ನವದೆಹಲಿ: ಸಂಸತ್ ಭವನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ದೆಹಲಿ ಹೈಕೋರ್ಟ್ ಇಂದು (ಬುಧವಾರ) ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ಸುಬ್ರಮೋನಿಯಂ ಪ್ರಸಾದ್ ಮತ್ತು ಹರೀಶ್ ವೈದ್ಯನಾಥನ್ ಶಂಕರ್ ಅವರಿದ್ದ ಪೀಠವು ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ನೀಲಂ ಮತ್ತು ಮಹೇಶ್ ಕುಮಾವತ್ ಅವರಿಗೆ ತಲಾ ₹50,000 ವೈಯಕ್ತಿಕ ಬಾಂಡ್ ಮತ್ತು ಇಬ್ಬರು ಶ್ಯೂರಿಟಿ ಒದಗಿಸುವಂತೆ ನ್ಯಾಯಪೀಠ ಆದೇಶಿಸಿದೆ.
ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಸಂದರ್ಶನ ನೀಡಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳಬಾರದು ಎಂದು ನ್ಯಾಯಾಧೀಶರು ತಾಕೀತು ಮಾಡಿದ್ದಾರೆ.
ಆರೋಪಿಗಳು ತಮ್ಮ ಜಾಮೀನು ಅರ್ಜಿಯನ್ನು ವಜಾಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
2023ರ ಡಿಸೆಂಬರ್ 13ರಂದು ಸಂಸತ್‌ಗೆ ನುಗ್ಗಿದ್ದ ಇಬ್ಬರು ಆಗಂತುಕರು ಲೋಕಸಭೆ ಹಾಲ್‌ಗೆ ಜಿಗಿದು ಸ್ಮೋಕ್ ಕ್ಯಾನ್‌ಗಳನ್ನು ಹಾರಿಸಿದ್ದರು. ಘಟನೆ ಸಂಬಂಧ ಮನೋರಂಜನ್ ಡಿ, ಸಾಗರ್ ಶರ್ಮಾ, ಅಮೊಲ್ ಧನರಾಜ್ ಶಿಂದೆ, ನೀಲಮ್ ರನೋಲಿಯಾ, ಲಲಿತ್ ಝಾ ಹಾಗೂ ಮಹೇಶ್ ಕುಮಾವತ್ ಎಂಬವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.