ಶ್ರೀಲಂಕಾದಲ್ಲಿ ಚೀನಾ ಮೇಲುಗೈ ಮತ್ತು ಕ್ರೋನಿ ಕ್ಯಾಪಿಟಲಿಸಂ

Prasthutha: March 2, 2021

-ರಮೇಶ್ ಎಸ್.ಪೆರ್ಲ

ಇದೇ ಜನವರಿ 1ರಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಸಮ್ಮುಖದಲ್ಲಿ ಕೊಲಂಬೊ ಬಂದರು ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯನ್ನು ಭಾರತದ ಪಾಲುದಾರಿಕೆಯಲ್ಲಿ ಅನುಷ್ಠಾನ ಮಾಡುವುದಾಗಿ ಶ್ರೀಲಂಕಾ ಅಧ್ಯಕ್ಷರು ಘೋಷಿಸಿದ್ದರು. ಇದಾದ ಎರಡೇ ವಾರದಲ್ಲಿ ಅಂದರೆ, ಫೆಬ್ರವರಿ 3ರಂದು ಶ್ರೀಲಂಕಾ ಸರಕಾರ ಈ ಕಂಟೈನರ್ ಯೋಜನೆಯಿಂದ ಭಾರತವನ್ನು ಹೊರಗಿಟ್ಟಿದೆ. ಕೇವಲ ಕೆಲವೇ ದಿನಗಳಲ್ಲಿ ಶ್ರೀಲಂಕಾ ನಿರ್ಧಾರ ಬದಲಾದದ್ದು ಯಾಕೆ? ಎಂಬುದು ಕೇಂದ್ರದ ಬಿಜೆಪಿ ನೇತತ್ವದ ಸರಕಾರ ವಿದೇಶಾಂಗದ ವ್ಯವಹಾರದ ವೈಫಲ್ಯವನ್ನು ತೋರಿಸುತ್ತದೆ.

ಭದ್ರತಾ ಹಿತದೃಷ್ಟಿಯಿಂದ ಕೊಲಂಬೊ ಬಂದರಿನಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯಲ್ಲಿ ಸಹಭಾಗಿತ್ವ ಹೊಂದುವುದು ಭಾರತಕ್ಕೆ ಅನಿವಾರ್ಯವಾಗಿತ್ತು. ಚೀನಾ ಈಗಾಗಲೇ ಭಾರತದ ನೆರೆಹೊರೆಯ ದೇಶಗಳನ್ನು ತನ್ನ ಸಾಲ ಮತ್ತು ವಿದೇಶಿ ಹೂಡಿಕೆ ನೀತಿಯ ಮೂಲಕ ತನ್ನತ್ತ ಸೆಳೆದುಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ ಶ್ರೀಲಂಕಾದ ಹೊಸ ಬೆಳವಣಿಗೆ ಆಘಾತಕಾರಿ. ಈ ಬಗ್ಗೆ ಯಾವುದೇ ಗೋಧಿ ಮಿಡಿಯಾ ಚರ್ಚೆ ನಡೆಸುವುದಿಲ್ಲ.

ಶ್ರೀಲಂಕಾ ಸರಕಾರ ಭಾರತವನ್ನು ಈ ಮಹತ್ವದ ಬಂದರು ಯೋಜನೆಯಿಂದ ದೂರ ಇರಿಸುವ ನಿರ್ಣಯ ಕೈಗೊಳ್ಳುವುದರ ಹಿಂದೆ ಚೀನಾ ಸರಕಾರ ಇದೆ ಎಂಬುದು ತುಂಬಾ ಸ್ಪಷ್ಟವಾಗಿದೆ. ಯಾಕೆ, ಶ್ರೀಲಂಕಾ ಮತ್ತು ಚೀನಾ ಸರಕಾರ ಇಂತಹ ಕ್ರಮಕ್ಕೆ ಮುಂದಾಯ್ತು ಎಂದು ನೋಡೋಣ.

21ರಲ್ಲಿ ಕೊಲಂಬೊ ಬಂದರು ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯನ್ನು ಭಾರತ ಮತ್ತು ಜಪಾನ್ ದೇಶಗಳ ಸಹಯೋಗದಲ್ಲಿ ನಡೆಸುವ ಒಪ್ಪಂದ ಆಗಿತ್ತು. ಹೆಚ್ಚಾಗಿ ಚುನಾವಣಾ ರಾಜಕೀಯದಲ್ಲೇ ಸಕ್ರಿಯವಾಗಿರುವ ಆಡಳಿತರೂಢ ಬಿಜೆಪಿ ಪಕ್ಷಕ್ಕೆ ವಿದೇಶಾಂಗ ವ್ಯವಹಾರಗಳನ್ನು ಸುಸೂತ್ರವಾಗಿ ನೋಡಿಕೊಳ್ಳಲು ಸಮಯದ ಅಭಾವ ಇದ್ದಂತಿದೆ. ವಿದೇಶಾಂಗ ವ್ಯವಹಾರಗಳ ಇಲಾಖೆಯ ಮಾಜಿ ಅಧಿಕಾರಿಯೇ ಸಚಿವಾಲಯದ ನೇತೃತ್ವ ವಹಿಸಿಕೊಂಡಿರುವುದರ ಹೊರತಾಗಿಯೂ ನಮ್ಮ ದೇಶದ ನೆರೆ ಹೊರೆ ದೇಶಗಳನ್ನು ಚೀನಾ ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತಿದೆ.

ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯನ್ನು ಶ್ರೀಲಂಕಾದ ಬಂದರು ಪ್ರಾಧಿಕಾರವೇ ಅನುಷ್ಠಾನ ಮಾಡಲಿದೆ ಎಂದು ಸಚಿವ ಸಂಪುಟ ಸಭೆಯ ಅನಂತರ ಶ್ರೀಲಂಕಾ ಪ್ರಧಾನಿ ಮಹಿಂದ ರಾಜಪಕ್ಷೆ ಘೋಷಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಯೋಜನೆಗೆ ಸಂಬಂಧಿಸಿ ಇರುವ ತ್ರಿಪಕ್ಷೀಯ ಒಪ್ಪಂದವನ್ನು ಕಡೆಗಣಿಸಿ ಶ್ರೀಲಂಕಾ ಸರಕಾರ ಏಕಪಕ್ಷೀಯ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದಷ್ಟೇ ಹೇಳಿದೆ.

ಯೋಜನೆಯ ಒಪ್ಪಂದದ ಪ್ರಕಾರ ಶೇಕಡ 4ರಷ್ಟು ಹೂಡಿಕೆಯನ್ನು ಭಾರತ ಮತ್ತು ಜಪಾನ್ ದೇಶಗಳು ಮಾಡಬೇಕಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಕಂಟೈನರ್ ಟರ್ಮಿನಲ್ ಯೋಜನೆ ವಿರುದ್ಧ ಶ್ರೀಲಂಕಾದ ಕಾರ್ಮಿಕ ಸಂಘಟನೆಗಳು ಮತ್ತು ಇತರ ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸಿದ್ದವು. ಈ ಪ್ರತಿರೋಧದ ಹಿಂದೆ ಚೀನಾ ಸರಕಾರದ ಕೈವಾಡ ಇದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ. ಈ ಬಗ್ಗೆ ಮಾಧ್ಯಮಗಳು ಕೂಡ ವರದಿ ಮಾಡಿವೆ. ಇದೇ ಸಂದರ್ಭದಲ್ಲಿ ಚೀನಾ ದೇಶ ಕೂಡ ಸುಮಾರು 5 ಎಕರೆ ಪ್ರದೇಶದಲ್ಲಿ ಮತ್ತೊಂದು ಬಂದರು ಅಭಿವದ್ಧಿ ಪಡೆಸುತ್ತಿದೆ. ಇದು ಕೊಲೊಂಬೊ ಬಂದರಿನ ಪ್ರಸ್ತಾವಿತ ಕಂಟೈನರ್ ಟರ್ಮಿನಲ್ ಸಮೀಪದಲ್ಲೇ ಇದೆ. ಆದರೆ, ಚೀನಾ ದೇಶದ ಈ ಯೋಜನೆಗೆ ಶ್ರೀಲಂಕಾದ ಕಾರ್ಮಿಕ ಸಂಘಟನೆಗಳಾಗಲಿ, ಇತರರಾಗಲಿ ವಿರೋಧ ವ್ಯಕ್ತಪಡಿಸಿಲ್ಲ ಎಂಬುದು ಗಮನಾರ್ಹ.

ಶ್ರೀಲಂಕಾ ಸರಕಾರದ ಈ ನಿರ್ಧಾರ ಭಾರತ ಸರಕಾರಕ್ಕೆ ಒಂದು ರೀತಿಯ ಮುಖಭಂಗವೇ ಸರಿ. ಏಕೆಂದರೆ, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ನೆರೆಹೊರೆ ದೇಶಗಳಿಗೆ ಆದ್ಯತೆ ಎಂಬ ನೀತಿಗೆ ಇದು ಹಿನ್ನಡೆಯಾಗಿದೆ. ಆದರೆ,ಅಸಲು ವಿಚಾರ ಬೇರೆಯೇ ಇದೆ. ಸುತ್ತ ಸಮುದ್ರದಿಂದ ಸುತ್ತುವರಿದಿರುವ ದ್ವೀಪ ರಾಷ್ಟ್ರ ಶ್ರೀಲಂಕಾದ ಪಶ್ಚಿಮ ಭಾಗದಲ್ಲಿ ವಿಶಾಲವಾದ ಬಂದರು ಅಭಿವದ್ಧಿಪಡಿಸುವ ಅವಕಾಶವಿದೆ. ಈ ಶ್ರೀಲಂಕಾ ನಿರಾಕರಿಸಿರುವುದು ಪೂರ್ವ ಭಾಗದ ಬಂದರು ಯೋಜನೆಯನ್ನು. ಸೂಕ್ತ ವೇದಿಕೆಯಲ್ಲಿ ಈ ಬಗ್ಗೆ ಭಾರತ ಆಕ್ಷೇಪ ಎತ್ತಿದಾಗ ಶ್ರೀಲಂಕಾ ಸಹಜವಾಗಿ ಪಶ್ಚಿಮ ಭಾಗದ ಬಂದರು ಯೋಜನೆಯನ್ನು ಪ್ರಸ್ತಾವಿಸುತ್ತದೆ. ಇಲ್ಲಿರುವುದೇ ಅಸಲಿ ರಾಜಕೀಯ.

 ಶ್ರೀಲಂಕಾದ ಬಹುದೊಡ್ಡ ಕಂಪೆನಿ ಜಾನ್ಸ್ ನೀಲ್ಸ್ ಹೋಲ್ಡಿಂಗ್ ಶ್ರೀಲಂಕಾ ಸರಕಾರಕ್ಕೆ ನೀಡಿದ ಮಾಹಿತಿ ಪ್ರಕಾರ ಪಶ್ಚಿಮ ಕರಾವಳಿಯ ಬಂದರು ಅಭಿವದ್ಧಿ ಯೋಜನೆಯಲ್ಲಿ ಖಾಸಗಿ ವಲಯಕ್ಕೆ ಶೇಕಡ 8ರಷ್ಟು ಪಾಲುದಾರಿಕೆ ನೀಡಿದರೆ ಬಿಕ್ಕಟ್ಟು ಶಮನ ಆಗುತ್ತದೆ. ಜಾನ್ಸ್ ನೀಲ್ಸ್ ಹೋಲ್ಡಿಂಗ್ ಭಾರತದ ಅದಾನಿ ಕಂಪೆನಿಯೊಂದಿಗೆ ಸಹಭಾಗಿತ್ವ ಹೊಂದಿದೆ. ಅದಾನಿ ಗ್ರೂಪಿನ ಬಗ್ಗೆ ವಿಶೇಷ ಟಿಪ್ಪಣಿ ಮಾಡುವ ಅಗತ್ಯ ಇಲ್ಲಿಲ್ಲ.

ಪೂರ್ವ ಕರಾವಳಿಯ ಬಂದರು ಯೋಜನೆಯಲ್ಲಿ ಖಾಸಗಿ ಹೂಡಿಕೆಗೆ ಕೇವಲ ಶೇಕಡಾ 4ರಷ್ಟು ಅವಕಾಶ ಇತ್ತು. ಪಶ್ಚಿಮ ಕರಾವಳಿಯ ಬಂದರು ಯೋಜನೆಯಲ್ಲಿ ಖಾಸಗಿ ಸಹಭಾಗಿತ್ವ ಶೇಕಡ 8ಕ್ಕೆ ಏರಿಕೆ ಮಾಡಬಹುದಾಗಿದೆ. ಸರಿಯಾದ ಪಾಲುದಾರಿಕೆ ಮುಂದಿನ ಸುತ್ತುಗಳ ಮಾತುಕತೆಗಳ ಮೂಲಕ ಇತ್ಯರ್ಥ ಆಗಬಹುದು.

ಶ್ರೀಲಂಕಾದ ಕಾರ್ಮಿಕ ಸಂಘಟನೆಗಳು ಸರಕಾರಕ್ಕೆ ಸಲ್ಲಿಸಿದ ಮನವಿಯಲ್ಲಿ ದೇಶದ ಅಭಿವದ್ಧಿಯ ದೃಷ್ಟಿಯಿಂದ ಉತ್ತಮ ಹೂಡಿಕೆ ಬರುವುದಿದ್ದರೆ, ಪಶ್ಚಿಮ ಕರಾವಳಿಯ ಬಂದರು ಅಭಿವೃದ್ಧಿಗೆ ತಮ್ಮ ವಿರೋಧ ಇಲ್ಲ ಎಂದು ಹೇಳಿವೆ.

ಈಸ್ಟ್ ಕಂಟೈನರ್ ಟರ್ಮಿನಲ್ ಯೋಜನೆಯಿಂದ ಭಾರತವನ್ನು ಕೈಬಿಟ್ಟ ನಿರ್ಧಾರದೊಂದಿಗೆ ಶ್ರೀಲಂಕಾ ಸರಕಾರ ಅಂದೇ ಜಾಫ್ನಾ ಸಮೀಪದ ಮೂರು ದ್ವೀಪಗಳಲ್ಲಿ ಹೈಬ್ರೀಡ್ ನವೀಕರಿಸಬಹುದಾದ ಇಂಧನ ಯೋಜನೆಯನ್ನು ಚೀನಾ ದೇಶಕ್ಕೆ ನೀಡಿದೆ. ಈ ಯೋಜನಾ ಪ್ರದೇಶವು ತಮಿಳುನಾಡಿನಿಂದ ಕೇವಲ 5 ನಾಟಿಕಲ್ ಮೈಲು ದೂರದಲ್ಲಿದೆ. ಭಾರತದ ಭದ್ರತೆಯ ದೃಷ್ಟಿಯಿಂದ ಇಂತಹದೊಂದು ನಿರ್ಧಾರಕ್ಕೆ ಶ್ರೀಲಂಕಾ ಸರಕಾರಕ್ಕೆ ಅವಕಾಶ ನೀಡಬಾರದಿತ್ತು.

ಯೋಜನೆಯನ್ನು ಅಂತಾರಾಷ್ಟ್ರೀಯ ಬಿಡ್ಡಿಂಗ್ ಮೂಲಕ ನೀಡಲಾಗಿದ್ದು, ಭಾರತದ ಬಿಡ್ಡರ್ ಯೋಜನೆಯನ್ನು ಪಡೆಯಲು ಅರ್ಹತೆ ಹೊಂದಿರಲಿಲ್ಲ ಎಂದು ಶ್ರೀಲಂಕಾ ಸರಕಾರ ಹೇಳಿದೆ. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ) ಧನಸಹಾಯ ಮಾಡುತ್ತಿದ್ದು, ಪಾಕ್ ಸ್ಟ್ರೈಟ್ ಪ್ರದೇಶದ ಮೂರು ದ್ವೀಪಗಳಲ್ಲಿ ಈ ಯೋಜನೆ ಕಾರ್ಯಗತ ಆಗಲಿದೆ. ಈ ದ್ವೀಪ ಪ್ರದೇಶ ಸಮುದ್ರ ವ್ಯಾಪ್ತಿಯ ಕುರಿತಾಗಿ ಶ್ರೀಲಂಕಾ ಮತ್ತು ಜಾಫ್ನಾ ಮೀನುಗಾರರ ನಡುವೆ ಆಗಾಗ ಕಲಹ ನಡೆಯುತ್ತಲೇ ಇರುತ್ತದೆ. ಎರಡು ದೇಶಗಳ ನಡುವೆ ಈ ವಿವಾದ ಇತ್ಯರ್ಥವಾಗದೆ ಬಾಕಿ ಉಳಿದಿದೆ.

 

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!