ಶಾಸಕರ ಮೇಲಿನ ಹಲ್ಲೆ ಪ್ರಕರಣದ ವಿಚಾರಣೆ ಸರಿಯಾದ ದಿಕ್ಕಿನಲಿ ನಡೆಯಲಿ: ಎಡಿಪಿಐ

0
21

ಮೈಸೂರು: ಮಾಜಿ ಸಚಿವ ಹಾಗೂ ಶಾಸಕ ತನ್ವೀರ್ ಸೇಠ್‌ರವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೆ ಸರಿಯಾದ ದಿಕ್ಕಿನಲ್ಲಿ ತನಿಖೆಯನ್ನು ಕೈಗೊಂಡು ವಾಸ್ತವ ಸಂಗತಿಯನ್ನು ಬಹಿರಂಗಗೊಳಿಸಬೇಕು.  ಅಪಪ್ರಚಾರಗಳನ್ನು ನಡೆಸುವ ಕೆಲ ಮಾಧ್ಯಮ ಮತ್ತು ರಾಜಕಾರಣಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಮಾತನಾಡಿದ ಅವರು, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಇವರಲ್ಲಿ ಐದು ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಮುಖ ಆರೋಪಿ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ಪೊಲೀಸರ ವಿಚಾರಣಾ ವರದಿ ಇನ್ನೂ ಪ್ರಕಟಗೊಂಡಿಲ್ಲವಾದರೂ ಕೆಲ ಮಾಧ್ಯಮಗಳು ಉಹಾಪೋಹಗಳನ್ನು ಹಾಗೂ ಕಟ್ಟುಕತೆಗಳನ್ನು ತೇಲಿಬಿಟ್ಟು ಘಟನೆಯನ್ನು ಎಸ್‌ಡಿಪಿಐ ಪಕ್ಷದ ಜತೆಗೆ ತಳುಕು ಹಾಕುವಂತಹ ಪ್ರಯತ್ನಗಳಲ್ಲಿ ತೊಡಗಿಕೊಂಡಿವೆ. ಈ ವರೆಗಿನ ವಿದ್ಯಮಾನಗಳನ್ನು ಗಮನಿಸಿದಾಗ ತನಿಖಾ ಹಂತದ ಕೆಲವು ನಡೆಗಳು ಹಲವು ಸಂಶಯಗಳನ್ನು ಹುಟ್ಟು ಹಾಕುತ್ತಿದ್ದು, ಕೆಲವು ಹಿತಾಸಕ್ತಿಗಳು ತಮ್ಮ ಕುತ್ಸಿತ ಉದ್ದೇಶಗಳನ್ನು ಈಡೇರಿಸುವ ಹತಾಶ ಪ್ರಯತ್ನಗಳನ್ನು ನಡೆಸುತ್ತಿರುವುದು ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಎಸ್‌ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್, ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ರಾಜ್ಯ ಕಾರ್ಯದರ್ಶಿ ಕುಮಾರಸ್ವಾಮಿ, ರಾಜ್ಯ ಸಮಿತಿ ಸದಸ್ಯ ಅಮ್ಜದ್ ಖಾನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಅದೇ ರೀತಿ ಎಸ್‌ಡಿಪಿಐ ಘಟನೆಯ ಕುರಿತು ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಎತ್ತಿದ್ದು, ಪಾರದರ್ಶಕ ತನಿಖೆಗೆ ಒತ್ತಾಯಿಸಿದೆ.

ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳ ಭೇಟಿಗೆ ಕುಟುಂಬಸ್ಥರು ಮತ್ತು ವಕೀಲರಿಗೆ ಅವಕಾಶ ನಿರಾಕರಿಸಲಾಗಿದೆ. ಹತ್ತು ದಿನಗಳ ನಂತರವೇ ಭೇಟಿ ಮಾಡಬೇಕೆಂದು ಜೈಲು ಅಧಿಕಾರಿಗಳು ಹೇಳುತ್ತಿದ್ದಾರೆ. ನೀವು ಮಾಡುತ್ತಿರುವುದು ಕಾನೂನಿನ ಉಲ್ಲಂಘನೆ ಎಂದು ಜೈಲಧಿಕಾರಿಗಳಿಗೆ ವಕೀಲರು ತಿಳಿಸಿದಾಗ ‘‘ನಮಗೆ ಒತ್ತಡವಿದೆ, ನೀವು ನಮ್ಮನ್ನು ಸ್ಪಲ್ಪ ಅರ್ಥ ಮಾಡಿಕೊಳ್ಳಿ’’ ಎಂದು ಪ್ರತಿಕ್ರಿಯಿಸಿದ್ದಾರೆ. ನ್ಯಾಯಾಂಗ ಬಂಧಿತರ ಭೇಟಿಯನ್ನು ಬಯಸುವ ಕುಟುಂಬಿಕರಿಗೆ ಯಾವ ಕಾರಣಕ್ಕಾಗಿ ಅವಕಾಶವನ್ನು ನಿರಾಕರಿಸಲಾಗಿದೆ? ಪೊಲೀಸರ ಸ್ಥಿತಿಯನ್ನು ‘ಅರ್ಥ ಮಾಡಿಕೊಳ್ಳಬೇಕಾದ’ ಒತ್ತಡದ ಹಿಂದೆ ಯಾವ ಶಕ್ತಿ/ವ್ಯಕ್ತಿಗಳು ಇವೆ?

ಘಟನೆ ನಡೆದು 6 ದಿನಗಳು ಕಳೆದರೂ ವಶಕ್ಕೆ ತೆಗೆದುಕೊಂಡವರ ಪೈಕಿ ಐದು ಮಂದಿ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬಗ್ಗೆ ಈವರೆಗೆ ಪೊಲೀಸರಿಂದ ಯಾವುದೇ ವಿವರಗಳ ಅಧಿಕೃತ ಹೇಳಿಕೆ ಬಾರದಿರಲು ಕಾರಣವೇನು? ಪೊಲೀಸರ ಹೇಳಿಕೆಗಳೆಂದು ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರಕಟಿಸಿವೆ. ‘ಶಾಸಕರು ಕೆಲಸ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಹಲ್ಲೆ’, ‘ಹೆಸರು ಗಳಿಸಲಿಕ್ಕಾಗಿ ಹಲ್ಲೆ’, ‘ಭೂಗತ ಪಾತಕಿಯಿಂದ ಸುಪಾರಿ ಬೆದರಿಕೆ’ ಮುಂತಾದ ಹಲವು ಕತೆಗಳನ್ನು ನಿರಂತರವಾಗಿಯೂ ಪ್ರಕಟಿಸುತ್ತಾ, ಜನರಲ್ಲಿ ಗೊಂದಲ, ಅಪನಂಬಿಕೆ, ವದಂತಿಗಳಿಗೆ ಗ್ರಾಸ ಮಾಡುತ್ತಿವೆ. ಹಾಗಿದ್ದರೂ ಪೊಲೀಸ್ ಇಲಾಖೆ ಗಾಢ ಮೌನ ಯಾಕೆ ವಹಿಸುತ್ತಿದೆ?

ರಾಜ್ಯದಲ್ಲಿ ನಡೆಯುತ್ತಿರುವ ಉಪ ಚುನಾವಣೆ ಸಂದರ್ಭದಲ್ಲಿ ಒಂದು ಪರ್ಯಾಯ ಶಕ್ತಿಯಾಗಿ ಉದಯಿಸುತ್ತಿರುವ ಎಡಿಪಿಐ ಪಕ್ಷದ ಬಗ್ಗೆ ಅಪಪ್ರಚಾರ ನಡೆಸಲಿಕ್ಕಾಗಿಯೇ ಈ ಘಟನೆಯನ್ನು ಕೆಲಶಕ್ತಿಗಳು ಬಳಸಿಕೊಳ್ಳುತ್ತಿವೆ. ಆ ಶಕ್ತಿಗಳು ಪೊಲೀಸರ ಮೇಲೆ ಅವುಗಳ ಅನುಕೂಲಕ್ಕಾಗಿ ಒತ್ತಡ ಹಾಕುತ್ತಿವೆಯೇ?

ಘಟನೆಗೆ ಸಂಬಂಧವಿಲ್ಲದಿದ್ದರೂ ಅಮಾಯಕರನ್ನು ‘ಫಿಕ್ಸ್’ ಮಾಡುವ ಹುನ್ನಾರ ನಡೆಯುತ್ತಿವೆಯೇ? ಯಾಕೆಂದರೆ ಇಂತಹ ಘೋರ ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ ಬಳಿಕ ಅವರ ಕುಟುಂಬಿಕರಿಗೆ ಹಾಗೂ ವಕೀಲರ ಭೇಟಿಗೆ ಅವಕಾಶಗಳನ್ನು ನೀಡದೆ ಒಂದೆರಡು ದಿನಗಳ ಒಳಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು, ಹತ್ತು ದಿನಗಳ ಬಳಿಕ ಬನ್ನಿ ಎಂದಿದ್ದು, ಕತೆಗಳನ್ನು ಹೆಣೆಯುವ ಪ್ರಯತ್ನ ನಡೆಯುತ್ತಿದೆಯೇ?

ಶಾಸಕ ತನ್ವೀರ್ ಸೇಠ್ ಮೇಲಿನ ಹಲ್ಲೆ ಘಟನೆ ಹಾಗೂ ಆ ನಂತರದ ಕುತ್ಸಿತ ಬೆಳವಣಿಗೆಗಳನ್ನು ಎಸ್‌ಡಿಪಿಐ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲಾ ರೀತಿಯ ಷಡ್ಯಂತ್ರಗಳ ವಿರುದ್ಧ ಕಾನೂನುಬದ್ಧ ಸಂಘಟಿತ ಹೋರಾಟವನ್ನು ನಡೆಸಲಿದೆ. ಹಲ್ಲೆ ಪ್ರಕರಣದಲ್ಲಿ ಒಳಗೊಂಡ ನೈಜ ಆರೋಪಿಗಳಿಗೆ ಶಿಕ್ಷೆಯಾಗುವಂತಹ ಸೂಕ್ತ ಕ್ರಮಗಳನ್ನು ಪೊಲೀಸರು ಕೈಗೊಳ್ಳಬೇಕು ಹಾಗೂ ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದು ಅಮಾಯಕರನ್ನು ಫಿಕ್ಸ್ ಮಾಡುವುದಾಗಲಿ, ಕಿರುಕುಳಕ್ಕೊಳಪಡಿಸಬಾರದು ಎಂದು ಎಸ್‌ಡಿಪಿಐ ಒತ್ತಾಯಿಸಿದೆ.

 

LEAVE A REPLY

Please enter your comment!
Please enter your name here