ವೈದ್ಯಕೀಯ ಶಿಕ್ಷಣದ ಅವಿಭಾಜ್ಯ ಅಂಗವಾಗಿರುವ ಅರೆವೈದ್ಯಕೀಯ ಕೋರ್ಸ್ ಗೆ ಪ್ರತ್ಯೇಕವಾಗಿ ಸರಕಾರದ ಮಂಡಳಿ ಇಲ್ಲದ ಕಾರಣ ಅರೆವೈದ್ಯಕೀಯ ಪದವೀಧರರು ಮತ್ತು ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ. ತಕ್ಷಣ ರಾಜ್ಯ ಸರಕಾರವು ವಿದ್ಯಾರ್ಥಿಗಳಿಗೆ, ಪದವೀಧರರಿಗೆ ಆಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಸರಕಾರದ ಅಧೀನದಲ್ಲಿ ಅರೆವೈದ್ಯಕೀಯ ಮಂಡಳಿ ಸ್ಥಾಪಿಸಬೇಕೆಂದು ಕ್ಯಾಂಪಸ್ ಫ್ರಂಟ್ ಆಗ್ರಹಿಸಿದೆ.
ಈ ಕುರಿತು ಹೇಳಿಕೆ ನೀಡಿದ ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಸಾದಿಕ್ ಜಾರತ್ತಾರ್, ರಾಜ್ಯದಲ್ಲಿ ವಿದ್ಯಾರ್ಥಿಗಳು ವಿವಿಧ ಕಾಲೇಜುಗಳಿಂದ ವರ್ಷಾನುವರ್ಷ ಬಹುದೊಡ್ಡ ಸಂಖ್ಯೆಯಲ್ಲಿ ಅರೆವೈದ್ಯಕೀಯ ಪದವಿಯನ್ನು ಪಡೆದು ತೇರ್ಗಡೆಯಾಗುತ್ತಾರೆ. ಆದರೆ, ಸರಕಾರದಿಂದ ಅಂಗೀಕೃತವಾದ ಅಧಿಕೃತ ಅರೆವೈದ್ಯಕೀಯ ಮಂಡಳಿ ಇಲ್ಲಿಯವರೆಗೂ ಸ್ಥಾಪನೆಯಾಗಿಲ್ಲ. ಹಲವು ಖಾಸಗಿ ನೋಂದಣಿಯಾದ ಸಂಸ್ಥೆಗಳಿದ್ದರೂ ಈಗ ಅದಕ್ಕೆ ರಾಷ್ಟ್ರ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಮಾನ್ಯತೆ ಇಲ್ಲದೆ ಇರುವುದರಿಂದ ಅರೆವೈದ್ಯಕೀಯ ಪದವೀಧರರು ಉದ್ಯೋಗಕ್ಕಾಗಿ ಪರದಾಡುವಂತಾಗಿದೆ . ಅಂತರ್ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವು ಈಡೇರುತ್ತಿಲ್ಲ ಎಂದಿದ್ದಾರೆ.
ಎಂತಹ ಆರೋಗ್ಯ ತುರ್ತುಪರಿಸ್ಥಿತಿ ಬಂದರೂ, ವಿವಿಧ ಸೋಂಕುಗಳು ಜಗತ್ತಿಗೆ ಪರಿಚಯಗೊಂಡರೂ ಜನರ ರಕ್ಷಣೆಗಾಗಿ, ಜನ ಜೀವನದ ಸುಧಾರಣೆಗಾಗಿ ಮೊದಲನೆಯ ಸಾಲಿನಲ್ಲಿ ನಿಂತು ಅರೆವೈದ್ಯರು ಕಾರ್ಯ ನಿರ್ವಹಿಸಿದ್ದಾರೆ. ಸರಕಾರದ ಅಧೀನದಲ್ಲಿರುವ ನೊಂದಣಿ ಸಂಸ್ಥೆ ಸ್ಥಾಪಿಸಿ ಅರೆವೈದ್ಯಕೀಯ ಸಿಬ್ಬಂದಿಗಳ ಭವಿಷ್ಯವನ್ನು ಬೆಳಗಿಸುವಲ್ಲಿ ಅತಿ ಶೀಘ್ರದಲ್ಲಿ ಕಾರ್ಯಪ್ರವೃತ್ತರಾಗಬೇಕೆಂದು ಅವರು ಆಗ್ರಹಿಸಿದ್ದಾರೆ.