲ್ಲಿ ತೌಬಾದಲ್ಲಿ ಮಿಂದು ದೇಹ ಮನಸ್ಸುಗಳನ್ನು ಶುಭ್ರಗೊಳಿಸುತ್ತಾನೆ. ಪವಿತ್ರ ಕುರ್‌ಆನ್ ಹೇಳುವಂತೆ, ‘‘ಪಶ್ಚಾತ್ತಾಪಪಡುವ, ವಿಶ್ವಾಸವಿಡುವ, ಸತ್ಕರ್ಮಗಳನ್ನು ಮಾಡುವ’’ ಮಂದಿಯಲ್ಲಿ ಆತ ಸೇರುತ್ತಾನೆ. ಆದ್ದರಿಂದ ಓರ್ವ ಸತ್ಯವಿಶ್ವಾಸಿಗೆ ಸಂಬಂಧಿಸಿದಂತೆ ಅಲ್ಲಾಹನ ದಯೆ, ಕಾರುಣ್ಯ ಮತ್ತು ಮಾಫಿ, ರಿಯಾಯ್ತಿಗಳಿಗೆ ರಮದಾನಿಗಿಂತ ಉತ್ತಮ ಮಾಸ ಬೇರೊಂದಿಲ್ಲ. ಈ ಕಾರಣದಿಂದಲೇ ಪ್ರವಾದಿ(ಸ) ಹೇಳಿದರು: ‘‘ಯಾವನಾದರೊಬ್ಬ ರಮದಾನಿನಲ್ಲಿ ವ್ರತವನ್ನಾಚರಿಸಿ ಆತ್ಮಾವಲೋಕನ ಮಾಡಿದರೆ, ಆತನ ಕಳೆದು ಹೋದ ಮತ್ತು ಮುಂಬರುವ ಪಾಪಗಳು ಕ್ಷಮಿಸಲ್ಪಡುವುದು.’’ ಪವಿತ್ರ ರಮದಾನ್ ತಿಂಗಳಲ್ಲಿ ಅವತೀರ್ಣಗೊಂಡ ಪವಿತ್ರ ಕುರ್‌ಆನ್‌ಗೆ ‘ಸತ್ಯಾಸತ್ಯತೆಯನ್ನು ಬೇರ್ಪಡಿಸುವ ಗ್ರಂಥ’ವೆಂಬ ಹೆಗ್ಗಳಿಕೆ ಇದೆ. 14 ಶತಮಾನಗಳ ಹಿಂದೆ ಇದೇ ರಮದಾನಿನ ಒಂದು ದಿನ ಬದ್ರ್ ಮೈದಾನದಲ್ಲಿ ಸತ್ಯಾಸತ್ಯತೆಯ ಮಧ್ಯೆ ಕಾಳಗವೂ ನಡೆದಿತ್ತು. ಈ ರೀತಿ ಒಂದೇ ಅರ್ಥದಲ್ಲಿ ರಮದಾನ್ ಮತ್ತು ಕುರ್‌ಆನ್ ಈ ಮೇಲಿನ ವಿಶೇಷ ಅರ್ಥವನ್ನು ತನ್ನದಾಗಿಸಿಕೊಂಡಿದೆ.

ಸತ್ಯವಿಶ್ವಾಸಿಗಳು ಸ್ವಯಂ ಶುದ್ಧೀಕರಿಸಿಕೊಳ್ಳುವುದರೊಂದಿಗೆ, ಸಮಾಜದ ಎಲ್ಲಾ ರೀತಿಯ ಕೆಡುಕುಗಳನ್ನು ತಡೆಯಲು ಬದ್ಧರಾಗಿದ್ದಾರೆಂಬ ಉನ್ನತ ಸಂದೇಶವೂ ಈ ರಮದಾನಿನಲ್ಲಿದೆ. ಸಮಾಜವು ಮಾನವೀಯ ವೌಲ್ಯಗಳಿಂದ ದೂರವಾಗಿ ಪೈಶಾಚಿಕತೆಯು ತುಂಬಿಕೊಂಡ ವೇಳೆ ಅದನ್ನು ಸರಿಪಡಿಸಲು ಸತ್ಯವಿಶ್ವಾಸಿ ಬಾಧ್ಯಸ್ಥನಾಗುತ್ತಾನೆ. ಇದು ಓರ್ವ ಸತ್ಯವಿಶ್ವಾಸಿಯ ಆದ್ಯತೆಯಾಗಿರಬೇಕು. ಕೆಡುಕನ್ನು ತಡೆಯುವ ಪ್ರಕ್ರಿಯೆಯು ಸತ್ಯವಿಶ್ವಾಸದ ಭಾಗ ಮಾತ್ರವಾಗಿರದೆ, ಕಡ್ಡಾಯ ಬಾಧ್ಯತೆಯೂ ಆಗಿರುತ್ತದೆ. ದೇವ ಶಿಕ್ಷೆಯು ಎರಗುವ ವೇಳೆ ಅದು ಕೇವಲ ಅಕ್ರಮಿಗಳನ್ನು ಮಾತ್ರ ಬಲಿತೆಗೆದುಕೊಳ್ಳದೆ, ಸಜ್ಜನರನ್ನೂ ಬಲಿತೆಗೆದುಕೊಳ್ಳುತ್ತದೆ ಎಂಬುದು ಕುರ್‌ಆನಿನ ಎಚ್ಚರಿಕೆಯಾಗಿದೆ.

ಜಗತ್ತು ಅಧರ್ಮದಿಂದ ನಲುಗುತ್ತಿರುವ ವೇಳೆ ನೈತಿಕ ದಾರಿಯಲ್ಲಿ ಅದನ್ನು ಕೊಂಡೊಯ್ಯುವ ಹೊಣೆಗಾರಿಕೆ ಸತ್ಯವಿಶ್ವಾಸಿಗಳ ಮೇಲಿದೆ. ಹೌದು, ರಮದಾನ್ ಆತ್ಮಾವಲೋಕನದ, ಆರಾಧನೆಯ, ಪಶ್ಚಾತ್ತಾಪದ, ಕರುಣೆ, ದಾನಧರ್ಮದ ಮಾಸವಾಗಿದೆ. ಆದ್ದರಿಂದಲೇ ಜಾಗತಿಕ ಮುಸ್ಲಿಮರು ಈ ಮಾಸವನ್ನು ಅತ್ಯಂತ ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಈ ಉನ್ನತ ಸಂಸ್ಕೃತಿಗೆ 14 ಶತಮಾನಗಳ ಇತಿಹಾಸವಿದೆ. ಆದ್ದರಿಂದಲೇ ಮಾನವೀಯ ವೌಲ್ಯಗಳನ್ನು ಪ್ರಸ್ತುತಗೊಳಿಸಲು ಜಾಗತಿಕ ಮುಸ್ಲಿಮರು ಈ ತಿಂಗಳಲ್ಲಿ ಅಹೋರಾತ್ರಿ ಪೈಪೋಟಿಯನ್ನು ನಡೆಸುತ್ತಾರೆ. ಅದರೊಂದಿಗೆ ಸತ್ಯಾಸತ್ಯತೆಯ ಬೇರ್ಪಡಿಸುವ ಪ್ರಕ್ರಿಯೆಯಿಂದ ದೂರ ಸರಿದು ನಿಲ್ಲಲು ಸತ್ಯವಿಶ್ವಾಸಿಗೆ ಖಂಡಿತಾ ಸಾಧ್ಯವಾಗದು.

 

LEAVE A REPLY

Please enter your comment!
Please enter your name here