ರಮಝಾನ್: ಪಶ್ಚಾತ್ತಾಪ ಫಲಿಸುವ ಕಾಲ

0
183

-ಶಾಹಿದಾ ಅಸ್ಲಮ್

ಮನುಷ್ಯ ಪರಿಪೂರ್ಣನಲ್ಲ. ಆತನ ಜೀವನದಲ್ಲಿ ಸಣ್ಣ ಅಥವಾ ದೊಡ್ಡ ತಪ್ಪುಗಳು ನಡೆಯುತ್ತಲೇ ಇರುತ್ತವೆ. ಇದನ್ನೇ ಪ್ರವಾದಿ(ಸ) ಹೇಳಿರುವರು: ‘‘ಆದಮ್‌ನ ಸಂತತಿಯ ಎಲ್ಲರೂ ತಪ್ಪು ಮಾಡುತ್ತಾರೆ.’’ ಇದನ್ನೇ ನಾವು ಕೂಡಾ ಮಾತು ಮಾತಿಗೂ ಹೇಳುವುದಿದೆ ‘‘ನಾವೇನು ದೇವಚರರಲ್ಲ’’ ಎಂದು. ಓರ್ವ ವ್ಯಕ್ತಿ ಧರ್ಮನಿಷ್ಠೆಯ ಅತ್ಯುನ್ನತ ಮಟ್ಟಕ್ಕೆ ತಲುಪಿದ್ದರೂ, ಆ ವ್ಯಕ್ತಿಯೂ ತಪ್ಪುಗಳಿಂದ ಮುಕ್ತಿ ಹೊಂದಿರುವುದಿಲ್ಲ. ಈ ರೀತಿ ತಪ್ಪುಗಳು ಆದಾಗ ಇದಕ್ಕೆ ಪರಿಹಾರವಾಗಿದೆ ಪಶ್ಚಾತ್ತಾಪ(ತೌಬಾ). ತೌಬಾ ಎನ್ನುವುದರ ಅರ್ಥ ಮರಳುವುದು. ಕೆಡುಕಿನ ರಸ್ತೆಯನ್ನು ಬಿಟ್ಟು ಸರಿದಾರಿಯಲ್ಲಿ ಸಾಗುವುದು ಎಂದರ್ಥ. ನಾನು ಪರಿಪೂರ್ಣನಾಗಿದ್ದೇನೆ, ಧರ್ಮನಿಷ್ಠೆಯ ಅತ್ಯುನ್ನತ ಮಟ್ಟಕ್ಕೆ ತಲುಪಿದ್ದೇನೆ, ಅಲ್ಲಾಹನು ತನಗೆ ವಹಿಸಿ ಕೊಟ್ಟಂತಹ ಎಲ್ಲಾ ಹೊಣೆಗಾರಿಕೆಗಳನ್ನು ಸಂಪೂರ್ಣವಾಗಿ ನಿರ್ವಹಿಸಿದ್ದೇನೆ ಎಂಬ ಅಹಂಕಾರವು ಇರಬಾರದು. ಹೊಣೆಗಾರಿಕೆಯ ಚಿಂತೆ, ಅಲ್ಲಾಹನ ಶಿಕ್ಷೆಯ ಭಯ, ತಪ್ಪುಗಳನ್ನು ಸ್ಮರಿಸುತ್ತಾ ಅಲ್ಲಾಹನೊಂದಿಗೆ ಕ್ಷಮೆಯಾಚಿಸಿ ಪಶ್ಚಾತ್ತಾಪ ಪಡುತ್ತಿರಬೇಕು. ಇಬ್ಲೀಸನು ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಡದ ಕಾರಣ ನರಕಕ್ಕೆ ಅರ್ಹನನ್ನಾಗುವಂತೆ ಮಾಡಿತು ಎಂಬುದನ್ನು ನಾವು ಗಮನಿಸಬಹುದು. ಪ್ರವಾದಿ(ಸ) ದಿನದಲ್ಲಿ 100 ಬಾರಿ ಅಲ್ಲಾಹನೊಂದಿಗೆ ಕ್ಷಮೆಯಾಚಿಸುತ್ತಿದ್ದರು. ಅಂದ ಮಾತ್ರಕ್ಕೆ ಅವರ ಜೀವನದಲ್ಲಿ ತಪ್ಪುಗಳು ನಡೆದಿದೆ ಎಂದರ್ಥವಲ್ಲ. ಅಲ್ಲಾಹನ ಕತಜ್ಞ ದಾಸನಾಗಲು ಕ್ಷಮೆಯಾಚನೆಯ ಅಗತ್ಯತೆ ಇದೆ ಎಂಬುದನ್ನು ಇದರಿಂದ ಮನವರಿಕೆ ಮಾಡಬಹುದು. ಆಗ ಮಾತ್ರ ನಮ್ಮಲ್ಲಿ ಅಹಂಕಾರವು ದೂರ ಸರಿದು, ವಿನಯತೆ-ಸೌಮ್ಯತೆ ಮನೆ ಮಾಡಲು ಸಾಧ್ಯ.

ಅಲ್ಲಾಹನು ನಿಯೋಗಿಸಿದ ಎಲ್ಲಾ ಪ್ರವಾದಿಗಳು ಸ್ವಯಂ ತೌಬಾ ಮಾಡಿದ್ದು ಮಾತ್ರವಲ್ಲದೆ, ಅವರಿಗೆ ತೌಬಾದ ಕಡೆಗೆ ಕರೆ ನೀಡಲು ಅಲ್ಲಾಹನು ಅವರಿಗೆ ಆಜ್ಞಾಪಿಸಿದ್ದಾನೆ. ಇವು ಪವಿತ್ರ ಕುರ್‌ಆನಿನ ಹಲವು ಸೂಕ್ತಗಳಲ್ಲಿ ವ್ಯಕ್ತವಾಗುತ್ತದೆ.

ಪಶ್ಚಾತ್ತಾಪವು ಹಲವು ರೀತಿಯಲ್ಲಿದೆ. ಓರ್ವ ವ್ಯಕ್ತಿಯ ಹಕ್ಕನ್ನು ಕಬಳಿಸಿದರೆ ಅವನ ಹಕ್ಕನ್ನು ಮರಳಿ ನೀಡುವುದೇ ಅದಕ್ಕಿರುವ ಪಶ್ಚಾತ್ತಾಪ. ಆದರೆ ತನ್ನ ಪಶ್ಚಾತ್ತಾಪದಲ್ಲಿ ಯಾವುದೇ ಆಡಂಬರವಾಗಲಿ, ಕಾಪಟ್ಯವಾಗಲಿ ಲವಶೇಷವೂ ಇಲ್ಲದಂತಹ ಪಶ್ಚಾತ್ತಾಪವೇ ‘‘ಶುದ್ಧ ತೌಬಾ’’ ಆಗಿದೆ. ಪಾಪಕಾರ್ಯದಿಂದ ಅಲ್ಲಾಹ್ ಮತ್ತು ಮನುಷ್ಯನ ನಡುವೆ ಉಂಟಾದ ಬಿರುಕನ್ನು ತೌಬಾದ ಮೂಲಕ ತುಂಬಬೇಕು.

ಪ್ರವಾದಿ(ಸ) ನಿಷ್ಕಳಂಕವಾದ ಪಶ್ಚಾತ್ತಾಪದ ಬಗ್ಗೆ ಹೀಗೆ ಹೇಳಿರುವರು: ‘‘ನಿಮ್ಮಿಂದೇನಾದರೂ ಪಾಪ ಕತ್ಯ ಸಂಭವಿಸಿದರೆ ಆ ಬಗ್ಗೆ ನಾಚಿಕೆ ಪಡಬೇಕು. ಆ ಬಳಿಕ ಲಜ್ಜೆಯೊಂದಿಗೆ ಅಲ್ಲಾಹನೊಡನೆ ಕ್ಷಮೆಯಾಚನೆಮಾಡಬೇಕು ಮತ್ತು ಮುಂದೆಂದೂ ಆ ಕೆಲಸವನ್ನು ಮಾಡದಿರಬೇಕು’’. ತಬೂಕ್ ಯುದ್ಧದ ಸಂದರ್ಭ ಪ್ರವಾದಿ(ಸ)ಕೆಲವು ಸಂಗಾತಿಗಳು ಯಾವುದೇ ನೆಪವಿಲ್ಲದೆ ಚಿತ್ತ ದೌರ್ಬಲ್ಯಕ್ಕೊಳಗಾಗಿ ಯುದ್ಧದಲ್ಲಿ ಭಾಗವಹಿಸದೆ ಹಿಂದುಳಿದಿದ್ದರು. ನಂತರ ತಮ್ಮ ಬಗ್ಗೆ ನಾಚಿಕೆ ಮತ್ತು ಪಶ್ಚಾತ್ತಾಪವುಂಟಾಯಿತು. ಪ್ರವಾದಿ(ಸ) ಅವರನ್ನು ವಿಚಾರಣೆ ನಡೆಸುವ ಮುಂಚೆಯೇ, ಕ್ಷಮಿಸುವವರೆಗೆ ತಮ್ಮನ್ನು ತಾವೇ ಒಂದು ಕಂಬಕ್ಕೆ ಬಿಗಿದುಕೊಂಡು, ನಮಗೆ ಆಹಾರ ಮತ್ತು ನಿದ್ದೆ ನಿಷಿದ್ಧವೆಂದರು. ಅನೇಕ ದಿನಗಳ ತನಕ ಆಹಾರ ನಿದ್ದೆಗಳಿಲ್ಲದೆ ಮೂರ್ಛೆ ಹೋದರು. ಕೊನೆಗೆ ಅಲ್ಲಾಹ್ ಮತ್ತು ರಸೂಲರು ಕ್ಷಮಿಸಿದ್ದಾರೆಂದು ತಿಳಿದಾಗ, ಅವರು ಯಾವ ಮನೆ ಮತ್ತು ಸುಖ ಸಂಪತ್ತುಗಳು ನಮ್ಮನ್ನು ಕರ್ತವ್ಯದಿಂದ ಹಿಂಜರಿಯುವಂತೆ ಮಾಡಿದವೋ, ಅವುಗಳನ್ನು ದಾನ ಮಾಡುವುದೂ ನಮ್ಮ ಪಶ್ಚಾತ್ತಾಪದಲ್ಲಿ ಸೇರಿದೆ ಎಂದರು. ಇದು ನಿಜವಾದ ಪಶ್ಚಾತ್ತಾಪದ ಒಂದು ಉದಾಹರಣೆಯಷ್ಟೆ.

ಓರ್ವನು ತಪ್ಪೆಸಗಿದ ನಂತರ, ತೌಬಾ ಮಾಡಿ ಅಲ್ಲಾಹನೆಡೆಗೆ ಮರಳಿದಾಗ ಅಲ್ಲಾಹನು ಅತೀ ಸಂತೋಷಪಡುತ್ತಾನೆ. ಓರ್ವ ತಾಯಿಯು ಒಂದು ಗುಂಪಿನಲ್ಲಿ ತನ್ನ ಮಗುವನ್ನು ಕಳೆದುಕೊಳ್ಳುತ್ತಾಳೆ. ತನ್ನ ಮಗುವಿಗಾಗಿ ರೋದಿಸುತ್ತಾಳೆ. ಎಲ್ಲೆಂದರಲ್ಲಿ ಅದಕ್ಕಾಗಿ ಹುಡುಕಾಡುತ್ತಾಳೆ. ಕೊನೆಗೆ ನನ್ನ ಮಗು ನನ್ನ ಕೈ ಸೇರುವುದಿಲ್ಲ ಎಂದು ಹತಾಶಳಾಗಿದ್ದ ಸಂದರ್ಭದಲ್ಲಿ, ಅಕಸ್ಮಾತಾಗಿ ಮಗು ಸಿಕ್ಕಾಗ ಆ ತಾಯಿಗೆ ಆಗುವ ಸಂತೋಷ, ಅದಕ್ಕಿಂತಲೂ ಅದೆಷ್ಟೋ ಪಟ್ಟು ಹೆಚ್ಚು ಸಂತೋಷ ತೌಬಾ ಮಾಡಿ ಅಲ್ಲಾಹನೆಡೆಗೆ ಮರಳಿದಾಗ, ಅಲ್ಲಾಹನಿಗೆ ಉಂಟಾಗುತ್ತದೆ ಎಂಬುದು ಹದೀಸ್‌ಗಳಿಂದ ವ್ಯಕ್ತವಾಗುತ್ತದೆ.

ಪ್ರವಾದಿ(ಸ) ಹೇಳಿದರು: ‘‘ಒಬ್ಬನು ಸತ್ಯವಿಶ್ವಾಸದಿಂದ ಪರಲೋಕದ ಪುಣ್ಯದ ಸಂಕಲ್ಪದೊಂದಿಗೆ ರಮಝಾನ್ ತಿಂಗಳ ಉಪವಾಸ ಆಚರಿಸಿದರೆ ಅಲ್ಲಾಹನು ಆತನ ಗತ ಪಾಪಗಳನ್ನು ಕ್ಷಮಿಸಿಬಿಡುವನು. ಅದೇ ರೀತಿ ಒಬ್ಬನು ಸತ್ಯವಿಶ್ವಾಸದಿಂದ ಪರಲೋಕದ ಪುಣ್ಯದ ಸಂಕಲ್ಪದೊಂದಿಗೆ ರಮಝಾನ್ ತಿಂಗಳಲ್ಲಿ ತರಾವೀಹ್ ನಮಾಝ್ ನಿರ್ವಹಿಸಿದರೆ ಅಲ್ಲಾಹನು ಆತನ ಗತಪಾಪಗಳನ್ನು ಮನ್ನಿಸುವನು.’’ (ಬುಖಾರಿ ಮುಸ್ಲಿಮ್). ರಮಝಾನ್ ತಪ್ಪುಗಳನ್ನು ಮನ್ನಿಸುವ ತಿಂಗಳು. ‘‘ತನ್ನ ಮನೆಯವರ ವಿಷಯದಲ್ಲಿ, ಸಂಪತ್ತಿನ ವಿಷಯದಲ್ಲಿ ಮತ್ತು ನೆರೆಕರೆಯವರ ವಿಷಯದಲ್ಲಿ ಮನುಷ್ಯನಿಂದ ಸಂಭವಿಸುವಂತಹ ತಪ್ಪುಗಳಿಗೆ ನಮಾಝ್, ಉಪವಾಸ ಮತ್ತು ದಾನ ಧರ್ಮಗಳು ಪ್ರಾಯಶ್ಚಿತವಾಗುತ್ತದೆ’’. ಕೆಲವೊಮ್ಮೆ ನಾವು ಮಾಡಿದಂತಹ ಕೆಲವೊಂದು ಒಳಿತುಗಳು, ನಮ್ಮಿಂದಾದ ಕೆಡುಕುಗಳನ್ನು ತೊಳೆಯುತ್ತವೆ. ಕೆಲವೊಂದು ತಪ್ಪುಗಳಿಗೆ ತೌಬಾ ಮಾಡಬೇಕಾಗುತ್ತದೆ. ಪ್ರಾರ್ಥನೆ, ಇಸ್ತಿಗ್‌ಫಾರ್ ಮಾಡಬೇಕಾಗುತ್ತದೆ. ಅದಕ್ಕೆ ರಮಝಾನ್ ಒಂದು ಉತ್ತಮ ಅವಕಾಶವಾಗಿರುತ್ತದೆ. ಈ ತಿಂಗಳು ಅಲ್ಲಾಹನ ಅನುಗ್ರಹದ ಬಾಗಿಲು ಯಾವಾಗಲೂ ತೆರೆದಿರುತ್ತದೆ. ಆದ್ದರಿಂದ ತಪ್ಪುಗಳು ಸಂಭವಿಸಿದ ತಕ್ಷಣ ತೌಬಾ ಮಾಡಬೇಕು. ಅಲ್ಲಾಹನೆಡೆಗೆ ಮರಳಬೇಕು. ಇನ್ನೂ ಸಮಯವಿದೆ. ತಪ್ಪು ಮಾಡುತ್ತಲೇ ಇರುತ್ತೇವೆ. ಮರಣ ಹತ್ತಿರ ಬರಲಿ ಆಗ ತೌಬಾ ಮಾಡುತ್ತೇನೆ ಎಂದರೆ ಆ ತೌಬಾ ಸ್ವೀಕತವಾಗದು. ಆಗ ತೌಬಾ ಮಾಡಲು ಅವಕಾಶವು ಸಿಗಲಾರದು. ಪ್ರವಾದಿ(ಸ)ರು ಹೇಳಿದರು: ‘‘ಅಲ್ಲಾಹನು ತನ್ನ ದಾಸರ ಉಸಿರಾಟ ಸ್ಥಬ್ದಗೊಳ್ಳುವುದಕ್ಕಿಂತ ಮುಂಚಿತವಾಗಿ ಸ್ವೀಕರಿಸುತ್ತಾನೆ.

‘‘ಅಲ್ಲಾಹನು ರಾತ್ರಿ ಹೊತ್ತು ತನ್ನ ಕೈ ಚಾಚುತ್ತಾನೆ. ಹಗಲಿನಲ್ಲಿ ಪಾಪ ಮಾಡಿ ತನ್ನಿಂದ ದೂರ ಸರಿದಿದ್ದವರು ಪಶ್ವಾತ್ತಾಪ ಪಟ್ಟು ಮರಳಿದಾಗ ಅವರನ್ನು ತನ್ನ ಹತ್ತಿರ ಸೇರಿಸಿಕೊಳ್ಳಲಿಕ್ಕಾಗಿ. ಅದೇ ರೀತಿ ಅವನು ಹಗಲಿನಲ್ಲಿ ಕೈ ಚಾಚುತ್ತಾನೆ. ರಾತ್ರಿ ಹೊತ್ತು ಪಾಪ ಮಾಡಿ ತನ್ನಿಂದ ದೂರ ಸರಿದಿದ್ದವರು ಪಶ್ಚಾತ್ತಾಪ ಪಟ್ಟು ಮರಳಿದಾಗ ಅವರನ್ನು ತನ್ನ ಹತ್ತಿರಗೊಳಿಸಲಿಕ್ಕಾಗಿ. ಇದು ಸೂರ್ಯನು ಪಶ್ಚಿಮದಿಂದ ಉದಯಿಸುವ ತನಕ ನಡೆಯುತ್ತಿರುವುದು’’ ಎಂದು ಪ್ರವಾದಿ(ಸ)ವರ್ಯರು ಹೇಳಿರುವರು.

ತೌಬಾ ಎನ್ನುವುದು ಮನುಷ್ಯನ ಪರಲೋಕ ಜೀವನಕ್ಕಾಗಿ ಮಾತ್ರ ಪ್ರಯೋಜನಕಾರಿಯಲ್ಲದೆ, ಇಹಲೋಕದ ಶಾಂತಿಯ ಜೀವನಕ್ಕೂ ಇದು ಅತ್ಯವಶ್ಯಕವಾಗಿದೆ. ಓರ್ವನು ಕೆಡುಕಿನತ್ತ ಧಾವಿಸಿದರೆ ಇಡೀ ಸಮಾಜದ ಶಾಂತಿ ಕೆಡುತ್ತದೆ. ಸಮಾಜಕ್ಕೆ ಕುಟುಂಬಕ್ಕೆ ಆತನೋರ್ವ ಉಪದ್ರ ಜೀವಿಯಾಗಿ ಮಾರ್ಪಡುತ್ತಾನೆ.

ಹೃದಯವು ತುಕ್ಕು ಹಿಡಿಯುತ್ತದೆ. ಆ ಹದಯಕ್ಕೆ ಹೊಳಪು ಬರಲು ತೌಬಾದ ಅವಶ್ಯಕತೆ ಇದೆ. ಮನುಷ್ಯನು ತಪ್ಪು ಮಾಡಿದಾಗ ಆತನ ಹೃದಯದಲ್ಲೊಂದು ಕಪ್ಪು ಚುಕ್ಕೆ ಬೀಳುತ್ತದೆ. ಆಗ ತೌಬಾ ಮಾಡಿ ಮರಳಿದರೆ ಆ ಕಪ್ಪುಚುಕ್ಕೆ ಮಾಯವಾಗುತ್ತದೆ. ಒಂದು ವೇಳೆ ಅತ ತೌಬಾ ಮಾಡಲಿಲ್ಲ. ಪುನಃ ಪುನಃ ಕೆಡುಕುಗಳನ್ನು ಮಾಡುತ್ತಾ ಸಾಗುತ್ತಾನೆ ಎಂದಾಗಿದ್ದರೆ, ಅದರ ಕಲೆಯು ಸಂಪೂರ್ಣ ಹದಯವನ್ನಾವರಿಸುತ್ತದೆ. ಕೊನೆಗೆ ಅಲ್ಲಾಹನು ಹದಯಕ್ಕೆ ಮುದ್ರೆಯನ್ನೊತ್ತಿ ಬಿಡುತ್ತಾನೆ. ನಂತರ ಒಳಿತಿನ ಕಾರ್ಯಗಳು ಆತನಿಂದ ಎಂದೂ ನಡೆಯದು. ನಾವು ಅಲ್ಲಾಹನ ಸಜ್ಜನ ದಾಸರಲ್ಲಿ ಸೇರಬೇಕು, ಅಲ್ಲಾಹನ ಸ್ವರ್ಗದಲ್ಲಿ ಪ್ರವೇಶಿಸಬೇಕು ಎಂದಾಗಿದ್ದರೆ, ಅಲ್ಲಾಹನ ಕ್ಷಮೆ, ಕರುಣೆ ನಮ್ಮ ಮೇಲೆ ವರ್ಷಿಸಬೇಕು. ಅದಕ್ಕೋಸ್ಕರ ತೌಬಾ ಅನಿವಾರ್ಯ.

***

LEAVE A REPLY

Please enter your comment!
Please enter your name here