ರಫೇಲ್ ಒಪ್ಪಂ: ‘‘ಶತಮಾನದ ಅತಿದೊಡ್ಡ ಹಗರಣ’’

0
386

-ಪಿಎನ್‌ಬಿ

ರಫೇಲ್ ವಿವಾದದ ಚರ್ಚೆ ಎಷ್ಟೊಂದು ತೀವ್ರಗತಿಯಲ್ಲಿ ಸಾಗುತ್ತಿದೆಯೆಂದರೆ ಬಹುಶಃ ರಫೇಲ್ ಯುದ್ಧ ವಿಮಾನದ ವೇಗವೂ ಅದನ್ನು ಹಿಂದಿಕ್ಕಲಾರದು ಎಂಬಷ್ಟರ ಮಟ್ಟಿಗಿದೆ. ರಫೇಲ್ ವ್ಯವಹಾರದಲ್ಲಿ ದೊಡ್ಡಮಟ್ಟದ ಹಗರಣ ನಡೆದಿದೆ ಎಂದು ಪ್ರತಿಪಕ್ಷ, ಸಾಮಾಜಿಕ ಕಾರ್ಯಕರ್ತರು ಆರೋಪಿಸುತಿದ್ದಾರೆ. ಸತತ ವೈಫಲ್ಯಗಳಿಂದ ಕಂಗೆಟ್ಟಿರುವ ಬಿಜೆಪಿಗೆ ಇದೊಂದು ಹಂತದ ಮರ್ಮಾಘಾತವೂ ಹೌದು. ಈ ಹಗರಣದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಕಟಕಟಗೆ ತಂದು ನಿಲ್ಲಿಸಿ ಬಿಟ್ಟಿದೆಯಾದರೂ, 2019ರ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಈ ಒಂದು ಅಸ್ತ್ರವನ್ನು ಎಷ್ಟರ ಮಟ್ಟಿಗೆ ಪರಿಣಾಮಕಾಗಿಯಾಗಿ ಬಳಸಬಹುದು ಎಂಬುದನ್ನು ಸುಲಭವಾಗಿ ಹೇಳುವಂತಿಲ್ಲ. ಇದರ ಕುರಿತಂತೆ ಕಾಂಗ್ರೆಸ್‌ನ ಮಿತ್ರಪಕ್ಷಗಳ ಧ್ವನಿ ಅಷ್ಟಾಗಿ ಕಂಡು ಬರುತ್ತಿಲ್ಲ. ಒಂದೆಡೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿಮಾಡಿಕೊಂಡು ವಿಧಾನಸಭಾ ಚುನಾವಣೆಯನ್ನು ಎದುರಿಸುವ ಎಸ್ಪಿ, ಅದೇ ರೀತಿ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುವ ಬಿಎಸ್ಪಿ ಹಾಗೂ ಸೋನಿಯಾ ಗಾಂಧಿಯೊಂದಿಗೆ ಬಹಳ ಆತ್ಮೀಯರಾಗಿ ಗುರುತಿಸಿಕೊಳ್ಳುತ್ತಿರುವ ಮಾಯಾವತಿಯವರ ಧ್ವನಿ ರಫೇಲ್ ಕುರಿತಂತೆ ಕ್ಷೀಣಗೊಂಡಿದೆ. ಎಡಪಕ್ಷಗಳು ಕೂಡ ಈ ಒಪ್ಪಂದದ ಕುರಿತಂತೆ ಒಂದಷ್ಟು ಹೇಳಿಕೆಗಳನ್ನು ನೀಡಿ ವೌನಕ್ಕೆ ಜಾರಿದಂತಿದೆ. ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕೆಂದು ಕಾಂಗ್ರೆಸ್ ಪಟ್ಟು ಹಿಡಿಯುತ್ತಿದ್ದರೂ, ಬಹುಶಃ ಇದೇ ಕಾರಣಕ್ಕಾಗಿ ಕಾಂಗ್ರೆಸ್ ಮನವಿ ದುರ್ಬಲಗೊಳ್ಳುತ್ತಿರುವುದು. ವಿಪಕ್ಷಗಳ ಈ ರೀತಿಯ ಅನೈಕ್ಯತೆಯು ಬಿಜೆಪಿಗೆ ಬಹಳಷ್ಟು ಪ್ರಯೋಜನ ತಂದುಕೊಟ್ಟಿದೆ ಎಂಬುದು ಸರ್ವವಿಧಿತ.

ರಫೇಲ್ ಒಪ್ಪಂದದ ಇತಿಹಾಸ ಮತ್ತು ಮೇಕ್ ಇನ್ ಇಂಡಿಯಾದ ವಾಸ್ತವ
2001ರ ನಂತರ ಭಾರತೀಯ ವಾಯುಸೇನೆಗೆ ಸುಮಾರು 200 ಮಧ್ಯಮ ಬಹುಪಾತ್ರ ಯುದ್ಧ ವಿಮಾನಗಳ ತೀವ್ರ ಅಗತ್ಯವಿತ್ತು. ಆಗಿನ ಯುಪಿಎ ಸರಕಾರವು 2007ರಲ್ಲಿ ಭಾರತೀಯ ವಾಯುಸೇನೆಯ ಈ ಬೇಡಿಕೆಗೆ ಅಸ್ತು ಎಂದಿತ್ತು ಮತ್ತು ವಿವಿಧ ಕಂಪೆನಿಗಳಿಂದ ಜಾಗತಿಕ ಟೆಂಡರ್ ಆಹ್ವಾನಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಭಾರತೀಯ ವಾಯುಸೇನೆಯು ವಿವಿಧ ಮಧ್ಯಮ ಬಹುಪಾತ್ರದ ಯುದ್ಧ ವಿಮಾನ ತಯಾರಕರ ವಿವಿಧ ಉತ್ಪನ್ನಗಳನ್ನು ದೊಡ್ಡಮಟ್ಟದಲ್ಲಿ ಪರೀಕ್ಷಿಸಿತು. ಇದರಲ್ಲಿ ಅಮೆರಿಕಾ ಎಫ್ 16 ಮತ್ತು ಎಫ್ 18, ರಷ್ಯಾದ ಮಿಗ್ – 35, ಸ್ವೀಡನ್‌ನ ಸಾಬ್ ಗ್ರೀಪನ್ ಸಹಿತ ಯುರೋಫೈಟರ್ ಟೈಫುನ್ ಮತ್ತು ಫ್ರಾನ್ಸ್‌ನ ಡಸ್ಸಾಲ್ಟ್ ಅವಿಯೇಷನ್‌ನ ರಫೇಲ್ ವಿಮಾನಗಳ ಪರೀಕ್ಷೆಯನ್ನು ನಡೆಸಲಾಯಿತು. ಅಂತಿಮ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ಮೊದಲು ನಾಲ್ಕು ವರ್ಷಗಳ ವರೆಗೆ ಪ್ರತ್ಯೇಕ ಹವಾಮಾನ ಮತ್ತು ಕಾರ್ಯಾಚರಣೆಯ ಕುರಿತ ದಕ್ಷತೆ ಮತ್ತು ಗುಣಮಟ್ಟವನ್ನು ಅನ್ವೇಷಿಸುವುದಕ್ಕಾಗಿ ಪರೀಕ್ಷೆ ನಡೆಸಲಾಯಿತು. ಈ ಪರೀಕ್ಷೆಗಳ ಬಳಿಕ ಯುರೋಫೈಟರ್ ಮತ್ತು ರಫೇಲ್ ಅನ್ನು ಅಂತಿಮ ಸುತ್ತಿನಲ್ಲಿ ಆಯ್ಕೆ ಮಾಡಲಾಯಿತು. ಯುರೋಫೈಟರ್ ಮತ್ತು ರಫೇಲ್ ಮಧ್ಯೆ ತೀವ್ರ ಸ್ಪರ್ಧೆ ಏರ್ಪಟ್ಟು ರಫೇಲ್ ಕಡಿಮೆ ಬಿಡ್ಡಿಂಗ್ ಮೂಲಕ ಒಪ್ಪಂದವನ್ನು ಪಡೆದುಕೊಂಡಿತು. ದಸಾಲ್ಟ್ 10.2 ಶತಕೋಟಿ ಡಾಲರ್‌ಗೆ 126 ರಫೇಲ್ ವಿಮಾನ ನೀಡುವುದರಲ್ಲಿತ್ತು. ಇದರಲ್ಲಿ 18 ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಾದ ರೂಪದಲ್ಲಿ ನೀಡಬೇಕಾಗಿತ್ತು ಮತ್ತು ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ತಂತ್ರಜ್ಞಾನ ವರ್ಗಾವಣೆಯ ಮೂಲಕ ಉಳಿದ 108 ವಿಮಾನಗಳನ್ನು ಭಾರತದಲ್ಲಿ ಸಿದ್ಧಪಡಿಸಬೇಕಾಗಿತ್ತು. ಯುಪಿಎ ಸರಕಾರದ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿಯು ಮೂಲ ಒಪ್ಪಂದವನ್ನೇ ತೆಗೆದುಹಾಕಿದರು. ತಮ್ಮ ಸರಕಾರವು 36 ರಫೇಲ್ ಯುದ್ಧ ವಿಮಾನವನ್ನು ಮೂಲ ಒಪ್ಪಂದದ ದರಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು ದರದಲ್ಲಿ ಖರೀದಿಸಲಿದೆ ಎಂಬ ಘೋಷಣೆಯನ್ನೂ ಮೋದಿ ಮಾಡಿದರು. ತಂತ್ರಜ್ಞಾನ ವರ್ಗಾವಣೆ ಮತ್ತು ಭಾರತದಲ್ಲಿ ಎಚ್‌ಎಎಲ್ ಮೂಲಕ 108 ವಿಮಾನಗಳ ನಿರ್ಮಾಣವು ಮೂಲ ಒಪ್ಪಂದ ಪ್ರಮುಖ ಆಯಾಮವಾಗಿತ್ತು. ಆದರೆ ಇದನ್ನು ಮೋದಿ ಅಂತ್ಯಗೊಳಿಸಿದರು. ಭಾರತವು ದಸಾಲ್ಟ್‌ನೊಂದಿಗೆ ಒಪ್ಪಂದಕ್ಕೆ ಸಹಿಹಾಕುತ್ತಿದ್ದಂತೆಯೇ ರಿಲಾಯನ್ಸ್ – ದಸಾಲ್ಟ್ ಜಂಟಿ ಉದ್ಯಮವು ಕೂಡಲೇ ಆಫ್‌ಸೆಟ್ ಗುತ್ತಿಗೆಯನ್ನು ಪಡೆದುಕೊಂಡಿತು. ವಾಸ್ತವದಲ್ಲಿ ಈ ಗುತ್ತಿಗೆ ರಿಲಯನ್ಸ್ ಬದಲಿಗೆ ಭಾರತ ಸರಕಾರದ ಕಂಪೆನಿ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ ಸಿಗಬೇಕಾಗಿತ್ತು.

ರಿಲಾಯನ್ಸ್ ಮತ್ತು ದಸಾಲ್ಟ್ ಪಾಲುದಾರಿಕೆಯ ಉದ್ಯಮವು ಪ್ರಥಮ ಹಂತದಲ್ಲಿ ವಿಮಾನದ ಬಿಡಿಭಾಗಗಳನ್ನು ರಚಿಸಬೇಕಾಗಿತ್ತು ಮತ್ತು ದ್ವೀತೀಯ ಹಂತದಲ್ಲಿ ದಸಾಲ್ಟ್ ವಿಮಾನದ ನಿರ್ಮಾಣವನ್ನು ಪ್ರಾರಂಭಿಸಬೇಕಾಗಿತ್ತು. ತಜ್ಞರ ಪ್ರಕಾರ, ರಿಲಾಯನ್ಸ್‌ಗೆ 30,000 ಕೋಟಿ ರೂಪಾಯಿಯಲ್ಲಿ 21,000 ಕೋಟಿ ರೂಪಾಯಿ ಸಿಗಲಿದೆ. ಖರ್ಚನ್ನು ಪ್ರತ್ಯೇಕಗೊಳಿಸಿದ ಬಳಿಕ ರಿಲಾಯನ್ಸ್ ಈ ಒಪ್ಪಂದದಿಂದ ಸುಮಾರು 1.9 ಶತಕೋಟಿ ಯುರೋ (ಸುಮಾರು 1,42,97,50,00,000 ರೂಪಾಯಿ)ಯ ಲಾಭ ಪಡೆದುಕೊಳ್ಳಲಿದೆ. ದಸಾಲ್ಟ್ – ಅಂಬಾನಿಯ ಪಾಲುದಾರಿಕೆಯು ಇಡೀ ಪ್ರಕ್ರಿಯೆಯನ್ನೇ ಬದಲಿಸಿಬಿಟ್ಟಿತು. ಇದಕ್ಕೂ ಮೊದಲು ದಸಾಲ್ಟ್ 126 ರಫೇಲ್ ವಿಮಾನವನ್ನು 10ರಿಂದ 12 ಶತಕೋಟಿ ಅಮೆರಿಕನ್ ಡಾಲರ್‌ಗೆ ನೀಡಲು ಸಿದ್ಧವಿತ್ತು. ಆದರೆ ಮೋದಿ ಈ ಒಪ್ಪಂದವನ್ನು ಇಲ್ಲವಾಗಿಸಿಬಿಟ್ಟರು. ಅದೇ ದಸಾಲ್ಟ್ ಕಂಪೆನಿಯು ತಂತ್ರಜ್ಞಾನ ವರ್ಗಾವಣೆ ಮತ್ತು ಶಸ್ತ್ರ ವ್ಯವಸ್ಥೆಗೆ ಹೆಚ್ಚುವರಿ ಬೇಡಿಕೆಯನ್ನಿಟ್ಟಿತು ಮತ್ತು ಒಪ್ಪಂದವು 18-22 ಶತಕೋಟಿ ಡಾಲರ್‌ವರೆಗೆ ತಲುಪಿತು. ದಸಾಲ್ಟ್ ಎಚ್‌ಎಎಲ್‌ಗೆ ತಂತ್ರಜ್ಞಾನ ನೀಡುವುದಕ್ಕೂ ತಿರಸ್ಕರಿಸಿತು. ದೇಶದ ಉದ್ಯಮಗಳನ್ನು ಬೆಳೆಸಿ ಉದ್ಯೋಗಾವಕಾಶಗಳನ್ನು ಸಷ್ಟಿಸುವ ಕುರಿತು ಮಾತನಾಡುತ್ತಾ ‘ಮೇಕ್ ಇನ್ ಇಂಡಿಯಾ’ ಎಂದು ಬೊಬ್ಬಿರಿಯುತ್ತಿದ್ದ ಪ್ರಧಾನಿ ಮೋದಿ, ‘ಮೇಕ್ ಇನ್ ರಿಲಾಯನ್ಸ್’ಗೆ ವಾಲಿಕೊಂಡರು. ಸಾರ್ವಜನಿಕ ಸಂಸ್ಥೆಯ ಮೂಲಕ ಸರಕಾರಿ ಬೊಕ್ಕಸಕ್ಕೆ ಬಹಳಷ್ಟು ಲಾಭ ತಂದುಕೊಡಬಹುದಾಗಿದ್ದ ಉದ್ಯಮವನ್ನು ಮೋದಿ ಸ್ವಪಕ್ಷೀಯ ಕೆಲವರ ವಿರೋಧ ನಡುವೆಯೂ ಅಂಬಾನಿಯ ಕಾಲಬುಡಕ್ಕೆ ಸಮರ್ಪಿಸಿದರು.

ಒಪ್ಪಂದಕ್ಕೆ ಕೇವಲ 15 ದಿನಗಳ ಮೊದಲು ಸ್ಥಾಪನೆಯಾದ ರಿಲಾಯನ್ಸ್ ಡಿಫೆನ್ಸ್
ಈ ವಿವಾದಕ್ಕೆ ಸಂಬಂಧಿಸಿದಂತೆ ಅರುಣ್ ಜೇಟ್ಲಿ, ನಿರ್ಮಲಾ ಸೀತಾರಾಮನ್ ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. ಫ್ರಾನ್ಸ್‌ನ ಪ್ರಮುಖ ಪತ್ರಿಕೆ ‘ಫ್ರಾನ್ಸ್ 24’ ಜುಲೈಯಲ್ಲಿ ಪ್ರಕಟಿಸಿರುವ ಸುದ್ದಿಯನ್ನು ಗಮನಿಸಿದರೆ ಅವರು ನೀಡುತ್ತಿರುವ ಸ್ಪಷ್ಟನೆಯ ಒಳಾರ್ಥವು ಅರ್ಥವಾಗುತ್ತದೆ. ರಫೇಲ್ ಒಪ್ಪಂದದ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜೊತೆಗೆ ಅನಿಲ್ ಅಂಬಾನಿಯೂ ಜೊತೆಗಿದ್ದರು ಎಂದು ಸುದ್ದಿ ಪ್ರಕಟಿಸಿದ್ದ ಪತ್ರಿಕೆ, ಭಾರತ ಸರಕಾರದ ರಕ್ಷಣಾ ಸಂಸ್ಥೆ ಹಿಂದುಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅನ್ನು ಒಪ್ಪಂದದಿಂದ ಹೊರಗಿರಿಸಿ ಅದರಲ್ಲಿ ಅನಿಲ್ ಅಂಬಾನಿಯ ಕಂಪೆನಿ ರಿಲಾಯನ್ಸ್ ಡಿಫೆನ್ಸ್‌ನ್ನುಸೇರಿಸುವುದರ ಕುರಿತು ಗಂಭೀರ ಪ್ರಶ್ನೆಯನ್ನು ಎತ್ತಿತ್ತು. ರಫೇಲ್ ಒಪ್ಪಂದದಲ್ಲಾದ ಮಹತ್ವದ ಬದಲಾವಣೆಯು ಆಘಾತಗೊಳಿಸುವಂಥದ್ದು. ಭಾರತದಲ್ಲಿ ಎಚ್‌ಎಎಲ್ ಬಳಿ ಸೈನಿಕ ವಿಮಾನ ತಯಾರಿಕೆಗೆ ಸಂಬಂಧಿಸಿ ಬಹಳಷ್ಟು ಅನುಭವವಿದೆ. ಆದರೆ ದಸಾಲ್ಟ್ ಎಚ್‌ಎಎಲ್‌ನೊಂದಿಗೆ ಒಪ್ಪಂದವನ್ನು ಮುರಿದು ಸೇನಾ ನಿರ್ಮಾಣ ಕ್ಷೇತ್ರದಲ್ಲಿ ಅನುಭವವಿರದ ಖಾಸಗಿ ಕಂಪೆನಿ ರಿಲಾಯನ್ಸ್ ಡಿಫೆನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತು. ರಫೇಲ್ ವಿಮಾನ ತಯಾರಕ ಕಂಪೆನಿ ದಸಾಲ್ಟ್ ಎಚ್‌ಎಎಲ್ ಅನ್ನು ತೊರೆದು ಯಾವ ಖಾಸಗಿ ಕಂಪೆನಿಯೊಂದಿಗೆ ಪಾಲುದಾರಿಕೆ ಹಂಚಿಕೊಂಡಿತೋ, ಆ ಕಂಪೆನಿ ಕೇವಲ ರಫೇಲ್ ಒಪ್ಪಂದದಿಂದ ಕೇವಲ 15 ದಿನಗಳಿಗೆ ಮೊದಲು ಸ್ಥಾಪನೆ ಮಾಡಲಾಗಿತ್ತು. ಕಂಪೆನಿ ಸ್ಥಾಪನೆಯ ದಿನಾಂಕವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಫ್ರಾನ್ಸ್ ಪ್ರವಾಸಕ್ಕೆ ಕೇವಲ 13 ದಿನ ಮೊದಲು ನೀಡಲಾಗಿತ್ತು ಎಂಬುದಾಗಿಯೂ ಪತ್ರಿಕೆ ಬರೆದಿತ್ತು. (ರಿಲಾಯನ್ಸ್ ಡಿಫೆನ್ಸ್ ಸ್ಥಾಪನೆಯ ಕುರಿತು ವರದಿ ನ್ಯಾಷನಲ್ ಹೆರಾಲ್ಡ್‌ನಲ್ಲಿಯೂ ಪ್ರಕಟಗೊಂಡಿದೆ.)

‘‘ಅತ್ಯಂತ ದೊಡ್ಡ ಭದ್ರತಾ ಹಗರಣ’’
ಇದೇ ವೇಳೆ ರಫೇಲ್ ಒಪ್ಪಂದವು ದೇಶದ ಅತ್ಯಂತ ದೊಡ್ಡ ಭದ್ರತಾ ಹಗರಣ ಎಂದು ವ್ಯಾಖ್ಯಾನಿಸಿರುವ ಸರ್ವೋಚ್ಚ ನ್ಯಾಯಾಲಯದ ವಕೀಲ ಪ್ರಶಾಂತ್ ಭೂಷಣ್, ಅನಿಲ್ ಅಂಬಾನಿಯ ಬಹುತೇಕ ಕಂಪೆನಿಗಳು ಸಾಲದಲ್ಲಿರುವಾಗ ರಫೇಲ್ ಒಪ್ಪಂದದಲ್ಲಿ ಅವರ ರಿಲಾಯನ್ಸ್ ಡಿಫೆನ್ಸ್ನ್ನು ದಸಾಲ್ಟ್ ವೈಮಾನಿಕ ಸಂಸ್ಥೆಯ ಭಾರತದ ಪಾಲುದಾರನನ್ನಾಗಿ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಇದು ಭಾರತದಲ್ಲಿ ನಡೆದಿರುವ ಅತ್ಯಂತ ದೊಡ್ಡ ಭದ್ರತಾ ಹಗರಣ ಮಾತ್ರವಲ್ಲ ಇದರಲ್ಲಿ ರಾಷ್ಟ್ರೀಯ ಭದ್ರತೆಯ ಜೊತೆ ರಾಜಿಮಾಡಿಕೊಳ್ಳಲಾಗಿದೆ.ಭಾರತೀಯ ವಾಯುಪಡೆಗೆ 126 ಯುದ್ಧ ವಿಮಾನಗಳ ಅಗತ್ಯವಿದ್ದರೆ ಈ ಒಪ್ಪಂದದಲ್ಲಿ ಅದನ್ನು 36ಕ್ಕಿಳಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಈ ಕೂಡಲೇ ಸರಕಾರ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒಪ್ಪಬೇಕು ಮತ್ತು ಒಪ್ಪಂದದ ಎಲ್ಲ ದಾಖಲೆಗಳನ್ನು ಸಮಿತಿಯ ಮುಂದಿಡಬೇಕು. ಇದರಲ್ಲಿ ಯಾವುದೇ ರಾಷ್ಟ್ರೀಯ ಭದ್ರತೆಯ ವಿಷಯವಿಲ್ಲ. ಅವರು ಈ ಒಪ್ಪಂದದಲ್ಲಿ ನಡೆದಿರುವ ಬಹತ್ ಹಗರಣವನ್ನು ಮರೆಮಾಚಲು ಪ್ರಯತ್ನಿ ಸುತ್ತಿದ್ದಾರೆ ಎಂದು ಪ್ರಶಾಂತ್ ಭೂಷಣ್ ಆರೋಪಿಸಿದ್ದಾರೆ.

‘‘ರಿಲಾಯನ್ಸ್ ಡಿಫೆನ್ಸ್‌ನ ಹೆಸರು ಸೂಚಿಸಿದ್ದು ಭಾರತ ಸರಕಾರ’’
ರಫೇಲ್ ಒಪ್ಪಂದದ ವೇಳೆ ಭಾರತ ಸರಕಾರವೇ ಅನಿಲ್ ಅಂಬಾನಿಯ ರಿಲಾಯನ್ಸ್ ಡಿಫೆನ್ಸ್‌ನ ಹೆಸರನ್ನು ಸೂಚಿಸಿತ್ತು. ನಮಗೆ ಆಯ್ಕೆಗಳಿರಲಿಲ್ಲ ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫಾಂಕೋಯ್ಸ್ ಹೋಲಾಂಡ್ ಹೇಳಿರುವುದು ರಫೇಲ್ ಹಗರಣದ ಕುರಿತು ಮಾತನಾಡುವವರಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಆದರೆ ಬಿಜೆಪಿ ಕೂಡ ಸ್ಪಷ್ಟನೆಯನ್ನು ನೀಡುತ್ತಾ ಇದೆ. ಎಚ್‌ಎಎಲ್‌ಗೆ ಸಿಗಬಹುದಾಗಿದ್ದ ಅವಕಾಶವನ್ನು ಕೈತಪ್ಪಿಸಿ ಅನನುಭವಿ ರಿಲಾಯನ್ಸ್ ಕಂಪೆನಿಯ ಕೈಗೆ ರಫೇಲ್ ಒಪ್ಪಂದವನ್ನು ಒಪ್ಪಿಸಿದರೋ ಅದಾಗಲೇ ಮೋದಿ ಸರಕಾರದ ಮೇಲೆ ಅನುಮಾನದ ಹುತ್ತ ಬೆಳೆಯುತ್ತಾ ಹೋಯಿತು. ರಫೇಲ್ ಡೀಲ್‌ಗೆ ಸಂಬಂಧಿಸಿ ರಿಲಾಯನ್ಸ್ ಡಿಫೆನ್ಸ್‌ನ ಹೆಸರನ್ನು ಆಯ್ಕೆ ಮಾಡುವುದು ಸಂಪೂರ್ಣವಾಗಿ ದಸ್ಸಾಲ್ಟ್ ಏವಿಯೇಶನ್‌ನ ನಿರ್ಧಾರವಾಗಿತ್ತು ಎಂದು ಹಿರಿಯ ಸರಕಾರಿ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಒಂದು ವೇಳೆ ಫ್ರಾಂಕೋಯ್ಸಾರ ಹೇಳಿಕೆ ನಿಜವಾಗಿದ್ದಲ್ಲಿ 36 ವಿಮಾನಗಳ ಒಪ್ಪಂದಕ್ಕೆ ಸಂಬಂಧಿಸಿದಂತೆ ಮೋದಿ ಸರಕಾರದ ಹೇಳಿಕೆಗಳು ಸುಳ್ಳಾಗಲಿದೆ.

‘‘ಶತಮಾನದ ಅತಿದೊಡ್ಡ ಹಗರಣ’’
 ರಫೇಲ್ ವಿವಾದದ ಕುರಿತಂತೆ ಕೇಂದ್ರದ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಪಟ್ಟುಬಿಡದೆ ವಾಗ್ದಾಳಿ ನಡೆಸುತ್ತಿದೆ. ಯುಪಿಎ ಸರಕಾರ ಅವಧಿಯಲ್ಲಿ ರಫೇಲ್ ವಿಮಾನದ ಬೆಲೆ 540 ಕೋಟಿ ಇತ್ತು, ಇದೀಗ ಅದೇ ವಿಮಾನವನ್ನು ಮೋದಿ ಸರಕಾರವು 1600 ಕೋಟಿಗೆ ಯಾವ ಲೆಕ್ಕಾಚಾರದಲ್ಲಿ ಖರೀದಿಸುತ್ತಿದೆ. ಪ್ರಧಾನ ಮಂತ್ರಿಯವರು ಈ ಮೋಡಿಯನ್ನು ಹೇಗೆ ಮಾಡಿದರು ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಮಾತ್ರವಲ್ಲ ಇತ್ತೀಚಿಗೆ ಕೇಂದ್ರ ಸರಕಾರದ ವಿರುದ್ಧ ನಡೆದ ಅವಿಶ್ವಾಸ ಗೊತ್ತುವಳಿಯ ವೇಳೆಯೂ ಅವರು ರಫೇಲ್ ಹಗರಣದ ಕುರಿತು ಪ್ರಸ್ತಾಪ ಮಾಡಿದ್ದರು. ಅದೇ ರೀತಿ ವಿಮಾನ ಖರೀದಿ ಮತ್ತು ಶರತ್ತುಗಳಲ್ಲಿ ಬದಲಾವಣೆ ತಂದ ಕುರಿತು ಬಿಜೆಪಿಯ ವಿರುದ್ಧ ಮಾತಿನ ಬಾಣ ಎಸೆದಿರುವ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, ರಫೇಲ್ ವಿಮಾನ ಒಪ್ಪಂದವು ಈ ಶತಮಾನದ ಅತ್ಯಂತ ದೊಡ್ಡ ಹಗರಣ ಎಂದು ಬಣ್ಣಿಸಿದ್ದಾರೆ. ಹಣಕಾಸು ಮಂತ್ರಿ ಅರುಣ್ ಜೇಟ್ಲಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬ ಆರೋಪವನ್ನೂ ಅವರು ಮಾಡಿದ್ದಾರೆ. ಫ್ರೆಂಚ್ ಸಂಸ್ಥೆ ದಸಾಲ್ಟ್ ಏವಿಯೇಶನ್ ಅಧ್ಯಕ್ಷ ಎರಿಕ್ ಟ್ರಾಪ್ಪಿಯರ್ ಅವರು ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಜವಾಬ್ದಾರಿ ಹಂಚಿಕೆ ಕುರಿತಂತೆ ಐಎಎಫ್ ಹಾಗೂ ಎಚ್  ಎಎಲ್ ಅಧಿಕಾರಿಗಳ ಸಮ್ಮುಖ ಮಾರ್ಚ್ 25, 2015ರಂದು ಮಾತನಾಡುತ್ತಿರುವ ವಿಡಿಯೋವೊಂದನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು, ‘ಸಾಕಷ್ಟು ಶ್ರಮ ಹಾಗೂ ಸ್ವಲ್ಪ ಚರ್ಚೆಯ ನಂತರ ಭಾರತೀಯ ವಾಯುಪಡೆಯ ಮುಖ್ಯಸ್ಥ ತಮಗೆ ರಫೇಲ್‌ನಂತಹ ಯುದ್ಧ ವಿಮಾನ ಬೇಕು ಎಂದಿರುವುದು ಹಾಗೂ ಇನ್ನೊಂದೆಡೆ ಎಚ್‌ಎಎಲ್ ಅಧ್ಯಕ್ಷರು ತಾವು ಜವಾಬ್ದಾರಿ ಹಂಚಿಕೆಗೆ ಒಪ್ಪಿದ್ದಾಗಿ ಹಾಗೂ ನಿಯಮದಂತೆ ಆರ್‌ಎಫ್‌ಪಿ (ರಿಕ್ವೆಸ್ಟ್ ಫಾರ್ ಪ್ರಪೋಸಲ್)ಗೆ ನಾವು ಬದ್ಧರಾಗಿರುವುದು ನಮಗೆ ದೊಡ್ಡ ಸಮಾಧಾನ ನೀಡಿದೆ. ಒಪ್ಪಂದ ಅಂತಿಮಗೊಂಡು ಸಹಿ ಹಾಕುವುದು ಆದಷ್ಟು ಬೇಗ ನಡೆಯುವುದು ಎಂದು ನಾನು ನಂಬಿದ್ದೇನೆ,’’ ಎಂದು ಟ್ರಾಪ್ಪಿಯರ್ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ವಿವಾದದಲ್ಲಿ ಸಿಲುಕಿರುವ ಬಿಜೆಪಿಯನ್ನು ಈ ಎಲ್ಲಾ ಬೆಳವಣಿಗೆಗಳು ಮತ್ತಷ್ಟು ಇರಿಸುಮುರಿಸುಗೊಳಿಸುತ್ತಿರುವುದು ಸುಳ್ಳಲ್ಲ. ಬಿಜೆಪಿಯ ಮಾಜಿ ಹಿರಿಯ ನಾಯಕರಾದ ಅರುಣ್ ಶೌರಿ, ಯಶ್ವಂತ್ ಸಿನ್ಹಾ ಹಗರಣದ ವಿರುದ್ಧ ಮಾತೆತ್ತಿದ್ದಾರೆ. ಇದು ರಫೇಲ್ ಕುರಿತು ಚರ್ಚೆಯನ್ನು ಮತ್ತಷ್ಟು ಗಂಭೀರವಾಗಿಸಿದೆ. ರಕ್ಷಣಾ ಇಲಾಖೆಗೆ ಸಂಬಂಧಿಸಿ ಇಷ್ಟೊಂದು ದೊಡ್ಡ ಗಂಭೀರ ಆರೋಪ ಕೇಳಿ ಬರುತ್ತಿದ್ದರೂ ಮೋದಿ ಮಾತ್ರ ವೌನವಾಗಿದ್ದಾರೆ. ನರೇಂದ್ರ ಮೋದಿ ಸರಕಾರದ ಮೇಲಿರುವುದು ಗಂಭೀರವಾದ ಆರೋಪ. ಕೂಡಲೇ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಸಾರ್ವಜನಿಕರೆದುರು ಬಹಿರಂಗಪಡಿಸಬೇಕಾಗಿರುವುದು ಪ್ರಧಾನಿಯವರ ಮಹತ್ವದ ಹೊಣೆಗಾರಿಕೆಯೂ ಆಗಿರುತ್ತದೆ.

1987ರಲ್ಲಿ 410 ಸಂಖ್ಯೆಯ ಬೋಫೋರ್ಸ್ ಬಂದೂಕುಗಳಿಗಾಗಿ ಭಾರತ ಸರಕಾರವು ಸ್ವೀಡನ್‌ಗೆ 28 ಕೋಟಿ 50 ಲಕ್ಷ ಡಾಲರ್ ಪಾವತಿಸಿತ್ತು. ಅದೇ ವರ್ಷ ಸ್ವೀಡನ್‌ನ ರೇಡಿಯೋ, ಇದರಲ್ಲಿ ಕಮಿಷನ್ ಪಡೆಯಲಾಗಿದೆ ಎಂಬ ಸುದ್ದಿಯನ್ನು ಹೊರಹಾಕಿತು. ವಿಪಕ್ಷವು ತೀವ್ರ ಕೋಲಾಹಲ ಎಬ್ಬಿಸಿದಾಗ 1987ರ ಆಗಸ್ಟ್‌ನಲ್ಲಿ ವಿ.ಶಂಕರಾನಂದ್‌ರವರ ಅಧ್ಯಕ್ಷತೆಯಲ್ಲಿ ಜೆಪಿಸಿ(ಜಂಟಿ ಸಂಸದೀಯ ಮಂಡಳಿ) ರಚಿಸಲಾಯಿತು. ಎಪ್ರಿಲ್ 26, 1988ರಲ್ಲಿ ಇದರ ವರದಿಯನ್ನು ಸಂಸತ್ತಿನ ಮುಂದಿಡಲಾಯಿತು. ವಿಪಕ್ಷ ಆ ನಂತರವೂ ಕೋಲಾಹಲ ಎಬ್ಬಿಸಿತ್ತು. ಗಮನಾರ್ಹವೆಂದರೆ, ರಫೇಲ್ ಡೀಲ್ 58 ಸಾವಿರ ಕೋಟಿಯದ್ದಾಗಿದೆ. ಬೋಫೋರ್ಸ್ ಡೀಲ್ ಕೇವಲ 1700 ಕೋಟಿಯದ್ದಾಗಿದೆ. ಬೋಫೋರ್ಸ್ ಕುರಿತು ಜೆಪಿಸಿ ರಚಿಸಲಾಗಿದ್ದರೆ, ರಫೇಲ್ ಕುರಿತು ಜೆಪಿಸಿ ರಚಿಸಲಿರುವ ತೊಡಕಾದರೂ ಏನು? ರಫೇಲ್ ಕುರಿತು ಸಾರ್ವಜನಿಕವಾಗಿರುವ ಎದ್ದಿರುವ ಗಂಭೀರ ಪ್ರಶ್ನೆಗಳಿಗೆ ಕೇಂದ್ರದ ಬಿಜೆಪಿ ಸರಕಾರದ ಸಮರ್ಪಕ ಉತ್ತರ ನೀಡಬಹುದೇ?

***

 

LEAVE A REPLY

Please enter your comment!
Please enter your name here