ಮುಹರ್ರಂ: ಪ್ರತಿರೋಧ ಉತ್ತೇಜಿಸುವ ಮಾಸ

0
62

♦ಕೆ.ವೈ.ಅಬ್ದುಲ್ ಹಮೀದ್, ಕುಕ್ಕಾಜೆ

ವರ್ಷಗಳಲ್ಲಿ ನಾಲ್ಕು ತಿಂಗಳುಗಳು ಪಾವನವೆಂದೂ,  ಆ ಪಾವನ ತಿಂಗಳುಗಳಲ್ಲಿ ಯಾರೂ ಸ್ವತಃ ತಮ್ಮ ಮೇಲೆ ಅಕ್ರಮವೆಸಗಬಾರದೆಂದೂ ಅಲ್ಲಾಹನು ಪವಿತ್ರ ಕುರ್‌ಆನ್‌ನ ಸೂರಃ ತೌಬಾದಲ್ಲಿ ವಿವರಿಸಿದ್ದಾನೆ. ಅರಬಿ ಕ್ಯಾಲೆಂಡರ್‌ನಲ್ಲಿ  ನಿರಂತರವಾಗಿರುವ ಅರ್ಥಾತ್ ದುಲ್‌ಖಅದ, ದುಲ್‌ಹಜ್ಜ್ ಮತ್ತು ಮೊಹರಂ ಹಾಗೂ ಒಂದು ಪ್ರತ್ಯೇಕ ತಿಂಗಳಾದ ರಜಬ್ ಎಂಬ ನಾಲ್ಕು ತಿಂಗಳುಗಳನ್ನು ಅಲ್ಲಾಹನು ಪಾವನಗೊಳಿಸಿದ್ದಾನೆ. ಈ ತಿಂಗಳಲ್ಲಿ ಯಾವುದೇ ರೀತಿಯ ಅಕ್ರಮವೆಸಗಬಾರದು ಮತ್ತು ಸ್ವತಃ ಅಕ್ರಮವೆಸಗಲೂಬಾರದೆಂದು ಸೂಚಿಸುವ ಮೂಲಕ ಆ ಪಾವನ ತಿಂಗಳನ್ನು ಗೌರವಿಸಬೇಕೆಂಬ ಸೂಚನೆಯನ್ನು ಅಲ್ಲ್ಲಾಹನು ನೀಡಿದ್ದಾನೆ.

ಮಕ್ಕಾದ ಮುಶ್ರಿಕರೂ ಮುಹರಂ ತಿಂಗಳನ್ನು ಹಿಂದಿನ ಕಾಲದಿಂದಲೇ ಗೌರವಿಸುತ್ತಿದ್ದರು. ಯುದ್ಧವು ತಮ್ಮ ಜೀವನದ ಭಾಗವೆಂದು ಪರಿಗಣಿಸಿದ್ದ ಅಂದಿನ ಅರಬಿಗಳು ಈ ತಿಂಗಳ ಪಾವಿತ್ರವನ್ನು ಗೌರವಿಸುವ ಸಲುವಾಗಿ ಅನಿವಾರ್ಯವಾಗಿ ಯುದ್ಧದಿಂದ ವಿರಮಿಸುತ್ತಿದ್ದರು. ಪ್ರವಾದಿವರ್ಯರು(ಸ) ಮದೀನಾದಲ್ಲಿದ್ದ ವೇಳೆ ಅಲ್ಲಿನ ಯಹೂದಿಗಳು ಮುಹರ್ರಂ ಹತ್ತರಂದು ಉಪವಾಸ ಆಚರಿಸುತ್ತಿರುವುದು ತಿಳಿಯಿತು. ಅದಕ್ಕಿರುವ ಕಾರಣವೇನೆಂದು ವಿಚಾರಿಸಿದಾಗ ಪ್ರವಾದಿ ಮೂಸಾ(ಅ)ರ ಮೂಲಕ ಬನೀಇಸ್ರಾಯೀಲರು ಫರೋವನ ಅನ್ಯಾಯದಿಂದ ಪಾರಾದ ದಿನವೆಂದು ಹೇಳುತ್ತಾರೆ. ಪ್ರವಾದಿ ಮೂಸಾ(ಅ)ರ ಕುರಿತು ಹೆಚ್ಚು ಗೌರವ ಪಡಲು ಅರ್ಹರು ನಾವು ಎಂಬ ರೀತಿಯ ಹೇಳಿಕೆ ನೀಡಿದ ಪ್ರವಾದಿವರ್ಯರು(ಸ) ಅನುಯಾಯಿಗಳಿಗೆ ಆ ದಿನದಂದು ಉಪವಾಸ ಆಚರಿಸಲು ಆದೇಶಿಸುತ್ತಾರೆ. ಮುಂದಿನ ವರ್ಷ ಜೀವಂತವಿದ್ದರೆ ಮೊಹರಂ ಒಂಭತ್ತರಂದೂ ಉಪವಾಸ ಆಚರಿಸುವುದಾಗಿಯೂ ಪ್ರವಾದಿವರ್ಯರು(ಸ) ತಿಳಿಸಿದ್ದರು.

ಪ್ರವಾದಿ ಮೂಸಾ(ಅ)ರನ್ನು ಬನೀಇಸ್ರಾಯೀಲರ ವಿಮೋಚನೆಗಾಗಿ ಅಲ್ಲಾಹನು ನಿಯೋಗಿಸಿದ್ದನು. ಅಕ್ರಮಿಯಾದ ಫರೋವನ ಆಡಳಿತದಲ್ಲಿ ಬಹುಸಂಖ್ಯೆಯಲ್ಲಿದ್ದ ಬನೀಇಸ್ರಾಯೀಲರು ತೀವ್ರ ದೌರ್ಜನ್ಯಕ್ಕೆ ಗುರಿಯಾಗಿದ್ದರು. ಎಲ್ಲಾ ರೀತಿಯ ಸ್ವಾತಂತ್ರವನ್ನು ಕಳೆದುಕೊಂಡು ದಾಸ್ಯಕ್ಕೆ ತುತ್ತಾಗಿದ್ದ ಅವರು ಹೋರಾಟದ ಮನೋಭಾವವನ್ನೆ ಕಳೆದುಕೊಂಡಿದ್ದರು. ದಾಸ್ಯತನವನ್ನು ಒಪ್ಪಿಕೊಂಡು ಜೀವಿಸುವ ಮೂಲಕ ಫರೋವನ ದಬ್ಬಾಳಿಕೆ ಮುಂದುವರಿಯಲು ಪರೋಕ್ಷ ಸಹಕಾರ ನೀಡಿದ್ದರು. ಫರೋವನ ಸರ್ವಾಧಿಕಾರ ಈ ರೀತಿಯ ಪರಿಣಾಮವನ್ನು ಆವರ ಮೇಲೆ ಬೀರಿತ್ತು.

ಇಂತಹ ಸಂದರ್ಭದಲ್ಲಿ ಅವರ ವಿಮೋಚನೆಗಾಗಿ ಅಲ್ಲಾಹನು ಹಝ್ರತ್ ಮೂಸಾ(ಅ)ರನ್ನು ಪ್ರವಾದಿಯಾಗಿ ಕಳಿಸಿಕೊಡುತ್ತಾನೆ. ಫರೋವ ಅಂದು ಜಗತ್ತಿನ ಹೆಚ್ಚಿನ ಭಾಗವನ್ನು ನಿಯಂತ್ರಿಸಬಲ್ಲ ಸರ್ವಾಧಿಕಾರವನ್ನು ಹೊಂದಿದ್ದ ಕ್ರೂರಿಯಾಗಿದ್ದ. ಎಲ್ಲರ ದೇವ ತಾನೆಂದು ಆತ ಸ್ವಯಂ ಘೋಷಿಸಿಕೊಂಡಿದ್ದ ಅಹಂಕಾರಿಯಾಗಿದ್ದ. ಆತನ ಬಳಿ ತೆರಳಿ ಸನ್ಮಾರ್ಗದ ಸಂದೇಶ ಸಾರುವ, ಬನೀಇಸ್ರಾಯೀಲರ ವಿಮೋಚನೆ ಮಾಡಲು ಹೇಳುವ ಕೆಲಸ ಸುಲಭವಾಗಿರಲಿಲ್ಲ. ಅವನ ವಿರೋಧಿಗಳನ್ನು ಆತ ಚಿತ್ರಹಿಂಸೆ ನೀಡಿ ಕೊಲ್ಲುತ್ತಿದ್ದ.

ಪ್ರವಾದಿ ಮೂಸಾ(ಅ)ರಿಗೂ ಇಂತಹ ಮಾನವ ಸಹಜವಾದ ಅಳುಕು ಇತ್ತು. ಅಲ್ಲಾಹನು ಅವರಿಗೆ ಧೈರ್ಯ ತುಂಬುತ್ತಾನೆ. ಮೂಸಾ(ಅ)ರ ಕೈಯಲ್ಲಿದ್ದ ಬೆತ್ತವನ್ನು ನೆಲಕ್ಕೆ ಹಾಕುವಂತೆ ಅಲ್ಲಾಹನು ತಿಳಿಸುತ್ತಾನೆ. ಬೆತ್ತವನ್ನು ನೆಲಕ್ಕೆ ಹಾಕಿದಾಗ ಅದು ಭೀತಿಪಡಿಸುವ ರೀತಿಯ ದೊಡ್ಡ ಸರ್ಪವಾಗಿ ಬದಲಾಗುತ್ತದೆ. ಹಝ್ರತ್ ಮೂಸಾ(ಅ) ಈ ದೃಶ್ಯವನ್ನು ಕಂಡು ಭಯಗೊಳ್ಳುತ್ತಾರೆ. ಧೈರ್ಯದಿಂದ ಆ ಸರ್ಪವನ್ನು ಎತ್ತಿಕೊಳ್ಳುವಂತೆ ಆಲ್ಲಾಹನ ಆದೇಶ ಬರುತ್ತದೆ. ಹಝ್ರತ್ ಮೂಸಾ(ಅ) ಧೈರ್ಯದಿಂದ ಅದನ್ನು ಎತ್ತಿಕೊಳ್ಳುತ್ತಾರೆ. ಅದು ಹಿಂದಿನಂತೆ ಬೆತ್ತವಾಗಿ ಮಾರ್ಪಾಡಾಗುತ್ತದೆ. ಮುಂದೆ ಅದೇ ಹಾದಿಯಲ್ಲಿ ಸಾಗಿ ಬನೀಇಸ್ರಾಯೀಲರನ್ನು ಫರೋವನ ದಾಸ್ಯದಿಂದ ಮುಕ್ತಿಗೊಳಿಸಿರುವುದು ಇತಿಹಾಸವಾಗಿದೆ.

ಕುರ್‌ಆನ್‌ನಲ್ಲಿ ಪ್ರತಿಪಾದಿಸಲ್ಪಟ್ಟ ಈ ಇತಿಹಾಸದಲ್ಲಿ ನಮಗೆ ಹಲವಾರು ಮಾರ್ಗದರ್ಶನಗಳಿವೆ. ಇಂದಿನ ಕಾಲದ ಹೆಚ್ಚಿನ ಆಡಳಿತ ಫರೋವನ ಸರ್ವಾಧಿಕಾರಿ ಆಡಳಿತದ ಹಾದಿಯತ್ತ ಸಾಗುತ್ತಿರುವುದಾಗಿ ಅನುಭವದಿದಂದ ತಿಳಿಯಬಹುದು. ಅದನ್ನು ಎದುರಿಸಿ ಸತ್ಯಕ್ಕಾಗಿ, ಸಮಾನತೆಗಾಗಿ, ದಾಸ್ಯ ವಿಮೋಚನೆಗಾಗಿ ಹೋರಾಡಬೇಕಾದರೆ ಭಯಾನಕ ವಿಷಸರ್ಪವನ್ನು ಕೈಗೆತ್ತಿಕೊಳ್ಳುವಂತಹ ಧೈರ್ಯವನ್ನು ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಸಮಾಜದ ವಿಮೋಚನೆಗೆ ಯಾರಾದರೂ ಅಂತಹ ಧೈರ್ಯ ತೋರಿದರೆ ಮಾರಕ ವಿಷ ಸರ್ಪವನ್ನು ಬೆತ್ತವಾಗಿ ಬದಲಾಯಿಸಿದಂತೆ ಸಮಾಜವನ್ನು ಮುಕ್ಕಿ ತಿನ್ನುವ ಪ್ರಭುತ್ವವನ್ನು ಬದಲಾಯಿಸಲು ದೇವನ ನೆರವು ನಿಶ್ಚಿತ ಎಂಬುದನ್ನು ಇದರಿಂದ ತಿಳಿಯಬಹುದು.

ಅಲ್ಲಾಹನು ಹಜ್ಜ್ ತಿಂಗಳ ಮುಂದಿನ ಮತ್ತು ಅದರ ಹಿಂದಿನ ತಿಂಗಳನ್ನು ಪಾವನಗೊಳಿಸಿರುವುದರ ಹಿಂದೆ ಹಲವಾರು ವಿಚಾರಗಳನ್ನು ಗಮನಿಸಬಹುದು. ಜಾಗತಿಕ ಮುಸ್ಲಿಮರ ಮೇಲೆ ಕಡ್ಡಾಯವಾದ ಪುಣ್ಯಕರ್ಮ ಹಜ್ಜ್ ನಿರ್ವಹಿಸಲು ಅನಿವಾರ್ಯವಾಗಿ ಅರಬ್ ದೇಶದ ಮಕ್ಕಾ ನಗರಕ್ಕೆ ಪ್ರಯಾಣಿಸಬೇಕಾಗಿದೆ. ತಿಂಗಳುಗಟ್ಟಲೆ ದೀರ್ಘವಾದ ಪ್ರಯಾಣ ಮಾಡಿ ಮಕ್ಕಾ ತಲುಪುವ ತೀರ್ಥ ಯಾತ್ರಿಕರಿಗೆ ಯಾವುದೇ ರೀತಿಯ ಅಡ್ಡಿ ಆತಂಕವಿರಬಾರದು ಎಂಬುದು ಕೂಡ ಇದರ ಹಿಂದಿರುವ ರಹಸ್ಯವಾಗಿದೆ. ಅರಬ್ ಜನತೆ ಸದಾ ಹೋರಾಟ ಮನೋಭಾವ ಹೊಂದಿದವರಾಗಿದ್ದರು. ಮರಳುಗಾಡಿನ ಸಂಕಷ್ಟದ ಜೀವನ ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಬಲಿಷ್ಟಗೊಳಿಸಿತ್ತು. ಹೋರಾಟವೇ ಜೀವನವಾಗಿದ್ದ ಅವರಿಗೆ ಯುದ್ಧಗಳಿಲ್ಲದ ದಿನಗಳು ನೀರಸವಾಗಿರುತ್ತಿತ್ತು. ಇದು ದೀರ್ಘ ಪ್ರಯಾಣಿಕರಿಗೆ ಮಾರಕವಾಗಿರುತ್ತಿತ್ತು. ಅಲ್ಲಾಹನು ಕೆಲ ತಿಂಗಳುಗಳನ್ನು ಪಾವನಗೊಳಿಸುವ ಮೂಲಕ ಆ ತಿಂಗಳುಗಳಲ್ಲಿ ಯುದ್ಧವನ್ನು ನಿಷೇಧಿಸುತ್ತಾನೆ. ಇದು ಪುಣ್ಯ ತೀರ್ಥ ಕೈಗೊಳ್ಳುವ ಸಾತ್ವಿಕರಿಗೆ ವರದಾನವಾಗಿತ್ತು.

ಹಿಜ್ರಾ ಎರಡನೆ ವರ್ಷದ ಪವಿತ್ರ ತಿಂಗಳಾದ ರಜಬ್‌ನಲ್ಲಿ ಒಂದು ವಿಶೇಷ ಘಟನೆ ನಡೆಯಿತು.  ಪ್ರವಾದಿವರ್ಯರು(ಸ) ಅಬ್ದುಲ್ಲಾಹಿಬ್‌ನು ಜಹ್‌ಷ್(ರ)ರ ನಾಯಕತ್ವದಲ್ಲಿ ಹನ್ನೆರಡು ಮಂದಿಯ ತಂಡವನ್ನು ನಖ್‌ಲಾ ಎಂಬಲ್ಲಿಗೆ ಕಳಿಸಿಕೊಟ್ಟರು. ಪ್ರಯಾಣದ ಎರಡು ದಿವಸಗಳ ಬಳಿಕ ತೆರೆದು ನೋಡುವಂತೆ ಸೂಚನೆ ನೀಡಿ ಪ್ರವಾದಿವರ್ಯರು(ಸ) ಅಬ್ದುಲ್ಲಾಹಿಬ್‌ನು ಜಹ್‌ಷ್(ರ)ರ  ಬಳಿ ಒಂದು ಪತ್ರವನ್ನು ಕೊಟ್ಟಿದ್ದರು. ಅದರಂತೆ ಎರಡು ದಿವಸಗಳ ಬಳಿಕ ಪತ್ರವನ್ನು ತೆರೆದು ಓದುತ್ತಾರೆ. ಮಕ್ಕಾ ಮತ್ತು ತಾಯಿಫ್‌ನ ಮಧ್ಯೆ ಇರುವ ನಖ್‌ಲ ಎಂಬಲ್ಲಿ ಅವಿತು ಕುಳಿತು ಕುರೈಶಿ ವ್ಯಾಪಾರಿ ತಂಡವನ್ನು ಗಮನಿಸಿ ಮಾಹಿತಿ ನೀಡಬೇಕೆಂದು ಅದರಲ್ಲಿ ತಿಳಿಸಲಾಗಿತ್ತು.

ಅವರು ನಖ್‌ಲಾದ ಸಮೀಪ ತಲುಪಿದಾಗ ಅಮ್ರ್‌ಬಿನ್ ಖಳ್‌ರಮಿ ಮತ್ತು ಮೂವರಿದ್ದ ಒಂದು ವ್ಯಾಪಾರಿ ತಂಡವನ್ನು ಗಮನಿಸುತ್ತಾರೆ. ತಕ್ಷಣ ಅಬ್ದುಲ್ಲಾಹಿಬ್‌ನು ಜಹ್‌ಷ್(ರ)ತನ್ನ ಖಡ್ಗವನ್ನು ಕೈಗೆತ್ತಿಕೊಂಡು ಹೀಗೆ ಯೋಚಿಸತೊಡಗುತ್ತಾರೆ. ‘ಯುದ್ಧವನ್ನು ಮಾಡಲು ಪ್ರವಾದಿವರ್ಯರು(ಸ) ಆದೇಶಿಸಿಲ್ಲ. ಅದಲ್ಲದೆ ಇದು ಯುದ್ಧ ನಿಷಿದ್ಧವಾದ ತಿಂಗಳೂ ಆಗಿದೆ. ಈ ತಿಂಗಳು ಕೊನೆಗೊಳ್ಳಲು ಇನ್ನೂ ಒಂದು ದಿನ  ಬಾಕಿ ಉಳಿದಿದೆ. ಅದಕ್ಕೆ ಕಾದರೆ ವ್ಯಾಪಾರಿ ತಂಡ ಮಕ್ಕಾದ ಸೀಮೆ ದಾಟುತ್ತದೆ. ಅಬೂಜಹಲ್ ಮತ್ತು ಆತನ ಗುಂಪು ನಮ್ಮ ಮೇಲೆ ನಡೆಸಿದ ದಾಳಿ, ಅತಿಕ್ರಮಣಗಳಿಗೆ  ಪ್ರತೀಕಾರ ತೀರಿಸಲು ಸಿಕ್ಕ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ತಪ್ಪಾಗದು’ ಹೀಗೆಂದು ಯೋಚಿಸಿದ  ಅವರು ಅಮ್ರ್ ಬಿನ್ ಖಳ್‌ರಮಿಯ ತಂಡವನ್ನು ಎದುರಿಸಲು ತೀರ್ಮಾನಿಸುತ್ತಾರೆ. ಅನಿರೀಕ್ಷಿತವಾಗಿ ನಡೆದ ಆ ಹೋರಾಟದಲ್ಲಿ ಅಮ್ರ್‌ಬಿನ್ ಖಳ್‌ರಮಿ  ಕೊಲ್ಲಲ್ಪಡುತ್ತಾನೆ ಮತ್ತು ಹಕಮ್‌ಬಿನ್ ಕೈಸರ್, ಉಸ್ಮಾನ್‌ಬಿನ್ ಅಬ್ದಿಲ್ಲ ಎಂಬವರನ್ನು ಅಬ್ದುಲ್ಲಾಹಿಬ್‌ನು ಜಹ್‌ಷ್(ರ)ರ ತಂಡ  ಸೆರೆ ಹಿಡಿಯುತ್ತದೆ. ನೌಫಲ್ ಎಂಬಾತ ಓಡಿ ಪಾರಾಗುವಲ್ಲಿ ಯಶಸ್ವಿಯಾಗುತ್ತಾನೆ. ಬಂಧಿತರು ಮತ್ತು ವಶಪಡಿಸಿಕೊಂಡ ಸೊತ್ತುಗಳೊಂದಿಗೆ  ಅಬ್ದುಲ್ಲಾಹಿಬ್‌ನು ಜಹ್‌ಷ್(ರ) ಮದೀನಾಗೆ ಮರಳುತ್ತಾರೆ.

ಯುದ್ಧ ನಿಷಿದ್ಧವಾದ ತಿಂಗಳಿನಲ್ಲಿ ನಡೆದಿತ್ತು ಈ ಘಟನೆ.  ಸಾಮಾನ್ಯವಾಗಿ ಎಲ್ಲರೂ ಗೌರವಿಸುವ ಈ ದಿನಗಳಲ್ಲಿ ಮುಸ್ಲಿಮರು ಸರ್ವಾಂಗೀಕೃತ ಕಾನೂನನ್ನು ಮುರಿದು ಈ ಕೊಲೆ ನಡೆಸಿದರೆಂದು ಮುಶ್ರಿಕರು ವ್ಯಾಪಕ ಪ್ರಚಾರ ಮಾಡತೊಡಗುತ್ತಾರೆ. ಆ ಮೂಲಕ ಪ್ರವಾದಿವರ್ಯರು(ಸ) ಮತ್ತು  ಅನುಯಾಯಿಗಳಿಗೆ ಕೆಟ್ಟ ಹೆಸರು ತರುವುದು ಅವರ ಉದ್ದೇಶವಾಗಿತ್ತು.

ಕುರೈಶರೊಂದಿಗೆ ಮದೀನಾದಲ್ಲಿದ್ದ ಯಹೂದಿಯರೂ ಈ ಅಪಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮದೀನಾ ತಲುಪಿದ ಅಬ್ದುಲ್ಲಾಹಿಬ್‌ನು ಜಹ್‌ಷ್(ರ)ರ ಈ ಕೃತ್ಯವನ್ನು ಪ್ರವಾದಿವರ್ಯರು(ಸ) ಮೆಚ್ಚಲಿಲ್ಲ. ಅವರು ತಂದಿದ್ದ  ಸಮರಾರ್ಜಿತ ಸಂಪತ್ತನ್ನು ಪ್ರವಾದಿವರ್ಯರು(ಸ) ಸ್ವೀಕರಿಸಲಿಲ್ಲ.  ಹೀಗೆ ಅಬ್ದುಲ್ಲಾಹಿಬ್‌ನು ಜಹ್‌ಷ್(ರ) ಎಲ್ಲರ ದೃಷ್ಟಿಯಲ್ಲಿ ತಪ್ಪಿತಸ್ತರಾದರು. ಆದರೆ ಆ ಬಳಿಕ ಇದಕ್ಕೆ ಸಂಬಂಧಪಟ್ಟಂತೆ ಅವತೀರ್ಣಗೊಂಡ ಕುರ್‌ಆನ್ ಸೂಕ್ತ ಅಲ್ಲಾಹನ ನ್ಯಾಯ ದೃಷ್ಟಿಯಲ್ಲಿ ಅವರು ಪವಿತ್ರ ಹೋರಾಟಗಾರರು ಎಂಬುದು ಶೃತಪಟ್ಟಿತು.

‘‘ಪವಿತ್ರ ತಿಂಗಳಲ್ಲಿ ಯುದ್ಧ ಮಾಡುವ ಕುರಿತು ತಮ್ಮೊಡನೆ ಅವರು ವಿಚಾರಿಸುತ್ತಾರೆ. ಹೇಳಿರಿ; ಆ ತಿಂಗಳಲ್ಲಿ ಯುದ್ಧ ಮಾಡುವುದು ದೊಡ್ಡ ಅಪರಾಧವಾಗಿದೆ. ಆದರೆ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವುದು, ಸತ್ಯವನ್ನು ತಿರಸ್ಕ್ಕರಿಸುವುದು, ಮಸ್ಜಿದುಲ್ ಹರಾಮ್‌ನಿಂದ ಅವರನ್ನು ತಡೆಯುವುದು, ಅದರ ನಿವಾಸಿಗಳನ್ನು ಅಲ್ಲಿಂದ ಹೊರ ದಬ್ಬುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲು ದೊಡ್ಡ ಅಪರಾಧವಾಗಿದೆ. ದೌರ್ಜನ್ಯ ಕೊಲೆಗಿಂತಲೂ ಕೆಟ್ಟದು….’’ (ಕುರ್‌ಆನ್ 2:217)

ನಿಮ್ಮ ವಿರುದ್ಧ ಯುದ್ಧ ಮಾಡುವವರೊಂದಿಗೆ ಯುದ್ಧ ಮಾಡಿರಿ ಎಂಬುದರ ತಾತ್ಪರ್ಯ ನಿಮ್ಮ ವಿರೋಧಿಗಳು ನಿಮ್ಮ ಮೇಲೆ ದಂಡೆತ್ತಿ ಬಂದಾಗ ಮಾತ್ರ ನೀವು ಒಂದಿಷ್ಟು ಪ್ರತಿರೋಧಿಸಿ ನಿಮ್ಮ ರಕ್ಷಣೆ ಮಾಡಿಕೊಳ್ಳಿರಿ ಎಂದಲ್ಲ. ನಿಮ್ಮ ವಿರುದ್ಧ ಶತ್ರುತ್ವ ಇಡದವರನ್ನು ಬಿಟ್ಟು ಬಿಡಿರಿ. ಆದರೆ ನಿಮ್ಮ ಕಾರ್ಯದಲ್ಲಿ ವಿಘ್ನ ಉಂಟು ಮಾಡುವವರು ಮತ್ತು ನಿಮ್ಮೊಂದಿಗೆ ಯುದ್ಧ ಮಾಡಿ ನಿಮ್ಮನ್ನೂ ನಿಮ್ಮ ಜೀವನ ವ್ಯವಸ್ಥೆಯನ್ನೂ ಅಳಿಸ ಹೊರಟವರನ್ನು ಎದುರಿಸದೆ ನಿರ್ವಾಹವಿಲ್ಲ. ಇಲ್ಲದಿದ್ದಲ್ಲಿ ಈ ಕಾರಣದಿಂದ ಸಂಪೂರ್ಣ ಸಮಾಜದಲ್ಲಿ ಕ್ಷೋಭೆ ಹರಡಬಹುದು. ಜೀವನ ವ್ಯವಸ್ಥೆಯ ವಿರುದ್ಧವಾದ ಕ್ಷೋಭೆ ಕೊಲೆಗಿಂತಲೂ ದೊಡ್ಡ ಕೆಡುಕು. ಆದುದರಿಂದ ದೊಡ್ಡ ಕೆಡುಕನ್ನು ಎದುರಿಸಲು ಹೋರಾಟ ಅನಿವಾರ್ಯವಾದರೆ ಮಾಡಲೇಬೇಕು ಎಂಬುದನ್ನು ಇದರಿಂದ ತಿಳಿಯಬಹುದು.

ಧಾರ್ಮಿಕ ಸ್ವಾತಂತ್ರ, ಮಾನವ ಹಕ್ಕುಗಳ ವಿರುದ್ಧ ದುಷ್ಟ ಶಕ್ತಿಗಳು ಹರಿಯ ಬಿಡುವ ಕ್ರೂರ ಕೃತ್ಯಗಳನ್ನು ಬಲವಂತವಾಗಿ ತಡೆಯದೆ ಕೇವಲ ತಾಂತ್ರಿಕ ಮೊಂಡುವಾದಗಳನ್ನು ಮಾಡುವುದು ಅನ್ಯಾಯ ಎಂದು ಈ ದೇವವಾಣಿ ನಮಗೆ ತಿಳಿಸುತ್ತದೆ. ಅದೇ ರೀತಿ ಅನ್ಯಾಯ ಮೇರೆ ಮೀರಿ ಅದನ್ನು ತಡೆಯುವುದು ಅನಿವಾರ್ಯವಾದಾಗ ಪಾವನ ಮಾಸಗಳು ಅದಕ್ಕೆ ತಡೆಯಾಗಲಾರದೆಂದು ಇದರಿಂದ ತಿಳಿಯಬಹುದು. ಜನರು ಸೂಕ್ತ ಸಂದರ್ಭದಲ್ಲಿ  ಸೂಕ್ತ ನಿರ್ಧಾರವನ್ನು  ಕೈಗೊಳ್ಳಬೇಕಾಗುತ್ತದೆ. ಯಾವುದೇ ಅಪಾಯಗಳನ್ನು ಸೂಕ್ತ ರೀತಿಯಲ್ಲಿ ಎದುರಿಸಿ ಅದರ ನಿವಾರಣೆಯನ್ನು ಮಾಡದಿದ್ದಲ್ಲಿ  ಕ್ಷೋಭೆಯ ನಿಯಂತ್ರಣ ಕಷ್ಟವಾಗಬಹುದು. ಪವಿತ್ರ ಮುಹರಮ್ ತಿಂಗಳು ಕೆಡುಕಿನ ವಿರುದ್ಧ ಪ್ರತಿರೋಧವನ್ನು ಉತ್ತೇಜಿಸುವ ತಿಂಗಳಾಗಿದೆ.

LEAVE A REPLY

Please enter your comment!
Please enter your name here