ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು 2019: ಒಂದು ಅವಲೋಕನ

0
17

♦ಪ್ರೊ. ಮಹೇಶ್ ಚಂದ್ರ ಗುರು

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಮಾನವ ಸಂಪನ್ಮೂಲಗಳ ಅಭಿವೃದ್ಧಿಯೊಂದಿಗೆ ನಿಕಟ ಸಂಪರ್ಕ ಹೊಂದಿವೆ. ಭಾರತೀಯ ಸಂವಿಧಾನ ರಾಜ್ಯ ನಿರ್ದೇಶಕ ತತ್ವಗಳು ಪರಿಸರ ರಕ್ಷಣೆ, ಮಾನವ ಸಂಪನ್ಮೂಲಗಳ ಅಭಿವೃದ್ಧಿ, ಸಾಮಾಜಿಕ ನ್ಯಾಯ ವಿತರಣೆ, ಸಮಸಮಾಜ ನಿರ್ಮಾಣ ಮೊದಲಾದ ಆಶಯಗಳಿಗೆ ಅನುಗುಣವಾಗಿ ದೇಶದ ನೀತಿ ನಿರೂಪಕರು ಮತ್ತು ಆಡಳಿತಗಾರರು ಬದ್ಧತೆ ಮತ್ತು ಹೊಣೆಗಾರಿಕೆಗಳಿಂದ ಕರ್ತವ್ಯ ನಿರ್ವಹಿಸಬೇಕೆಂದು ಪ್ರತಿಪಾದಿಸುತ್ತದೆ. ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಲುವಾಗಿ ಮಹಿಳೆಯರು ಮತ್ತು ದುರ್ಬಲ ವರ್ಗಗಳು ರಾಜ್ಯಾಧಿಕಾರ ಪಡೆಯಬೇಕೆಂದು ಅಂಬೇಡ್ಕರ್ ನಂಬಿದ್ದರು. ಕಳೆದ 73 ವರ್ಷಗಳಿಂದ ಅಧಿಕಾರದ ಚುಕ್ಕಾಣಿ ಹಿಡಿದಿರುವವರು ವರ್ಗ ಹಿತಾಸಕ್ತಿ, ಜಾತಿ ಹಿತಾಸಕ್ತಿ, ಕೌಟುಂಬಿಕ ಹಿತಾಸಕ್ತಿ, ವೈಯಕ್ತಿಕ ಹಿತಾಸಕ್ತಿ ಮೊದಲಾದವುಗಳನ್ನು ಕಾಪಾಡಿಕೊಂಡರೇ ಹೊರತು ಸಾರ್ವಜನಿಕ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಆಳುವ ಪಕ್ಷ ಯಾವುದಾದರೇನು, ಇವರು ರೂಪಿಸಿರುವುದು ಅಸಮಾನತೆಯನ್ನು ಸೃಷ್ಟಿಸಿರುವ ಶಿಕ್ಷಣ, ಆರೋಗ್ಯ, ಆಡಳಿತ, ಅಭಿವೃದ್ಧಿ ಮತ್ತು ರಕ್ಷಣಾ ವ್ಯವಸ್ಥೆಗಳನ್ನು ಎಂಬುದರಲ್ಲಿ ಸಂಶಯವಿಲ್ಲ.

ಭಾರತದಲ್ಲಿ ಹಿಂದೂ ಧರ್ಮದ ಆಶ್ರಯದಲ್ಲಿ ಬೆಳೆದ ಗುರುಕುಲ ಪದ್ಧತಿಯಿಂದ ಶಿಕ್ಷಣ ಪುರೋಹಿತರು ಮತ್ತು ಆಳುವವರಿಗೆ ಮಾತ್ರ ಹೆಚ್ಚು ಕಾಲ ಸೀಮಿತವಾಗಿತ್ತು. ಮಹಿಳೆಯರು ಮತ್ತು ಶೋಷಿತ ಜನಾಂಗಗಳಿಗೆ ಹಿಂದೂ ಧಾರ್ಮಿಕ ಕಟ್ಟುಪಾಡುಗಳ ಹೆಸರಿನಲ್ಲಿ ಮನುವಾದಿಗಳು ಶಿಕ್ಷಣದ ಹಕ್ಕನ್ನು ನಿರಾಕರಿಸಿರುವುದಕ್ಕೆ ಮನುಧರ್ಮಶಾಸ್ತ್ರದ ಶ್ಲೋಕಗಳು ಪುರಾವೆ ಒದಗಿಸುತ್ತವೆ. ಆಳುವ ವರ್ಗದ ಗುಲಾಮರಾಗಲೆಂದೇ ಹುಟ್ಟಿರುವ ಮನುಷ್ಯರಿಗೆ ಶಿಕ್ಷಣ ಏಕೆ ಬೇಕು ಎಂಬ ವಿತಂಡವಾದವನ್ನು ಮನುವಾದಿಗಳು ಕಾಲಕಾಲಕ್ಕೆ ಮಂಡಿಸುತ್ತಲೇ ಬಂದಿದ್ದಾರೆ. ಬುದ್ಧ, ಬಸವ, ಕಬೀರ, ಪುಲೆ, ಅಂಬೇಡ್ಕರ್, ಪೆರಿಯಾರ್, ನಾಲ್ವಡಿ ಕೃಷ್ಣರಾಜ ಒಡೆಯರ್, ಲೋಹಿಯಾ, ನಾರಾಯಣ ಗುರು ಮೊದಲಾದ ಸಂತರು ಮತ್ತು ಮುತ್ಸದ್ದಿಗಳು ಶಿಕ್ಷಣದ ಏಕಸ್ವಾಮ್ಯದ ವಿರುದ್ಧ ನಡೆಸಿರುವ ಹೋರಾಟ ಐತಿಹಾಸಿಕವಾದುದು.

ಜಗತ್ತಿನ ಎಲ್ಲ ಧರ್ಮಗ್ರಂಥಗಳಲ್ಲಿಯೂ (ಹಿಂದೂ ಧರ್ಮವನ್ನು ಹೊರತುಪಡಿಸಿ) ಶಿಕ್ಷಣವನ್ನು ಪ್ರಜೆಗಳ ಮೂಲಭೂತ ಹಕ್ಕೆಂದು ಪ್ರತಿಪಾದಿಸಲಾಗಿದೆ. ಶಿಕ್ಷಣ ಪರಿವರ್ತನೆ ಮತ್ತು ಪ್ರಗತಿಗಳ ಅಸ್ತ್ರವೆಂದು ಜ್ಞಾನಿಗಳು ಬೋಧಿಸಿದ್ದಾರೆ. ಬ್ರಿಟಿಷರ ಕಾಲದಲ್ಲಿ ಮೆಕಾಲೆ ಶಿಕ್ಷಣದ ಸಾರ್ವತ್ರೀಕರಣಕ್ಕೆ ಪೂರಕವಾದ ಮಸೂದೆಯನ್ನು ಜಾರಿಗೆ ತಂದು ಅವಕಾಶ ವಂಚಿತ ಭಾರತೀಯರನ್ನು ಕತ್ತಲೆಯಿಂದ ಬೆಳಕಿನೆಡೆಗೆ ಮುನ್ನಡೆಸಿದರು. ವ್ಯಾಪಾರದ ಹೆಸರಿನಲ್ಲಿ ಭಾರತಕ್ಕೆ ಬಂದು ದೇಶದ ಸಂಪತ್ತನ್ನು ಲೂಟಿ ಹೊಡೆದು ಭಾರತೀಯರ ಅನಭಿವೃದ್ಧಿಗೆ ಬ್ರಿಟಿಷರು ನೇರವಾಗಿ ಕಾರಣರಾದರು. ಆದಾಗ್ಯೂ ಬ್ರಿಟಿಷರು ಭಾರತದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ, ನಾಗರಿಕ ಸೌಲ್ಯಗಳ ಪೂರೈಕೆ,  ಶಿಕ್ಷಣ ಸೇವೆ ವಿಸ್ತರಣೆ, ಸಾಮಾಜಿಕ ಅನಿಷ್ಟಗಳ ನಿವಾರಣೆ, ಕೈಗಾರಿಕೆ ಬೆಳವಣಿಗೆ ಮೊದಲಾದ ವಿಷಯಗಳಲ್ಲಿ ಸಾಧಿಸಿದ ಪ್ರಗತಿ ಅನನ್ಯವಾದುದು. ವಿಶೇಷವಾಗಿ ಶಿಕ್ಷಣವನ್ನು ಬ್ರಾಹ್ಮಣೀಕರಣದಿಂದ ಮುಕ್ತಗೊಳಿಸಿ ಸಾರ್ವತ್ರೀಕರಣದೆಡೆಗೆ ಮುನ್ನಡೆಸಿದ ಬ್ರಿಟಿಷರ ಪಾತ್ರ ಮಹತ್ವಪೂರ್ಣವಾದುದು.

ಸ್ವಾತಂತ್ರಾ ನಂತರದಲ್ಲಿ ಭಾರತೀಯ ಆಡಳಿತಗಾರರು ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಶೈಕ್ಷಣಿಕ ನ್ಯಾಯ, ವಿಕೇಂದ್ರೀಕರಣ, ರಾಷ್ಟ್ರೀಕರಣ ಮತ್ತು ಮಾನವೀಕರಣಗಳಿಗೆ ಮಹತ್ವದ ಕೊಡುಗೆ ನೀಡದಿರಲು ನವ ವಸಾಹತುವಾದ, ಜಾತಿ ವ್ಯವಸ್ಥೆ, ಬಲಾಢ್ಯರ ಆಳ್ವಿಕೆ, ಪ್ರಬಲ ಅಭಿವೃದ್ಧಿ ಮಾದರಿ, ಶಿಕ್ಷಣದಲ್ಲಿ ರಾಜಕೀಯ ಹಸ್ತಕ್ಷೇಪ, ನೇಮಕಾತಿಯಲ್ಲಿ ಜಾತಿ ಮತ್ತು ಹಣದ ಪ್ರಾಬಲ್ಯ ಮೊದಲಾದ ಅಂಶಗಳು ನೇರವಾಗಿ ಕಾರಣವಾಗಿದೆ. ಆರ್ಥಿಕ ಉದಾರೀಕರಣ ಯುಗದಲ್ಲಿ ಶಿಕ್ಷಣದ ಖಾಸಗೀಕರಣದಿಂದಾಗಿ ಪ್ರತಿಭೆಯ ನಾಶ, ಪ್ರತಿಭಾ ಪಲಾಯನ, ಸೀಟುಗಳು ಮತ್ತು ಪದವಿಗಳ ಮಾರಾಟ, ಉನ್ನತ ಶೈಕ್ಷಣಿಕ ಹುದ್ದೆಗಳ ಮಾರಾಟ, ಸ್ವಜನಪಕ್ಷಪಾತ, ಶಿಕ್ಷಣದ ಗುಣಮಟ್ಟದಲ್ಲಿ ಕುಸಿತ, ಮೌಲ್ಯಾಧಾರಿತ ಶಿಕ್ಷಣದ ಹಿನ್ನಡೆ ಮೊದಲಾದ ಸಂಕೀರ್ಣತೆಗಳು ಶಿಕ್ಷಣ ಕ್ಷೇತ್ರವನ್ನು ಬಾಧಿಸಿವೆ. ಇಂತಹ ಅನಾರೋಗ್ಯಕರ ಪ್ರವೃತ್ತಿಗಳಿಂದಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ಚೇತರಿಸಿಕೊಳ್ಳಲಾರದಷ್ಟು ರೋಗಗ್ರಸ್ಥವಾಗಿದೆ.

ಪ್ರಜ್ಞಾವಂತರು, ಮಾನವಂತರು ಮತ್ತು ಹೃದಯವಂತರ ಕೈಗಳಿಂದ ಮಾರುಕಟ್ಟೆ ಶಕ್ತಿಗಳು, ಕೋಮುವಾದಿಗಳು ಮತ್ತು ಜಾತಿವಾದಿಗಳ ಕೈಗಳಿಗೆ ಭಾರತೀಯ ಶಿಕ್ಷಣ ಹಸ್ತಾಂತರಗೊಂಡಿರುವುದನ್ನು ಪ್ರಜಾಸತ್ತೆಯ ತಾಯಿಯೆಂದು ಬಿರುದಾಂಕಿತವಾದ ನಾಗರಿಕ ಸಮಾಜ ಅಸಹಾಯಕತೆಯಿಂದ ನೋಡುತ್ತಿದೆ. ಸಾರ್ವತ್ರೀಕರಣದೆಡೆಗೆ ಸಾಗಬೇಕಾದ ಶಿಕ್ಷಣ ಖಾಸಗೀಕರಣದೆಡೆಗೆ, ಹಸಿರೀಕರಣದೆಡೆಗೆ ಸಾಗಬೇಕಾದ ಶಿಕ್ಷಣ ಕೇಸರೀಕರಣದೆಡೆಗೆ ಮತ್ತು ನಾಗರಿಕ ಸಮಾಜದ ನಿಯಂತ್ರಣಕ್ಕೊಳಪಡಬೇಕಾದ ಶಿಕ್ಷಣ ಮಾರುಕಟ್ಟೆ ಶಕ್ತಿಗಳ ಪ್ರಭುತ್ವಕ್ಕೆ ಒಳಪಡುತ್ತಿರುವುದು ಶಿಕ್ಷಣ ಕ್ಷೇತ್ರ ಕಲುಷಿತಗೊಳ್ಳಲು ಪ್ರಮುಖ ಕಾರಣಗಳಾಗಿವೆ. ಇಂದು ಪ್ರಬುದ್ಧ ಭಾರತ ನಿರ್ಮಿಸಿರುವುದರ ಬದಲಿಗೆ ಗುಲಾಮರ ಭಾರತವನ್ನು ನಿರ್ಮಿಸಲು ಪ್ರೊ.ಕಸ್ತೂರಿ ರಂಗನ್ ಅಧ್ಯಕ್ಷತೆಯ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯು ಮುನ್ನುಡಿ ಬರೆಯಲು ಹೊರಟಿರುವುದು ಸಮಸಮಾಜ ನಿರ್ಮಾಣದ ಕನಸು ಕಾಣುತ್ತಿರುವ ಭಾರತೀಯರಿಗೆ ಹಿನ್ನಡೆಯುಂಟುಮಾಡಿದೆ.

ಭಾರತ ದೇಶವನ್ನು ವರ್ಗ, ಜಾತಿ, ಪ್ರದೇಶ, ಭಾಷೆ ಮೊದಲಾದವುಗಳ ಹೆಸರಿನಲ್ಲಿ ಛಿದ್ರಗೊಳಿಸುವ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಆರೋಗ್ಯಕರ, ರಚನಾತ್ಮಕ ಹಾಗೂ ಸಮಸಮಾಜ ನಿರ್ಮಾಣಕ್ಕೆ ಪೂರಕವಾಗಿಲ್ಲವೆಂಬ ಅಭಿಪ್ರಾಯವನ್ನು ಪ್ರಜ್ಞಾವಂತ ಚಿಂತಕರು ವಿವಿಧ ವೇದಿಕೆಗಳಲ್ಲಿ ಈಗಾಗಲೆೇ ವ್ಯಕ್ತಪಡಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಹಾಗೂ ಪದವಿಪೂರ್ವ ಹಂತಗಳಲ್ಲಿ ಶಿಕ್ಷಣ ನೀಡುವ ಶಾಲೆಗಳಲ್ಲಿ ತರಗತಿ ಕೊಠಡಿಗಳು, ಗ್ರಂಥಾಲಯ, ಕ್ರೀಡಾಂಗಣ, ಮಾನವ ಸಂಪನ್ಮೂಲಗಳು, ಆಧುನಿಕ ಕಲಿಕಾ ತಂತ್ರಜ್ಞಾನಗಳು, ಶೌಚಾಲಯಗಳು, ಸುಧಾರಿತ ಪಠ್ಯಕ್ರಮ, ಸಂವಹನ ಕೌಶಲ್ಯಾಭಿವೃದ್ಧಿ, ನೈತಿಕ ಶಿಕ್ಷಣ, ನಾಯಕತ್ವ ತರಬೇತಿ ಮೊದಲಾದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ಶಾಲೆಗಳು ಮತ್ತು ಸಮುದಾಯಗಳ ನಡುವೆ ನಿರಂತರ ಸಂಪರ್ಕ ಏರ್ಪಡಿಸಿ ಸಮುದಾಯದತ್ತ ಶಿಕ್ಷಣ ಸಂಸ್ಥೆಗಳು ಮುನ್ನಡೆಸುವ ನಿಟ್ಟಿನಲ್ಲಿ ಇದುವರೆಗೆ ನಾವು ಸಾಧಿಸುವ ಪ್ರಗತಿ ಸಮರ್ಪಕವಾಗಿಲ್ಲ. ಶಿಕ್ಷಣದ ಭಾರತೀಕರಣಕ್ಕೆ ಪೂರಕವಾದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಸಕ್ರಿಯವಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಶಾಲೆಗಳಿಗೆ ಸರಕಾರ ಈಗ ಒದಗಿಸುತ್ತಿರುವ ಆರ್ಥಿಕ ನೆರವು ಸಾಲದು.

ಯುನೆಸ್ಕೊ ಸಂಸ್ಥೆ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಮತ್ತು ಸಾಮರ್ಥ್ಯಾಭಿವೃದ್ಧಿಗೆ ಮಂಡಿಸಿರುವ 21ನೇ ಶತಮಾನದ ಕೌಶಲ್ಯಗಳು ಹೇಗೆ ಕಾರ್ಯರೂಪಕ್ಕೆ ಬರಬೇಕೆಂಬುದರ ಬಗ್ಗೆ ಪ್ರಸ್ತುತ ಕರಡು ಕುರುಡಾಗಿರುವುದನ್ನು ಗಮನಿಸಿದಾಗ ಆಳುವವರ ದಿವ್ಯ ನಿರ್ಲಕ್ಷ ಪ್ರದರ್ಶನ ಸ್ಪಷ್ಟವಾಗಿ ತಿಳಿದುಬರುತ್ತದೆ. ಸಾಮಾಜಿಕ ಕಳಕಳಿ ಮತ್ತು ಬದ್ಧತೆ ರಹಿತವಾದ ಶಿಕ್ಷಣ ನೀತಿ ಮತ್ತು ವ್ಯವಸ್ಥೆಗಳಿಂದ ಯಾರಿಗೂ ಒಳಿತುಂಟಾಗುವುದಿಲ್ಲ. ವಿಮರ್ಶಾತ್ಮಕ ಚಿಂತನೆ,  ಸೃಜನಶೀಲತೆ, ವೈಜ್ಞಾನಿಕ ಮನೋಧರ್ಮ,  ಸಂವಹನ ಕೌಶಲ್ಯ, ಬಹುಭಾಷಾ ಕಲಿಕೆ, ಡಿಜಿಟಲ್ ಸಾಕ್ಷರತೆ, ನೀತಿ ಸಂಹಿತೆ, ಸಂಕಷ್ಟ ನಿರ್ವಹಣೆ ಸಾಮರ್ಥ್ಯ, ಸಾಮಾಜಿಕ ಹೊಣೆಗಾರಿಕೆ ಮೊದಲಾದವುಗಳನ್ನು ಉತ್ತೇಜಿಸದ ಶಿಕ್ಷಣ ಸಮಕಾಲೀನ ಮಹತ್ವ ಕಳೆದುಕೊಳ್ಳುತ್ತದೆ ಎಂಬುದನ್ನು ಶೈಕ್ಷಣಿಕ ಆಡಳಿತಗಾರರು ಅರಿತು ಕಾರ್ಯನಿರತರಾಗಬೇಕು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ವಿದ್ಯಾರ್ಥಿಗಳಿಗೆ 8 ಬಗೆಯ ಸಾಮಾನ್ಯ ಕೌಶಲ್ಯಗಳನ್ನು ಕಲಿಸಿ ಅವರನ್ನು ಬುದ್ಧಿವಂತರನ್ನಾಗಿ ಮಾಡುವ ಆಶಯಗಳನ್ನು ಹೊಂದಿದ್ದರೂ ಸಹ ಅವುಗಳನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಮೂಲ ಸೌಕರ್ಯಗಳ ಅಭಿವೃದ್ಧಿ, ಮಾನವ ಸಂಪನ್ಮೂಲಗಳ ಅಭಿವೃದ್ಧಿ, ತಂತ್ರಜ್ಞಾನಗಳ ಅಭಿವೃದ್ಧಿ ಮತ್ತು ಶ್ರೇಷ್ಠ ಕ್ರಮಗಳ ಅಳವಡಿಕೆ ಬಗ್ಗೆ ವಿಸ್ತತ ಮಾರ್ಗದರ್ಶಿ ಸೂತ್ರಗಳನ್ನು ಹೊಂದಿಲ್ಲ. ವಿಶೇಷವಾಗಿ ಮೌಲ್ಯಾಧಾರಿತ ಶಿಕ್ಷಣ ಮತ್ತು ಸುಸ್ಥಿರ ಅಭಿವೃದ್ಧಿ ಕೇಂದ್ರಿತ ಶಿಕ್ಷಣ ವ್ಯವಸ್ಥೆಯನ್ನು ಪ್ರಾಥಮಿಕ ಹಂತದಿಂದ ಹಿಡಿದು ವಿಶ್ವವಿದ್ಯಾಲಯ ಹಂತದವರೆಗೆ ರೂಪಿಸುವಲ್ಲಿ ರಾಜ್ಯದ ನಿರ್ದಿಷ್ಟ ಪಾತ್ರವೇನು ಎಂಬ ಮಹತ್ವದ ಪ್ರಶ್ನೆಗೆ ಸೂಕ್ತ ಉತ್ತರವನ್ನು ಕರಡು ಒಳಗೊಂಡಿಲ್ಲ.

ಪ್ರಾಥಮಿಕ ಪೂರ್ವ ಹಂತದಲ್ಲಿ ಖಾಸಗಿ ಶಾಲೆಗಳನ್ನು ನಿರ್ಬಂಧಿಸುವುದು ನೂತನ ಶಿಕ್ಷಣ ನೀತಿಯ ಆರೋಗ್ಯಕರ ಅಂಶವಾಗಿದೆ. ಆದರೆ ಇಂದು ದೇಶದ ಉದ್ದಗಲಕ್ಕೂ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳನ್ನು ಆಧುನಿಕ ಕಾಲದ ಅಗತ್ಯಕ್ಕೆ ಅನುಸಾರವಾಗಿ ಸರಕಾರ ಸಜ್ಜುಗೊಳಿಸುವ, ಲಕ್ಷಾಂತರ ಅಂಗನವಾಡಿ ಶಿಕ್ಷಕಿಯರು ಮತ್ತು ಸಹಾಯಕಿಯರ ಸೇವೆಯನ್ನು ಖಾಯಂಗೊಳಿಸುವ ಮತ್ತು ಕಲಿಯುತ್ತಿರುವ ಮಕ್ಕಳಿಗೆ ಆಧುನಿಕ ಸೌಲಭ್ಯಗಳನ್ನು ನೀಡಿ ನಲಿಯುತ್ತ ಕಲಿಯುವ ಮಾನವೀಯ ಶೈಕ್ಷಣಿಕ ಪರಿಸರವನ್ನು ನಿರ್ಮಿಸುವ ನಿಟ್ಟಿನಲ್ಲಿ ಸರಕಾರ-ನಾಗರಿಕ ಸಮಾಜ ಹಾಗೂ ಸರಕಾರ-ಖಾಸಗಿ ಸಂಸ್ಥೆಗಳ ಕ್ರಿಯಾಶೀಲ ಸಹಭಾಗಿತ್ವದ ಬಗ್ಗೆ ಸಂಬಂಧಪಟ್ಟವರು ಗಂಭೀರವಾಗಿ ಯೋಚಿಸಿ ಕಾರ್ಯಪ್ರವೃತ್ತರಾಗುವುದು ತೃಣಮೂಲ ಹಂತದಲ್ಲಿ ಶಿಕ್ಷಣ ವ್ಯವಸ್ಥೆಗೆ ದ್ರ ಬುನಾದಿ ಒದಗಿಸುತ್ತದೆ.

ರಾಜ್ಯ ಭಾಷೆ, ದೇಶ ಭಾಷೆ ಮತ್ತು ಅಂತರ್‌ರಾಷ್ಟ್ರೀಯ ಭಾಷೆ(ಉದಾಹರಣೆಗೆ ಕನ್ನಡ, ಹಿಂದಿ ಮತ್ತು ಇಂಗ್ಲೀಷ್)ಗಳಲ್ಲಿ ಮಾತನಾಡುವ ಮತ್ತು ಬರವಣಿಗೆ ಮಾಡುವ ಮಕ್ಕಳ ಸಾಮರ್ಥ್ಯವನ್ನು ಹೆಚ್ಚಿಸುವುದು ಅತ್ಯವಶ್ಯಕ. ಆದರೆ ಕಲಿಕಾ ಮಾಧ್ಯಮ ಮಾತ್ರ ಸ್ಥಳೀಯ ಭಾಷೆಯೇ ಆಗಿರಬೇಕು. ಇದರಿಂದಾಗಿ ಮಕ್ಕಳು ಪ್ರೀತಿ-ನಿರ್ಭೀತಿಯಿಂದ ಕಲಿತು ಮುನ್ನಡೆಯುತ್ತಾರೆ. ಸಮಾಜಶಾಸ್ತ್ರ ಹಾಗೂ ನೀತಿ ಶಾಸ್ತ್ರಗಳನ್ನು ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಿಕ್ಷಣ ಹಂತಗಳಲ್ಲಿ ಆದ್ಯತೆ ಮೇರೆಗೆ ಕಲಿಸಬೇಕು. ವರ್ತಮಾನ ಕಾಲದಲ್ಲಿ ವಿದ್ಯಾರ್ಥಿ ಸಮುದಾಯ ಮೌಲ್ಯಗಳು, ಕೌಶಲ್ಯಗಳು ಮತ್ತು ಜವಾಬ್ದಾರಿಗಳ ಸಮ್ಮಿಶ್ರಣವೇ ಆದ ಪಠ್ಯ ಹಾಗೂ ಪಠ್ಯೇತರ ಕಾರ್ಯ ಚಟುವಟಿಕೆಗಳ ಲಾಭ ಪಡೆದು ಜ್ಞಾನಕೇಂದ್ರಿತ ಸಮಾಜದ ಶಕ್ತಿಗಳಾಗಿ ರೂಪುಗೊಳ್ಳಬೇಕು.

ಬದಲಾಗುತ್ತಿರುವ ಕಾಲ, ಸನ್ನಿವೇಶ ಮತ್ತು ಸವಾಲುಗಳಿಗೆ ಅನುಗುಣವಾಗಿ ಮಾನವ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಹೊಸ ಶಿಕ್ಷಣ ನೀತಿ ಒಳಗೊಂಡಿರಬೇಕು. ಇಂದಿನ ಶಿಕ್ಷಣ ಸಂಸ್ಥೆಗಳು ಬುದ್ಧರ ಮಾನವ ಮಂಟಪ, ಬಸವರ ಅನುಭವ ಮಂಟಪ, ಅಂಬೇಡ್ಕರರ ಅಂತ್ಯೋದಯ ಮಂಟಪ, ಪೆರಿಯಾರರ ವೈಚಾರಿಕ ಮಂಟಪ ಮತ್ತು ಲೋಹಿಯಾರ ಸಮಾನತೆಯ ಮಂಟಪ ಮೊದಲಾದ ವೇದಿಕೆಗಳಾಗಿ ಪ್ರಬುದ್ಧ ಭಾರತ ನಿರ್ಮಾಣಕ್ಕೆ ಪೂರಕವಾಗಿರಬೇಕೆಂದು ಮಾನವೀಯ ಆಶಯಗಳಿಗೆ ಬದ್ಧವಾದ ನೂತನ ಶಿಕ್ಷಣ ನೀತಿ ಭಾರತಕ್ಕೆ ಬೇಕು. ಹೊಸ ಶಿಕ್ಷಣ ನೀತಿ ಯುನೆಸ್ಕೊ, ಯುಎನ್‌ಡಿಪಿ, ವಿಶ್ವಸಂಸ್ಥೆ ಮತ್ತು ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಆಶಯಗಳ ಜೊತೆ ಭಾರತೀಯ ಜೀವನ ಮೌಲ್ಯಗಳು ಮತ್ತು ಸಂವಿಧಾನಾತ್ಮಕ ಆಶಯಗಳಿಗೆ ಅನುಗುಣವಾಗಿ ಪರಿಪೂರ್ಣ ಮನುಷ್ಯರನ್ನು ಬೆಳೆಸುವುದರ ಜೊತೆಗೆ ಅವರಲ್ಲಿ ಸಮಷ್ಟಿ ಪ್ರಜ್ಞೆ, ರಾಜಕೀಯ ಪ್ರಜ್ಞೆ, ನಾಗರಿಕ ಪ್ರಜ್ಞೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಜ್ಞೆಗಳನ್ನು ಮೂಡಿಸುವಂತಿರಬೇಕು. ಶಿಕ್ಷಣ ಸಮಾಜಮುಖಿ ಪ್ರಜೆಗಳನ್ನು ಸೃಷ್ಟಿಸಿದಾಗ ಅವರು ಸಮಾಜದ ಋಣವನ್ನು ಖಂಡಿತವಾಗಿ ತೀರಿಸಬಲ್ಲರು. ಹೃದಯ ಮನಸ್ಸನ್ನು ಆಳಬೇಕು, ಹೃದಯವಂತರು ಒಳಗೊಳ್ಳುವ ಅಭಿವೃದ್ಧಿಗೆ ಸಹಕರಿಸಬೇಕು ಎಂಬುದು ಹೊಸ ಶಿಕ್ಷಣ ನೀತಿಯ ಪ್ರಮುಖ ಆಶಯವಾಗಬೇಕು.

LEAVE A REPLY

Please enter your comment!
Please enter your name here