ರಮಝಾನ್: ಪುಣ್ಯಗಳ ವಸಂತ ಕಾಲ

0
184

-ಶಾಹಿದಾ ತಸ್ನೀಮ್

ಒಣಗಿದ ಭೂಮಿಯನ್ನು ಪುನಃ ಹಸುರಾಗಿಸಲು ಬರುವ ಮಳೆರಾಯನಂತೆ ದುರ್ಬಲವಾದ ಧರ್ಮನಿಷ್ಠೆಯನ್ನು ಪುನಃ ಬಪಡಿಸಲು ರಮಝಾನ್ ಆಗಮಿಸಿದೆ. ಕಡು ಬೇಸಿಗೆಯಲ್ಲಿ ನೀರಿನ ಆಗರಗಳೆಲ್ಲವೂ ಬತ್ತಿ ಹೋಗಿದ್ದರೂ, ಕೆಲವು ನೀರಿನ ಸೆಳೆಗಳು ಜೀವಂತವಾಗಿರುತ್ತವೆ ಹಾಗೂ ಭೂಮಿಯ ಆಳದಲ್ಲಿ ನೀರಿನ ಒರತೆಗಳು ಹರಿಯುತ್ತಿರುತ್ತವೆ. ಅಂತೆಯೇ ಮನುಷ್ಯನ ಈಮಾನ್, ಧರ್ಮನಿಷ್ಠೆ ಅದರ ಕಸುವುಗಳನ್ನು ಕಳೆದುಕೊಂಡಿದ್ದರೂ ಸಂಪೂರ್ಣ ನಿರ್ಜೀವವಾಗಿರುವುದಿಲ್ಲ. ಈಮಾನ್‌ನ ಸೆಳೆ ಜೀವಂತವಾಗಿರುತ್ತದೆ. ಮಳೆಯ ಆಗಮನದಿಂದ ಎಲ್ಲಾ ನೀರಿನ ಸೆಳೆಗಳಲ್ಲೂ ನೀರು ತುಂಬಿ ಭೂಮಿ ಬೇಕಾದಷ್ಟನ್ನು ಹೀರಿ ಜೀವಕಳೆಯಾಗಿಬಿಡುತ್ತದೆ. ಅಂತೆಯೇ ರಮಝಾನ್ ಆಗಮನದಿಂದ ಈಮಾನ್‌ನ ಒರತೆಗಳೆಲ್ಲಾ ತುಂಬಿ ಸಾಧ್ಯಂತ ಒಳಿತನ್ನು ಹೀರಿ ಈಮಾನ್‌ನಿಂದ ಹದಯ ಜೀವಕಳೆಯಾಗಿಬಿಡುತ್ತದೆ. ಒಳಿತಿನ ಗೂಡಾಗುತ್ತದೆ. ಒಮ್ಮೆ ಒಳಿತಿನ ಗೂಡಾದ ಹದಯದಲ್ಲ್ಲಿ ಆ ಬಳಿಕ ಕೆಡುಕಿಗೆ ಜಾಗವೆಲ್ಲಿರುತ್ತದೆ?

 ‘‘ಓ ಸತ್ಯವಿಶ್ವಾಸಿಗಳೇ, ನಿಮಗಿಂತ ಮುಂಚೆ ಕಳೆದುಹೋದವರಿಗೆ ಉಪವಾಸವನ್ನು ಕಡ್ಡಾಯಗೊಳಿಸಿದಂತೆ ನಿಮಗೂ ಉಪವಾಸವನ್ನು ಕಡ್ಡಾಯಗೊಳಿಸಲಾಗಿದೆ.ನೀವು ತಖ್ವಾ ಉಳ್ಳವರಾಗಲೆಂದು’’.
ತಖ್ವಾ ಎಂದರೇನು? ಅಲ್ಲಾಹನು ಆದೇಶಿಸಿದ್ದನ್ನು ಪಾಲಿಸುವುದು, ವಿರೋಧಿಸಿದ ಕೆಡುಕುಗಳಿಂದ ದೂರವಿರುವುದು. ಒಳಿತು ಯಾವಾಗಲೂ ಸುಲಭ. ಕೆಡುಕು ಅದಕ್ಕಿಂತಲೂ ಸುಲಭ. ಒಳಿತನ್ನು ಮಾಡಲು ಕಷ್ಟವಿಲ್ಲ. ಇಚ್ಛಾಶಕ್ತಿಯೊಂದಿದ್ದರೆ ಸಾಕು. ಆದರೆ ಚಂಚಲವಾಗಿರುವ ಮನುಷ್ಯನ ಮನಸ್ಸು ಸದಾ ಕೆಡುಕಿನ ಕಡೆಗೆ ವಾಲಿಕೊಂಡಿರುತ್ತದೆ. ಬಹಳ ಬೇಗನೆ ಪ್ರಲೋಭನೆಗೊಳಗಾಗಿಬಿಡುತ್ತದೆ. ಸಾಲದು ಎಂಬಂತೆ ಶೈತಾನನು ದಾರಿ ತಪ್ಪಿಸಲು ಸದಾ ಹೊಂಚು ಹಾಕುತ್ತಿರುತ್ತಾನೆ. ಇಂತಹ ಸಂದರ್ಭದಲ್ಲಿ ಕೆಡುಕುಗಳಿಂದ ಪಾರಾಗಿಬಿಡಲು ಬಹಳಷ್ಟು ಕಠಿಣವಾದ ಇಚ್ಛಾಶಕ್ತಿ ಬೇಕು. ಆ ಇಚ್ಛಾಶಕ್ತಿಯನ್ನು ಗಳಿಸಲು ಕಠಿಣ ತರಬೇತಿಯ ಅಗತ್ಯವಿದೆ. ಅಂತಹ ತರಬೇತಿಯೇ ರಮಝಾನ್ ಉಪವಾಸ.

ಹಸಿವು, ದಾಹ, ಲೈಂಗಿಕತೆ, ಮನುಷ್ಯನ ಪ್ರಬಲ ದೈಹಿಕ ವಾಂಛೆಗಳಾಗಿವೆ. ಸಾಧಾರಣವಾಗಿ ಹಸಿದಾಗ, ಬಾಯಾರಿದಾಗ ಪ್ರಪ್ರಥಮವಾಗಿ ಅದನ್ನು ನಾವು ನೀಗಿಸಲು ಪ್ರಯತ್ನಿಸುತ್ತೇವೆ. ಆದರೆ ರಮಝಾನ್‌ನಲ್ಲಿ ವೈವಿಧ್ಯಮಯ ಆಹಾರ ಪಾನೀಯಗಳು ತಯಾರಾಗಿದ್ದರೂ ಹಸಿವು ಬಾಯಾರಿಕೆಯಿಂದ ಅದೆಷ್ಟೇ ಬಳಲಿದ್ದರೂ ಅದನ್ನು ನಿಶ್ಚಿತ ಸಮಯದವರೆಗೆ ನಿಯಂತ್ರಿಸಿಡುತ್ತೇವೆ. ಅದು ಬಹಳ ಕಷ್ಟದ ಕೆಲಸ. ಉಳಿದ ದಿನಗಳಲ್ಲಿ ಹಲಾಲ್ ಆಗಿರುವಂತಹದ್ದು ರಮಝಾನ್‌ನ ಹಗಲಿನಲ್ಲಿ ಹರಾಮ್. ಅದರಲ್ಲೂ ತನಗೆ ಅತ್ಯಂತ ಪ್ರಿಯವಾದ ಖಾದ್ಯಗಳಿರುವಾಗ. ಇದು ಕಠಿನ ತರಬೇತಿಯ ಒಂದು ಭಾಗವಷ್ಟೆ. ಇಂತಹ ಸನ್ನಿವೇಶವು ಈಮಾನ್‌ನ ಮಾಧುರ್ಯವನ್ನು ಸತ್ಯವಿಶ್ವಾಸಿಗೆ ನೀಡುತ್ತದೆ.

ರಮಝಾನ್ ಉಪವಾಸದ ದೇವನ ಆದೇಶವನ್ನು ಪಾಲಿಸದೇ ಕದ್ದುಮುಚ್ಚಿ ಉಲ್ಲಂಘಿಸಿದರೆ ಯಾರಿಗೂ ತಿಳಿಯಲಾರದು. ಹಾಗಿದ್ದರೂ, ದೇವಾಜ್ಞೆಯ ಉಲ್ಲಂಘನೆಯಿಂದ ದೂರ ಉಳಿಯಲು ಕಾರಣ ಈಮಾನ್‌ನ ದಢತೆ. ಒಂದು ಹನಿ ನೀರು ಹೊಟ್ಟೆಸೇರದಂತೆ ವಹಿಸುವ ಎಚ್ಚರವು ಸದಾ ಅಲ್ಲಾಹನು ನನ್ನನ್ನು ನೋಡುತ್ತಿರುತ್ತಾನೆ, ಪ್ರತಿಯೊಂದನ್ನು ಅಲ್ಲಾಹನು ಬಲ್ಲನು ಎಂಬ ದಢವಾದ ವಿಶ್ವಾಸವಾಗಿದೆ. ಇದೇ ವಿಶ್ವಾಸ ಅವನ ಉಳಿದ 11 ತಿಂಗಳಿಗೆ ಮಾರ್ಗದರ್ಶಿಯಾಗಿದೆ. ಈ ತಿಂಗಳ ಉಪವಾಸದ ಮೂಲ ಕೆಡುಕಿನಿಂದ ದೂರ ಉಳಿಯುವ ಒಳಿತೆನೆಡೆಗೆ ಸಾಗುವ ತರಬೇತಿಯನ್ನು ಪಡೆದುಕೊಳ್ಳುತ್ತಾನೆ.

ಕೆಡುಕು ಮಾಡಲು ಎಲ್ಲಾ ಸಾಧ್ಯತೆಗಳಿದ್ದರೂ ಸಮಯ ಸಂದರ್ಭಗಳು ಕೂಡಿ ಬಂದರೂ ಹಸಿವು ದಾಹವನ್ನು ರಮಝಾನ್‌ನಲ್ಲಿ ನಿಯಂತ್ರಿಸಿದಂತೆಯೇ ಕೆಡುಕನ್ನು ನಿಯಂತ್ರಿಸುತ್ತಾರೆ. ಅದು ಹೇಗೆಂದರೆ, ಸುಳ್ಳು ಹೇಳುವ ಮತ್ತು ಅದರಂತೆ ವರ್ತಿಸುವ ಉಪವಾಸಿಗನು ಆಹಾರ ಪಾನೀಯ ತೊರೆಯಬೇಕೆಂಬ ಅಗತ್ಯ ಅಲ್ಲಾಹನಿಗಿಲ್ಲ ಎಂದು ಪ್ರವಾದಿ(ಸ)ವರ್ಯರು ಸಾರಿರುತ್ತಾರೆ. ಇದರಿಂದಾಗಿ ಉಪವಾಸದ ವೇಳೆ ತಮ್ಮ ಮಾತಿನಲ್ಲಿ ಹಿಡಿತ ಸಾಧಿಸುವ ತರಬೇತಿಯನ್ನು ಪಡೆಯುವ ವಿಶ್ವಾಸಿ ಉಳಿದ ದಿನಗಳಲ್ಲಿ ಹೇಗೆ ತಾನೆ ಸುಳ್ಳಾಡಬಲ್ಲರು. ಉಳಿದ ದಿನಗಳಲ್ಲಿ ಅವರು ಪರನಿಂದೆ, ಅಪಹಾಸ್ಯ, ಹಿಡಿಶಾಪ, ಪರದೂಷಣೆ, ಕಳ್ಳತನ, ದ್ವೇಷಾಸೂಯೆ ಇತ್ಯಾದಿ ಎಲ್ಲ ಕೆಡುಕುಗಳಿಂದಲೂ ದೂರ ಸರಿಯದಿರಲಾರರೆ.

ತುಂಬ ಹಸಿವು ಮತ್ತು ದಾಹ ಅನುಭವಿಸುತ್ತಿರುವಾಗ ಸಿಟ್ಟನ್ನು ನುಂಗಿಕೊಳ್ಳಲು ರಮಝಾನ್ ತರಬೇತಿಯನ್ನು ನೀಡುತ್ತದೆ. ಉಪವಾಸದ ವೇಳೆ ಯಾರಾದರೂ ಅಶ್ಲೀಲ ಜಗಳ ಅಥವಾ ಗುಲ್ಲು ಗದ್ದಲ ಮಾಡಿದರೆ ಅವರೊಂದಿಗೆ ‘‘ನಾನು ಉಪವಾಸದಲ್ಲಿರುವೆನು’’ ಎಂದು ಹೇಳಬೇಕು ಎಂದು ಪ್ರವಾದಿ(ಸ) ಕಲಿಸಿರುವರು. ಹೀಗೆ ಉಪವಾಸಿಗರ ಗುಣಸ್ವಭಾವವನ್ನು ಸಂಪೂರ್ಣ ನಿಯಂತ್ರಣದಲ್ಲಿಡಲು ರಮಝಾನ್‌ಗೆ ಸಾಧ್ಯವಾಗುತ್ತದೆ.

ಲೈಂಗಿಕ ಅರಾಜಕತೆ ಆಧುನಿಕ ಜಗತ್ತು ಎದುರಿಸುತ್ತಿರುವ ಬಹಳ ದೊಡ್ಡ ಸವಾಲಾಗಿದೆ. ಇಸ್ಲಾಮ್ ಯಾವತ್ತೂ ಲೈಂಗಿಕಶುದ್ಧಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತದೆ. ವ್ಯಭಿಚಾರವನ್ನು ನಿಷೇಧಿಸುತ್ತದೆ. ವಿವಾಹವನ್ನು ಪ್ರೋತ್ಸಾಹಿಸುತ್ತದೆ. ವೈವಾಹಿಕ ಜೀವನಕ್ಕೆ ಸಾಧ್ಯವಿಲ್ಲದವರು ಉಪವಾಸ ಆಚರಿಸಲು ಇಸ್ಲಾಮ್‌ಸೂಚಿಸುತ್ತದೆ. ಉಪವಾಸದ ಹಗಲಿನಲ್ಲಿ ಅನ್ನಾಹಾರದಂತೆ ದಂಪತಿಗಳ ಮಧ್ಯೆ ಲೈಂಗಿಕ ಸಂಬಂಧವೂ ನಿಷಿದ್ಧವಾಗಿರುತ್ತದೆ. ಈ ರೀತಿ ಲೈಂಗಿಕ ನಿಯಂತ್ರಣದ ತರಬೇತಿಯನ್ನೂ ರಂಝಾನ್ ಉಪವಾಸದ ಮೂಲಕ ಪಡೆಯುತ್ತಾರೆ. ಈ ತರಬೇತಿಯು ಅವರಲ್ಲಿ ಚಾರಿತ್ರ ಶುದ್ಧಿಯನ್ನುಂಟುಮಾಡುತ್ತದೆ. ಹೀಗಾದಲ್ಲಿ ಪ್ರತಿಯೊಬ್ಬರು ಲೈಂಗಿಕ ಅರಾಜಕತೆಯಿಂದ ಸುರಕ್ಷಿತವಾಗುವುದರಲ್ಲಿ ಸಂಶಯವೇ ಇಲ್ಲ.

ರಮಝಾನ್ ಕುರ್‌ಆನಿನ ತಿಂಗಳಾಗಿದೆ. ಕುರ್‌ಆನಿಗೆ ಇನ್ನಷ್ಟು ಹತ್ತಿರವಾಗಲು ರಮಝಾನ್ ಸುವರ್ಣಾವಕಾಶವಾಗಿದೆ. ಕುರ್‌ಆನಿನ ಸಂದೇಶಗಳನ್ನು ಜೀವನದಲ್ಲಿ ಅಳವಡಿಸುವುದು ಪ್ರತಿಯೊಬ್ಬ ಮುಸಲ್ಮಾನರ ಕರ್ತವ್ಯವಾಗಿದೆ. ಅದಕ್ಕಾಗಿ ಸತ್ಯವಿಶ್ವಾಸಿಗಳು ಸಂಪೂರ್ಣ ಕುರ್‌ಆನನ್ನು ಓದಿ ಮುಗಿಸುತ್ತಾರೆ. ಅಧ್ಯಯನ ಮಾಡುತ್ತಾರೆ. ತಮ್ಮ ಜೀವನವನ್ನು ಕುರ್‌ಆನಿನ ಆದೇಶದಂತೆ ಕ್ರಮೀಕರಿಸುತ್ತಾರೆ. ಇದು ಅವರ ಜೀವನವನ್ನು ಪರಿಶುದ್ಧಗೊಳಿಸಲು ತರಬೇತಿಯನ್ನು ನೀಡುತ್ತದೆ.

ಸತ್ಯವಿಶ್ವಾಸಿಗಳು ಅತ್ಯಂತ ಹೆಚ್ಚು ಅಲ್ಲಾಹನ ಸಾಮಿಪಗಳಿಸಲು ಪ್ರಯತ್ನಿಸುತ್ತಾರೆ. ಏಕೆಂದರೆ ಅವರಿಗೆ ಅಲ್ಲಾಹನು ಎಲ್ಲವೂ ಆಗಿರುವನು. ಪ್ರಭು, ಸಷ್ಟಿಕರ್ತ, ಸಂರಕ್ಷಕ, ಪರಿಪಾಲಕ, ಅನ್ನದಾತ, ಸರ್ವಜ್ಞ, ಉದಾರಿ, ಕರುಣಾಳು, ಪರಮದಯಾಳು ಹೀಗೆ ಎಲ್ಲವೂ ಆಗಿರುವ ಅಲ್ಲಾಹನ ಸಾಮಿಪ್ಯ ಗಳಿಸಲು ಅವರು ನಮಾಝ್, ದುಆ, ದ್ಸಿಕ್ರ್‌ಗಳನ್ನು ಹೆಚ್ಚಿಸುತ್ತಾರೆ. ಇದು ಅವರಲ್ಲಿ ದೇವಸ್ಮರಣೆಯನ್ನು ಸದಾ ಹಸುರಾಗಿಸುವ ತರಬೇತಿಯನ್ನು ನೀಡುತ್ತದೆ. ಸಾಕಷ್ಟು ಆಯಾಸಗಳ ನಡುವೆಯೂ ರಾತ್ರಿ ಹೊತ್ತು ದೀರ್ಘ ಸಮಯ ನಮಾಝ್ ಮಾಡುವ ಮೂಲಕ ಅವರು ಧಾರ್ಮಿಕ ನಿಷ್ಠೆಯ ತರಬೇತಿಯನ್ನು ಪಡೆದುಕೊಳ್ಳುತ್ತಾರೆ. ಹೀಗೆ ಸದಾ ತನ್ನನ್ನು ವೀಕ್ಷಿಸುತ್ತಿರುವ ಅಲ್ಲಾಹನ ಮುಂದೆ ತಪ್ಪುಗಳನ್ನೆಸಗುವುದರಿಂದ ದೂರಸರಿಯುವ ತರಬೇತಿಯನ್ನು ಅವರು ಪಡೆದುಕೊಳ್ಳುತ್ತಾರೆ.

ಇಸ್ಲಾಮಿನ ಪ್ರಕಾರ ಸಂಪತ್ತಿನ ಒಡೆಯ ಅಲ್ಲಾಹನಾಗಿದ್ದಾನೆ. ಅವನ ಅನುಗ್ರಹದಿಂದ ಅದನ್ನು ನಾವು ಗಳಿಸಿರುತ್ತೇವೆ. ಆದ್ದರಿಂದ ಅದನ್ನು ನಮ್ಮಿಷ್ಟದಂತೆ ಸಂಪಾದಿಸುವಂತೆಯೂ ಇಲ್ಲ, ಖರ್ಚು ಮಾಡುವಂತೆಯೂ ಇಲ್ಲ. ಅಂದರೆ ಸಂಪಾದನೆಯು ಹಲಾಲ್ ಆಗಿರಬೇಕು. ಅದರಲ್ಲಿ ಬಡವರ, ಅನಾಥರ, ವಿಧವೆಯರ ನಿರ್ಗತಿಕರ ನಿರ್ದಿಷ್ಟ ಹಕ್ಕಿದೆ. ಅದನ್ನೇ ಝಕಾತ್ ಎನ್ನುತ್ತೇವೆ. ಅಂತೆಯೇ ಐಚ್ಛಿಕ ದಾನವಾದ ಝಕಾತನ್ನು ಇಸ್ಲಾಮ್ ಪ್ರೋತ್ಸಾಹಿಸುತ್ತದೆ. ಆ ಮೂಲಕ ಅಲ್ಲಾಹನು ಸಮದ್ಧಿಗೊಳಿಸುವನು. ತಾನು ಕಷ್ಟಪಟ್ಟು ಸಂಪಾದಿಸಿದ ಹಣದಿಂದ ನಿರ್ದಿಷ್ಟ ಮೊತ್ತವನ್ನು ಬಡಬಗ್ಗರಿಗೆ ನೀಡುವುದು ಅಥವಾ ಐಚ್ಛಿಕ ದಾನ ಧರ್ಮವನ್ನು ಮಾಡುವುದು ಅಷ್ಟು ಸುಲಭವಲ್ಲ. ಸಂಪತ್ತಿನ ಪರಮಾಧಿಕಾರ ಅಲ್ಲಾಹನಿಗೆ ಒಪ್ಪಿಸಿದವರಿಗೆ ಮಾತ್ರ ಇದು ಸಾಧ್ಯ. ಹೀಗೆ ಒಪ್ಪಿಕೊಂಡವರು ತಮ್ಮ ಲೇವಾದೇವಿಗಳನ್ನು ಅತ್ಯಂತ ಪಾರದರ್ಶಕವಾಗಿರುವಂತೆ ನೋಡಿಕೊಳ್ಳುತ್ತಾರೆ. ರಮಝಾನ್‌ನಲ್ಲಂತೂ ತಮ್ಮ ವ್ಯವಹಾರದಲ್ಲಿ ಅತ್ಯಂತ ಜಾಗರೂಕತೆಯನ್ನು ಪಾಲಿಸುತ್ತಾರೆ. ವಚನ ಪಾಲನೆ, ಕೊಡುಕೊಳ್ಳುವಿಕೆ, ಇತ್ಯಾದಿಗಳಲ್ಲಿ ಅತ್ಯಂತ ಪ್ರಾಮಾಣಿಕತೆಯನ್ನು ಪಾಲಿಸುತ್ತಾರೆ. ಸುಳ್ಳು, ಮೋಸ, ವಂಚನೆಯಿಂದ ಗಳಿಸಿದ ಸಂಪತ್ತು ಹರಾಂ ಎಂದು ತಿಳಿದುಕೊಂಡು ಒಂದು ತಿಂಗಳು ಸತ್ಯಸಂಧ ವ್ಯವಹಾರವನ್ನು ಮಾಡಲು ಅಭ್ಯಸಿಸುವ ವ್ಯಕ್ತಿ ಉಳಿದ 11 ತಿಂಗಳು ಹೇಗೆ ಮೋಸ ವಂಚನೆ ಮಾಡಲು ಸಾಧ್ಯ.

ಪುಣ್ಯಗಳ ವಸಂತ ಕಾಲದಲ್ಲಿ ಸಾಧ್ಯಂತ ದಾನ ಧರ್ಮ ಮಾಡುವ ವಿಶ್ವಾಸಿಗಳು ಉಳಿದ ದಿನಗಳಲ್ಲೂ ಬಡವರ ಸಹಾಯಕ್ಕೆ ಧಾವಿಸದಿರಲಾರರೆ. ಅಂತಹ ತರಬೇತಿಯನ್ನು ಅವರು ರಮಝಾನ್‌ನಲ್ಲಿ ಪಡೆದಿರುತ್ತಾರೆ. ಸಹರಿ ಮತ್ತು ಪಾರಣೆಯ ವೇಳೆಯಲ್ಲಿ ಪಾಲಿಸಬೇಕಾದ ನಿಖರತೆಯು ಸತ್ಯವಿಶ್ವಾಸಿಗೆ ಸಮಯನಿಷ್ಠೆಯ ತರಬೇತಿಯನ್ನು ನೀಡುತ್ತದೆ. ಸಹರಿಯ ವೇಳೆಯಲ್ಲಿ ನಿದ್ದೆ ಬಿಟ್ಟು ಅನ್ನಾಹಾರ ಸೇವಿಸುವ ಮೂಲಕ ತ್ಯಾಗದ ತರಬೇತಿಯನ್ನು ಪಡೆಯುತ್ತಾರೆ. ಹೀಗೆ ಒಟ್ಟಿನಲ್ಲಿ ರಮಝಾನ್ ಧರ್ಮನಿಷ್ಠೆಯ ತರಬೇತಿಯ ತಿಂಗಳಾಗಿದೆ.

ರಮಝಾನ್ ಸತ್ಯವಿಶ್ವಾಸಿಗೆ ಉಳಿದ 11 ತಿಂಗಳಿಗೆ ಬೇಕಾದ ಸ್ವರ್ಗದ ಹಾದಿಯ ತಖ್ವಾವನ್ನು ನೀಡುತ್ತದೆ. ಈ ರಮಝಾನನ್ನು ಸಾಧ್ಯಂತ ಒಳಿತನ್ನು ಹೀರಿ ಉತ್ತಮ ತರಬೇತಿಯನ್ನು ಪಡೆದು ಉಳಿದ ತಿಂಗಳುಗಳಿಗೆ ದಾರಿದೀಪವಾಗಿ ಮಾಡೋಣ ಇನ್‌ಶಾ ಅಲ್ಲಾಹ್….

LEAVE A REPLY

Please enter your comment!
Please enter your name here