ರಾಜ್ಯ ಸರಕಾರದ ಕೋವಿಡ್ ಕೊಳ್ಳೆ

Prasthutha|

– ಎನ್. ರವಿಕುಮಾರ್ ಟೆಲೆಕ್ಸ್

- Advertisement -

ಕೊರೋನ ಸೋಂಕಿನಿಂದ ಜನರನ್ನು ಪಾರುಮಾಡಬೇಕಾದ ಸರ್ಕಾರ ಕೊನೆಗೂ ಕೈಚೆಲ್ಲಿದೆ. ಆದರೆ ಮೇಲ್ನೋಟಕ್ಕೆ  ಸಾಧ್ಯಾಂತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ನಂಬಿಸ ಹೊರಟಿರುವ ರಾಜ್ಯ ಸರ್ಕಾರ ಮತ್ತದರ ಸಚಿವರುಗಳು, ಅಧಿಕಾರಿಗಳು  ಜನರ ಆರೋಗ್ಯ ರಕ್ಷಣೆಯ ಹೆಸರಲ್ಲಿ  ತಿಂದು ತೇಗುತ್ತಿರುವ ಸದ್ದು ಕೇಳಿಸುತ್ತಿದೆ.  ಜನರ ಆರೋಗ್ಯ-ಅನ್ನಕ್ಕಾಗಿ ಖರ್ಚಾದ ಅನಾಮತ್ತು 3000 ಕೋ.ರೂಗಳಿಗೂ ಹೆಚ್ಚಿನ ರಖಂ ನಿರ್ಲಜ್ಜತನದಿಂದ ಲೂಟಿ ಆಗಿರುವುದನ್ನು ದಾಖಲೆಗಳೇ ಸಾರುತ್ತಿವೆ.

 ನೆರೆ, ಬರ, ರೋಗ ಯಾವುದೇ ಬರಲಿ  ನೈತಿಕ ದಿವಾಳಿತನಕ್ಕೀಡಾಗಿರುವ ನಮ್ಮ ರಾಜಕೀಯ ವ್ಯವಸ್ಥೆಯ ಜನಪ್ರತಿನಿಧಿಗಳಿಗೆ ಮಾತ್ರ ವರದಾನವೇ ಆಗಿರುತ್ತದೆ. ಪ್ರವಾಹಗಳು, ಬರಗಾಲಗಳು ಬಂದರೆ ಅದು ಸಾಮಾನ್ಯ ಜನರ ಪಾಲಿನ ಮರಣಸೂತಕವಾಗಿದ್ದರೆ, ಅವುಗಳೇ  ರಾಜಕಾರಣಿಗಳ ಪಾಲಿಗೆ ಹಬ್ಬದೂಟವಾಗಿರುತ್ತವೆ. ಕಳೆದ ವರ್ಷ ರಾಜ್ಯದಲ್ಲಿ ಮಳೆ ಪ್ರವಾಹಕ್ಕೆ ಸಿಕ್ಕು ಕೊಚ್ಚಿಹೋದ ಜನರ ಬದುಕನ್ನು ಇನ್ನೂ ಕಟ್ಟಿಕೊಡಲಾಗಿಲ್ಲ ಈ ರಾಜ್ಯಸರ್ಕಾರಕ್ಕೆ. ಆದರೆ  ಕೋಟ್ಯಂತರ ರೂಪಾಯಿಗಳ ಲೆಕ್ಕದ ಬಾಬ್ತು ಮಾತ್ರ ಇದೆ.  ಕೊರೋನ  ಸಂಕಷ್ಟವನ್ನು ಎದುರಿಸಲು ರಾಜ್ಯ ಸರ್ಕಾರ ಕೈಗೊಂಡ, ಖರೀದಿಸಿದ ಎಲ್ಲಾ ಕ್ರಮಗಳಲ್ಲೂ ಅವ್ಯವಹಾರದ ಗಬ್ಬ್ಬುನಾತ ಬಡಿಯುತ್ತಿದೆ. ಆರೋಗ್ಯ ತುರ್ತು ನೆಪದಲ್ಲಿ ಮನಸ್ಸೋಃ ಇಚ್ಚೆ ನಿರ್ಧಾರಗಳನ್ನು ಕೈಗೊಂಡ ಸರ್ಕಾರ ಕೋವಿಡ್ ಸಂಬಂಧಿತ ಆರೋಗ್ಯ ಉಪಕರಣಗಳು, ಮತ್ತು ಸೌಲಭ್ಯಗಳನ್ನು ಒದಗಿಸುವಲ್ಲಿ ಬಳಸಿದ ಕೋಟ್ಯಂತರ ರೂಪಾಯಿಗಳಲ್ಲಿ ಕೈನೆಕ್ಕಿಕೊಂಡಿರುವುದು ನಿಚ್ಚಳವಾಗಿ ಗೋಚರಿಸುತ್ತಿದೆ.

- Advertisement -

 ವೆಂಟಿಲೇಟರ್, ಸ್ಯಾನಿಟೈಝರ್, ಮಾಸ್ಕುಗಳು, ಪಿಪಿಟಿ ಕಿಟ್  ಖರೀದಿಯಲ್ಲಿ ಭಾರೀ ಅವ್ಯವಹಾರ ನಡೆದಿರುವುದು ಸರ್ಕಾರಿ ದಾಖಲೆಗಳೇ ಸಾರುತ್ತಿವೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಇಂತದ್ದೊಂದು ಗಂಭೀರ ಆರೋಪವನ್ನು ಮಾಡಿದ್ದಾಗ್ಯೂ ಸರ್ಕಾರದ ಸಚಿವರುಗಳು ಲೆಕ್ಕಪತ್ರವನ್ನು ಜನರ ಮುಂದಿಡದೆ ನಿರ್ಲಜ್ಜತನದಿಂದ ಸಮರ್ಥಿಸಿಕೊಳ್ಳಲು ಹೊರಟಿರುವುದೇ ಅವ್ಯವಹಾರದ  ಅನುಮಾನಗಳನ್ನು ಪುಷ್ಠಿಕರೀಸುತ್ತಿವೆ. ಕೊರೋನ ಸಂಬಂಧಿತ ಖರ್ಚುಗಳ ಬಾಬ್ತಿನಲ್ಲಿ 815 ಕೋ.ರೂಗಳಿಗೆ ಲೆಕ್ಕಪತ್ರ ದಾಖಲೆಗಳೇ ಇಲ್ಲ. ಇದನ್ನೆ ಲೆಕ್ಕಪತ್ರ ಸಮಿತಿ  ಅಧ್ಯಕ್ಷರಾದ ಎಚ್.ಕೆ. ಪಾಟೀಲ್ ಪ್ರಶ್ನಿಸಿದರೆ, ಸ್ಪೀಕರ್ ಮೂಲಕ ಅವರ ಸಾಂವಿಧಾನಿಕ ಹಕ್ಕನ್ನು ಹತ್ತಿಕ್ಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದಾದರೆ ಈ ಹಗರಣದಲ್ಲಿ ಕೇವಲ ಒಂದಿಬ್ಬರು ಸಚಿವರು ಮಾತ್ರ ಭಾಗಿಯಾಗಿಲ್ಲ. ಇಡೀ ಸರ್ಕಾರವೇ ವ್ಯವಸ್ಥಿತವಾಗಿ ಲೂಟಿ ಹೊಡೆಯಲು ನಿಂತಿರುವುದನ್ನು ಸಾಬೀತು ಪಡಿಸುತ್ತಿದೆ.

 ರಾಜ್ಯ ಸರ್ಕಾರ ಕೊರೋನ ನಿಯಂತ್ರಣದಲ್ಲಿ ಮತ್ತು ಸಂಬಂಧಿತ ಜನರ ಹಿತ ಕಾಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಪಿಪಿಟಿ ಕಿಟ್, ವೆಂಟಿಲೇಟರ್, ಮಾಸ್ಕ್, ಸ್ಯಾನಿಟೈಝರ್ ಮತ್ತಿತರ ವೈದ್ಯಕೀಯ ಉಪಕರಣಗಳ ಖರೀದಿಯ 2200 ಕೋ.ರೂಗಳ ಯೋಜನೆಯಲ್ಲಿ ಸಚಿವರುಗಳು ಭರ್ಜರಿ ಭೋಜನ ಮಾಡಿದ್ದಾರೆ.  ಸರ್ಕಾರ 29.50 ಕೋ.ರೂಗಳ ವೆಚ್ಚದಲ್ಲಿ 10 ಲಕ್ಷ ಎನ್-95 ಗುಣಮಟ್ಟದ  ಮಾಸ್ಕ್ ಖರೀದಿಗೆ ವೈದ್ಯಕೀಯ  ಶಿಕ್ಷಣ ನಿರ್ದೇಶನಾಲಯಕ್ಕೆ ಅನುದಾನ ಬಿಡುಗಡೆ ಮಾಡಿ ಸರ್ಕಾರ ಅದೇಶ ಹೊರಡಿಸಿದೆ. (ಆದೇಶ: ಆಕುಕ 70 ಎಫ್‌ಪಿಆರ್2020. ದಿನಾಂಕ: 30.04.2020) ಆದರೆ ಮತ್ತೊಂದು ಪ್ರಸ್ತಾವನೆಯಲ್ಲಿ 49.44 ಕೋ.ಗಳ ವೆಚ್ಚದಲ್ಲಿ ಮಾಸ್ಕ್ ಖರೀದಿಗೆ ಪ್ರಸ್ತಾಪಿಸಿರುವುದನ್ನು ಲೆಕ್ಕಪತ್ರ ಸಮಿತಿ ಸ್ಪಷ್ಟನೆ ಕೋರಿದೆ. ಇದಾವುಕ್ಕೂ ಸರ್ಕಾರವಾಗಲಿ, ಆರೋಗ್ಯ ಸಚಿವರಾಗಲಿ, ವೈದ್ಯಕೀಯ ಸಚಿವರಾಗಲಿ ಉತ್ತರಿಸಿಲ್ಲ. 43 ವೈದ್ಯಕೀಯ ಉಪಕರಣಗಳ ಖರೀದಿಯ 3200 ಕೋ.ರೂಗಳ ಯೋಜನೆಯಲ್ಲಿ ಸೆಕೆಂಡ್ ಹ್ಯಾಂಡ್ ವೆಂಟಿಲೇಟರ್ ಖರೀದಿಸಿರುವುದು ಈಗ ಬಯಲಾಗಿದೆ. ಆರೋಗ್ಯ ಇಲಾಖೆ ಇದರ ಗುಣಮಟ್ಟವನ್ನು ಪತ್ತೆ ಹಚ್ಚಿ ವರದಿ ನೀಡಿದೆ. ಕಳೆದ ಏಪ್ರಿಲ್‌ ನಲ್ಲಿ ಮೊದಲಿಗೆ ಜರ್ಮನಿಯ ಆರ್.ಕೆ.ಸಲ್ಯೂಷನ್ ಕಂಪೆನಿಯಿಂದ ವೆಂಟಿಲೇಟರ್ ಖರೀದಿ ಮಾಡಲು ನಿರ್ಧರಿಸಲಾಯಿತಾದರೂ ನಂತರ ಇದನ್ನು ಕೈಬಿಟ್ಟು ದೆಹಲಿಯ  ಡ್ರಾಗರ್ ಕಂಪೆನಿಯಿಂದ 998 ವೆಂಟಿಲೇಟರ್‌ ಗಳನ್ನು ಖರೀದಿಸಲಾಗುತ್ತದೆ. ರಾಜ್ಯ ವೇರ್ ಹೌಸ್  ಲಾಜಿಸ್ಟಿಕ್  ಆಯುಕ್ತರು  ವೆಂಟಿಲೇಟರ್‌ ಗಳನ್ನು ಪರಿಶೀಲಿಸಿದಾಗ ಅವುಗಳು 46 ಸಾವಿರ ಗಂಟೆಗಳಿಗೂ ಹೆಚ್ಚಿನ ಕಾಲ ಬಳಸಿದ ವೆಂಟಿಲೇಟರ್ ಗಳಾಗಿದ್ದು, ಅವುಗಳಿಗೆ ಹೊಸ ಲೇಬಲ್ ಹಾಕಿ ಸರಬರಾಜು ಮಾಡಿರುವುದು ಬೆಳಕಿಗೆ ಬಂದಿದೆ.

 ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ವೈದ್ಯಕೀಯ ಸಚಿವರು ಹೇಳಿಕೊಳ್ಳುತ್ತಿದ್ದರೂ, ಸರ್ಕಾರ ಟೆಸ್ಟ್‌ ಗಾಗಿ ಹಣ ಖರ್ಚು ಮಾಡಿರುವುದನ್ನು ದಾಖಲಿಸಿದೆ. ಇತ್ತ ಖಾಸಗಿ ಆಸ್ಪತ್ರೆಗಳೂ ಕೂಡ ಟೆಸ್ಟ್‌ ಗಾಗಿ ಜನರಿಂದ ಸುಲಿಯುತ್ತಿದ್ದರೆ ಸರ್ಕಾರ ಕೂಡ ಜನರ ಹೆಸರಲ್ಲಿ ಲೂಟಿ ಹೊಡೆದಿರುವುದು ದಾಖಲೆಗಳೇ ಹೇಳುತ್ತಿವೆ. ಇದೆಲ್ಲಕ್ಕಿಂತ ಈ ನಕಲಿ ವೆಂಟಿಲೇಟರ್‌ ಗಳನ್ನು ಸರಬರಾಜು ಮಾಡಿದ ದೆಹಲಿಯ ಡ್ರಾಗರ್ ಕಂಪೆನಿ ವಿಳಾಸ ಪತ್ತೆ ಪರಿಶೀಲಿಸಿದಾಗ ಅದರ ಅಸ್ತಿತ್ವವೇ ಇಲ್ಲ. ಕಂಪೆನಿ ಕೊಟ್ಟ ವಿಳಾಸದಲ್ಲಿ ಪೆಟ್ರೋಲ್ ಬಂಕ್‌ ವೊಂದಿದೆ. ಇದೊಂದು ನಕಲಿ ಕಂಪೆನಿಯಾಗಿದ್ದು ಸರ್ಕಾರಕ್ಕೆ ವಂಚಿಸಿದೆ. ಇದರ ವಿರುದ್ದ ಕ್ರಿಮಿನಲ್ ಕೇಸು ಹಾಕಬೇಕು ಎಂದು ಲಾಜಿಸ್ಟಿಕ್ ಆಯುಕ್ತರ ವರದಿ ಸಲ್ಲಿಸಿದ್ದರೂ ಸರ್ಕಾರ ಈ ವರದಿಗೆ ಕಿಮ್ಮತ್ತು ನೀಡಿಲ್ಲ. ಈ ದೆಹಲಿ ಕಂಪೆನಿ ಯಾರದ್ದು?, ಜರ್ಮನಿ ಕಂಪೆನಿಯನ್ನು ಕೈಬಿಟ್ಟು ದೆಹಲಿಯ ಈ ನಕಲಿ ಕಂಪೆನಿಯಿಂದಲೇ ವೆಂಟಿಲೇಟರ್ ಖರೀದಿಗೆ ಸೂಚಿಸಿದವರು ಯಾರು?  ಇದರ ಹಿಂದೆ ಬಿಜೆಪಿಯ ದೆಹಲಿ ನಾಯಕರ ಕೈವಾಡವಿದೆಯಾ? ರಾಜ್ಯದ ಆರೋಗ್ಯ ಸಚಿವರು, ವೈದ್ಯಕೀಯ ಸಚಿವರ ಪಾಲು, ಪಾತ್ರ ಎಷ್ಟಿದೆ ಎಂಬುದೆಲ್ಲಾ ಬಯಲಾಗಬೇಕಿದೆ. ಏಪ್ರಿಲ್‌ ನಲ್ಲಿ ವೆಂಟಿಲೇಟರ್ ಖರೀದಿ ವಿಚಾರದಲ್ಲೇ ವೈದ್ಯಕೀಯ ಸಚಿವ ಡಾ. ಸುಧಾಕರ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ನಡುವೆ ಜಗಳ ಬಿದ್ದಿದ್ದು ಅದನ್ನು ಸಿ.ಎಂ ಅವರೇ ಮಧ್ಯ ಪ್ರವೇಶಿಸಿ ಸರಿಪಡಿಸಿದ್ದು ಎಲ್ಲವೂ  ಈಗ ಕೇಳಿ ಬರುತ್ತಿರುವ ಅವ್ಯವಹಾರದ ಭಾಗವೇ ಆಗಿದ್ದವು ಎನ್ನುವುದಕ್ಕೆ ಪುರಾವೆಗಳಾಗಿವೆ.  ಮತ್ತೊಂದು ಹಂತದಲ್ಲಿ ತುಮಕೂರು ರಸ್ತೆಯ  ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನದಲ್ಲಿ ಕೋವಿಡ್ ಆರೈಕೆ ಕೇಂದ್ರ ಸ್ಥಾಪನೆಯಲ್ಲೂ  ನುಂಗಾಟ ನಡೆದಿದೆ. 10,100 ಹಾಸಿಗೆಗಳ ಈ ಕೇಂದ್ರವು ದುಡ್ಡು ಹೊಡೆಯುವ ಸಂತೆಯಾಗಿದೆ.  ಈ ಜಾಗವನ್ನು 4 ತಿಂಗಳ ಕಾಲ ಬಾಡಿಗೆ ಆಧಾರದ ಮೇಲೆ  ಇಲ್ಲಿರುವ ಹಾಸಿಗೆ, ದಿಂಬು, ಹೊದಿಕೆಗಳೆಲ್ಲವೂ ದಿನವೊಂದಕ್ಕೆ 700 ರೂ.ಗಳಂತೆ ಬಾಡಿಗೆ ಕೊಟ್ಟು ಬಳಸಲಾಗುತ್ತಿದೆ. ಇದರ ಒಟ್ಟು ವೆಚ್ಚ 168 ಕೋ.ರೂಗಳಾಗಲಿವೆ. ಈ ಭಾರೀ ಮೊತ್ತದ ವೆಚ್ಚದಲ್ಲಿ ಸ್ವತಂತ್ರ ಕೋವಿಡ್ ಆರೈಕೆ ಕೇಂದ್ರವನ್ನೆ ಕಟ್ಟಬಹುದು  ಅಥವಾ ಎಲ್ಲಾ ವಸ್ತುಗಳನ್ನು  ಜೆಮ್ ಪೋರ್ಟಲ್ ಮೂಲಕ ಖರೀದಿಸಬಹುದಿತ್ತು  ಎಂದು ಹಿರಿಯ ಅಧಿಕಾರಿಯೊಬ್ಬರು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.   168 ಕೋ. ರೂ.ಗಳ ಬಾಬ್ತಿನಲ್ಲೂ ಯಾರ ಕಲ್ಯಾಣ ಅಡಗಿದೆ ಎಂಬುದನ್ನು ಡಿಸಿಎಂ ಡಾ.ಅಶ್ವಥ್ ನಾರಾಯಣ, ಸಚಿವ ಅಶೋಕ್ ಅವರೇ ಉತ್ತರಿಸಬೇಕು. 

 ಪಿಪಿಟಿ ಕಿಟ್‌ ಗಳಿಗೆ ಹೆಚ್ಚಿನ ದರ ನೀಡಿರುವುದನ್ನು ಆರೋಗ್ಯ ಇಲಾಖೆ ಒಪ್ಪಿಕೊಂಡಿದ್ದರೂ ಅದರಲ್ಲಿ ಅಕ್ರಮವಾಗಿಲ್ಲ ಎಂದು ಸಮಜಾಯಿಷಿ ನೀಡಿದೆ. ಆರೋಗ್ಯ ಸಚಿವರ ಶ್ರೀರಾಮುಲು ಕೂಡ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಇಷ್ಟೆಲ್ಲಾ ಆಗಿದ್ದರೂ ರಾಜ್ಯ ಸರ್ಕಾರ ಜನರ ಮುಂದೆ ಲೆಕ್ಕಪತ್ರವನ್ನು ಮಂಡಿಸಿ ತನ್ನ ಸಾಚಾತನವನ್ನು ಸಾಬೀತುಪಡಿಸಿಕೊಳ್ಳಬೇಕಿದೆ. ಸಿದ್ದರಾಮಯ್ಯ ಅವರ ಬಾಯಿ ಮುಚ್ಚಿಸಲು ಅವರ ಒಂದು ಕಾಲದ ಶಿಷ್ಯರಾಗಿದ್ದ ಈಗ ಸಚಿವರಾದ ಡಾ. ಸುಧಾಕರ್, ಸೋಮಶೇಖರ್, ನಾರಾಯಣಗೌಡ ಅವರನ್ನೆ ಛೂ ಬಿಟ್ಟಿರುವ ಬಿಜೆಪಿ ಪಡೆ.  ತಲೆ ಕಾಯ್ದುಕೊಳ್ಳುವ ಕುತಂತ್ರ ಹೆಣೆದಿದೆ.

 ರಾಜ್ಯದ ಜನತೆ ಒಂದೆಡೆ ರೋಗಭೀತಿಯಿಂದ ಮತ್ತೊಂದೆಡೆ ಹಸಿವು, ನಿರುದ್ಯೋಗ ಭೀತಿಯಿಂದ ನರಳುತ್ತಿದ್ದರೆ ರಾಜ್ಯ ಸರ್ಕಾರದಲ್ಲಿ ಸಚಿವರುಗಳು ಪರಸ್ಪರ ಪ್ರತಿಷ್ಠೆ, ಪಾಲು ಪತ್ತೆಗಾಗಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಬೆಂಗಳೂರು ಉಸ್ತುವಾರಿಗಾಗಿ ಡಿಸಿಎಂ ಅಶ್ವಥ್‌ ನಾರಾಯಣ, ಸಚಿವರಾದ ಅಶೋಕ್,  ಡಾ. ಸುಧಾಕರ ಅವರ ನಡುವೆ ಜಿದ್ದಾಜಿದ್ದಿ ನಡೆದಿದ್ದರೆ, ಇತ್ತ ರಾಜ್ಯ ಮಟ್ಟದಲ್ಲಿ ಆರೋಗ್ಯ ಸಚಿವ ಶ್ರೀರಾಮಲು ಮತ್ತು ವೈದ್ಯಕೀಯ ಸಚಿವ ಡಾ.ಸುಧಾಕರ ಅವರ ನಡುವೆ ಪೈಪೋಟಿ ನಡೆದಿದೆ. ಕೋವಿಡ್ ವಿಚಾರದಲ್ಲಿ ಸ್ವತಃ ವೈದ್ಯರೂ ಆಗಿರುವ ಸಚಿವ ಡಾ. ಸುಧಾಕರ್ ಅವರನ್ನು ಮುಖ್ಯಮಂತ್ರಿಗಳು ಹೆಚ್ಚಿನದಾಗಿ ಅವಲಂಬಿತರಾಗಿರುವುದು. ಕೇಂದ್ರದೊಂದಿಗೆ, ಪ್ರಧಾನಿಗಳೊಂದಿಗೆ ವ್ಯವಹರಿಸುವಾಗ ಡಾ. ಸುಧಾಕರ್ ಅವರನ್ನು ಮುಂದಿಟ್ಟುಕೊಂಡಿರುವುದು  ಸರ್ಕಾರದಲ್ಲಿ ಸುಧಾಕರ್ ಅವರಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಂತಾಗಿದೆ. ಇದರಿಂದ  ಅಸಮಾಧಾನಗೊಂಡಿರುವ ಸಚಿವ ಅಶೋಕ್ ಸಿ.ಎಂ. ವಿರುದ್ಧ ಒಂದು ಹಂತದವರೆಗೂ ಅಸಹಕಾರ ಧೋರಣೆಯನ್ನು ತೋರುತ್ತಾ ಕೊನೆಗೂ ಬೆಂಗಳೂರಿನ ಭಾಗಶಃ ಹಿಡಿತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿ ಸಚಿವರುಗಳಿಗೆ  ಜನರ ಆರೋಗ್ಯಕ್ಕಿಂತ ಅವರವರ ರಾಜಕೀಯ ಪ್ರತಿಷ್ಠೆಯೇ ಮುಖ್ಯವಾಗಿದೆ. ಆದರೆ ವೈದ್ಯಕೀಯ ಕೊವಿಡ್ ಉಪಕರಣಗಳ ಖರೀದಿಯಲ್ಲಿನ ಅವ್ಯವಹಾರದ ಬಗ್ಗೆ  ಬಹುತೇಕ ಮೂಲ ಬಿಜೆಪಿ ಸಚಿವರುಗಳು ಬಾಯಿಬಿಡುತ್ತಿಲ್ಲ. ಈ ಅವ್ಯವಹಾರವನ್ನು ಬಯಲಿಗೆಳೆದು ವಿಪಕ್ಷದ ಕೈಗೆ ಕೊಟ್ಟ ಮುರುಗೇಶ್ ನಿರಾಣಿ ಮಂತ್ರಿ ಸ್ಥಾನ ಕೊಡದ ಯಡಿಯೂರಪ್ಪ ವಿರುದ್ಧ ಒಂದು ಹಂತದ ಸೇಡು ತೀರಿಸಿಕೊಂಡಿದ್ದಾರೆ.

 ಆರೋಗ್ಯ ಸಚಿವ ಶ್ರೀರಾಮಲು ಕೂಡ ತಮ್ಮ ಮೂಗಿನ ನೇರಕ್ಕೆ ಎಲ್ಲವೂ ನಡೆಯಬೇಕು ಎಂದು ಹೊರಟು ಅಂತಿಮವಾಗಿ ಡಾ. ಸುಧಾಕರ್ ಅವರ ಮುಂದೆ ಡಮ್ಮಿಯಾಗಿ ಮೂಲೆ ಸೇರಿದ್ದಾರೆ. ರಾಜ್ಯದಲ್ಲಿ ಕೊರೋನ ಏರುಗತಿಯಲ್ಲಿ ಉಲ್ಬಣವಾಗುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ನೆಲಕಚ್ಚಿದ್ದು ಸರ್ಕಾರ ದಿವಾಳಿಯಾಗಿದೆ. ಇಂತಹ ಹೊತ್ತಿನಲ್ಲಿ ಹೊಣೆಗಾರಿಕೆಯಿಂದ ರಾಜ್ಯದ ಜನರ ಹಿತ ಕಾಯಬೇಕಾದ ಸಚಿವರುಗಳೇ ತಿನ್ನಾಟಕ್ಕಿಳಿದಿರುವುದು ಅತ್ಯಂಹ ಹೇಯ ಕೃತ್ಯ.  ಉಲ್ಬಣಗೊಳ್ಳುತ್ತಿರುವ ಕೊರೋನ ತಡೆಗೆ ರಾಜ್ಯವನ್ನು ಮತ್ತೊಂದು ಸುತ್ತು ಲಾಕ್‌ ಡೌನ್ ಕ್ರಮಕ್ಕೆ ಒಳಪಡಿಸುವ ಅನಿವಾರ್ಯತೆ ಇದ್ದರೂ ಜನರಿಗೆ ಅನ್ನ, ನೀರು, ವೈದ್ಯಕೀಯ ಸೌಲತ್ತು ಒದಗಿಸಲು ಸರ್ಕಾರದ ಖಜಾನೆಯಲ್ಲಿ ಬಿಡಿಗಾಸು ಇಲ್ಲ. ಕೇಂದ್ರ ಸರ್ಕಾರ ರಾಜ್ಯಕ್ಕೆ ಕಿಲುಬು ಕಾಸು ಕೊಡದೆ ಭಾಷಣದ ಪುಂಗಿ ಊದುತ್ತಿದೆ. ಇದರ ನಡುವೇ ರಾಜ್ಯ ಸರ್ಕಾರ ತಿರುಪತಿಯಲ್ಲಿ 200 ಕೋ.ರೂ ಸಮುಚ್ಛಯ ನಿರ್ಮಾಣಕ್ಕೆ ಮುಂದಾಗಿರುವುದು ಅವಿವೇಕದ ಪರಮಾವಧಿ.

 ರಾಜ್ಯ ಆಡಳಿತಾತ್ಮಕವಾಗಿ, ಆರ್ಥಿಕವಾಗಿ ಐಸೊಲೇಷನ್‌ ನಲ್ಲಿದೆ. ಜನರ ಅನ್ನ-ಆರೋಗ್ಯದ ದುಡ್ಡಿನಲ್ಲೂ ಲೂಟಿಯಂತ ಅಮಾನುಷ ಕೃತ್ಯ ನಡೆದಿದೆ.  ಯಾವೊಬ್ಬ ಸಂಸದನಿಗೂ ಪ್ರಧಾನಿ ಮೋದಿಯ ಮುಂದೆ ನಿಂತು ರಾಜ್ಯದ ಜನರ ಹಿತ ಕಾಯಲು ಆರ್ಥಿಕ ನೆರವು ನೀಡಿ ಎಂದು ಕೇಳುವ ಧೈರ್ಯವಿಲ್ಲದ ಜನದ್ರೋಹಿಗಳಂತೆ ಕಾಣುತ್ತಿದ್ದಾರೆ.

 ಕೊರೋನ ಇಡೀ ಮನುಷ್ಯ ಕುಲವನ್ನೆ ತಲ್ಲಣಗೊಳಿಸಿದೆ. ನಾಗರಿಕರನ್ನು ಈ ಸೋಂಕಿನಿಂದ ಪಾರು ಮಾಡಬೇಕಾದ ಸರ್ಕಾರಗಳೇ ಕ್ಷುಲ್ಲಕ ರಾಜಕೀಯ, ಭ್ರಷ್ಟಾಚಾರಗಳಲ್ಲಿ ಮುಳುಗಿರುವಾಗ ಈ ದೇಶದ ಜನಸಮುದಾಯ ಅಕ್ಷರಶಃ ಅನಾಥ ಪ್ರಜ್ಞೆಯಿಂದ ಸುಳ್ಳು ಭರವಸೆ, ಪೊಳ್ಳು ಭಾಷಣಗಳನ್ನು ಕಿವಿಗೆ ತುಂಬಿಕೊಳ್ಳುತ್ತಾ  ಸೋಂಕಿನೊಂದಿಗೆ ಸೆಣಸಾಡುವಂತಾಗಿದೆ.

Join Whatsapp