ಮೇಲ್ಜಾತಿಗರ ಮನೆಯ ಹೂ ಕಿತ್ತ ಬಾಲಕಿ | ಗ್ರಾಮದ 40 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!

Prasthutha: August 21, 2020

ಭುವನೇಶ್ವರ : ದಲಿತ ಬಾಲಕಿಯೊಬ್ಬಳು ಮೇಲ್ಜಾತಿ ಕುಟುಂಬದ ಮನೆಯೊಂದರ ಹಿತ್ತಿಲಲ್ಲಿದ್ದ ಹೂ ಕೀಳಿದಳೆಂಬ ಕಾರಣಕ್ಕೆ, ಆ ಗ್ರಾಮದ ಎಲ್ಲ 40 ದಲಿತ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಒಡಿಶಾದಲ್ಲಿ ನಡೆದಿದೆ.

ಒಡಿಶಾದ ಧೆಂಕನಾಲ್ ಜಿಲ್ಲೆ ಕಾಂತಿಯೊ ಕತೇನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎರಡು ವಾರಗಳಿಂದ ಅಲ್ಲಿನ ಎಲ್ಲ ದಲಿತ ಕುಟುಂಬಗಳಿಗೆ ಬಹಿಷ್ಕಾರ ಹಾಕಲಾಗಿದೆ.

15 ವರ್ಷದ ದಲಿತ ಬಾಲಕಿ ಮೇಲ್ಜಾತಿಯವರ ಮನೆಗೆ ಸೇರಿದ ಹೂ ಕಿತ್ತಿದ್ದಳು. ಅದಕ್ಕಾಗಿ ಆಕೆಯ ಕುಟುಂಬ ಕ್ಷಮೆಯನ್ನೂ ಯಾಚಿಸಿತ್ತು. ಆದರೂ, ಇಡೀ ಗ್ರಾಮದ ದಲಿತರಿಗೆ ಬಹಿಷ್ಕಾರ ಹಾಕಿರುವುದಕ್ಕೆ ಗ್ರಾಮದ ದಲಿತರು ಬೇಸರ ವ್ಯಕ್ತಪಡಿಸಿದ್ದಾರೆ.

“ಸಮಸ್ಯೆ ಇತ್ಯರ್ಥವಾಗಲೆಂದು, ಆ ಕೂಡಲೇ ನಾವು ಅವರಲ್ಲಿ ಕ್ಷಮೆ ಯಾಚಿಸಿದ್ದೆವು. ಆದರೆ, ಆ ನಂತರ ಹಲವು ಸಭೆಗಳು ನಡೆದವು ಮತ್ತು ಅವರು ನಮಗೆ ಬಹಿಷ್ಕಾರ ಹಾಕಲು ನಿರ್ಧರಿಸಿದರು. ನಮ್ಮ ಜೊತೆ ಯಾರೊಬ್ಬರನ್ನೂ ಮಾತನಾಡಲು ಬಿಡುತ್ತಿಲ್ಲ, ಗ್ರಾಮದ ಯಾವುದೇ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಮಗೆ ಅವಕಾಶ ನೀಡುತ್ತಿಲ್ಲ’’ ಎಂದು ಬಾಲಕಿಯ ತಂದೆ ನಿರಂಜನ್ ನಾಯ್ಕ್ ಹೇಳಿದ್ದಾರೆ.

ಸ್ಥಳೀಯ ಪಡಿತರ ವಿತರಕ ಮತ್ತು ದಿನಸಿ ಅಂಗಡಿ ಮಾಲೀಕರು ನಮಗೆ ವಸ್ತುಗಳನ್ನು ಮಾರಾಟ ಮಾಡುವುದನ್ನೂ ನಿಲ್ಲಿಸಿದ್ದಾರೆ. ಇದರಿಂದಾಗಿ ನಾವು ಅಗತ್ಯ ವಸ್ತುಗಳ ಖರೀದಿಗೆ 5 ಕಿ.ಮೀ. ದೂರ ಹೋಗಬೇಕಾಗಿದೆ. ಗ್ರಾಮಸ್ಥರು ನಮ್ಮೊಂದಿಗೆ ಮಾತನಾಡುವುದನ್ನೂ ನಿಲ್ಲಿಸಿದ್ದಾರೆ ಎಂದು ಗ್ರಾಮಸ್ಥೆ ಜ್ಯೋತಿ ನಾಯ್ಕ್ ಎಂಬವರು ತಿಳಿಸಿದ್ದಾರೆ.

ಗ್ರಾಮದಲ್ಲಿ ನಮಗೆ ಕೆಲಸವನ್ನೂ ನೀಡುತ್ತಿಲ್ಲ, ಹೀಗಾಗಿ ಕೆಲಸಕ್ಕಾಗಿ ನಾವು ದೂರದೂರುಗಳಿಗೆ ಹೋಗಬೇಕಾಗಿದೆ. ನಮ್ಮಲ್ಲಿ ಬಹುತೇಕ ಮಂದಿ ಅನಕ್ಷರಸ್ಥರು ಮತ್ತು ಅರೆಶಿಕ್ಷಣ ಪಡೆದವರು. ಹೀಗಾಗಿ ಗ್ರಾಮದ ಜನರ ಹೊಲಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಗ್ರಾಮದ ರಸ್ತೆಗಳಲ್ಲಿ ಮದುವೆ ಅಥವಾ ಅಂತ್ಯ ಸಂಸ್ಕಾರದ ಮೆರವಣಿಗೆ ನಡೆಸದಂತೆಯೂ ಎಚ್ಚರಿಕೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

“ಸ್ಥಳೀಯ ಸರಕಾರಿ ಶಾಲೆಯಲ್ಲಿ ನಮ್ಮ ಸಮುದಾಯದ ಮಕ್ಕಳು ಓದಬಾರದು ಎಂಬ ಎಚ್ಚರಿಕೆಯನ್ನೂ ಅವರು ನೀಡಿದ್ದಾರೆ. ನಮ್ಮ ಸಮುದಾಯದ ಶಿಕ್ಷಕರಿಗೂ, ಅವರು ತಮಗೆ ಇಷ್ಟಬಂದ ಊರಿಗೆ ವರ್ಗಾವಣೆ ಮಾಡಿಸಿಕೊಳ್ಳಿ ಎಂಬುದಾಗಿ ಹೇಳುತ್ತಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.

ಆದರೆ, ಅವರ ತಪ್ಪುಗಳಿಗಾಗಿ ಅವರೊಂದಿಗೆ ಮಾತನಾಡದಂತೆ ಗ್ರಾಮಸ್ಥರಿಗೆ ಸೂಚಿಸಿರುವುದು ನಿಜ. ಉಳಿದೆಲ್ಲ ಆರೋಪಗಳು ಸುಳ್ಳು ಎಂದು ಈ ನಿರ್ಧಾರ ಮಾಡಿದ ಗ್ರಾಮದ ಸಮಿತಿಯ ಸದಸ್ಯ ಮತ್ತು ಸರಪಂಚ ಹೇಳಿದ್ದಾರೆ.

800 ಕುಟುಂಬಗಳಿರುವ ಈ ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಾಯ್ಕ್ ಜಾತಿಯ 40 ಕುಟುಂಬಗಳಿವೆ. ಘಟನೆಗೆ ಸಂಬಂಧಿಸಿ ಸಮುದಾಯದ ಜನರು ಜಿಲ್ಲಾಡಳಿತ ಹಾಗೂ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಾದ ನಂತರ ಎರಡು ಸುತ್ತಿನ ಶಾಂತಿ ಸಭೆ ಗ್ರಾಮದಲ್ಲಿ ನಡೆದಿದೆ. ಆದರೆ, ಇನ್ನೂ ವಿಷಯ ಇತ್ಯರ್ಥವಾಗಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪೊಲೀಸರು ಇನ್ನೊಂದು ಸುತ್ತಿನ ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!