ಶ್ರೀರಾಮನಿಗೆ ಜಯವಾಗುವುದೇ?

0
112

ಮೋದಿ ಪರಿವಾರದ ಕೇಸರಿ ಸಂಸದರು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಸಂವಿಧಾನ ಮಂದಿರ ಪ್ರವೇಶಿಸಿದ ಬೆನ್ನಿಗೇ ಅವರ ಶಿಷ್ಯಂದಿರು ದೇಶಾದ್ಯಂತ ಅದನ್ನು ಜಾರಿಗೊಳಿಸಲು ಬೀದಿಗಿಳಿದಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಹಿಂದುತ್ವದ ಗೂಂಡಾಗಳು ಜಾರ್ಖಂಡ್‌ನಲ್ಲಿ ತಬ್ರೇಝ್ ಅನ್ಸಾರಿ ಎಂಬ ಮುಸ್ಲಿಮ್ ಯುವಕನನ್ನು ಬರ್ಬರವಾಗಿ ಕೊಂದಿದ್ದಾರೆ. ಆತನನ್ನು ಜೈ ಶ್ರೀರಾಮ್ ಹೇಳುವಂತೆ ಬಲವಂತಪಡಿಸಿದ್ದಾರೆ. ಇದು ಜೂನ್ 18ರಂದು ಘಟನೆಯಾದರೆ, ಅದೇ ದಿನ ಅಸ್ಸಾಮ್‌ನಲ್ಲಿ ಕೆಲಸ ಮುಗಿಸಿ ಹಿಂದಿರುಗುತ್ತಿದ್ದ ಮುಸ್ಲಿಮ್ ಕಾರ್ಮಿಕರಿದ್ದ ವಾಹನವನ್ನು ತಡೆದು ನಿಲ್ಲಿಸಿದ ಗೂಂಡಾಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗುತ್ತಾರೆ. ದೆಹಲಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮದ್ರಸ ಅಧ್ಯಾಪಕ ಮೂಮಿನ್ ಎಂಬವರಿಗೆ ಜೈ ಶ್ರೀರಾಮ್ ಘೋಷಣೆ ಕೂಗುತ್ತಲೇ ಕಾರಿನಿಂದ ಢಿಕ್ಕಿ ಹೊಡೆದು ಪರಾರಿಯಾಗುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಮದ್ರಸ ಶಿಕ್ಷಕ ಹಾಫಿಝ್ ಶಾರುಖ್ ಹಲ್ದರ್ ಎಂಬವರನ್ನು ಥಳಿಸಿ ರೈಲಿನಿಂದ ಹೊರಗೆಸೆಯುವಾಗಲೂ ಹಲ್ಲೆಕೋರರು ಜೈ ಶ್ರೀರಾಮ್ ಘೋಷಣೆ ಕೂಗುತ್ತಿದ್ದರು. ಅಂದರೆ ಜೈ ಶ್ರೀರಾಮ್ ಎಂದು ಪ್ರಮಾಣ ವಚನದ ಸಂದರ್ಭದಲ್ಲಿ ಬಿಜೆಪಿ ಸಂಸದರು ಉನ್ಮಾದಿತರಾಗಿ ಘೋಷಣೆ ಕೂಗುತ್ತಿದ್ದುದರ ಉದ್ದೇಶ ಇದೇ ಆಗಿರಬೇಕು. ಈ ಕಾರಣಕ್ಕಾಗಿಯೇ ಇರಬೇಕು ಬರ್ಬರ ಗುಂಪುಹತ್ಯೆ ನಡೆಯುತ್ತಿರುವಾಗಲೂ ಮೋದಿ ಸರಕಾರ ಮೌನವಹಿಸಿರುವುದು.

ಗುಂಪುಹತ್ಯೆ ಏಕಾಏಕೀ ಜಾರಿಗೊಳ್ಳುತ್ತಿರುವ ಆರೆಸ್ಸೆಸ್‌ನ ಅಜೆಂಡಾಗಳಲ್ಲಿ ಒಂದಲ್ಲ. ಬೆಳಕಿಗೆ ಬರುತ್ತಿರುವ ಪ್ರಕರಣಗಳು ಆಕಸ್ಮಿಕವೂ ಅಲ್ಲ. ಎಲ್ಲವೂ ಪೂರ್ವನಿಯೋಜಿತ. 1925ರಲ್ಲಿ ಆರೆಸ್ಸೆಸ್ ಆರಂಭವಾದಂದಿನಿಂದ ಮುಸ್ಲಿಮ್ ಸಮುದಾಯವನ್ನು ಭೀತಿಗೊಳಿಸುವ, ಆತ್ಮವಿಶ್ವಾಸವನ್ನು ಇಲ್ಲದಾಗಿಸುವ ಮತ್ತು ವ್ಯವಸ್ಥಿತವಾಗಿ ಹತ್ಯೆಗೈಯ್ಯುವ ಯೋಜನೆಯು ಆರೆಸ್ಸೆಸ್‌ನ ತತ್ವಸಿದ್ಧಾಂತದಲ್ಲೇ ಇರುವಂಥದ್ದು. ಹೀಗಿರುವಾಗ ಅದರ ಯಾವುದೇ ಚಟುವಟಿಕೆಯಲ್ಲಿ ಅಲ್ಪಸಂಖ್ಯಾತರ ಸದುದ್ದೇಶವನ್ನು ಕಾಣುವುದು ಮೂರ್ಖತನ ಮಾತ್ರವಲ್ಲ; ಅಪಾಯಕಾರಿಯೂ ಆದೀತು.

ಅಮೆರಿಕದ ವರದಿಯು ಕೂಡ ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಗುಂಪುಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಅಂಕಿಅಂಶಗಳ ಪ್ರಕಾರ, ಕಳೆದ 6 ತಿಂಗಳಲ್ಲಿ 11 ಗುಂಪು ಥಳಿತ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 4 ಮಂದಿಯ ಹತ್ಯೆ ಮತ್ತು 22 ಮಂದಿಗೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕಳೆದ ಒಂದು ದಶಕದಲ್ಲಿ ಈ ರೀತಿಯ 297 ಪ್ರಕರಣಗಳು ದಾಖಲಾಗಿವೆ. ದುರಂತವೆಂದರೆ, ಈ ಎಲ್ಲ ಪ್ರಕರಣಗಳಲ್ಲೂ ಆಡಳಿತ ವ್ಯವಸ್ಥೆಯು ಆರೋಪಿಗಳಿಗೆ ಸಹಕಾರ ನೀಡಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಆಗ್ರಹಿಸದಂತೆ ಬೆದರಿಕೆಯೊಡ್ಡಲಾಗಿದೆ. ಈ ಎಲ್ಲ ಆತಂಕಕಾರಿ ಬೆಳವಣಿಗೆಗಳು ದೇಶವು ಎದುರಿಸುತ್ತಿರುವ ಗಂಭೀರ ಪರಿಸ್ಥಿತಿಯನ್ನು ವಿವರಿಸುತ್ತಿವೆ. ಮೇಲ್ನೋಟಕ್ಕೆ ಪ್ರಜಾತಂತ್ರ ವ್ಯವಸ್ಥೆಯ ಲೇಪವಿದ್ದರೂ ಸರ್ವಾಧಿಕಾರವು ಸುಪ್ತವಾಗಿ ಇಲ್ಲಿ ಆಡಳಿತ ನಡೆಸುತ್ತಿದೆ. ಇದಕ್ಕೆ ಜೈಲುಶಿಕ್ಷೆಗೆ ಗುರಿಯಾಗಿರುವ ಸಂಜೀವ ಭಟ್ ಕಣ್ಣಮುಂದಿರುವ ನಿದರ್ಶನ. ಅನ್ಯಾಯದ ವಿರುದ್ಧ ಹೋರಾಟಕ್ಕಿಳಿದು ಸತ್ಯವನ್ನು ಬಹಿರಂಗಪಡಿಸಿದ ಕಾರಣಕ್ಕಾಗಿ ಸಿನಿಮೀಯ ಶೈಲಿಯಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಂಜೀವ ಭಟ್‌ರನ್ನು ಮುಚ್ಚಿಹೋದ ಪ್ರಕರಣದಲ್ಲಿ ಸಿಲುಕಿಸಿ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೂ, ವ್ಯಾಪಕವಾಗಿ ನಡೆಯುತ್ತಿರುವ ಗುಂಪುಹತ್ಯೆಗೂ ಹೆಚ್ಚಿನ ವ್ಯತ್ಯಾಸವಿಲ್ಲ.

ನಮ್ಮದೇ ಕರ್ನಾಟಕ ರಾಜ್ಯದ ಗುಂಡ್ಲುಪೇಟೆಯಲ್ಲಿ ದಲಿತ ಯುವಕನಿಗೆ ಬರ್ಬರವಾಗಿ ಥಳಿಸಿ ಬೆತ್ತಲೆ ಮೆರವಣಿಗೆ ನಡೆಸಿರುವ ಪ್ರಕರಣವು ಮಾನವ ಸಮಾಜವನ್ನೇ ನಗ್ನಗೊಳಿಸಿದೆ. ಆದರೂ ‘ಲಜ್ಜೆ ಬಿಟ್ಟು ಹೆಜ್ಜೆ ಹಾಕಿ’ದವರಿಗೆ ದಲಿತ ಯುವಕನ ಬೆತ್ತಲೆ ಪ್ರಕರಣವು ಯಾವುದೇ ಮುಜುಗರ, ಕನಿಕರ ಉಂಟು ಮಾಡಿಲ್ಲ. ಅದೇ ರೀತಿ ದಾವಣಗೆರೆಯಲ್ಲಿ ಇನಾದತ್ ಎಂಬ ಮುಸ್ಲಿಮ್ ಯುವಕನನ್ನು ಹಿಂದುತ್ವದ ಗೂಂಡಾಗಳು ಬರ್ಬರವಾಗಿ ಹತ್ಯೆ ಮಾಡಿದ್ದು ಆರೆಸ್ಸೆಸ್‌ನ ಬರ್ಬರ ಅಜೆಂಡಾಗಳು ನಮ್ಮೂರಿಗೂ ಕಾಲಿಡುತ್ತಿರುವುದರ ಮುನ್ಸೂಚನೆಯೂ ಆಗಿದೆ. ಈ ಮುನ್ಸೂಚನೆಗಳು ನಮ್ಮನ್ನು ನಾವೇ ಪ್ರತಿರೋಧಕ ಶಕ್ತಿಯನ್ನಾಗಿಸಲು ಎಚ್ಚರಿಕೆ ನೀಡುತ್ತಿವೆ.

LEAVE A REPLY

Please enter your comment!
Please enter your name here