ಲಾಕ್ ಡೌನ್ ಸಡಿಲಿಕೆ; ಬೆಂಗಳೂರಿನಲ್ಲಿ ವ್ಯಾಪಾರ ವಹಿವಾಟು ಚುರುಕು, 144 ಸೆಕ್ಷನ್ ವಿಸ್ತರಣೆ

Prasthutha: June 15, 2021

ಬೆಂಗಳೂರು; ಕೊರೊನಾ ಲಾಕ್​ಡೌನ್ ಸಡಿಲಿಸಿದ ಬೆನ್ನಲ್ಲೇ ನಗರ ಸೇರಿ ರಾಜ್ಯದ 20 ಜಿಲ್ಲೆಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡಿದ್ದು, ಕೈಗಾರಿಕೆಗಳ ಚಟುವಟಿಕೆ ಆರಂಭವಾಗಿರುವುದರಿಂದ ಜನಸಂದಣಿ ಕೂಡ ಹೆಚ್ಚಾಗಿದೆ.
ರಾಜ್ಯದಲ್ಲಿ ಸರ್ಕಾರ ಲಾಕ್​ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದ್ದರೂ ಕೂಡ ನಗರದಲ್ಲಿ ಜೂ 21ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಮುಂದುವರೆಯಲಿದೆ.


ನಗರದಲ್ಲಿ ಒಂದೆಡೆ 4ಕ್ಕಿಂತಲೂ ಹೆಚ್ಚು ಜನರು ಸೇರುವಂತಿಲ್ಲ ಎಂದು ತಿಳಿಸಲಾಗಿದೆ. ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ವಿಮಾನ ನಿಲ್ದಾಣಗಳಿಗೆ ತೆರಳುವವರಿಗೆ ವಿನಾಯಿತಿ ನೀಡಲಾಗಿದೆ. 
ನಗರದಲ್ಲಿ ಸೋಂಕು ಇಳಿಕೆಯಾಗುತ್ತಿದೆ. ಆದರೂ ನಾವು ಸಾಕಷ್ಟು ಎಚ್ಚರಿಕೆಗಳಿಂದ ಇರಬೇಕಿದೆ. ಸೋಂಕು ಹರಡದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಿಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ. 


ಜನತೆ ಗುಂಪಾಗಿ ಸೇರುವುದು ಮೆರವಣಿಗೆ ಪ್ರತಿಭಟನೆ ನಡೆಸುವುದು ಉತ್ಸವ ನಡೆಸುವುದನ್ನು ನಿಷೇಧಿಸಲಾಗಿದೆ.
ನಗರ ಪೊಲೀಸ್ ಆಯುಕ್ತರ ಆದೇಶ ಹಿನ್ನೆಲೆಯಲ್ಲಿ ಪೊಲೀಸರು ವಾಹನಗಳನ್ನು ತೀವ್ರ ತಪಾಸಣೆ ನಡೆಸಲಾಗುತ್ತಿದ್ದು ಜನರು ಗುಂಪು ಸೇರುವುದರ ಮೇಲೆ ನಿಗಾವಹಿಸಿದ್ದಾರೆ.
ನಗರದಲ್ಲಿ ಸಂಜೆ 7 ರಿಂದ ಬೆಳಿಗ್ಗೆ 5 ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದ್ದು ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
ರೋಗಿಗಳನ್ನು ಕರೆದೊಯ್ಯುವಾಗ ಸಂಬಂಧಪಟ್ಟವರಿಗೆ ಮಾತ್ರ ಅವಕಾಶವಿದ್ದು ಯಾವುದೇ ಕಂಪನಿ ಹಾಗೂ ಕೈಗಾರಿಕಾ ಉದ್ಯೋಗಿಗಳು ಪಾಸ್ ಹೊಂದಿರುವುದು ಕಡ್ಡಾಯವಾಗಿದೆ. ಟೆಲಿಕಾಂ ಹಾಗೂ ಇಂಟರ್ನೆಟ್ ಸರ್ವೀಸಸ್ ವರ್ಕರ್ಸ್ ತಮ್ಮ ಐಡಿಕಾರ್ಡ್ ಗಳನ್ನು ಹೊಂದಿರಲೇ ಬೇಕು ಮೆಡಿಕಲ್ ಎಮರ್ಜೆನ್ಸಿ ಹಾಗೂ ಅಗತ್ಯ ಸರಬರಾಜುವಾಹನಗಳಿಗೆ ಅವಕಾಶ ನೀಡಲಾಗಿದೆ.
ಅಗತ್ಯ ಸರಕು ಸಾಗಾಟ ವಾಹನಗಳಿಗೆ ಅವಕಾಶವಿದ್ದು ವಿಮಾನ ನಿಲ್ದಾಣ, ರೈಲ್ವೆ ಸೇರಿದಂತೆ ಓಡಾಟಕ್ಕೆ ಸೂಕ್ತ ಮಾಹಿತಿ‌ ಒದಗಿಸಬೇಕಾಗಿದೆ.
ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೊರೊನಾ ಆತಂಕದ ನಡುವೆಯೂ ಅಂಗಡಿ ಮುಗ್ಗಟ್ಟುಗಳನ್ನು ತೆರೆದು ವ್ಯಾಪಾರ ವಹಿವಾಟು ನಡೆಸಲಾಗುತ್ತಿದ್ದು, ಬಹುತೇಕ ಕಡೆ ಜನ ಹಾಗೂ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ.
ಕೈಗಾರಿಕೆಗಳು, ಗಾರ್ಮೆಂಟ್ಸ್ ಗಳಲ್ಲಿ ಕ್ರಮವಾಗಿ ಶೇ.50 ಹಾಗೂ ಶೇ.30ರಷ್ಟು ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸರ್ಕಾರ ಅವಕಾಶ ನೀಡಿದೆ. ಇದರಿಂದಾಗಿ ಬೆಳಿಗ್ಗೆಯೇ ಬೆಂಗಳೂರಿನ ಪೀಣ್ಯ, ಯಶವಂತಪುರ, ಜೆಸಿ. ಕೈಗಾರಿಕಾ ಪ್ರದೇಶ ಸೇರಿದಂತೆ ಇತರೆ ಕೈಗಾರಿಕಾ ಪ್ರದೇಶಗಳಲ್ಲಿ ಕಾರ್ಮಿಕರ ಸಂಚಾರ ದಟ್ಟಣೆ ಹೆಚ್ಚಾಗಿತ್ತು. 


ಟೋಲ್ ಪ್ಲಾಜಾ, ಚೆಕ್ ಪೋಸ್ಟ್, ತುಮಕೂರು ರಸ್ತೆ, ಮೈಸೂರು ರಸ್ತೆ, ಅತ್ತಿಬೆಲೆ, ಹಳೇ ಮದ್ರಾಸ್ ರಸ್ತೆಗಳ ಪ್ರವೇಶ ಭಾಗದಲ್ಲಿ ಭಾರೀ ಸಂಚಾರ ದಟ್ಟಣೆಗಳು ಕಂಡು ಬಂದವು.
ಹೋಟೆಲ್, ಉಪಹಾರ ಮಂದಿರ, ದರ್ಶಿನಿಗಳಲ್ಲಿ ಎಂದಿಗಿಂತ ಗ್ರಾಹಕರ ಸಂಖ್ಯೆ ತುಸು ಹೆಚ್ಚಿತ್ತು. ಅಂಗಡಿ-ಮುಂಗಟ್ಟುಗಳ ಎದುರು ಗ್ರಾಹಕರ ದಟ್ಟಣೆ ಹೆಚ್ಚಾಗಿತ್ತು. ಕೆ.ಆರ್.ಮಾರುಕಟ್ಟೆ ಪ್ರದೇಶ, ಯಶವಂತಪುರ, ಯಲಹಂಕ, ಕೆ.ಆರ್.ಪುರಂ, ಬ್ಯಾಟರಾಯನಪುರ ಸೇರಿ ಬಹುತೇಕ ವ್ಯಾಪಾರ ಸ್ಥಳಗಳಲ್ಲಿ ಜನರು ಕೊರೋನಾ ನಿಯಮ ಲೆಕ್ಕಿಸದೇ ಜನರು ಖರೀದಿಗೆ ಮುಗಿಬಿದ್ದಿದ್ದು ಕಂಡುಬಂತು. ಮಧ್ಯಾಹ್ನದವರೆಗೂ ವ್ಯಾಪಾರ ಬಿರುಸುಗೊಂಡಿತ್ತು. 
ದೈನಂದಿನ ಕೋವಿಡ್ ಕರ್ಫ್ಯೂ ಸಂಜೆ 7 ರಿಂದ ಬೆಳಿಗ್ಗೆ 5 ರವರೆಗೆ ಮತ್ತು ವಾರಾಂತ್ಯದ ಕರ್ಫ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ರವರೆಗೆ ಮುಂದುವರಿಯುತ್ತದೆ. ರಾಜ್ಯದಲ್ಲಿ ಜೂನ್ 21ರಂದು ಎರಡನೇ ಹಂತದ ಲಾಕ್ಡೌನ್ ಸಡಿಲ ಪ್ರಕ್ರಿಯೆ ಶುರುವಾಗಲಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ