ರೋಹಿತ್ ವೆಮುಲಾನ ಸಾವಿನ ಘಟನೆಗೆ ಐದು ವರ್ಷ ತುಂಬಿದ್ದು, ಆತನ ಕುಟುಂಬವು ಇನ್ನೂ ನ್ಯಾಯದ ನಿರೀಕ್ಷೆಯಲ್ಲಿಯೇ ಕಾಲ ಕಳೆಯುತ್ತಿದೆ. ಇದೇ ವೇಳೆ ಆತನ ಸಹೋದರ ರಾಜಾ ತನ್ನ ಕಾನೂನು ಪದವಿಯನ್ನು ವೇಮುಲಾನಿಗೆ ಸಮರ್ಪಿಸುತ್ತಾ, ದಲಿತರ ಹಕ್ಕುಗಳಿಗಾಗಿ ಹೋರಾಡುವುದಾಗಿ ಘೋಷಿಸಿದ್ದಾರೆ.
ಹೈದರಾಬಾದ್ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದ ರೋಹಿತ್ ವೆಮುಲಾ ಐದು ವರ್ಷ ಮೊದಲು ಅಂದರೆ 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡಿದ್ದ. 26ರ ಹರೆಯದ ದಲಿತ ವಿದ್ಯಾರ್ಥಿಯಾಗಿದ್ದ ಆತನ ಸಾವಿನಿಂದ ಇಡೀ ದೇಶದಲ್ಲಿ ಆಂದೋಲನದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಜನರು ಸಾಂಸ್ಥಿಕ ಹತ್ಯೆ ಎಂದು ಕರೆದಿದ್ದರು.
ಆತ್ಮಹತ್ಯೆಗೂ ಮೊದಲು ರೋಹಿತ್ ವೆಮುಲಾ ಬಿಟ್ಟು ಹೋಗಿದ್ದ ಆತ್ಮಹತ್ಯೆ ಪತ್ರವು ಬಹಳ ಮಾರ್ಮಿಕವಾಗಿತ್ತು. ಏಳು ತಿಂಗಳುಗಳಿಂದ ಫೆಲೋಶಿಪ್ ಹಣವು ದೊರಕಿರಲಿಲ್ಲ ಮತ್ತು ಹಿಂದುತ್ವವಾದಿ ಸಂಘಟನೆಗಳ ವಿದ್ಯಾರ್ಥಿಗಳು ಮತ್ತು ವೈಸ್ ಚಾನ್ಸಲರ್ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದರು ಎಂದು ಆತ ಪತ್ರದಲ್ಲಿ ಬರೆದುಕೊಂಡಿದ್ದ.
ರೋಹಿತ್ ನ ತಾಯಿ ರಾಧಿಕಾ ವೇಮುಲಾ ಇಂದೂ ಕೂಡ ತನ್ನ ಪುತ್ರನನ್ನು ನೆನೆದುಕೊಂಡು ಭಾವುಕರಾಗುತ್ತಾರೆ. ರೋಹಿತ್ ನಿಗೆ ನ್ಯಾಯ ದೊರಕಿಸಲು ಮಾತ್ರವಲ್ಲ, ದೌರ್ಜನ್ಯ ಎದುರಿಸುವ ಎಲ್ಲರಿಗಾಗಿ ಹೋರಾಡುವ ನಿಟ್ಟಿನಲ್ಲಿ ತನ್ನ ಮಗ ರಾಜಾನಿಗೆ ಕಾನೂನು ಪದವಿ ಕಲಿಸಿ ಸಮಾಜಕ್ಕೆ ಸಮರ್ಪಿಪಿಸಿದ್ದೇನೆ ಎಂದು ರಾಧಿಕ ವೇಮುಲಾ ಹೇಳುತ್ತಾರೆ.