ಶಿಕ್ಷಕರಿಗೆ ಅನ್ಯಾಯವಾಗದಂತೆ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗೆ ಹೊರಟ್ಟಿ ಒತ್ತಾಯ

Prasthutha|

ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬಿ.ಇಡಿ. ಪದವಿ ಹೊಂದಿದ ಸುಮಾರು 8 ಸಾವಿರ ಜನ ಪ್ರಾಥಮಿಕ ಶಾಲಾ ಸಹಶಿಕ್ಷಕರಿಗೆ ಜೇಷ್ಠತಾ ಪಟ್ಟಿ ಪ್ರಕಾರ ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ಹುದ್ದೆಗೆ ಬಡ್ತಿ ನೀಡಲಾಗಿದೆ. ಆದರೆ 1 ರಿಂದ 5ನೇ ತರಗತಿ ಬೋಧಿಸುವ ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ ಎಂದು ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ 1 ರಿಂದ 7ನೇ ತರಗತಿ ಬೋಧಿಸಲು 2016ಕ್ಕಿಂತ ಪೂರ್ವದಲ್ಲಿ ನೇಮಕವಾದ ಒಟ್ಟು ಶಿಕ್ಷಕರಲ್ಲಿ 8000ಕ್ಕಿಂತ ಹೆಚ್ಚು ಶಿಕ್ಷಕರು ಪದವೀಧರರಾಗಿದ್ದು, ಮುಂಬಡ್ತಿಗಾಗಿ ಕಳೆದ 25-30 ವರ್ಷಗಳಿಂದ ಕಾಯುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾವಾರು ಶೇಕಡಾ 50 ರಷ್ಟು ಅನುಪಾತದಂತೆ ಹುದ್ದೆಗಳಿಗೆ ಬಡ್ತಿ ನೀಡಲಾಗುತ್ತಿದೆ.
ನ್ಯಾಯಾಲಯದ ಆದೇಶದಂತೆ ಹಿಂಬಡ್ತಿ ಮಾಡಿದಲ್ಲಿ ಕಳೆದ 25-30 ವರ್ಷಗಳಿಂದ 1 ರಿಂದ 7ನೇ ತರಗತಿಗಳ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರೌಢ ಶಾಲಾ ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿದ ಹಾಗೂ ಬಿ.ಇಡಿ. ಪದವೀಧರ ಶಿಕ್ಷಕರಿಗೆ ಹಾಗೂ ಸೇವಾ ನಿರತ ಪ್ರಾಥಮಿಕ ಶಾಲಾ ಶಿಕ್ಷಕರು (1-7 ತರಗತಿ) ವೃಂದದ ಶಿಕ್ಷಕರಿಗೂ ಅನ್ಯಾಯವಾಗುತ್ತದೆ ಎಂದು ತಿಳಿಸಿದ್ದಾರೆ.
ಆದ್ದರಿಂದ ಕಾನೂನುರೀತ್ಯ ಕೆ.ಎ.ಟಿ. ಆದೇಶಕ್ಕೆ ಮೇಲ್ಮನವಿ ಸಲ್ಲಿಸಬೇಕೆಂದು ಹಾಗೂ 2016 ಕ್ಕಿಂತ ಪೂರ್ವದಲ್ಲಿ ನೇಮಕಾತಿ ಹೊಂದಿ ಬಿ.ಇಡಿ. ತರಬೇತಿ ಹೊಂದಿದ 1 ರಿಂದ 7ನೇ ತರಗತಿ ವೃಂದದ ಪ್ರಾಥಮಿಕ ಶಾಲಾ ಶಿಕ್ಷಕರು ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿದ ಶಿಕ್ಷಕರಿಗೆ ಅನ್ಯಾಯವಾಗದಂತೆ ಪ್ರಸ್ತುತ ಶೇಕಡಾ 50 ರಷ್ಟು ಮುಂಬಡ್ತಿಯನ್ನು ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಮುಂದುವರೆಸುವುದು, ಪದವೀಧರ ಪ್ರೌಢ ಶಾಲಾ ಸಹಶಿಕ್ಷಕರು 6ರಿಂದ 8ನೇ ತರಗತಿ ವೃಂದದ ಶಿಕ್ಷಕರಿಗೆ ಅವರ ವೃಂದ ಬಲದ ಸಂಖ್ಯೆಗೆ ಅನುಗುಣವಾಗಿ ಅನುಪಾತದ ಪ್ರಮಾಣವನ್ನು ಪ್ರತ್ಯೇಕ ನಿಗದಿಪಡಿಸುವುದು. ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದದ ಶಿಕ್ಷಕರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿಯನ್ನು ತಂದು ಹಾಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕಕ್ಷಕರು (1-7 ಮೂಲ ವೃಂದ) ಮತ್ತು ಪಿ.ಎಸ್.ಟಿ. (1-5) ಪದವೀಧರ ಶಿಕ್ಷಕರಿಗೆ ಅನ್ಯಾಯವಾಗದಂತೆ ಶೇಕಡಾ 50ರಷ್ಟು ಮುಂಬಡ್ತಿ ಅನುಪಾತವನ್ನು 2016ಕ್ಕಿಂತ ಪೂರ್ವದಲ್ಲಿ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರು (1-7 ಮೂಲ ವೃಂದ) ನಿವೃತ್ತಿಯಾಗುವವರೆಗೂ ಮತ್ತು ಅರ್ಹ ಶಿಕ್ಷಕರ ಲಭ್ಯತೆ ಕೊನೆಗೊಳ್ಳುವವರೆಗೂ ಮುಂದುವರೆಸಲು ಕ್ರಮ ವಹಿಸುವಂತೆ ಕೋರಿರುತ್ತಾರೆ.
ಆದ್ದರಿಂದ ಶಿಕ್ಷಕರ ಸಂಘದ ಮನವಿಯಲ್ಲಿನ ಅಂಶಗಳು ಸಮಂಜಸವಾಗಿದ್ದು ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರೌಢ ಶಾಲಾ ಸಹಶಿಕ್ಷಕರು ಗ್ರೇಡ್-2 ವೃಂದಕ್ಕೆ ಬಡ್ತಿ ಹೊಂದಿ ಕೆಲಸ ನಿರ್ವಹಿಸುತ್ತಿರುವ ಶಿಕ್ಷಕರ ಹಿತದೃಷ್ಟಿಯಿಂದ ಅವರಿಗೆ ಹಿಂಬಡ್ತಿಯಾಗದಂತೆ ಸರಕಾರದ ಹಂತದಲ್ಲಿ ಮೇಲ್ಮನವಿ ಸಲ್ಲಿಸಲು ಕ್ರಮ ವಹಿಸುವುದು ಹಾಗೂ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ತರಲು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪತ್ರದಲ್ಲಿ ಮನವಿ ಮಾಡಿದ್ದಾರೆ.

- Advertisement -