ಸಂಕಷ್ಟ ಮತ್ತು ಜೀವನದ ಧೋರಣೆ

0
28

-ಮುಬಶ್ಶಿರ್

ಮಾನವರ ಜೀವನ ಸಂಕಷ್ಟಗಳಿಂದ ಕೂಡಿರುತ್ತದೆ. ಅದು ಬೆಟ್ಟ, ಕಣಿವೆ, ಮಳೆ, ಬಿಸಿಲು, ಸೆಕೆ, ಚಳಿಯಿರುವ ಭೂಮಿಯಂತೆ. ಜೀವನದಲ್ಲಿ ಕಷ್ಟ, ಸವಾಲು ಎಲ್ಲರಿಗೂ ಇರುತ್ತದೆ. ಅದು ಬೇರೆ ಬೇರೆ ರೂಪದಲ್ಲಿರುತ್ತದೆಯಷ್ಟೆ. ಮಾನವರು ಸುಖದ ಜತೆಗೆ ಕಷ್ಟಪಡುವುದು ಅನಿವಾರ್ಯ. ಇದನ್ನು ಎದುರಿಸದೆ ಬೇರೆ ವಿಧಿಯಿಲ್ಲ. ನಾವು ಮನುಷ್ಯನನ್ನು ಇಕ್ಕಟ್ಟಿನಲ್ಲಿರುವವರಾಗಿ ಸೃಷ್ಟಿಸಿದ್ದೇವೆ (ಬಲದ್ 4) ಎಂದು ಕುರ್‌ಆನ್ ತಿಳಿಸಿದೆ. ಪ್ರತಿಯೊಬ್ಬನೂ ಜೀವನದಲ್ಲಿ ವಿವಿಧ ರೀತಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇದಕ್ಕೆ ಶ್ರೀಮಂತ, ಬಡವ ಎಂಬ ಭೇದವಿಲ್ಲ. ಸಂಪೂರ್ಣ ಸಂತೃಪ್ತಿ ಮತ್ತು ನಿರಾಳತೆ ಹೊಂದಿದವರು ಯಾರೂ ಇಲ್ಲ. ಸಂಕಷ್ಟಗಳನ್ನು ಅರಬಿಯಲ್ಲಿ ಮುಸೀಬತ್ ಎಂದು ಕರೆಯಲಾಗುತ್ತದೆ. ಇಂದು ದೇಶ ಹಲವಾರು ಮುಸೀಬತ್‌ಗಳನ್ನು ಎದುರಿಸುತ್ತಿದೆ.

ಪ್ರಕೃತಿ ದುರಂತ
ನೆರೆ, ಭೂಕುಸಿತ, ಬಿರುಗಾಳಿ ಮೊದಲಾದವುಗಳು ಅವುಗಳಲ್ಲಿ ಕೆಲವು. ಇತ್ತೀಚೆಗಿನ ಮಳೆಗೆ ದೇಶಾದ್ಯಂತ ಸಾವಿರಾರು ಮಂದಿ ತಮ್ಮ ಪ್ರಾಣತೆತ್ತರು. ಲಕ್ಷಗಟ್ಟಲೆ ಕೃಷಿಭೂಮಿ ನಾಶಗೊಂಡಿತು. ಸಾವಿರಾರು ಮಂದಿ ಮನೆಮಾರುಗಳನ್ನು ಕಳೆದುಕೊಂಡು ಸಂತ್ರಸ್ತರಾದರು.

ಕಾಯಿಲೆಗಳು
ಚಿಕನ್‌ಗುನ್ಯಾ, ಡೆಂಗ್ಯೂ, ಹಕ್ಕಿ ಜ್ವರ, ಮಂಗನಕಾಯಿಲೆ, ಹಂದಿಜ್ವರ, ನಿಫಾ… ಕಳೆದ ಐದು ವರ್ಷಗಳ ಮಧ್ಯೆ ಜಗತ್ತಿನ ವಿವಿಧ ಕಡೆಗಳಲ್ಲಿ 1100ರಷ್ಟು ವಿವಿಧ ಕಾಯಿಲೆಗಳನ್ನು ಹೊಸದಾಗಿ ಗುರುತಿಸಲಾಯಿತು. ಎಂದೂ ಕೇಳರಿಯದ ವಿವಿಧ ರೀತಿಯ ಕಾಯಿಲೆಗಳು ಇಂದು ವ್ಯಾಪಕವಾಗಿದೆ.

 ಗಲಭೆಗಳು
ದೇಶದಲ್ಲಿ ಇತ್ತೀಚೆಗೆ ನೂರಕ್ಕಿಂತಲೂ ಹೆಚ್ಚು ಥಳಿಸಿಕೊಲೆ, ಹಿಂಸೆಗಳು ನಡೆದವು. ಮುಹಮ್ಮದ್ ಅಖ್ಲಾಕ್, ಜುನೈದ್, ಪೆಹ್ಲುಖಾನ್, ಮಝ್‌ಲೂಮ್ ಅನ್ಸಾರಿ, ತಬ್ರೇಝ್‌ಅನ್ಸಾರಿ, ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಈ ಪಟ್ಟಿ ಉದ್ದವಿದೆ.

ಆರ್ಥಿಕ ಹಿಂಜರಿತ ಮತ್ತು ಬಡತನ

ಆರ್ಥಿಕ ಹಿಂಜರಿತವು ಜನರನ್ನು ಸಂಪೂರ್ಣವಾಗಿ ಬಡತನಕ್ಕೆ ಕೊಂಡೊಯ್ಯಬಲ್ಲ ದೊಡ್ಡ ಮುಸೀಬತ್‌ಆಗಿದೆ. ಲಕ್ಷಗಟ್ಟಲೆ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ವ್ಯಾಪಾರ ವಲಯಗಳು ಕುಸಿತದಲ್ಲಿದೆ. ಉತ್ಪಾದನೆ ಕಡಿಮೆಯಾಗುತ್ತಿದೆ. ಅದೇ ವೇಳೆ ಬಳಕೆ ಹೆಚ್ಚುತ್ತಿದೆ. ಪವಿತ್ರ ಕುರ್‌ಆನ್ ಹೀಗೆ ಹೇಳಿದೆ:
ಭಯ ಹಾಗೂ ಹಸಿವುಗಳ ಮೂಲಕ ಹಾಗೂ ಸೊತ್ತುಗಳ, ಜೀವಗಳ ಮತ್ತು ಬೆಳೆಗಳ ನಾಶಗಳ ಮೂಲಕ ನಾವು ನಿಮ್ಮನ್ನು ಖಂಡಿತ ಪರೀಕ್ಷಿಸಲಿದ್ದೇವೆ. ಸಹನಶೀಲರಿಗೆ ಶುಭವಾರ್ತೆ ನೀಡಿರಿ. (ಕುರ್‌ಆನ್ 2:155 -156)

ಮೇಲೆ ತಿಳಿಸಿದ ಮುಸೀಬತ್‌ನ ಹಿಂದಿರುವ ದೇವ ರಹಸ್ಯ ಏನು? ಯಾಕಾಗಿ ಮುಸೀಬತ್‌ಗಳು? ಮುಸೀಬತ್‌ಗಳು ಎದುರಾದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ?
ಮುಸೀಬತ್‌ನ ಹಿಂದೆ ದೇವನಿಗೆ ಸ್ಪಷ್ಟವಾದ ಉದ್ದೇಶಗಳಿವೆ. ಅದರಲ್ಲೊಂದು ಮನುಷ್ಯನ ಪರೀಕ್ಷೆ. ಇಹಲೋಕ ಜೀವನ ಶಾಶ್ವತ ಮತ್ತು ಸಂಪೂರ್ಣವಲ್ಲ. ಅದು ಶಾಶ್ವತವಾದ ಮತ್ತೊಂದು ಜೀವನಕ್ಕಿರುವ ಸಿದ್ಧತೆಗಿರುವ ಜಾಗ. ಮಾನವರನ್ನು ಅರ್ಹರನ್ನಾಗಿಸಲು ಮುಸೀಬತ್ ಎಂಬ ಪರೀಕ್ಷೆ ನಿರ್ಣಾಯಕವಾಗಿದೆ.

ಮುಸೀಬತ್‌ಗಳು ಎದುರಾದಾಗ ಸತ್ಯವಿಶ್ವಾಸಿಗಳ ನಿಲುವು ಇನ್ನಾಲಿಲ್ಲಾಹಿ ವ ಇನ್ನಾಲಿಲ್ಲಾಹಿ ರಾಜಿವೂನ್ (‘ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳಲಿಕ್ಕಿರುವವರು’) ಎಂದಾಗಿರಬೇಕು. ಪವಿತ್ರ ಕುರ್‌ಆನ್ ಹೀಗೆ ತಿಳಿಸಿದೆ:
ಅವರು ತಮಗೇನಾದರೂ ವಿಪತ್ತು ಎದುರಾದಾಗ ‘‘ನಾವು ಅಲ್ಲಾಹನಿಗೆ ಸೇರಿದವರು ಮತ್ತು ನಾವು ಅವನೆಡೆಗೇ ಮರಳಲಿಕ್ಕಿರುವವರು’’ಎನ್ನುತ್ತಾರೆ (ಕುರ್‌ಆನ್ 2:156)

ಮನಶ್ಶಾಂತಿಗೆ ದೇವವಿಧಿಯ ಮೇಲಿನ ಅಚಂಚಲವಾದ ವಿಶ್ವಾಸ ಅತ್ಯಗತ್ಯ ಎಂದು ಇದರಿಂದ ತಿಳಿಯಬಹುದು ‘‘ನಾನು ದೇವನ ಕರುಣೆಯಿಂದ ಜೀವಿಸಿದೆ’’ ಎಂಬ ತಲೆಬರಹದಲ್ಲಿ ಎಫ್.ಸಿ. ಬೋದಲಿ ಎಂಬ ಪಾಶ್ಚಾತ್ಯ ಬರಹಗಾರನ ಒಂದು ಟಿಪ್ಪಣಿಯನ್ನು ಯೂಸುಫುಲ್ ಖರ್ಝಾವಿ ‘‘ವಿಶ್ವಾಸ ಮತ್ತು ಜೀವನ’’ ಎಂಬ ತನ್ನ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ: ‘‘1918ರಿಂದ ಏಳು ವರ್ಷಗಳ ಕಾಲ ನಾನು ಅಫ್ರಿಕಾದ ಒಂದು ಮರುಭೂಮಿಯಲ್ಲಿ ಬುಡಕಟ್ಟು ಜನಾಂಗದ ಮಧ್ಯೆ ಜೀವಿಸಿದೆ.

ಆ ಕಾಲಾವಧಿಯಲ್ಲಿ ನಾನು ಅವರ ಭಾಷೆಯನ್ನು ಕಲಿತೆ. ಅವರಂತೆ ಉಡುಪನ್ನು ಧರಿಸಿ ಅವರ ರೀತಿಯನ್ನು ಅನುಸರಿಸಿದೆ. ಆಡಿನ ಹಿಂಡಿನೊಂದಿಗೆ ನಾನು ಗುಡಾರಗಳಲ್ಲಿ ಇಳಿದೆ. ಪ್ರವಾದಿ ಮುಹಮ್ಮದ್(ಸ)ರ ಕುರಿತು ಅರ್ರಸೂಲ್ ಎಂಬ ಹೆಸರಿನ ಒಂದು ಗ್ರಂಥವನ್ನು ಬರೆಯಲು ಸಾಕಾಗುವಷ್ಟು ಇಸ್ಲಾಮಿನ ಕುರಿತು ನಾನು ಅಲ್ಲಿ ಕಲಿತೆ. ಮರುಭೂಮಿಯ ನಿವಾಸಿಗಳಾದ ಆ ಅಲೆಮಾರಿಗಳೊಂದಿಗೆ ಕಳೆದ ಆ ಏಳು ವರ್ಷಗಳು ನನ್ನ ಜೀವನದ ಅತ್ಯಂತ ನೆಮ್ಮದಿಯ ಕಾಲವಾಗಿತ್ತು.

ಸಂಕಷ್ಟವನ್ನು ಮಣಿಸುವುದು ಹೇಗೆಂದು ಮರುಭೂಮಿಯ ಈ ಅರಬಿ ಮುಸ್ಲಿಮರಿಂದ ನಾನು ಕಲಿತೆ. ಅವರು ದೇವ ವಿಧಿಯಲ್ಲಿ ವಿಶ್ವಾಸವಿಟ್ಟವರಾಗಿದ್ದರು. ಅವರ ಶಾಂತಿಯ ಜೀವನಕ್ಕೆ ಅದು ಕಾರಣವಾಯಿತು. ಯಾವುದೇ ಕಾರಣಕ್ಕೂ ಅವರ ಜೀವನದಲ್ಲಿ ಖಿನ್ನತೆ, ಹತಾಶೆಯ ನೆರಳೂ ಸೋಂಕಲಿಲ್ಲ.

ದೇವ ನಿಶ್ಚಯದ ಹೊರತು ಬೇರೇನೂ ನಡೆಯದು ಎಂಬ ವಿಶ್ವಾಸವನ್ನುಅವರು ಹೊಂದಿದ್ದರು. ಅವರ ಜೀವನ ಕರ್ಮರಹಿತವಾಗಿರಲಿಲ್ಲ. ದುರಂತವನ್ನು ನಿಷ್ಕ್ರಿಯರಾಗಿ ನೋಡಿ ನಿಲ್ಲುತ್ತಿರಲಿಲ್ಲ. ಇದಕ್ಕೆ ಉದಾಹರಣೆಯಾಗಿ ಒಂದು ಘಟನೆಯನ್ನು ವಿವರಿಸುತ್ತೇನೆ: ಒಂದು ದಿನ ಬಲವಾದ ಸುಂಟರಗಾಳಿ ಬೀಸಿತು. ಅದು ಮರುಭೂಮಿಯ ಮರಳ ದಿಬ್ಬವನ್ನೇ ಎತ್ತಿ ದೂರ ಸಾಗಿಸಿತ್ತು. ಅದರ ಜತೆಗೆ ಕಠಿಣ ಸೆಕೆ. ನಾನು ಕಂಗಾಲಾಗಿದ್ದೆ. ಆದರೆ ಅವರಾರಿಗೂ ಅದೊಂದು ಸಮಸ್ಯೆಯೇ ಆಗಿರಲಿಲ್ಲ. ಹೆಗಲನ್ನು ಕುಲುಕುತ್ತಾ ಅವರು ಪರಂಪರಾಗತ ಮಂತ್ರವಾದ ನಿಶ್ಚಿತ ವಿಧಿ ಎಂದು ಹೇಳುತ್ತಿದ್ದರು. ಸುಂಟರಗಾಳಿ ನಿಂತ ತಕ್ಷಣ ಅವರು ಉತ್ಸಾಹದಿಂದಲೇ ಮತ್ತೆ ತಮ್ಮನ್ನು ಕೆಲಸಗಳಲ್ಲಿ ತೊಡಗಿಸಿಕೊಂಡರು. ಬಿಸಿಲಿನ ತಾಪಕ್ಕೆ ಸತ್ತು ಹೋಗಲು ಸಾಧ್ಯತೆಯಿರುವ ಆಡಿನ ಮರಿಗಳನ್ನು ಅವರು ದಬಹ್ ಮಾಡಿದರು. ಆ ಬಳಿಕ ಆಡಿನ ಹಿಂಡನ್ನು ದಕ್ಷಿಣ ಭಾಗದಲ್ಲಿರುವ ನೀರಿನ ಕೊಳದ ಬಳಿಗೆ ಅಟ್ಟಿಸಿಕೊಂಡು ಹೋದರು. ಇವೆಲ್ಲವನ್ನು ಅವರು ಶಾಂತವಾಗಿಯೇ ನಡೆಸುತ್ತಿದ್ದರು. ಯಾರಿಗೂ ಯಾವುದೇ ಅವಸರ, ಆತಂಕವಿಲ್ಲ. ಗೋತ್ರ ನಾಯಕ ಹೀಗೆ ಹೇಳುತ್ತಾರೆ:

ನಮಗೆ ದೊಡ್ಡ ನಷ್ಟವೇನೂ ಆಗಲಿಲ್ಲ. ಎಲ್ಲವನ್ನು ನಾವು ಕಳೆದುಕೊಳ್ಳಬೇಕಾಗಿತ್ತು. ಅಲ್ಲಾಹನಿಗೆ ಸ್ತುತಿ. ನಮ್ಮ ಜಾನುವಾರುಗಳಲ್ಲಿ ಶೇಕಡ ನಲ್ವತ್ತರಷ್ಟು ಇನ್ನೂ ಉಳಿದುಕೊಂಡಿದೆ. ನಮ್ಮ ಜೀವನ ಮುಂದುವರಿಸಲು ಇಷ್ಟು ಸಾಕು.
ಸಹನೆ ಸತ್ಯವಿಶ್ವಾಸಿಗಳ ಎರಡನೇ ಜೀವನ ನಿಲುವು. ಕುರ್‌ಆನ್ ಹೀಗೆ ತಿಳಿಸಿದೆ: ಸತ್ಯವಿಶ್ವಾಸಿಗಳೇ, ಸಹನಶೀಲರಾಗಿರಿ, ಸ್ಥಿರ ಚಿತ್ತರಾಗಿರಿ. (ಸತ್ಯದ ಪರ) ಹೋರಾಟಕ್ಕೆ ಸದಾ ಸನ್ನದ್ಧರಾಗಿರಿ ಮತ್ತು ಸದಾ ಅಲ್ಲಾಹನಿಗೆ ಅಂಜಿರಿ – ನೀವು ವಿಜಯಿಗಳಾಗಬಹುದು (ಕುರ್‌ಆನ್ 3:200)

ಕಾಲದಾಣೆ. ಮನುಷ್ಯನು ಖಂಡಿತ ನಷ್ಟದಲ್ಲಿದ್ದಾನೆ. ನಂಬಿಕೆ ಇರಿಸಿದ, ಒಳ್ಳೆಯ ಕೆಲಸಗಳನ್ನು ಮಾಡಿದ ಮತ್ತು ಪರಸ್ಪರ ಸತ್ಯವನ್ನು ಬೋಧಿಸಿದ ಮತ್ತು ಸಹನೆಯನ್ನು ಬೋಧಿಸಿದವರ ಹೊರತು (ಕುರ್‌ಆನ್ 103:1-3)
ಪರಸ್ಪರ ಸಹನೆಯನ್ನು ಉಪದೇಶಿಸಬೇಕು. ಸತ್ಯವನ್ನು ಕಾಪಾಡಲು ಮತ್ತು ಅದನ್ನು ಅನುಸರಿಸಲು ಆ ಮಾರ್ಗದಲ್ಲಿ ಎದುರಿಸಬೇಕಾದ ಸಂಕಷ್ಟ, ಅನ್ಯಾಯ, ಕಷ್ಟನಷ್ಟಗಳ ಸಂದರ್ಭ ಸಹನೆಗೆ ಮತ್ತು ದೃಢತೆಗೆ ಪ್ರತಿಯೊಬ್ಬರು ಪರಸ್ಪರ ಉಪದೇಶಿಸಬೇಕು. ಪ್ರತಿಕೂಲ ಸನ್ನಿವೇಶಗಳಲ್ಲಿ ಸಹನೆ, ಧೈರ್ಯವನ್ನು ಸಮಾಜದ ಪ್ರತಿಯೊಬ್ಬರು ಇತರರಿಗೆ ನೀಡುತ್ತಿರಬೇಕು.
ಮುಸೀಬತ್‌ಗಳಿಗೆ ನಾವೆಂದಿಗೂ ಕಾರಣರಾಗಬಾರದು. ನಾವು ಎದುರಿಸುತ್ತಿರುವ ಹಲವಾರು ಮುಸೀಬತ್‌ಗಳಿಗೆ ನಮ್ಮ ಕೃತ್ಯಗಳೇ ಕಾರಣ. ಪ್ರಕೃತಿಯೊಡನೆ ವಿನಯದಿಂದ ವರ್ತಿಸುವಂತೆ ಇಸ್ಲಾಮ್ ನಮಗೆ ಆದೇಶಿಸಿದೆ.

ಮನುಷ್ಯರು ತಮ್ಮಲ್ಲಿರುವ ಅತ್ಯಾಸೆಯಿಂದ ಭೂಮಿಯ ಎದೆಯನ್ನು ಸೀಳಿದರು, ಬೆಟ್ಟಗುಡ್ಡಗಳನ್ನು ಧ್ವಂಸ ಮಾಡಿದರು. ಕೈಗಾರಿಕಾ ಮಾಲಿನ್ಯಗಳಿಂದ ನೆಲ ಜಲ ಸಾಯತೊಡಗಿದೆ. ಆಹಾರ ಪದಾರ್ಥಗಳು ಸಂಪೂರ್ಣವಾಗಿ ವಿಷಗಳಿಂದ ತುಂಬಿದೆ. ವಾಯು ಉಸಿರಾಟಕ್ಕೆ ಯೋಗ್ಯವಲ್ಲದಾಗಿದೆ. ಹೊಸ ಸಾಂಕ್ರಾಮಿಕ ಕಾಯಿಲೆಗಳು ಸಾಮಾನ್ಯವಾಗಿಬಿಟ್ಟಿದೆ. ಕಾಲಚಕ್ರ ಬದಲಾಗಿದೆ. ವರ್ಷದಿಂದ ವರ್ಷಕ್ಕೆ ತಾಪಮಾನ ಹೆಚ್ಚುತ್ತಿದೆ. ಬಾವಿಯಲ್ಲಿ ನೀರು ಪಾತಾಳಕ್ಕಿಳಿಯ ತೊಡಗಿದೆ. ಪ್ರತಿಯೊಂದು ಭೀಕರ ನೆರೆಯು ನಮ್ಮೊಡನೆ ಹೇಳುವ ಪಾಠ ಇನ್ನಾದರೂ ಪ್ರಕೃತಿಯನ್ನು ಪ್ರೀತಿಸಿರಿ ಎಂದಾಗಿದೆ. ಈ ಭೂಮಿ ಅಲ್ಲಾಹನ ಅಪಾರ ಅನುಗ್ರಹವಾಗಿದೆ:
ಅಲ್ಲಾಹನು ಒಂದು ನಾಡಿನ ಉದಾಹರಣೆಯನ್ನು ನೀಡಿರುವನು; ಅದು ತುಂಬಾ ಶಾಂತ ಹಾಗೂ ಸಂತೃಪ್ತವಾಗಿತ್ತು. ಅದರ (ವಾಸಿಗಳ) ಆಹಾರವು ಧಾರಾಳವಾಗಿ ಅದರ ಬಳಿಗೆ ತಲುಪುತ್ತಿತ್ತು. ಮುಂದೆ ಅದು, ಅಲ್ಲಾಹನ ಅನುಗ್ರಹಗಳೆದುರು ಕೃತಘ್ನತೆ ತೋರಿತು. ಅವರ ಈ ಕೃತ್ಯಗಳ ಫಲವಾಗಿ ಅಲ್ಲಾಹನು ಅವರಿಗೆ ಹಸಿವು ಮತ್ತು ಭಯಗಳ ರುಚಿ ಉಣಿಸಿದನು (ಕುರ್‌ಆನ್ 16:112)

ಮುಸೀಬತ್‌ಗಳ ಈ ಕಾಲದಲ್ಲಿ ಸತ್ಯವಿಶ್ವಾಸಿಯ ಜೀವನ ಧೋರಣೆಗಳನ್ನು ಎತ್ತಿ ಹಿಡಿಯಲು ಅಲ್ಲಾಹನು ನಮಗೆ ತೌಫೀಕ್ ನೀಡಿ ಕರುಣಿಸಲಿ, ಆಮೀನ್.
***

LEAVE A REPLY

Please enter your comment!
Please enter your name here