ರಾಜ್ಯದ ಮಲೆನಾಡು, ಕರಾವಳಿಯಲ್ಲಿ ಭಾರೀ ಪ್ರಮಾಣದಲ್ಲಿ ಮುಂಗಾರು ಮಳೆಯಾಗುತ್ತಿದ್ದು, ನಾಳೆಯಿಂದ ಮಳೆಯ ಆರ್ಭಟ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿಯಲ್ಲಿ ಮಳೆಯಿಂದ ಅನೇಕ ಮನೆ, ರಸ್ತೆಗಳು ಹಾನಿಯಾಗಿದ್ದು, ಹಲವೆಡೆ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ಇಂದಿನಿಂದ ಜೂನ್ 17ರವರೆಗೆ ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಇಂದಿನಿಂದ ಐದು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ನಾಳೆ ಕೂಡ ರೆಡ್ ಅಲರ್ಟ್ ಕೂಡ ನೀಡಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಜೂನ್ 16 ಹಾಗೂ 17ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಉಳಿದ ದಿನಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡಿನಲ್ಲಿ ನಾಳೆಯಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ಮಾಹಿತಿ ನೀಡಿದ್ದಾರೆ.
ಹೀಗಾಗಿ, ಉತ್ತರ ಒಳನಾಡಿನಲ್ಲಿ ಜೂನ್ 14ರಿಂದ 2 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಯಾದಗಿರಿ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಕರ್ನಾಟಕದ ಉಡುಪಿ, ಒಡಿಶಾ, ಕೇರಳದ ಕೊಜಿಕೊಡೆ, ವಯನಾಡಿನಲ್ಲಿ ಇಂದಿನಿಂದ ಜೂನ್ 15ರವರೆಗೆ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳದಲ್ಲಿ ಇನ್ನೂ 3 ದಿನ ಅಧಿಕ ಮಳೆಯಾಗಲಿದೆ.
ಕೇರಳ ರಾಜ್ಯದಲ್ಲೂ ಇಂದಿನಿಂದ 3 ದಿನ ಅಧಿಕ ಮಳೆಯಾಗಲಿದೆ. ಹೀಗಾಗಿ ಕೇರಳದ ಜಿಲ್ಲೆಗಳಾದ ಮಲಪ್ಪುರಂ, ಕೊಜಿಕೊಡೆ, ವಯನಾಡು, ಕಣ್ಣೂರು ಮತ್ತು ಕಾಸರಗೋಡಿನಲ್ಲಿ ನಾಳೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವರ್ಷ ಜೂನ್ 3ಕ್ಕೆ ಕೇರಳವನ್ನು ಪ್ರವೇಶಿಸಿದ್ದ ನೈರುತ್ಯ ಮಾನ್ಸೂನ್ ಜೂನ್ 6ರಂದು ಕರ್ನಾಟಕವನ್ನು ಪ್ರವೇಶಿಸಿತ್ತು.
ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ , ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಇಂದಿನಿಂದ 1 ವಾರ ಹಳದಿ ಅಲರ್ಟ್ ಘೋಷಿಸಲಾಗಿದೆ.
ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಈಗಾಗಲೇ ಜಲಾಶಯಗಳಿಗೆ ಭಾರೀ ನೀರು ಹರಿದುಬರುತ್ತಿದ್ದು, ನದಿಗಳು ತುಂಬಿಹರಿಯುತ್ತಿವೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿರುವುದರಿಂದ ಮುಂದಿನ 1 ವಾರಗಳ ಕಾಲ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.