ರಾಜೀನಾಮೆ ರಾಜಿಕೀಯ

0
45

ರಾಜ್ಯ ರಾಜಿಕೀಯದಲ್ಲಿ ರಾಜೀನಾಮೆ ಪ್ರಹಸನ ಮುಂದುವರಿದಿದೆ...

ಜನಪ್ರತಿನಿಧಿಗಳ ಅಧಿಕಾರದ ಗೀಳು ಅಭಿವೃದ್ಧಿ ಕಾರ್ಯಗಳಿಗೆ ದೊಡ್ಡ ಪೆಟ್ಟು ನೀಡಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಬಿಜೆಪಿ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಅವ್ಯಾಹತವಾಗಿ ನಡೆಸುತ್ತಲೇ ಬಂದಿದೆ. ಮತ್ತೊಂದೆಡೆ ಮೈತ್ರಿ ಪಕ್ಷಗಳು ಸರಕಾರ ಉಳಿಸಿಕೊಳ್ಳುವಲ್ಲೇ ಕಾರ್ಯಮಗ್ನವಾಗಿವೆ.

ಒಂದೆಡೆ ರಾಜ್ಯದ ಜನ ಭೀಕರ ಬರಗಾಲಕ್ಕೆ ತುತ್ತಾಗಿ ತತ್ತರಿಸಿ ಹೋಗಿದ್ದಾರೆ. ಮುಂಗಾರು ಮಳೆ ಪ್ರಾರಂಭವಾಗಿ ತಿಂಗಳು ಗತಿಸಿದರೂ ವರುಣ ಧರೆಗಿಳಿಯುತ್ತಿಲ್ಲ್ಲ. ಕೆಲವು ಕಡೆ ಧಾರಾಕಾರ ಮಳೆಯಾಗಿದೆ; ಇನ್ನೊಂದೆಡೆ ಮಳೆ ಇಲ್ಲದೆ ಬೆಳೆಗಳು ನೆಲಕಚ್ಚಿವೆ. ಮಳೆಗಾಲ ಆರಂಭವಾಗಿದ್ದರೂ ಸಹಿತ ಇನ್ನು ಕೆಲವು ಕಡೆ ಕುಡಿಯುವ ನೀರಿಗೆ ಹಾಹಾಕಾರ ಇದೆ.

ಮಳೆ ಕೈಕೊಟ್ಟಿರುವುದರಿಂದ ರೈತ ಬಿತ್ತನೆ ಕಾರ್ಯ ಆರಂಭಿಸದೇ, ತಲೆ ಮೇಲೆ ಕೈ ಹೊತ್ತು ಮುಗಿಲು ನೋಡುತ್ತಾ ಕುಳಿತ್ತಿದ್ದಾನೆ. ಇಂಥ ಸಂಕಷ್ಟದ ಪರಿಸ್ಥಿತಿಯಲ್ಲಿ ಜನರಿಂದ ಆರಿಸಿ ಬಂದಿರುವ ಜನಪ್ರತಿನಿಧಿಗಳು ಕುರುಡಾದರೆ ಮುಂದೇನು ಗತಿ?

ಕ್ಷೇತ್ರ, ರಾಜ್ಯದ ಅಭಿವೃದ್ಧಿ ಮಾಡುತ್ತೀವಿ; ಮತ ನೀಡಿ ಎಂದು ಮತ ಪಡೆದು ಗೆದ್ದ ಬಳಿಕ ಪ್ರಮಾಣವಚನ ಸ್ವೀಕರಿಸುವಾಗಿರುವ ಬದ್ಧತೆ ಅಧಿಕಾರ ಸಿಕ್ಕ ನಂತರ ಮರೆಯಾಗುವುದೇಕೆ? ಅಧಿಕಾರಕ್ಕೋಸ್ಕರ ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿರುವ ಬೃಹನ್ನಾಟಕ ನಿಜಕ್ಕೂ ನಾಚಿಕೆಗೇಡಿನದು.

ಮತ್ತೆ ರೆಸಾರ್ಟ್ ರಾಜಕಾರಣ:

ಆರು ಬಾರಿ ಆಪರೇಷನ್ ಕಮಲಕ್ಕೆ ಕೈ ಹಾಕಿ ವಿಫಲವಾಗಿದ್ದ ಬಿಜೆಪಿ ಇದೀಗ ಏಳನೇ ಬಾರಿಗೆ ಕೈ ಹಾಕಿದೆ. ಈ ಹೈಡ್ರಾಮಾದಿಂದ ರಾಷ್ಟ್ರ ರಾಜಕಾರಣವೇ ಕರ್ನಾಟಕದತ್ತ ತಿರುಗಿ ನೋಡುವಂತೆ ಮಾಡಿದೆ. ಈ ಹಿಂದೆ ದೋಸ್ತಿ ಹಾಗೂ ಬಿಜೆಪಿ ಮಧ್ಯೆ ಅಧಿಕಾರಕ್ಕೋಸ್ಕರ ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪ ಮಾಡಿದ್ದಾಯಿತು. ಧರ್ಮಸ್ಥಳದ ಶ್ರೀಮಂಜುನಾಥನ ಮೇಲೆ ಆಣೆ ಪ್ರಮಾಣ ಮಾಡಿದ ಮೇಲೆ ಯಡಿಯೂರಪ್ಪಆಪರೇಷನ್ ಕಮಲ ಕೈ ಹಾಕಿ, ತಗುಲಿ ಹಾಕಿಕೊಂಡ ಬಳಿಕ ತಪ್ಪೊಪ್ಪಿಕೊಂಡಿದ್ದು ಆಯಿತು.

ಬಿಎಸ್‌ವೈ ತಪೊಪ್ಪಿಗೆ ನಂತರ ಕಾಂಗ್ರೆಸ್ ಜೆಡಿಎಸ್ ನಾಯಕರು ಮುಗಿಬಿದ್ದ ಬಳಿಕ ಕಮಲ ತಣ್ಣಗಾಗಿತ್ತು. ಇದೀಗ ಕಾಂಗ್ರೆಸ್‌ನ 11 ಶಾಸಕರು, ಜೆಡಿಎಸ್‌ನ 4 ಜನ ಶಾಸಕರು ಸೇರಿ ಒಟ್ಟು 15 ಶಾಸಕರು ರಾಜೀನಾಮೆ ನೀಡಿ ಮುಂಬೈನ ಖಾಸಗಿ ಹೋಟೆಲ್‌ಗೆ ತೆರಳಿದ್ದು, ಮತ್ತೆ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ.

ಜನರ ಹಿತ ಕಾಪಾಡುವಲ್ಲಿ ಜನಪ್ರತಿನಿಧಿಗಳು ವಿಫಲವಾಗಿದ್ದು, ಅಧಿಕಾರಕ್ಕೋಸ್ಕರ, ಪ್ರಚಾರಕ್ಕೋಸ್ಕರ ರಾಜೀನಾಮೆ ರಾಜಕೀಯ ಪ್ರಾರಂಭಿಸಿದ್ದಾರೆ. ಇನ್ನು ಕ್ಷೇತ್ರದ ಅಭಿವೃದ್ಧಿಯ ಕುರಿತು ಯಾವೊಬ್ಬ ಶಾಸಕರು ಮಾತನಾಡದೇ ಕೇವಲ ಅಧಿಕಾರ ಸಿಗಲಿಲ್ಲವೆಂದು ಅವರಿವರ ಮೇಲೆ ಅಸಮಾಧಾನ ಹೊರ ಹಾಕಿ ರಾಜೀನಾಮೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ?

ರಾಜ್ಯದ ಜನರಿಗೆ ಸರಿಯಾಗಿ ಮಳೆಯಿಲ್ಲದ ಕಾರಣ ಊರು ಬಿಟ್ಟು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಗಮನ ಹರಿಸುವುದು ಬಿಟ್ಟು ಅಧಿಕಾರದ ಹಿಂದೆ ಬಿದ್ದು ರಾಜೀನಾಮೆಗೆ ಮುಂದಾಗುತ್ತಿರುವುದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ದೋಸ್ತಿ ಎಂಎಲ್‌ಎಗಳಿಗೆ ಆಮಿಷವೊಡ್ಡಿ ಪಕ್ಷಕ್ಕೆ ಕರೆತರುವುದರ ಜೊತೆಗೆ ನೂತನ ಸರಕಾರ ರಚಿಸಲು ಮುಂದಾಗಿರುವುದು ಪಜಾಪ್ರಭುತ್ವದ ಅಣಕವಲ್ಲದೇ ಮತ್ತೇನು?

ಮತ್ತೊಂದೆಡೆ ಅಸಮಾಧಾನದ ಅಸ್ತ್ರ, ರಾಜೀನಾಮೆ ಎಂಬ ಸುತ್ತಿಗೆ ಹಿಡಿದು ಸರಕಾರವನ್ನ ಅಸ್ಥಿರಗೊಳಿಸಲು ಮುಂದಾಗಿರುವ ಶಾಸಕರನ್ನ ಹಿಡಿದಿಟ್ಟುಕೊಳ್ಳುವಲ್ಲಿಯೇ ಸಮ್ಮಿಶ್ರ ಸರಕಾರ ಮಗ್ನವಾಗಿದೆ.

ಇನ್ನು ಬಿಜೆಪಿ ಕಳೆದ ಕೆಲ ದಿನಗಳ ಹಿಂದೆ ದೋಸ್ತಿ ಸರಕಾರದ ವಿರುದ್ಧ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ಮಾಡಿತ್ತು. ಆದರೆ ಅದು ಯಾವ ಪುರುಷಾರ್ಥಕ್ಕೆ ಎಂಬುವುದೇ ಯಕ್ಷ ಪ್ರಶ್ನೆಯಾಗಿದೆ. ವಿಪಕ್ಷ ಸ್ಥಾನದಲ್ಲಿರುವವರು ಸರಕಾರ ದಾರಿ ತಪ್ಪಿದಾಗ, ಸರಿ ಹಾದಿಗೆ ತರುವ ಕೆಲಸ ಬಿಟ್ಟು ಸರಕಾರ ಪತನಗೊಳಿಸುವಲ್ಲಿ ವಿಪಕ್ಷ ನಾಯಕ ಯಡಿಯೂರಪ್ಪ ಕಾರ್ಯ ಪ್ರವೃತ್ತರಾಗಿದ್ದಾರೆಯೇ ಎಂಬ ಪ್ರಶ್ನೆ ಕಾಡತೊಡಗಿದೆ.

ರಾಜ್ಯದ ಅನ್ನದಾತ ಕಷ್ಟದಲ್ಲಿ ಕೈತೊಳೆಯುತ್ತಿದ್ದರೂ, ಕನಿಕರ ಬಾರದ ಕಮಲಕ್ಕೆ ಆಪರೇಷನ್ ಮಾಡಲು ಅಷ್ಟೊಂದು ಹಣ ಎಲ್ಲಿಂದ ಬಂತು? ಅಷ್ಟಕ್ಕೂ ಆಪರೇಷನ್ ಮಾಡಲು ಕಮಲ ಕೈಗೆ ಕಾಂಚಾಣ ಕೊಟ್ಟವರ್ಯಾರು..? ಇನ್ನು ಸ್ವಿಸ್ ಬ್ಯಾಂಕಿನಲ್ಲಿರೋ ಕಪ್ಪುಹಣ ತರುತ್ತೇನೆ ಅಂತಾ ಎರಡನೇ ಬಾರಿಗೆ ದೆಹಲಿ ಗದ್ದುಗೆ ಏರಿರುವ ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಆಪರೇಷನ್‌ಗೆ ಕುಮ್ಮಕ್ಕು ಕೊಟ್ಟಿರಬಹುದೇ? ಈ ಎಲ್ಲಾ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.

ಈ ಹಿಂದೆ ಯಡಿಯೂರಪ್ಪ ಅವರ ಧ್ವನಿ ಎನ್ನಲಾದ ಆಡಿಯೋ ವೈರಲ್‌ನಲ್ಲಿ  ಹಣಕೊಟ್ಟು ಸ್ಪೀಕರ್ ಅಷ್ಟೇ ಅಲ್ಲ ಜಡ್ಜ್‌ಗಳನ್ನು ಬುಕ್ ಮಾಡಿದ್ದೇವೆ ಎಂದು ಹೇಳಲಾಗಿತ್ತು. ರಾಜ್ಯದಲ್ಲಿ ನಡೆಯುತ್ತಿರುವ ಮೆಗಾ ಡ್ರಾಮಾ ಕಣ್ತುಂಬಿಸಿಕೊಂಡು ಹೈರಾಣವಾಗಿರುವ ರಾಜ್ಯದ ಜನತೆ ಅಕ್ಷರಶಃ ಜವಾಬ್ದಾರಿ ಮರೆತ ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಅನ್ನದಾತನ ಬಗ್ಗೆ ಮೊಸಳೆ ಕಣ್ಣೀರು:

ಇತ್ತೀಚಿನ ಚುನಾವಣೆಗಳಲ್ಲಿ ರೈತರನ್ನೇ ಟಾರ್ಗೆಟ್ ಮಾಡುವ ನಾಯಕರು ಅಧಿಕಾರದ ಆಸೆಗೆ ಸಾಲಮನ್ನಾ ಎಂಬ ಅಸ್ತ್ರ ಪ್ರಯೋಗಿಸುತ್ತಾರೆ. ಆದರೆ ಅನ್ನದಾತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನೀಡುತ್ತೇವೆ ಅಂತಾ ಯಾವ ಸರಕಾರವೂ ಭರವಸೆ ಕೊಡ್ತಿಲ್ಲಾ. ಈ ಬಗ್ಗೆ ರೈತರು ನಿರಂತರ ಹೋರಾಟ ನಡೆಸುತ್ತಾ ಬರುತ್ತಿದ್ದರೂ ಯಾವುದೇ ಪ್ರಯೋಜನವಾಗ್ತಿಲ್ಲ.

ಅದೇ ಶಾಸಕರು ಸಚಿವ ಸ್ಥಾನಕ್ಕಾಗಿ ಅಸಮಾಧಾನಗೊಂಡು ರಾಜೀನಾಮೆ ಎಂಬ ಅಸ್ತ್ರ ಪ್ರಯೋಗಿಸಿದರೆ ಬಂಡಾಯ ಎದ್ದಿರುವ ಶಾಸಕರು ಪಾತಾಳದಲ್ಲಿ ಅಡಗಿ ಕುಳಿತ್ತಿದ್ದರೂ ಓಡಿ ಹೋದವರನ್ನ ಹುಡುಕಿ ಕರೆತಂದು ಅವರು ಕೇಳಿದ ಸ್ಥಾನ ಕೊಟ್ಟು ಗೌರವಿಸಲಾಗುತ್ತೆ. ಅದೇ ಅನ್ನದಾತ ಹಕ್ಕುಗಳಿಗಾಗಿ ಬೀದಿಗಿಳಿದು ಪ್ರತಿಭಟಿಸಿದರೆ ಬೆತ್ತದ ಏಟು ನೀಡಿ ಅವಮಾನಿಸಲಾಗುತ್ತೆ. ಇದು ಇಂದಿನ ರಾಜ್ಯದ ರಾಜಕೀಯದ ಚಿತ್ರಣ.

ಕಾವೇರಿ ಹೋರಾಟ ದಿನೇ ದಿನೇ ಕಾವೇರುತ್ತಿದೆ. ಮಹದಾಯಿ ಮಾತು ಮಾರ್ಧನಿಸುತ್ತಿದ್ದರೂ ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಈ ಎರಡು ಸಮಸ್ಯೆಗಳು ಬಗೆಹರಿದರೆ ರೈತರ ಬದುಕು ಹಸನಾಗುತ್ತದೆ. ಹಸನಗೊಳಿಸಲು ಅಧಿಕಾರದ ವ್ಯಸನದಿಂದ ಜನಪ್ರತಿನಿಧಿಗಳು ಮಾತ್ರ ಹೊರ ಬರುತ್ತಿಲ್ಲ.

ಸದ್ಯ ಆಪರೇಷನ್ ಕಮಲದ ಕಹಳೆ ದೇಶಾದ್ಯಂತ ಮೊಳಗಿದ್ದು, ಬಂಡಾಯಗಾರರ ರಾಜೀನಾಮೆಯಿಂದ ಸಮ್ಮಿಶ್ರ ಸರಕಾರದ ಜಂಘಾಬಲವೇ ಅಡಗಿ ಹೋಗಿದೆ. ಸರಕಾರ ಉಳಿಸಿಕೊಳ್ಳಲು ದೋಸ್ತಿಗಳು ತಂತ್ರ ಹೆಣೆಯುತ್ತಿದ್ದು, ಅಸಮಾಧಾನ ಶಮನಗೊಳಿಸಲು ಸರ್ಕಸ್ ನಡೆಸುತ್ತಿದ್ದಾರೆ.

ಗಂಡ ಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಗದ್ದುಗೆ ಗುದ್ದಾಟದ ಮಧ್ಯೆ, ಅಧಿಕಾರದ ಕಿತ್ತಾಟದ ನಡುವೆ ರಾಜ್ಯದ ಜನರು ಅನಾಥರಾಗಿದ್ದಾರೆ. ಜನರ ಕಣ್ಣೀರೊರೆಸುವ ಜನಪ್ರತಿನಿಧಿಗಳು ಜಾರಿಕೊಳ್ಳುತ್ತಿದ್ದು, ಜೂಜಾಟದಲ್ಲಿ ಸಿಲುಕಿಕೊಂಡಿದ್ದಾರೆ.

ಒಟ್ಟಾರೆ, ಸಿಎಂ ಕುಮಾರಸ್ವಾಮಿ ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಎರಡು ಪಕ್ಷಗಳ ಮಧ್ಯೆ ಸಮನ್ವಯ ಸಾಧಿಸುವಲ್ಲಿಯೂ ಸೋತಿದ್ದು, ಅದಕ್ಕೋಸ್ಕರ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇವೆ ಅಂತಾ ಬಂಡಾಯ ಬಣದ ನಾಯಕತ್ವ ವಹಿಸಿರುವ ಹುಣಸೂರು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಘಂಟಾಘೋಷವಾಗಿ ಸಾರಿದ್ದಾರೆ.

ರಾಜ್ಯ ಹಾಗೂ ಕ್ಷೇತ್ರದ ಜನತೆ ಮಾತ್ರ ಪ್ರತಿದಿನ ಜನಪ್ರತಿನಿಧಿಗಳ ಅಧಿಕಾರದ ಗೀಳಿನ ಹೈಡ್ರಾಮವನ್ನು ನೋಡುತ್ತಲೇ ಬೇಸತ್ತು ಹೋಗಿದ್ದಾರೆ.

ವಿಧಾನಸೌಧದಲ್ಲಿ ಜಟಾಪಟಿ:

ಇನ್ನು ವಿಧಾನಸೌಧದಲ್ಲಿ ಭಾರೀ ಜಟಾಪಟಿಯೇ ನಡೆದು ಇಡೀ ರಾಜ್ಯದ ಜನತೆ ತಲೆತಗ್ಗಿಸುವಂತಾಯಿತು. ಸಚಿವ ಎಂ.ಟಿ.ನಾಗರಾಜ್, ಶಾಸಕ ಡಾ.ಕೆ.ಸುಧಾಕರ್ ರಾಜೀನಾಮೆ ನೀಡಿ ಹೊರಬರುತ್ತಿದ್ದಂತೆ ಸುಧಾಕರ್‌ರನ್ನು ಹಿಡಿದು ಎಳೆದಾಡಿದರು. ಈ ಸಂದರ್ದಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿಯೇ ನಡೆಯಿತು. ವಿಧಾನಸೌಧಕ್ಕೆ ಖುದ್ದು ಪೊಲೀಸ್ ಆಯುಕ್ತರೇ ಹಾಜರಾಗಿ ಪರಿಸ್ಥಿತಿ ತಹಬದಿಗೆ ತರಲು ಹರಸಾಹಸ ನಡೆಸಿದರು. ಕಡೆಗೆ ರಾಜ್ಯಪಾಲರ ಅಣತಿಯಂತೆ ಅವರನ್ನು ರಾಜಭವನಕ್ಕೆ ಕರೆದೊಯ್ಯಲಾಯಿತು.

ತಡರಾತ್ರಿ ಎಸ್.ಟಿ.ಸೋಮಶೇಖರ್ ಬೆಂಗಳೂರಿಗೆ ಆಗಮಿಸುತ್ತಲೇ ಅವರನ್ನು ಸಂಪರ್ಕಿಸಲು ಡಿ.ಕೆ.ಶಿವಕುಮಾರ್ ವ್ಯರ್ಥ ಪ್ರಯತ್ನ ನಡೆಸಿದರು. ಸುಪ್ರೀಂ ಆದೇಶದಂತೆ ಪೊಲೀಸರ ಸರ್ಪಗಾವಲಿನಲ್ಲಿ ಬಂದ ಅತೃಪ್ತರು ಸ್ಪೀಕರ್ ಎದುರಲ್ಲೇ ರಾಜೀನಾಮೆ ಪತ್ರ ಬರೆದು ಹರಿಬಿರಿಯಲ್ಲಿ ಮುಂಬೈನತ್ತ ಪ್ರಯಾಣಿಸಿದರು. ಈ ಎಲ್ಲಾ ದೊಂಬರಾಟಗಳು ನಿಜಕ್ಕೂ ಪ್ರಜಾಪ್ರಭುತ್ವವನ್ನೇ ಅಣಕಿಸುವಂತಿತ್ತು.

ಬಿಜೆಪಿಯ ಮೇಲೆ ಪಾಪದ ಗಂಟು:

ಬಿಜೆಪಿ ಅಧಿಕಾರ ಲಾಲಸೆಯಿಂದ ಏನೆಲ್ಲಾ ಹರಕತ್ತು ನಡೆಸಿದರೂ ಮುಂದೊಂದು ದಿನ ಕಾಂಗ್ರೆಸ್‌ಗೆ ಬಂದೊದಗಿದ ಗತಿಯೇ ಎದುರಾಗಲಿದೆ. ಅತೃಪ್ತರು ಅಧಿಕಾರದ ಗೀಳಿಗೆ ಬಿದ್ದು ಇಂದು ಪಕ್ಷಕ್ಕೇ ಗುಡ್‌ಬೈ ಹೇಳಿದ್ದಾರೆ. ನಾಳೆ ದಿನ ಬಿಜೆಪಿಯಲ್ಲೂ ತಮ್ಮ ಬೇಳೆ ಬೇಯದಿದ್ದರೇ ಕೈ ಕೊಡದಿರಲಾರರು ಎಂಬುದಕ್ಕೆ ಗ್ಯಾರಂಟಿಯಾದರೂ ಏನು?

ಜನಪ್ರತಿನಿಧಿಗಳು ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡಬೇಕು. ಜನರ ಅಣತಿಯನ್ನೆ ಬದಿಗೊತ್ತಿ ಅಧಿಕಾರಕ್ಕೆ ಕಚ್ಚಾಡುವುದು ನಿಜಕ್ಕೂ ನಾಚಿಕೆಗೇಡು. ಇನ್ನಾದರೂ ಜನ ಎಚ್ಚೆತ್ತುಕೊಳ್ಳಬೇಕಿದೆ. ಸ್ವಾರ್ಥ ಲಾಲಸೆಯ ರಾಜಕಾರಣಿಗಳನ್ನು ಬದಿಗೊತ್ತಿ ನಿಜವಾದ ಪ್ರಜಾಪ್ರಭುತ್ವ ಆಶಯಗಳಿಗೆ ತಕ್ಕಂತೆ ಕೆಲಸ ಮಾಡುವವರಿಗೆ ಮತ ಹಾಕಬೇಕಿದೆ. ಇಲ್ಲವಾದರೆ ರಾಜಕೀಯ ದೊಂಬರಾಟಕ್ಕೆ ನಾವೇ ಹೊಣೆಯಾಗಬೇಕಾದೀತು…

LEAVE A REPLY

Please enter your comment!
Please enter your name here