ಶೌಚಕ್ಕೆಂದು ಹೋದ ಮಹಿಳಾ ಉದ್ಯೋಗಿ ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದು ಮೃತ್ಯು

Prasthutha|

ಸರ್ಕಾರಿ ಕಚೇರಿಯಲ್ಲಿ ಶೌಚಾಲಯ ಇಲ್ಲದಿರುವುದು ದುರಂತಕ್ಕೆ ಕಾರಣ!

ಚೆನ್ನೈ: ಶೌಚಕ್ಕೆಂದು ಹೊರಗಡೆ ಹೋಗಿದ್ದ ಶರಣ್ಯ ಶನ್ ಮುಗನ್(23) ಎಂಬಾಕೆ ಸೆಪ್ಟಿಕ್ ಟ್ಯಾಂಕ್ ಗೆ ಬಿದ್ದು ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಕಾಂಚೀಪುರಂ ಕೃಷಿ ಅಭಿವೃದ್ಧಿ ಇಲಾಖೆಯ ಗೋದಾಮಿನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಶರಣ್ಯ ಟಿ.ಎನ್.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಪ್ರಸ್ತುತ ವರ್ಷದ ಮಾರ್ಚ್ ತಿಂಗಳಲ್ಲಿ ಸರ್ಕಾರಿ ಉದ್ಯೋಗಕ್ಕೆ ಸೇರಿಕೊಂಡಿದ್ದಳು.
ಶರಣ್ಯ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಕಚೇರಿಯಲ್ಲಿ ಮಹಿಳೆಯರಿಗೆಂದು ಪ್ರತ್ಯೇಕ ಶೌಚಾಲಯ ಇಲ್ಲದಿರುವುದೇ ಈ ದುರಂತಕ್ಕೆ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
ಶನಿವಾರದಂದು ಶೌಚಕ್ಕೆಂದು ಹೊರಗೆ ಹೋಗಿದ್ದ ಶರಣ್ಯ, ಅರ್ಧ ಗಂಟೆಯಾದರೂ ಬಾರದಿದ್ದುದನ್ನು ಗಮನಿಸಿದ ಸಹೋದ್ಯೋಗಿಗಳು ಆಕೆಯನ್ನು ಹುಡುಕಿಕೊಂಡು ಹೋಗಿದ್ದರು. ಈ ವೇಳೆ ಟ್ಯಾಂಕ್ ನಲ್ಲಿ ಶರಣ್ಯಾಳ ಚಪ್ಪಳಿ ತೇಲುತ್ತಿರುವುದನ್ನು ಕಂಡ ಸಹೋದ್ಯೋಗಿಗಳು ಕೂಡಲೇ ಶರಣ್ಯಾಳನ್ನು ಮೇಲಕ್ಕೆತ್ತಿದರು. ಕಾಂಚೀಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರೂ ಅದಾಗಲೇ ಶರಣ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.

- Advertisement -