Home ಟಾಪ್ ಸುದ್ದಿಗಳು ರೈತರನ್ನು ಭಯೋತ್ಪಾದಕರೆಂದಿದ್ದ ಕಂಗನಾಗೆ ನೋಟೀಸು

ರೈತರನ್ನು ಭಯೋತ್ಪಾದಕರೆಂದಿದ್ದ ಕಂಗನಾಗೆ ನೋಟೀಸು

ಹೊಸದಿಲ್ಲಿ : ನಿಂದನಾತ್ಮಕ ಹೇಳಿಕೆಗಾಗಿ ದೆಹಲಿಯ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಮಾಜಿ ಅಧ್ಯಕ್ಷ ಮಂಜೀತ್ ಸಿಂಗ್ ಜಿ.ಕೆ ಬಾಲಿವುಡ್ ನಟಿ ಕಂಗನಾ ರನೌತ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ. ವಕೀಲ ನಾಗಿಂದರ್ ಬನಿಪಾಲ್ ಮೂಲಕ ನೋಟಿಸ್ ಕಳುಹಿಸಲಾಗಿದೆ. ರೈತರು ಮತ್ತು ಸಿಖ್ಖರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೂ ದೂರು ಕಳುಹಿಸಲಾಗಿದೆ.

ಕೇಂದ್ರ ಸರ್ಕಾರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದ ಪಾಪ್ ಗಾಯಕಿ ರಿಹಾನ್ನಾಗೆ ಪ್ರತಿಕ್ರಿಯಿಸುತ್ತಾ ಕಂಗನಾ ರನೌತ್ ರೈತರನ್ನು ನಿಂದಿಸಿದ್ದರು. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಸಿಎನ್‌ಎನ್ ಪ್ರಸಾರ ಮಾಡಿದ್ದ ಸುದ್ದಿಗಳನ್ನು ಹಂಚಿಕೊಳ್ಳುವ ಮೂಲಕ ರಿಹಾನ್ನಾ ರೈತರಿಗೆ ಬೆಂಬಲ ಘೋಷಿಸಿದ್ದರು. “ಯಾರೂ ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ” ಎಂದು ರಿಹಾನ್ನಾ ಕೇಳಿದ್ದರು.

“ಈ ಬಗ್ಗೆ ಯಾರೂ ಮಾತನಾಡುವುದಿಲ್ಲ. ಯಾಕೆಂದರೆ ಅವರು ಭಯೋತ್ಪಾದಕರು, ರೈತರಲ್ಲ. ಅವರು ಭಾರತವನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಚೀನಾ ವಿಭಜನೆಗೊಂಡ ಭಾರತವನ್ನು ವಶಪಡಿಸಿಕೊಳ್ಳಲಿದೆ. ಅಮೇರಿಕಾದಂತೆ ಚೀನೀ ಕಾಲನಿಯಾಗಿ ಮಾಡಲಿದೆ. ಕುಳಿತುಕೋ ಮೂರ್ಖಿ.ನಾವು ನಮ್ಮ ದೇಶವನ್ನು ನಿಮ್ಮಂತೆ ಕಪಟಿಗಳ ರೀತಿ ಮಾರಾಟ ಮಾಡುವುದಿಲ್ಲ.” ಈ ರೀತಿ ಕಂಗನಾ ಉತ್ತರಿಸಿದ್ದಳು.

ಕಂಗನಾ ಮತ್ತು ಅವರ ಅಭಿಮಾನಿಗಳ ಹೇಳಿಕೆಗಳಲ್ಲಿ ರೈತರು ಮತ್ತು ಸಿಖ್ ಸಮುದಾಯವನ್ನು ಅತ್ಯಂತ ಕೆಟ್ಟ ರೀತಿಯಲ್ಲಿ ಭಯೋತ್ಪಾದಕರೆಂದು ಬಿಂಬಿಸಲಾಗಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕಂಗನಾ ಹೇಳಿಕೆಗಳು ರೈತ ಸಮುದಾಯ ಮತ್ತು ಸಿಖ್ ಸಮುದಾಯದ ಪ್ರಾಮಾಣಿಕತೆಯನ್ನು ಪ್ರಶ್ನಿಸುತ್ತಿದೆ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.

Join Whatsapp
Exit mobile version