ಲೋಕಸಭಾಚುನಾವಣೆ-2019: ಹಬ್ಬವಲ್ಲ; ಇದು ಜನಗಳ ಸಾವು ಬದುಕಿನ ಪ್ರಶ್ನೆ

0
148

-ಜಿ.ರಾಜಶೇಖರ್

ಮಾಧ್ಯಮಗಳ ಬಾಯಿ ಬಡುಕಲು ಮತ್ತು ಸರಕಾರೀ ಅಧಿಕಾರಿಗಳು ಕಳೆದ ಹಲವು ದಿನಗಳಿಂದ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಎಂದು ಒಂದೇ ಸಮನೆ ಬೊಬ್ಬೆ ಹಾಕುತ್ತಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸುವುದು ಪ್ರಜೆಗಳ ಹಕ್ಕು; ಹಾಗೆಯೇ ಮತ ಚಲಾಯಿಸದೆ ತಟಸ್ಥನಾಗಿರುವುದು ಸಹ ಪ್ರಜೆಗಳ ಹಕ್ಕು. ಆದರೆ ಮತದಾನ ಒಂದು ಹಬ್ಬವೆಂದು ಭಾವಿಸಿ ಸಂಭ್ರಮಿಸುವುದು, ಈ ದೇಶದಲ್ಲಿ, ಈ ಕಾಲದಲ್ಲಿ, ಹೊಟ್ಟೆ ಬಟ್ಟೆಯ ಚಿಂತೆ ಇಲ್ಲದೆ ನೆಮ್ಮದಿಯಾಗಿರುವರಿಗಷ್ಟೇ ಸಾಧ್ಯ. ಭಾರತದ ಹಾಲೀ ಪ್ರಜಾಪ್ರಭುತ್ವ ವ್ಯವಸ್ಥೆಯ ವಕ್ತಾರರು ಮತ್ತು ಧ್ವನಿವರ್ಧಕದ ಹಾಗೆ ವರ್ತಿಸುತ್ತಿರುವ ನೌಕರಶಾಹಿ ಮತ್ತು ಮಾಧ್ಯಮಗಳು ಮತದಾನ ಎಂಬ ಸೋಕಾಲ್ಡ್ ಹಬ್ಬದ ಬಗ್ಗೆ ಎಷ್ಟೇ ಡಂಗುರ ಭಾರಿಸಿದರೂ, ಈ ದೇಶದ ಬಹುತೇಕ ಪ್ರಜೆಗಳು-ಅದರಲ್ಲೂ ಕಡುಬಡವರು, ದಲಿತರು, ಮುಸ್ಲಿಮರು, ಕ್ರೈಸ್ತರು, ನಿರುದ್ಯೋಗಿಗಳು ಮುಂತಾದವರಿಗೆ ಹಾಲೀ ಚುನಾವಣೆ ನಿಜಕ್ಕೂ ಸಾವು ಬದುಕಿನ ಸವಾಲು.

ಈ ಚುನಾವಣೆಯನ್ನು ಹಬ್ಬ ಎಂದು ಕರೆದ ಮಹಾನುಭಾವರಲ್ಲಿ ಪ್ರಾಯಶಃ ಈ ದೇಶದ ಪ್ರಧಾನಮಂತ್ರಿಯವರೇ ಮೊದಲಿಗರು. ಅವರಿಗೆ ಮತ್ತು ಅವರು ನಿಷ್ಠೆಯಿಂದ ನಡೆದುಕೊಳ್ಳುವ ಆರೆಸ್ಸೆಸ್‌ನ ಸಂಘಪರಿವಾರಕ್ಕೆ ಈ ಚುನಾವಣೆ ನಿಜಕ್ಕೂ ಹಬ್ಬ. ಈ ಹಬ್ಬದ ಪಾರುಪತ್ಯ, ಮೇಜವಾನಿ, ಹಣಕಾಸಿನ ವಿಲೇವಾರಿ, ಪ್ರಚಾರ ವ್ಯವಸ್ಥೆ ಎಲ್ಲವೂ ಪ್ರಜಾಪ್ರಭುತ್ವದ ನಿಯಮಗಳ ಬದಲು ಸಂಘಪರಿವಾರದ ದೊಣ್ಣೆ ನಾಯಕರ ಉಸ್ತುವಾರಿಯಲ್ಲಿ ನಡೆಯುತ್ತದೆ. ಹೇಗಿದ್ದರೂ, ಈ ಚುನಾವಣೆಯಲ್ಲಿ ಮತ್ತೆ ಬಹುಮತ ಪಡೆದು, ಅಧಿಕಾರವನ್ನು ಮತ್ತೊಂದು ಅವಧಿಯವರೆಗೆ ಅಷ್ಟೇ ಅಲ್ಲ, ಶಾಶ್ವತವಾಗಿ ತಾವೇ ನಿರ್ವಹಿಸುವಂತಾಗಬೇಕು ಎಂಬುದು ಅವರ ಮಹದಾಕಾಂಕ್ಷೆ. ಹಾಗಾಗಿ ಈ ಚುನಾವಣೆ, ಒಂದು ಹಬ್ಬ ಎಂದು ಪ್ರಧಾನಮಂತ್ರಿಯವರು ಭಾವಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಅವರು ಮತ್ತು ಸಂಘಪರಿವಾರದ ಅವರ ಹೈನಾತಿಗಳಿಗೆ ಈ ಚುನಾವಣೆ ಸಂಭ್ರಮಿಸುವ ಹಬ್ಬವಾದರೆ, ದೇಶದ ಸಾಮಾನ್ಯ ಪ್ರಜೆಗಳ ಮಟ್ಟಿಗೆ ಇದು ಯಾವ ಸಡಗರವೂ ಇಲ್ಲದ ಮಾರಿಹಬ್ಬ. ಯಾಕೆಂದರೆ ಅವರೇ ಈ ಹಬ್ಬದಲ್ಲಿ ಬಲಿಯಾಗುವವರು ಪ್ರಜಾಪ್ರಭುತ್ವ ಮತ್ತು ಚುನಾವಣೆ-ಎರಡೂ ಈ ದೇಶದ ಜನ ಸಾಮಾನ್ಯರ ಮಟ್ಟಿಗೆ ಒಂದು ವಿಕಟ ನಾಟಕ ಎಂಬ ವಸ್ತುಸ್ಥಿತಿಯನ್ನು ಮರೆಮಾಚಲು ನಮ್ಮ ಮಾಧ್ಯಮಗಳು ಮತದಾನ ಒಂದು ಹಬ್ಬವೆಂಬ ಈ ಹಸಿ ಸುಳ್ಳನ್ನು ಪ್ರಚಾರ ಮಾಡುತ್ತಿವೆ. ಇದುವರೆಗೆ ಭಾರತದ ದಶ್ಯ ಮತ್ತು ಮುದ್ರಣ ಮಾಧ್ಯಮಗಳು ಚುನಾವಣೆ, ಒಂದು ಆಟ ಮತ್ತು ಯುದ್ಧವೆಂಬಂತೆ, ಸೋಲು-ಗೆಲುವುಗಳ ಪರಿಭಾಷೆಯನ್ನು ಬಳಸುತ್ತಿದ್ದವು. ಆಟ ಮತ್ತು ಯುದ್ಧ ಎರಡರಲ್ಲೂ ಸ್ಪಷ್ಟವಾದ ಫಲಿತಾಂಶವಿರುತ್ತದೆ.

ಗೆಲುವು ಅಥವಾ ಸೋಲು:
ಚುನಾವಣೆಯಲ್ಲಿ ಗೆಲುವು ಮತ್ತು ಸೋಲು ಈ ಪದ ಪ್ರಯೋಗಕ್ಕೆ ಏನಾದರೂ ಅರ್ಥವಿದೆಯಾ? ತನ್ನ ಎದುರಾಳಿಗಿಂತ ಕಡಿಮೆ ಮತ ಪಡೆಯುವ ಹುರಿಯಾಳು ಜನಪ್ರತಿನಿಧಿ ಆಗಲಾರ ನಿಜ. ಆದರೆ ಚುನಾವಣೆಯಲ್ಲಿ ಅವನು ‘‘ಸೋಲುಂಡ, ಮಣ್ಣು ಮುಕ್ಕಿದ, ನೆಲಕಚ್ಚಿದ’’ ಇತ್ಯಾದಿ ಹೇಳಿಕೆಗಳನ್ನು ನಾವು ಹೇಗೆ ಅರ್ಥೈಸಬೇಕು? ಯಾರ ಎದುರು ಅವನ ಸೋಲು? ಅವನ ಸೋಲು ಪ್ರಜೆಗಳ ಸೋಲು ಕೂಡ ಆಗಬಹುದಲ್ಲವೆ? ಕುದುರೆ ಪಂದ್ಯದಲ್ಲಿ ಗೆಲ್ಲುವ ಮತ್ತು ಸೋಲುವ ಕುದುರೆಗಳಿರುವಂತೆ ಚುನಾವಣೆಗಳಲ್ಲೂ ಗೆಲ್ಲುವ ಮತ್ತು ಸೋಲುವ ಕುದುರೆಗಳಿರುತ್ತವೆಯೇ? ಮಾಧ್ಯಮಗಳು ಈ ಸೂಕ್ಷ್ಮಗಳ ಬಗ್ಗೆ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ಯುದ್ಧ, ಕೊಲೆ, ಕ್ಷಾಮ, ಸಾಂಕ್ರಾಮಿಕ ರೋಗ, ಅತ್ಯಾಚಾರ-ಹೀಗೆ ಯಾವುದೇ ದುರಂತವನ್ನೂ ಸಹ ಮನರಂಜನೆಯ ಸರಕನ್ನಾಗಿ ಪರಿವರ್ತಿಸುವುದರಲ್ಲಿ ಪರಿಣತಿ ಹೊಂದಿರುವ ನಮ್ಮ ಮಾಧ್ಯಮಗಳು ತಮ್ಮ ಲಾಭಕ್ಕೋಸ್ಕರ ಅಪ್ಪಟ ಸುಳ್ಳುಗಳನ್ನು ಸಹ ಎಗ್ಗಿಲ್ಲದೆ ಹೇಳಿ ಬಿಡುತ್ತದೆ. ಹಾಲೀ ಲೋಕಸಭಾ ಚುನಾವಣೆ ಕುರಿತು ಅವು ಈಗ ದೇಶದಲ್ಲಿ ಹುಟ್ಟು ಹಾಕಿರುವ ಹುಸಿ ರೋಚಕತೆ ಕೂಡ, ಅವುಗಳ ಸೇಲ್ಸ್‌ಮನ್‌ಶಿಪ್‌ಗೆ ಒಳ್ಳೆಯ ಉದಾಹರಣೆಯಾಗಬಹುದು. ಅದು ಹೇಗೇ ಇರಲಿ, ಈ ದೇಶದ ಸಾಮಾನ್ಯ ಜನರ ಮಟ್ಟಿಗೆ ಚುನಾವಣೆ ಕ್ರೀಡೆಯೂ ಅಲ್ಲ; ಹಬ್ಬವೂ ಅಲ್ಲ. ಅದು ಯುದ್ಧವೇ ಆದರೆ, ಅದರಲ್ಲಿ ಸೋಲುವುದು ಮಾತ್ರ ಜನಗಳೇ.

ಈ ಹಿನ್ನೆಲೆಯಲ್ಲಿ 2019ರ ಲೋಕಸಭಾ ಚುನಾವಣೆಗಳನ್ನು ಹಬ್ಬ ಅಥವಾ ಕ್ರೀಡೆ ಎನ್ನುವುದಕ್ಕಿಂತ, ಮತದಾರರ ಅಗ್ನಿ ಪರೀಕ್ಷೆ ಮತ್ತು ಪ್ರಜಾಪ್ರಭುತ್ವದ ಉತ್ತರ ಕ್ರಿಯೆ ಎಂದು ಭಾವಿಸುವುದೇ ಹೆಚ್ಚು ಸೂಕ್ತವಾದದ್ದು. 2014ರ ಲೋಕಸಭಾ ಚುನಾವಣೆ ಮೂಲಕ ಅಧಿಕಾರಕ್ಕೇರಿದ ಬಿಜೆಪಿ ನೇತತ್ವದ ಎನ್‌ಡಿಎ ಸರಕಾರದ ಆಳ್ವಿಕೆಯಲ್ಲಿ ನಡೆದ ಕೆಲವು ಕರಾಳ ಘಟನೆಗಳಿಂದಾಗಿ ದಲಿತರು ಮತ್ತು ಅಲ್ಪಸಂಖ್ಯಾತರು ಕಂಗೆಟ್ಟಿದ್ದಾರೆ. ಈ ಸಮುದಾಯಗಳಿಗೆ ಎನ್‌ಡಿಎ ಸರಕಾರ ಮತ್ತು ಈ ಸರಕಾರದ ಮೇಲೆ ರಿಮೋಟ್ ಕಂಟ್ರೋಲ್ ಮುಖಾಂತರ ತನ್ನ ಹುಕುಂ ಚಲಾಯಿಸುತ್ತಿದ್ದ ಸಂಘಪರಿವಾರ, ಒಂದು ಭೀಕರ ದುಃಸ್ವಪ್ನವಾಗಿ ಈಗಲೂ ಕಾಡುತ್ತಿದೆ. ಸಂಘಪರಿವಾರದ ದಾಂಧಲೆ, ದಾದಾಗಿರಿಗಳ ಶಾಕ್‌ನಿಂದ ದಲಿತರು ಮತ್ತು ಮುಸ್ಲಿಮರು ಇನ್ನೂ ಹೊರ ಬಂದಿಲ್ಲ. 56 ಸುತ್ತಳತೆಯ ಎದೆಯ ಹುರಿಯಾಳು, ದೇಶದ ಚೌಕಿದಾರ ಎಂದೆಲ್ಲ ತನ್ನ ಬಗ್ಗೆ ಹೆಗ್ಗಳಿಕೆ ಹೇಳಿಕೊಳ್ಳುವ ನಮ್ಮ ಹಾಲಿ ಪ್ರಧಾನಮಂತ್ರಿ, 2014ಕ್ಕಿಂತ ಮೊದಲು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದರು. ಅವರ ಅಧಿಕಾರಾವಧಿಯಲ್ಲೇ ಗುಜರಾತ್-2002 ಸಂಭವಿಸಿತು. 2002ರ ಮಾರ್ಚ್ ತಿಂಗಳಿನಿಂದ ಹಿಡಿದು ಮುಂದಿನ ಹಲವು ತಿಂಗಳುಗಳ ಕಾಲ ಆ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ದೇಶದ ಸಂವಿಧಾನ, ಕಾನೂನಿನ ಆಳ್ವಿಕೆ, ಕಾನೂನಿನ ಎದುರು ಎಲ್ಲ ಪ್ರಜೆಗಳೂ ಸಮಾನರು ಎಂಬ ತತ್ವದ ಪಾಲನೆ ಮುಂತಾದ ಪ್ರಜಾಸತ್ತಾತ್ಮಕ ವೌಲ್ಯಗಳೆಲ್ಲ ಗೈರು ಹಾಜರಾಗಿದ್ದವು. ಮುಖ್ಯಮಂತ್ರಿ, ತನ್ನ ರಾಜ್ಯದ ಪ್ರಜೆಗಳು ಸೊತ್ತು ಮತ್ತು ಜೀವಗಳನ್ನು ರಕ್ಷಿಸುವ ಕನಿಷ್ಠ ಸಂವಿಧಾನಾತ್ಮಕ ಕರ್ತವ್ಯವನ್ನು ಸಹ ನಿರ್ವಹಿಸಲಿಲ್ಲ. ಇಷ್ಟಾಗಿಯೂ ಅವರು ಒಬ್ಬ ದಕ್ಷ ಆಡಳಿತಗಾರ ಎಂದು ಮಾಧ್ಯಮಗಳು ಈಗಲೂ ಪ್ರಧಾನಮಂತ್ರಿಯವರನ್ನು ಹೊಗಳುತ್ತವೆ. ದಕ್ಷ ಕೊಲೆಗಡುಕ ಎಂದು ಕರೆದಿದ್ದರೆ ಅದು ಅವರಿಗೆ ಹೆಚ್ಚು ಒಪ್ಪುತ್ತಿತ್ತು!

2014ರ ಲೋಕಸಭಾ ಚುನಾವಣೆಗಳ ನಂತರ, ಗುಜರಾತ್‌ನ ಮಾಜಿ ಮುಖ್ಯಮಂತ್ರಿ, ದೇಶದ ಪ್ರಧಾನಮಂತ್ರಿಯಾಗಿ ಆಡಳಿತ ನಿರ್ವಹಿಸಿದ ಕಳೆದ 5 ವರ್ಷಗಳು ಸ್ವಾತಂತ್ರೋತ್ತರ ಭಾರತದ ಅತ್ಯಂತ ಕರಾಳ ಕಾಲ. ಫ್ಯಾಶಿಸಂನತ್ತ ಚಲಿಸತೊಡಗಿದ್ದೇ ಈ ಕಾಲಘಟ್ಟದ ಪ್ರಮುಖ ವಿದ್ಯಮಾನ ಎಂದು ಖ್ಯಾತ ಚಿಂತಕ ಪ್ರಭಾತ್ ಪಟ್ನಾಯಕ್ ಹೇಳುತ್ತಾರೆ. ಇತ್ತೀಚೆಗೆ ಬಿಜೆಪಿಯ ವಯೋವದ್ಧ ಮುಂದಾಳು ಎಲ್.ಕೆ.ಅಡ್ವಾನಿ, ‘‘ತನ್ನ ರಾಜಕೀಯ ಧೋರಣೆಗಳ ಕುರಿತು ಭಿನ್ನಮತವಿರುವರು ದೇಶದ ವೈರಿಗಳು ಎಂದು ಭಾವಿಸುವುದು ಬಿಜೆಪಿ ಸಂಸ್ಕೃತಿಯಲ್ಲ’’ ಎಂದು ವಾದಿಸಿದರು. ಪ್ರಾಯಶಃ ‘‘ಬಿಜೆಪಿ ಎಂದರೆ ಭಾರತ, ಭಾರತವೆಂದರೆ ಬಿಜೆಪಿ’’ ಎಂದು ಭಾವಿಸುವ ಹಲವು ಬಿಜೆಪಿ ನಾಯಕರನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅಡ್ವಾಣಿಯವರು ಈ ಮಾತು ಹೇಳಿರಬೇಕು. ಒಂದಾನೊಂದು ಕಾಲದಲ್ಲಿ ಅಂದರೆ ಪಕ್ಷ ತನ್ನ ಹಿಡಿತದಲ್ಲಿ ಇದ್ದಾಗ ಪ್ರಜಾಸತ್ತಾತ್ಮಕವಾಗಿತ್ತು; ಈಗ ಪಕ್ಷ ಬೇರೆಯವರ ನಾಯಕತ್ವದಲ್ಲಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂಬುದು ಪ್ರಾಯಶಃ ಅಡ್ವಾಣಿ ಅವರ ಮಾತಿನ ಒಳ ಅರ್ಥ.

ಅದು ಏನೇ ಇರಲಿ, ಬಿಜೆಪಿ ಈಗ ಪಡೆದುಕೊಂಡಿರುವ ಫ್ಯಾಶಿಸ್ಟ್ ಸ್ವರೂಪಕ್ಕೂ, ಅಡ್ವಾಣಿಯವರು ಹೇಳುವ ನೈಜ ಬಿಜೆಪಿಗೂ ಯಾವ ಸಂಬಂಧವೂ ಇಲ್ಲವೆ? ಹಾಲೀ ಕೇಂದ್ರ ಸರಕಾರದ ಆಳ್ವಿಕೆಯ ಅವಧಿಯಲ್ಲಿ ಸಂಭವಿಸಿದ ದುರ್ಘಟನೆಗಳ ಮನೋಧರ್ಮ ಮತ್ತು ಭೂಮಿಕೆ ಅಡ್ವಾಣಿಯವರ ಕಾಲದಲ್ಲೇ ರೂಪುಗೊಂಡದ್ದಲ್ಲವೇ? ಉದಾಹರಣೆಗೆ ಕಳೆದ 5 ವರ್ಷಗಳಲ್ಲಿ ದೇಶದ ಎಲ್ಲೆಡೆ ಅಸಹಾಯಕ ಹಾಗೂ ಅಮಾಯಕ ಪ್ರಜೆಗಳ ಮೇಲೆ ನಡೆದ ಸಾಮೂಹಿಕ ಹಲ್ಲೆಗಳು, ಹೊಡಿ-ಬಡಿ ತಂಡಗಳ ಗುಂಪುಹಿಂಸೆ, ಉತ್ತರಪ್ರದೇಶದ ಹಳ್ಳಿಯೊಂದರಲ್ಲಿ ಮುಸ್ಲಿಮ್ ಗ್ರಹಸ್ಥರೊಬ್ಬರ ಮನೆಯಲ್ಲಿ ಗೋಮಾಂಸವಿದೆ ಎಂಬ ಸುಳ್ಳು ಆರೋಪದ ಮೇಲೆ ಅವರ ಹಳ್ಳಿಯವರೇ ಗುಂಪು ದಾಳಿ ನಡೆಸಿ, ಆ ಗ್ರಹಸ್ಥರನ್ನು ಹೊಡೆದು ಕೊಂದದ್ದು, ತನ್ನ ಹೈನು ಉದ್ಯಮಕ್ಕಾಗಿ ಜಾನುವಾರು ಸಾಗಿಸುತ್ತಿದ್ದ ಬಡಪಾಯಿಯೊಬ್ಬರನ್ನು ರಾಜಸ್ಥಾನ-ಹರ್ಯಾಣ ಹೆದ್ದಾರಿಯಲ್ಲಿ ಗೋಸಂರಕ್ಷಕರ ಗುಂಪು ಹಲ್ಲೆ ನಡೆಸಿ ಕೊಂದು ಹಾಕಿದ್ದು, ಗುಜರಾತ್‌ನ ಊನಾ ಎಂಬಲ್ಲಿ ಸತ್ತ ಜಾನುವಾರುಗಳ ಚರ್ಮ ಸುಲಿಯುತ್ತಿದ್ದ ದಲಿತ ಯುವಕರ ಮೇಲೆ ನಡೆದ ಅಮಾನುಷ ಹಲ್ಲೆ, ದೆಹಲಿಯ ಹೊರ ವಲಯದಲ್ಲಿ ಸಂಚರಿಸುತ್ತಿದ್ದ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ ಹದಿಹರೆಯದ ಹುಡುಗನೊಬ್ಬ ಮುಸ್ಲಿಮ್ ಎಂಬುದನ್ನು ಅವನ ಟೊಪ್ಪಿಗೆಯಿಂದಲೇ ಕಂಡುಹಿಡಿದು, ಅದೊಂದೇ ಕಾರಣಕ್ಕೆ ಅವನನ್ನು ಹಣ್ಣು ಕತ್ತರಿಸುವ ಚಾಕುವಿನಲ್ಲಿ ಗುರುತು ಪರಿಚಯವೂ ಇಲ್ಲದ ಅವನ ಸಹ ಪ್ರಯಾಣಿಕರು ಇರಿದು ಕೊಲೆ ಮಾಡಿದ್ದು, ಜಮ್ಮುವಿನ ಕಥುವಾ ಎಂಬಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮುಸ್ಲಿಮಳು ಎಂಬ ಕಾರಣಕ್ಕೆ ಅವಳ ಮೇಲೆ ನಡೆಸಿದ ಸಾಮೂಹಿಕ ಅತ್ಯಾಚಾರ ಹಾಗೂ ದೇಶಾದ್ಯಂತ ಸಂಭವಿಸಿದ ಇಂತಹ ನೂರಾರು ಹಿಂಸಾ ಕತ್ಯಗಳಲ್ಲಿ ಯಾವುದೂ ತನ್ನಷ್ಟಕ್ಕೆ ತಾನು ಆಕಸ್ಮಿಕವಾಗಿ ಎಂಬಂತೆ ಸಂಭವಿಸಿದ್ದಲ್ಲ. ಅವೆಲ್ಲವೂ ಪೂರ್ವಯೋಜಿತವಾದ ಸುಸಂಘಟಿತ ಕಾರ್ಯಾಚರಣೆಗಳು. ಅದರಲ್ಲಿ ಭಾಗವಹಿಸಿದವರು ವೈಯಕ್ತಿಕವಾಗಿ ಒಳ್ಳೆಯವರೋ ಕೆಟ್ಟವರೋ ಎಂಬ ಪ್ರಶ್ನೆಯೇ ಅಪ್ರಸ್ತುತ. ಯಾಕೆಂದರೆ ಈ ಎಲ್ಲ ಕರಾಳ ಕತ್ಯಗಳು ಹಿಂದುತ್ವ ಸಿದ್ಧಾಂತದ ಕಾರಣಕ್ಕಾಗಿ ಮತ್ತು ಅದರ ಪ್ರೇರಣೆಯಿಂದಲೇ ಸಂಭವಿಸಿರುವಂತಹವು. ಹಾಗಾಗಿ ಈ ಮುಖಹೀನ ಹಿಂಸೆಗೆ ಯಾರೂ ಉತ್ತರದಾಯಿಯಲ್ಲ. ಯಾರಿಗೂ ಶಿಕ್ಷೆಯೂ ಆಗುವುದಿಲ್ಲ. ಹೇಳಿ ಕೇಳಿ ಬಿಜೆಪಿ ಒಂದು ಹಿಂದುತ್ವವಾದಿ ಪಕ್ಷ. ಹಿಂದೂ ರಾಷ್ಟ್ರವೇ ಅದರ ರಾಜಕೀಯ ಆದರ್ಶ.

ಹಿಂದುಗಳು, ಮುಸ್ಲಿಮರು, ಕ್ರೈಸ್ತರು ಮತ್ತು ಇತರ ಎಲ್ಲ ಮತಧರ್ಮ, ಜಾತಿಪಂಥಗಳಿಗೂ ಸಮಾನರಾಗಿ ಬದುಕುವ ಸೆಕ್ಯುಲರ್ ಪ್ರಜಾಪ್ರಭುತ್ವದ ಪರಿಕಲ್ಪನೆಯ ಬಗ್ಗೆ ಬಿಜೆಪಿಗೆ ತಿರಸ್ಕಾರವಿದೆ. ಹಾಗಾಗಿ ಭಾರತದ ಸಂವಿಧಾನ ಕೂಡಾ ಅವರಿಗೆ ಪವಿತ್ರವಲ್ಲ. ಅಧಿಕಾರವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಂಡ ತಕ್ಷಣ ಮೊದಲು ಅವರು ಮಾಡುವ ಕೆಲಸವೆಂದರೆ ಈ ಸೆಕ್ಯುಲರ್ ಸಂವಿಧಾನದಲ್ಲಿ ತಮಗೆ ಅಗತ್ಯವಾದ ತಿದ್ದುಪಡಿಗಳನ್ನು ತರುವುದು ಮತ್ತು ಭಾರತವನ್ನು ಹಿಂದು ರಾಷ್ಟ್ರವನ್ನಾಗಿ ಮಾರ್ಪಡಿಸುವುದು.

ಕಳೆದ 5 ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ರಾಷ್ಟ್ರಪ್ರೇಮ, ರಾಷ್ಟ್ರವಾದ, ಹಿಂದೂ ಧರ್ಮ ಮತ್ತು ಹಿಂದುತ್ವ ಇವುಗಳ ನಡುವೆ ವ್ಯತ್ಯಾಸವೇ ಇಲ್ಲ ಎಂದು ಸಂಘಪರಿವಾರದ ಪ್ರಚಾರಕರು ಎಲ್ಲೆಡೆ ಪ್ರತಿಪಾದಿಸುತ್ತಿದ್ದಾರೆ ಮತ್ತು ತಮ್ಮ ಈ ಸಿದ್ಧಾಂತವನ್ನು ಜನರ ಮೇಲೆ ಹೇರಿಬಿಟ್ಟಿದ್ದಾರೆ. ಮಾಧ್ಯಮಗಳನ್ನೂ ಬೆದರಿಕೆ ಮತ್ತು ಆಮಿಷಗಳ ಮುಖಾಂತರ ತಮ್ಮ ಬಿಗಿ ಮುಷ್ಟಿಯಲ್ಲಿ ಇರಿಸಿಕೊಂಡಿದ್ದಾರೆ. ಹೀಗಾಗಿ ಈ ದೇಶದ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಮರು ಈ ದೇಶದ ಬಹುಸಂಖ್ಯಾತ ಹಿಂದೂಗಳಿಗೆ ಕೇವಲ ಹಿಂದೂಯೇತರರಷ್ಟೆ ಅಲ್ಲ. ಅವರು ಪರಕೀಯರು, ಹೊರಗಿನವರು ಮತ್ತು ಅನ್ಯರು ಮತ್ತು ಅನ್ಯಮತೀಯರು, ಅವರು ನಮ್ಮವರಲ್ಲ, ನಮ್ಮ ಶತ್ರುಗಳು ಎಂದು ವ್ಯಾಪಕವಾಗಿ ಜನರನ್ನು ನಂಬಿಸುವುದು ಸಂಘಪರಿವಾರಕ್ಕೆ ಸಾಧ್ಯವಾಗಿದೆ. ಸಂಘಪರಿವಾರದ ಈ ಕಾರ್ಯಾಚರಣೆಗೆ ಬಗ್ಗು ಎಂದರೆ ಸಾಷ್ಟಾಂಗ ಡೈವ್ ಹೊಡೆದು ತೆವಳಲು ಸಿದ್ಧವಾಗಿರುವ ನಮ್ಮ ಮಾಧ್ಯಮಗಳ ಸಂಪೂರ್ಣ ಸಹಕಾರವಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಈ ದೇಶದ ಸಾಮಾನ್ಯ ಪ್ರಜೆಗಳಿಗೆ, ಹಾಲೀ ಚುನಾವಣೆಗಳಲ್ಲಿ ದೇಶದ ಯಾವುದೇ ಲೋಕಸಭಾ ಕ್ಷೇತ್ರದಲ್ಲಾದರೂ ಆಯ್ಕೆಯ ಸ್ವಾತಂತ್ರವಿದೆಯೆ? ಒಂದೆಡೆ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಎಗ್ಗಿಲ್ಲದ ಕೋಮು ದ್ವೇಷದ ಹಿಂದುತ್ವ, ಇನ್ನೊಂದೆಡೆ ಬಿಜೆಪಿಯವರ ದಾಳಿ ಪಕ್ಷಗಳ ಮದು ಹಿಂದುತ್ವ- ಇವೆರಡರ ನಡುವೆ ಮುಸ್ಲಿಮ್ ಮತದಾರರು ಯಾವುದನ್ನು ಆಯ್ಕೆ ಮಾಡಬೇಕು? ಬಿಜೆಪಿ ಮತ್ತು ಸಂಘಪರಿವಾರ ಈ ಪ್ರಮಾಣದಲ್ಲಿ ಬೆಳೆದು ನಿಂತದ್ದು ಕೂಡ ದೇಶವನ್ನು ಇಷ್ಟು ವರ್ಷ ಆಳಿದ ಕಾಂಗ್ರೆಸ್‌ನ ಪ್ರತ್ಯಕ್ಷ ಮತ್ತು ಪರೋಕ್ಷ ಬೆಂಬಲದಿಂದಲೇ ಎಂಬ ವಾಸ್ತವವನ್ನು ನಾವು ಮರೆಯಕೂಡದು. ಮುಸ್ಲಿಮ್ ಸಮುದಾಯದ ಬಗ್ಗೆ ಬಿಜೆಪಿ ಮತ್ತು ಅದರ ಪ್ರಮುಖ ಪ್ರತಿಪಕ್ಷಗಳೆಲ್ಲದರ ಯೋಚನಾಕ್ರಮ ಒಂದೇ ಬಗೆಯದ್ದು. ಈ ದೇಶದ ಮುಸ್ಲಿಮರಿಗೆ ಅವರ ಧರ್ಮ, ಅವರ ಮಸೀದಿ ಮತ್ತು ದಿನಕ್ಕೆ 5 ಹೊತ್ತಿನ ಅವರ ನಮಾಝ್, ಮುಸ್ಲಿಮ್ ಗಂಡಸರಿಗೆ ಗಡ್ಡ ಮತ್ತು ಟೊಪ್ಪಿಗೆ, ಮುಸ್ಲಿಮ್ ಹೆಂಗಸರಿಗೆ ಬುರ್ಖಾ ಇವನ್ನು ಹೊರತುಪಡಿಸಿ ಬೇರೆ ವ್ಯಕ್ತಿತ್ವವೇ ಇಲ್ಲ.

ದೇಶದ ಮುಸ್ಲಿಮೇತರ ಪ್ರಜೆಗಳನ್ನು ಸದಾ ಕಾಡುವ ಹಸಿವು, ನಿರುದ್ಯೋಗ, ಮಕ್ಕಳ ವಿದ್ಯಾಭ್ಯಾಸ ಮತ್ತು ಮದುವೆ ಯಾವ ಸಮಸ್ಯೆಯೂ ಮುಸ್ಲಿಮರಿಗೆ ಇಲ್ಲವೇ ಇಲ್ಲ.ಸಂಸಾರವಂದಿಗ ದಿನನಿತ್ಯದ ಯಾವ ಚಿಂತೆಯೂ ಮುಸ್ಲಿಮರಿಗೆ ತಲೆದೋರುವುದಿಲ್ಲ. ಯಾಕೆಂದರೆ ಅವರು ಮುಸ್ಲಿಮರು. ‘‘ನಮ್ಮ ಹಾಗಲ್ಲ’’. ಅವರು ‘‘ಅನ್ಯರು’’. ಈ ಯೋಚನಾಕ್ರಮ ಇವತ್ತು ದೇಶದ ಗಣನೀಯ ಸಂಖ್ಯೆಯ ಪ್ರಜೆಗಳದ್ದು ಮಾತ್ರವಲ್ಲ. ಮುಸ್ಲಿಮ್ ಸಮುದಾಯದ ಕುರಿತು ನಮ್ಮ ಬಹುತೇಕ ರಾಜಕೀಯ ಪಕ್ಷಗಳಿಗೂ ಕೂಡ ಇದೇ ಬಗೆಯದ್ದು. ಮುಸ್ಲಿಮರು ಈ ದೇಶದ ಪ್ರಜೆಗಳಲ್ಲ. ಅವರು ಮನುಷ್ಯರೂ ಅಲ್ಲ. ಬಿಜೆಪಿಯ ರಾಷ್ಟ್ರಾಧ್ಯಕ್ಷರೇ ಮುಸ್ಲಿಮರನ್ನೂ ಪದೇ ಪದೇ ‘‘ಗೆದ್ದಲು ಹುಳುಗಳು’’ ಎಂದು ಕರೆದಿದ್ದಾರೆ. ಮುಸ್ಲಿಮರೆಲ್ಲ ಈ ದೇಶಕ್ಕೆ ಪರಕೀಯರು. ಅವರೆಲ್ಲರನ್ನೂ ಈ ದೇಶದಿಂದ ಹೊರಗಟ್ಟಬೇಕು ಎಂಬುದು ಅವರ ಮಾತಿನ ಇಂಗಿತಾರ್ಥ! ಆದರೆ ಬಿಜೆಪಿಯ ಪ್ರಮುಖ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮರು ಸದಾ ಒಂದು ವೋಟ್‌ಬ್ಯಾಂಕು. ಮುಸ್ಲಿಮರನ್ನು ವೋಟ್‌ಗಳ ಎಟಿಎಂ ಎಂದು ಭಾವಿಸುವ ಕಾಂಗ್ರೆಸ್ ಮತ್ತು ಗೆದ್ದಲುಹುಳುಗಳು ಎಂದು ದ್ವೇಷಿಸುವ ಬಿಜೆಪಿ ಎರಡು ಬಣದವರಿಗೂ ಮುಸ್ಲಿಮರು ಮನುಷ್ಯರೂ ಅಲ್ಲ; ಪ್ರಜೆಗಳೂ ಅಲ್ಲ. ನಿಜಕ್ಕೂ ಈ ಎರಡು ಪಕ್ಷಗಳ ನಡುವೆ ಮುಸ್ಲಿಮರಿಗೆ ಆಯ್ಕೆ ಇದೆಯೆ?

ಬಿಜೆಪಿ ನೇತತ್ವದ ಹಾಲಿ ಸರಕಾರ, ದೇಶದ ಕಾರ್ಪೊರೇಟ್ ಬಂಡವಾಳಶಾಹಿ ಮತ್ತು ಬಹುರಾಷ್ಟ್ರೀಯ ಕಂಪೆನಿಗಳು ಮಾತ್ರವಲ್ಲ, ಅಮೆರಿಕನ್ ಸಾಮ್ರಾಜ್ಯಶಾಹಿ ಮತ್ತು ಅದರ ಬಾಲಂಗೋಚಿಯ ಹಾಗಿರುವ ಇಸ್ರೇಲ್‌ನ ಜನಾಂಗ ದ್ವೇಷಿ ಪ್ರಭುತ್ವದ ಜೊತೆ ಸಹ ನಿಕಟ ಸ್ನೇಹದ ಸಂಬಂಧ ಹೊಂದಿದೆ. ಆದರೆ ಅದರಲ್ಲಿ ಹೊಸತೇನೂ ಇಲ್ಲ. ಹಾಲೀ ಸರಕಾರಕ್ಕಿಂತ ಮೊದಲಿನ ಕಾಂಗ್ರೆಸ್ ನೇತತ್ವದ ಯುಪಿಎ ಸರಕಾರದ ಧೋರಣೆಗಳನ್ನೇ ಈಗಿನ ಸರಕಾರವೂ ಮುಂದುವರಿಸಿಕೊಂಡು ಬಂದಿದೆ. ದೇಶದ ಸಾರ್ವಜನಿಕ ಆಸ್ತಿಯನ್ನು ಖಾಸಗಿ ಹಿತಾಸಕ್ತಿಗಳಿಗೆ ಪರಾಭಾರೆ ಮಾಡುವುದು, ಬಡ ರೈತರು, ಆದಿವಾಸಿಗಳು ಮತ್ತು ಇತರ ದಮನಿತ ಜನವರ್ಗಗಳ ಮತ್ತು ನೀರು ನೆಲ ಮುಂತಾದ ಸಂಪನ್ಮೂಲಗಳನ್ನು ಖಾಸಗಿ ಉದ್ಯಮಗಳಿಗೆ ವಹಿಸಿಕೊಡುವುದು ಮುಂತಾದ ಯುಪಿಎ ಸರಕಾರದ ಹಗಲು ದರೋಡೆಯ ‘‘ಆರ್ಥಿಕ ಸುಧಾರಣೆ’’ಗಳನ್ನೂ ಹಾಲೀ ಸರಕಾರವೂ ಮುಂದುವರಿಸಿಕೊಂಡು ಬಂದಿದೆ. ಈ ಸನ್ನಿವೇಶದಲ್ಲಿ 2019ರ ಚುನಾವಣೆ ‘‘ಉಳ್ಳವರಿಗೆ’’ ಹಬ್ಬವಾದರೆ ಸಾಮಾನ್ಯ ಪ್ರಜೆಗಳ ಮಟ್ಟಿಗೆ ಇದು ಕಾರ್ಕೊಟಿಕ್ ವಿಷ ಮತ್ತು ಸಯನೈಡ್ ನಡುವೆ ಅಥವಾ ಕುದಿಯುತ್ತಿರುವ ಎಣ್ಣೆ ಮತ್ತು ಉರಿಯುತ್ತಿರುವ ಬೆಂಕಿಗಳ ನಡುವೆ ಆಯ್ಕೆ. ಇದೂ ಒಂದು ಆಯ್ಕೆಯೇ?

 

 

LEAVE A REPLY

Please enter your comment!
Please enter your name here