ಶುಲ್ಕ ಹೆಚ್ಚಳ: ಅನಿವಾರ್ಯವೇ ಅಥವಾ ಪಿತೂರಿಯೇ?

0
23

-ಕನ್ಹಯ್ಯ ಕುಮಾರ್

ಜೆಎನ್‌ಯುವಿನ ಶುಲ್ಕ ಹೆಚ್ಚಳ ಮಾಡಿ ಮತ್ತು ಸಾಲ ಪಡೆದು ಕಲಿಯುವ ಮಾದರಿಯನ್ನು ಮುಂದಿಟ್ಟ ಸರಕಾರವು, ಅಭಿವೃದ್ಧಿಯ ತನ್ನ ವ್ಯಾಖ್ಯಾನದಲ್ಲಿ ಗ್ರಾಮ-ಪಟ್ಟಣಗಳ ಜನರು ಒಳಗೊಂಡಿಲ್ಲ ಎಂಬ ವಿಚಾರವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಯಾವ ರೈತರ-ಕಾರ್ಮಿಕರ ತೆರಿಗೆ ಹಣದಲ್ಲಿ ವಿಶ್ವವಿದ್ಯಾಲಯ ನಿರ್ಮಾಣವಾಯಿತೋ, ಅವರದ್ದೇ ಮಕ್ಕಳಿಗೆ ಹೊರ  ದಾರಿಯನ್ನು ತೋರಿಸುವುದಾದರೆ, ದೇಶದ ಯುವಜನತೆ ಮೌನವಾಗಿರುವರೇ? ಹೀಗಾಗಲು ಖಂಡಿತಾ ಸಾಧ್ಯವಿಲ್ಲ.

ಸರಕಾರವು ಇದೀಗ ಎಲ್ಲವನ್ನೂ ಮಾರಾಟ ಮಾಡುವ ಮನೋಸ್ಥಿತಿಯಲ್ಲಿದೆ. ದೇಶದ ಜನರ ತೆರಿಗೆ ಹಣದಿಂದ ನಿರ್ಮಾಣವಾದ ಸರಕಾರಿ ಉಪಕ್ರಮಗಳು ನಿರಂತರವಾಗಿ ಖಾಸಗಿ ಕ್ಷೇತ್ರಗಳ ಪಾಲಾಗುತ್ತಾ ಹೋಗುತ್ತಿವೆ. ಪ್ರತಿವರ್ಷವೂ ಮುಕ್ತ ಮನಸ್ಸಿನಿಂದ ಶ್ರೀಮಂತರ ಕೋಟ್ಯಂತರ ರೂಪಾಯಿ ಸಾಲವನ್ನು ಮನ್ನಾ ಮಾಡುವ ಈ ಸರಕಾರವು, ಶಿಕ್ಷಣ ಸಂಸ್ಥೆಗಳ ಬಜೆಟ್‌ನಲ್ಲಿ ನಿರಂತರವಾಗಿ ಕಡಿತಗೊಳಿಸುತ್ತಿದೆ ಮತ್ತು ಶಿಕ್ಷಣವನ್ನು ಮಾರುಕಟ್ಟೆಗೆ ಒಪ್ಪಿಸುತ್ತಿದೆ. ಸರಕಾರಿ ಶಾಲೆಗಳಲ್ಲಿನ ಪರಿಸ್ಥಿತಿಯು ಗುಟ್ಟಾಗಿ ಉಳಿದಿಲ್ಲ ಮತ್ತು ಖಾಸಗಿ ಶಾಲೆಗಳು ದೇಶದ ಬಹುಸಂಖ್ಯಾತ ಜನಸಂಖ್ಯೆಯ ಬಜೆಟ್‌ನಿಂದ ಹೊರಗುಳಿದಿವೆ. ಪ್ರಾಣ ಬಿಡುವ ಇದೇ ಸರಕಾರಿ ಶಾಲೆಗಳಲ್ಲಿ ಕಲಿತು ಅಖಿಲ ಭಾರತೀಯ ಪ್ರವೇಶ ಪರೀಕ್ಷೆ ಪಾಸು ಮಾಡಿ ಬಡವರ ಮಕ್ಕಳು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯವನ್ನು ತಲುಪುತ್ತಿರುವಾಗ, ಈ ವಿಚಾರವು ಕೂಡ ದೇಶದ ಕೋಟ್ಯಾಧಿಪತಿ ಸಂಸದರು ಮತ್ತು ಸರಕಾರದ ಹೊಗಳುಭಟರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಕೇವಲ ಶ್ರೀಮಂತರ ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲಿ ಜಿಯೋ ಯುನಿವರ್ಸಿಟಿ ಮಾದರಿಯನ್ನು ಸ್ಥಾಪಿಸುವುದಕ್ಕಾಗಿ ಶಿಕ್ಷಣದ ಜೆಎನ್‌ಯು ಮಾದರಿಯ ಮೇಲೆ ನಿರಂತರವಾಗಿ ದಾಳಿ ಮಾಡಲಾಗುತ್ತಿದೆ. ಫೂಕೋ ಹೇಳಿದ್ದಾರೆ; ನಾಲೇಜ್ ಈಸ್ ಪವರ್(ಶಿಕ್ಷಣವೇ ಶಕ್ತಿ). ದೇಶದ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಂಪನ್ಮೂಲಗಳನ್ನು ಕಬಳಿಸುವ ಜನರು ಬಡವರು ಜ್ಞಾನ ಗಳಿಸುವುದರಿಂದ ದೂರ ಮಾಡಲು ಬಯಸುತ್ತಾರೆ. ಇದರಿಂದಾಗಿ ಅವರಿಗೆ ಜೆಎನ್‌ಯು ಮಾದರಿಯ ಮೇಲೆ ಇಷ್ಟೊಂದು ದ್ವೇಷವಿರುವುದು.

ದೇಶದ ಪ್ರಧಾನಿ ನಿರಂತರವಾಗಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವುದರ ಬಗ್ಗೆ ಮಾತನಾಡುತ್ತಾರೆ. ಆದರೆ 5000 ಮಕ್ಕಳಿಗೆ ಕಲಿಸಲು ದೇಶದ ಸರಕಾರದ ಬಳಿ ಹಣವಿಲ್ಲ ಎಂಬುದು ಅಚ್ಚರಿಯ ವಿಷಯವಾಗಿದೆ. ಸರಕಾರವು ಒಂದು ಪ್ರತಿಮೆಗೆ 3 ಸಾವಿರ ಕೋಟಿ ರೂಪಾಯಿ ಖರ್ಚು ಮಾಡಬಹುದು, ರಾಜಕಾರಣಿಗಳಿಗಾಗಿ 200 ಕೋಟಿ ಖಾಸಗಿ ಜೆಟ್ ಖರೀದಿಸಬಹುದು. ಆದರೆ ವಿಶ್ವವಿದ್ಯಾನಿಲಯಗಳಿಗಾಗಿ ಅದರ ಬಳಿ ಬಜೆಟ್ ಇಲ್ಲ. ವಿಶ್ವವಿದ್ಯಾನಿಲಯದಲ್ಲಿ ಶೇ.50 ರಿಯಾಯಿತಿಯ ಬೋರ್ಡ್ ಅಳವಡಿಸಲು ಅದು ಯಾವುದೇ ಮಾಲ್ ಅಲ್ಲ. ಒಂದು ಅಭಿವೃದ್ಧಿಶೀಲ ಸಮಾಜವು ಶಿಕ್ಷಣವನ್ನು ಹೂಡಿಕೆಯ ದೃಷ್ಟಿಯಿಂದ ನೋಡಬೇಕು, ಹೊರತು ಖರ್ಚಿನ ರೂಪದಲ್ಲಲ್ಲ.

ವಾಸ್ತವದಲ್ಲಿ ಇಲ್ಲಿನ ಸಮಸ್ಯೆಯು ಹಣದ್ದಲ್ಲ, ಬದಲಿಗೆ ಬಡ ರೈತ-ಕಾರ್ಮಿಕರ ಮಕ್ಕಳು ಮತ್ತು ವಿಶೇಷವಾಗಿ ಹೆಣ್ಮಕ್ಕಳನ್ನು ಕ್ಯಾಂಪಸ್‌ನಿಂದ ದೂರವಿಡುವ ಒಂದು ಪಿತೂರಿಯಾಗಿದೆ ಇದು. ಸರಕಾರವು ನೀಡಿದ ಘೋಷಣೆ ‘ಬೇಟಿ ಬಚಾವೋ -ಬೇಟಿ ಪಡಾವೋ’. ಆದರೆ ಕಾರ್ಯದಲ್ಲಿ ತೋರಿಸಿದ್ದು ‘ಫೀಸ್ ಬಡಾವೋ – ಬೇಟಿ ಹಟಾವೋ’. ಹಲವು ವರ್ಷಗಳಿಂದ ನಿರಂತರವಾಗಿ ಜೆಎನ್‌ಯುನಲ್ಲಿ ಹೆಣ್ಮಕ್ಕಳ ಸಂಖ್ಯೆಯು ಗಂಡು ಮಕ್ಕಳ ಸಂಖ್ಯೆಗಿಂತ ಅಧಿಕವಿದೆ. ಅಲ್ಲಿ ಶುಲ್ಕ ಹೆಚ್ಚಳ ಮಾಡಿದ್ದರಿಂದ ಹಲವಾರು ಹೆಣ್ಮಕ್ಕಳ ಉಜ್ವಲ ಭವಿಷ್ಯದ ಕನಸು ನುಚ್ಚುನೂರಾಗಿದೆ. ಕಳೆದ ಕೆಲವು ವರ್ಷಗಳಿಂದ ಪ್ರವೇಶ ಪರೀಕ್ಷೆಯ ಮಾದರಿಯನ್ನು ಬದಲಿಸಿ ವಂಚಿತ ಸಮುದಾಯಗಳ ಮಕ್ಕಳನ್ನು ಜೆಎನ್‌ಯುನಿಂದ ದೂರವಿರಿಸುವ ಎಲ್ಲಾ ಷಡ್ಯಂತ್ರಗಳ ಹೊರತಾಗಿಯೂ, ಇಂದಿಗೂ ಜೆಎನ್‌ಯುನಲ್ಲಿ ಶೇ.40ರಷ್ಟು ವಿದ್ಯಾರ್ಥಿಗಳು ಮಾಸಿಕ ರೂ.12,000 ಆದಾಯವುಳ್ಳ ಕುಟುಂಬದವರಾಗಿದ್ದಾರೆ. ಸರಕಾರವು ಶುಲ್ಕ ಹೆಚ್ಚಿಸಿ ಈ ವರ್ಗಗಳಿಂದ ಬರುವ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಮತ್ತು ನಿರೀಕ್ಷೆಗಳನ್ನು ಮುರಿಯಲು ಇಚ್ಛಿಸುತ್ತಿದೆ.

ಆಡಳಿತದಲ್ಲಿರುವ ಶಕ್ತಿಗಳು  ಸದಾ ವಂಚಿತ ಜನರನ್ನು ಶಿಕ್ಷಣದಿಂದ ದೂರವಿರಿಸಲು ಎಲ್ಲಾ ರೀತಿಯ ಷಡ್ಯಂತ್ರಗಳನ್ನು ರೂಪಿಸಿತ್ತು. ರಾಜನ ಮಗ ಅರ್ಜುನ ಅತ್ಯುತ್ತಮ ಬಿಲ್ಲುಗಾರನಾಗಿರಬೇಕೆಂಬ ಕಾರಣಕ್ಕಾಗಿ ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳನ್ನು ತುಂಡರಿಸಿದರು. ಇಂದಿಗೂ ಸರಕಾರವು ಶಿಕ್ಷಣದ ಮೇಲೆ ಮುಷ್ಟಿಯಷ್ಟು ಜನರ ನಿಯಂತ್ರಣಕ್ಕೆ ಒಳಪಡಿಸಲು ಬಯಸುತ್ತಿದೆ. ಯಾಕೆಂದರೆ, ಜ್ಞಾನ ಎಂಬುದು ಬಡವರ ಮಕ್ಕಳು ಸ್ವತಃ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಲು ಸಾಧ್ಯವಿರುವ ಒಂದು ಶಕ್ತಿಯಾಗಿದೆ. ಬಡವನ ಮಗ ಪಿಎಚ್‌ಡಿ ಪಡೆದು ಯಾವುದೇ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಬಾರದು. ಅಷ್ಟರ ಮಟ್ಟಿಗೆ ಶುಲ್ಕ ಏರಿಸಬೇಕು. ಆತ ಒಂದೋ 10ನೇ ತರಗತಿ ತೇರ್ಗಡೆಯಾಗಿ ಡಾಬಾದಲ್ಲಿ ಕೆಲಸ ನಿರ್ವಹಿಸಬೇಕು ಅಥವಾ ಬಿಎ ಮಾಡಿ ಮನೆಮನೆ ಹೋಗಿ ಸಾಮಗ್ರಿಗಳನ್ನು ತಲುಪಿಸಬೇಕು. ಅದೇ ರೀತಿ ಶ್ರೀಮಂತರ ಮಕ್ಕಳು ನಿಶ್ಚಿಂತರಾಗಿ ಕಲಿಯಬೇಕು ಮತ್ತು ಬಡವನ ಮಕ್ಕಳು ಅರೆಕಾಲಿಕ ಕೆಲಸಕ್ಕೆ ಹೋಗಿ ಶುಲ್ಕ ತೆರಬೇಕು. ಇದು ಅಸಮಾನತೆಯನ್ನು ಹೆಚ್ಚಿಸುವ ವಿಚಾರ ಹೌದೇ, ಅಲ್ಲವೇ?

ರೈತರಿಗೆ ಅವರ ಬೆಳೆಯ ಮೇಲೆ ಸರಕಾರದ ಸಬ್ಸಿಡಿ ದೊರಕದಿದ್ದರೂ ಪರವಾಗಿಲ್ಲ, ಆದರೆ ಅದೇ ರೈತ ಬೆಳೆದ ಬೆಳೆಯನ್ನು ತಿನ್ನುವಾಗ ಸಂಸದರ ಕ್ಯಾಂಟೀನ್‌ನಲ್ಲಿ ದೇಶದ ಕೋಟ್ಯಾಧಿಪತಿ ಸಂಸದರಿಗೆ ಸಬ್ಸಿಡಿ ಸಿಗುತ್ತಲೇ ಇರಬೇಕು. ಯುನಿವರ್ಸಿಟಿಯಲ್ಲಿ ಬಡವರ ಮಕ್ಕಳಿಗೆ ನೆಲೆಸಲು ಉಚಿತ ಹಾಸ್ಟೆಲ್ ಸಿಗದಿದ್ದರೂ ಪರವಾಗಿಲ್ಲ, ಆದರೆ ಸರಕಾರದಿಂದ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಇದೇ ಕೋಟ್ಯಾಧಿಪತಿ ಸಂಸದರಿಗೆ ವಿಶ್ರಾಂತಿ ಪಡೆಯಲು ಲುಟಿಯನ್ಸ್‌ನಲ್ಲಿ ಉಚಿತವಾಗಿ ಬಂಗಲೆ ದೊರಕುತ್ತಿರಬೇಕು. ರಾಜಕೀಯ ಪಕ್ಷಗಳಿಗೆ ಚಂದಾ ನೀಡುವ ಕೋಟ್ಯಾಧಿಪತಿ ಉದ್ಯಮಿಗಳಿಗೆ ಬ್ಯಾಂಕ್ ಸಾಲ ಮನ್ನಾ ಆಗುತ್ತಿರಬೇಕು ಮತ್ತು ಬಡವರ ಮಕ್ಕಳು ಸಾಲದ ಸುಳಿಯಲ್ಲಿ ಸಿಲುಕುವ ಅನಿವಾರ್ಯತೆ ಒಳಪಡಿಸುತ್ತಲೇ ಇರಬೇಕು.

ಯುವಜನರು ಸಾಲ ಪಡೆದು ಶಿಕ್ಷಣ ಪಡೆಯಬೇಕು ಮತ್ತು ನಂತರದಲ್ಲಿ ಸಾಲ ಮರುಪಾವತಿಸುತ್ತಲೇ ಆತನ ಪರಿಸ್ಥಿತಿ ಬಿಗಡಾಯಿಸಬೇಕು. ಈ ಮೂಲಕ ಆತನ ಬಳಿ ಮೂಲಭೂತ ಪ್ರಶ್ನೆಗಳನ್ನು ಎತ್ತಲು ಸಮಯವಾಗಲೀ, ಶಕ್ತಿಯಾಗಲಿ ಇರಬಾರದು. ಇಂತಹ ಯುವಜನರ ಪೀಳಿಗೆಯೊಂದನ್ನು ರಚಿಸಲು ಸರಕಾರವು ಬಯಸುತ್ತಿದೆ. ಪಿತೂರಿಯಿಂದ ಜೆಎನ್‌ಯು ಕುರಿತು ತಪ್ಪು ಮಾಹಿತಿಗಳನ್ನು ಪ್ರಚಾರಪಡಿಸಲಾಗುತ್ತಿದೆ. ಇಲ್ಲಿನ ಹಾಸ್ಟೆಲ್ ಶುಲ್ಕ ಕೇವಲ 10 ರೂಪಾಯಿ ಎಂದು ಹೇಳಲಾಗುತ್ತಿದೆ. ಆದರೆ  ವಾಸ್ತವವೆಂದರೆ, ಇಲ್ಲಿನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಗಳು ಮೊದಲಿನಿಂದಲೇ ಸುಮಾರು ಮೂರು ಸಾವಿರ ರೂಪಾಯಿಯನ್ನು ತಿಂಗಳ ಭೋಜನಾ ಬಿಲ್ ರೂಪದಲ್ಲಿ ಭರಿಸುತ್ತಾ ಬಂದಿದ್ದಾರೆ. ಮಾತ್ರವಲ್ಲ, ಜೆಎನ್‌ಯುನಲ್ಲಿ ಐದು ವರ್ಷದಲ್ಲಿ ಪಿಎಚ್‌ಡಿ ಮುಗಿಸುವ ಕುರಿತು ಮಾತನಾಡುವ ಜನರಿದ್ದಾರೆ. ಆದರೆ ಯುಪಿ-ಬಿಹಾರದಲ್ಲಿ ಸರಕಾರಿ ಕಾಲೇಜುಗಳಲ್ಲಿ ಇಂದಿಗೂ  ಮೂರು ವರ್ಷದ ಬಿಎಗೆ ಐದು ವರ್ಷ ಏಕೆ ತಗಲುತ್ತದೆ ಎಂಬ ವಾಸ್ತವಿಕ ಪ್ರಶ್ನೆಯನ್ನೂ ಅವರು ಕೇಳಬೇಕಾಗಿದೆ. ತರಕಾರಿ ಗಾಡಿಯನ್ನು ಹೊಂದಿರುವವನ ಮಗ ರಷ್ಯನ್ ಅಥವಾ ಫ್ರೆಂಚ್ ಕಲಿತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತನ್ನ ಕಂಪೆನಿ ಯಾಕೆ ತೆರೆಯುತ್ತಿದ್ದಾನೆ. ಇಲ್ಲವೇ, ಆಫ್ರಿಕನ್ ಅಥವಾ ಲ್ಯಾಟಿನ್ ಅಮೆರಿಕನ್ ಸ್ಟಡೀಸ್‌ನಲ್ಲಿ ಪಿಎಚ್‌ಡಿ ಪಡೆದು ವಿದೇಶೀ ನೀತಿಗಳ ತಜ್ಞ ಹೇಗೆ ಆಗುತ್ತಿದ್ದಾನೆ ಎಂಬ ವಿಚಾರವೇ ಅವರಿಗಿರುವ ಸಮಸ್ಯೆಯಾಗಿದೆ.

ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಕಲಿತ ನಂತರ ಸರಕಾರಕ್ಕೆ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಎರಡನ್ನೂ ಪಾವತಿಸುವ ಎಲ್ಲಾ ಜನರು ಮುಂದೆ ಬಂದು ಜೆಎನ್‌ಯುವಿನ ಹೋರಾಟದಲ್ಲಿ ಪಾಲ್ಗೊಳ್ಳಬೇಕಾಗಿದೆ. ಒಂದು ವೇಳೆ ಅವರು ಇಂದು ಮೌನವಾದರೆ, ನಾಳೆಯ ದಿನ ಅವರ ಮಕ್ಕಳು ಸಾಲ ಪಡೆದು ಅಥವಾ ಅರೆಕಾಲಿಕ ಕೆಲಸಕ್ಕೆ ಹೋಗಿ ಶಿಕ್ಷಣ ಕಲಿಯಬೇಕಾಗಬಹುದು. ಇಡೀ ದೇಶದಲ್ಲಿ ಸರಕಾರಿ ಕಾಲೇಜುಗಳ ಶುಲ್ಕಗಳನ್ನು ನಿರಂತರವಾಗಿ ಹೆಚ್ಚಿಸಲಾಗುತ್ತಿದೆ ಮತ್ತು ಜೆಎನ್‌ಯು ಪ್ರತಿಬಾರಿಯೂ ಇದರ ಬಗ್ಗೆ ಧ್ವನಿ ಎತ್ತಿದೆ. ಇಂದು ಜೆಎನ್‌ಯುವನ್ನು ರಕ್ಷಿಸುವ ಹೋರಾಟವು ಯಾವುದೇ ಒಂದು ವಿಶ್ವವಿದ್ಯಾನಿಲಯವನ್ನು ರಕ್ಷಿಸುವ ಹೋರಾಟವಲ್ಲ. ಬದಲಿಗೆ ಅದು ನಮ್ಮ ಪ್ರಜಾಪ್ರಭುತ್ವದ ಆಧಾರದ ಮೇಲೆ ಸ್ಥಾಪಿತವಾಗಿರುವ ಮೌಲ್ಯಗಳಾದ ಸಮಾನತೆ ಮತ್ತು ನ್ಯಾಯವನ್ನು ರಕ್ಷಿಸುವುದಾಗಿದೆ.

ನೆನಪಿಡಿ. ಒಂದು ವೇಳೆ ಇಂದು ಮೌನವಾಗಿದ್ದರೆ, ನಾಳೆ ನೀರವತೆ ಆವರಿಸಬಹುದು.

(ಈ ಲೇಖನವನ್ನು ಲೇಖಕರ ಫೇಸ್‌ಬುಕ್ ಪೇಜ್‌ನಿಂದ ಪಡೆಯಲಾಗಿದೆ.)

LEAVE A REPLY

Please enter your comment!
Please enter your name here