October 23, 2020
ವರುಣಾರ್ಭಟಕ್ಕೆ ತತ್ತರಿಸಿದ ಬೆಂಗಳೂರು : ನದಿಯಂತಾದ ರಸ್ತೆ, ಕೊಚ್ಚಿ ಹೋದ ಕಾರು.!!

ಬೆಳಗ್ಗೆಯಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಇಡೀ ಬೆಂಗಳೂರು ಬಸವಳಿದಿದೆ. ನಗರದ ಹಲವೆಡೆ ರಸ್ತೆ ಜಲಾವೃತಗೊಂಡಿದ್ದು ಜನ ಓಡಾಟ ಹಾಗೂ ವಾಹನ ಸಂಚಾರ ಕಡಿಮೆ ಇತ್ತು. ಗಾಳಿ, ಗುಡುಗು ಸಮೇತ ಬಿದ್ದ ಮಳೆಗೆ ಹಲವು ರಸ್ತೆಗಳು ಮುಚ್ಚಿ ಹೋಗಿದ್ದವು.
ಮುಖ್ಯವಾಗಿ, ಲಾಲ್ ಬಾಗ್ ರಸ್ತೆಯಲ್ಲಿರುವ ಹಳೆಯ ಪಾಸ್ ಪೋರ್ಟ್ ಆಫೀಸ್ ಹಿಂಭಾಗದಲ್ಲಿನ ಕಟ್ಟಡಗಳಿಗೆ ನೀರು ನುಗ್ಗಿ ತೊರೆಯಂತೆ ಹರಿಯುತ್ತಿತ್ತು. ಕೋರಮಂಗಲದ ನಾಲ್ಕನೇ ಹಂತದ ಬಡಾವಣೆಯಲ್ಲಿ ಒಂದು ಫೀಟಿನಷ್ಟು ನೀರು ನಿಂತು ಸ್ಥಳೀಯರು ಪರದಾಡಿ ಹೋದರು.
ಇನ್ನು ಹೊಸಕೆರೆಹಳ್ಳಿ ಮುಖ್ಯ ರಸ್ತೆ ಹಾಗೂ ನೈಸ್ ರಸ್ತೆಯ ಮಧ್ಯದಲ್ಲಿ ಹಾದು ಹೋಗುವ ರಾಜಕಾಲುವೆ ತುಂಬಿ ನೀರು ರಸ್ತೆಗೆ ಧಾವಿಸಿದ್ದು, ಈ ವೇಳೆ ಕೆಂಪು ಬಣ್ಣದ ಸ್ವಿಫ್ಟ್ ಕಾರೊಂದು ಕೊಚ್ಚಿ ಹೋಗುವ ದೃಶ್ಯ ಸ್ಥಳೀಯರ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದೆ.
ಹೀಗೆ ನಗರದ ಹಲವೆಡೆ ಮಳೆಯ ಆರ್ಭಟಕ್ಕೆ ಸಿಲಿಕಾನ್ ವ್ಯಾಲಿ ಕಂಗೆಟ್ಟಿದೆ. ಹಲವು ಸ್ಲಂಗಳಿಗೆ ನೀರು ನುಗ್ಗಿ ಜನರ ಬದುಕು ಅಡ್ಡಗತ್ತರಿಗೆ ಬಿದ್ದಿದೆ. ಹವಾಮನಾ ಇಲಾಖೆಯ ಪ್ರಕಾರ ಇನ್ನೂ ಎರಡ್ಮೂರು ದಿನಗಳ ಕಾಲ ಇದೇ ರೀತಿಯ ಮಳೆ ಮುಂದುವರೆಯಲ್ಲಿದ್ದು, ಜನರು ಎಚ್ಚರಿಕೆಯಿಂದರಲು ನಿರ್ದೇಶಕರು ತಿಳಿಸಿದ್ದಾರೆ.

