ಮುಕ್ತಿ ಪಡೆದ ಮನಸ್ಸು

0
198

-ಎ. ಸಈದ್

ಯಮನ್‌ನಿಂದ ಹದಿಮೂರು ಮಂದಿ ಪುರುಷರ ತಂಡವೊಂದು ಮದೀನಾದಲ್ಲಿದ್ದ ಪ್ರವಾದಿ(ಸ)ಯ ಬಳಿಗೆ ಆಗಮಿಸಿತು. ಇಸ್ಲಾಮಿನ ಕುರಿತು ಪ್ರವಾದಿ(ಸ)ಯವರಿಂದ ನೇರವಾಗಿ ಕಲಿಯುವುದು ಅವರ ಉದ್ದೇಶವಾಗಿತ್ತು. ಪ್ರವಾದಿ(ಸ) ಅವರನ್ನು ಸಂತೋಷದಿಂದ ಬರಮಾಡಿಕೊಂಡರು. ಮಸ್ಜಿದ್‌ನಲ್ಲಿ ಕಳೆದ ಆ ತಂಡದ ಜನರು ವಿಶ್ವಾಸ, ಕರ್ಮ ಮತ್ತು ಕಾನೂನು ಕಟ್ಟಳೆಗಳನ್ನು ಕಲಿತರು. ತಾವು ಕಲಿತ ವಿಚಾರಗಳನ್ನು ತಮ್ಮ ಜನತೆಗೂ ಕಲಿಸಲು ಅವರು ಬಯಸಿದರು. ತಾಯ್ನಾಡಿಗೆ ಮರಳಲು ಅವರು ಪ್ರವಾದಿ(ಸ)ಯವರಿಂದ ಅನುಮತಿ ಕೋರಿದರು. ಕಾಣಿಕೆಗಳನ್ನು ನೀಡಿ ಅವರನ್ನು ಬೀಳ್ಕೊಡುವಾಗ ಪ್ರವಾದಿ(ಸ) ಅವರೊಡನೆ, ”ನಿಮ್ಮಲ್ಲಿ ಇನ್ನಾರದರೂ ಬಾಕಿ ಉಳಿದಿರುವರೇ?”ಎಂದು ಕೇಳುತ್ತಾರೆ. ಅವರು: ”ಹೌದು, ನಮ್ಮ ವಾಹನಗಳಿಗೆ ಕಾವಲು ಕುಳಿತ ಒಬ್ಬ ಹುಡುಗನಿದ್ದಾನೆ”

ಪ್ರವಾದಿ(ಸ): ”ಅವನನ್ನು ನನ್ನ ಬಳಿಗೆ ಕಳಿಸಿರಿ”

ವಾಹನಗಳ ಬಳಿಗೆ ತೆರಳಿದ ಅವರು ಆ ಹುಡುಗನೊಂದಿಗೆ: ”ನೀನು ಹೋಗಿ ಪ್ರವಾದಿ(ಸ)ಯೊಂದಿಗೆ ನಿನ್ನ ಬೇಡಿಕೆಗಳ ಬಗ್ಗೆ ಹೇಳು. ನಮಗೆ ಬೇಕಾದುದು ಸಿಕ್ಕಿದೆ. ನಾವು ಅವರೊಡನೆ ವಿದಾಯ ಕೋರಿ ಬಂದಿದ್ದೇವೆ” ಎಂದು ಹೇಳುತ್ತಾರೆ.

ಪ್ರವಾದಿ(ಸ)ಯ ಬಳಿ ಬಂದ ಆ ಹುಡುಗ ತನ್ನನ್ನು ಸ್ವಯಂ ಹೀಗೆ ಪರಿಚಯಿಸುತ್ತಾನೆ: ”ಸ್ವಲ್ಪ ಮೊದಲು ತಮ್ಮನ್ನು ಭೇಟಿಯಾಗಿದ್ದ ಗೋತ್ರದವನಾಗಿದ್ದೇನೆ ನಾನು. ಅವರ ಬೇಡಿಕೆಗಳನ್ನು ತಾವು ನೆರವೇರಿಸಿದಿರಿ. ಇನ್ನು ನನ್ನ ಬೇಡಿಕೆಗಳನ್ನು ನೆರವೇರಿಸುವಿರಿ ತಾನೆ?”

ಪ್ರವಾದಿ(ಸ): ”ನಿನಗೇನು ಬೇಕು?”

ಹುಡುಗ: ”ನನ್ನ ಬೇಡಿಕೆ ಸ್ನೇಹಿತರ ಬೇಡಿಕೆಗಳಿಗಿಂತ ಭಿನ್ನವಾಗಿದೆ. ಅವರೆಲ್ಲರೂ ಇಸ್ಲಾಮಿನ ಮೇಲಿನ ಆಸಕ್ತಿಯಿಂದಲೇ ತಮ್ಮ ಬಳಿಗೆ ಬಂದಿರುವರು. ಅಲ್ಲಾಹನಾಣೆ! ನಾನಾದರೋ, ಅಲ್ಲಾಹನ ಕ್ಷಮೆ-ಕರುಣೆಯನ್ನು ಪಡೆಯಲು ಮತ್ತು ಕತಜ್ಞನಾಗಲು ತಾವು ಅಲ್ಲಾಹನೊಡನೆ ಪ್ರಾರ್ಥಿಸಬೇಕೆಂದು ಕೇಳಿಕೊಳ್ಳಲು ಇಲ್ಲಿಗೆ ಬಂದಿರುವೆನು.”

ಪ್ರವಾದಿ(ಸ) ಆ ಹುಡುಗನನ್ನು ತನ್ನ ಬಳಿ ಕರೆದು ಈ ರೀತಿ ಪ್ರಾರ್ಥಿಸುತ್ತಾರೆ:

”ಅಲ್ಲಾಹನೇ, ಈತನನ್ನು ನೀನು ಕ್ಷಮಿಸು, ಇವನ ಮೇಲೆ ಕರುಣೆಯನ್ನು ವರ್ಷಿಸು ಮತ್ತು ಇವನ ಮನದಲ್ಲಿ ಸಂತಪ್ತಿಯನ್ನು ಮೂಡಿಸು.”

ಆ ತಂಡ ತಮ್ಮ ನಾಡಿಗೆ ಮರಳಿತು. ಬಳಿಕ ಹಿಜ್ರಾ ಹತ್ತನೇ ವರ್ಷದ ಹಜ್ಜ್‌ನ ಸಂದರ್ಭದಲ್ಲಿ ಪ್ರವಾದಿ(ಸ)ಯನ್ನು ಆ ತಂಡ ಮತ್ತೊಮ್ಮೆ ಭೇಟಿಯಾಯಿತು. ಕುಶಲೋಪರಿ ನಡೆಸಿದ ಬಳಿಕ ಪ್ರವಾದಿ(ಸ) ಅವರೊಡನೆ, ”ನಿಮ್ಮೆಂದಿಗಿರುವ ಆ ಬಾಲಕನೆಲ್ಲಿ?” ಎಂದು ಕೇಳುತ್ತಾರೆ. ಅದಕ್ಕೆ ಅವರು ಈ ರೀತಿ ಉತ್ತರಿಸಿದರು.

”ಅಲ್ಲಾಹನ ಪ್ರವಾದಿಯವರೇ, ಆತನೊಬ್ಬ ಅದ್ಭುತ ಬಾಲಕ. ಅಂತಹ ವ್ಯಕ್ತಿಯನ್ನು ನಾವಿದುವರೆಗೂ ಕಂಡಿಲ್ಲ. ಅಲ್ಲಾಹನು ನೀಡಿರುವುದರಲ್ಲಿ ಅವನಷ್ಟು ತಪ್ತಿ ಇರುವ ಮತ್ತೊಬ್ಬ ವ್ಯಕ್ತಿ ಇರಲಾರನು. ಜನರೆಲ್ಲಾ ಸೇರಿ ಭೂಮಿಯಲ್ಲಿರುವ ಸರ್ವ ಸಂಪತ್ತನ್ನು ಪಾಲು ಮಾಡಿಕೊಳ್ಳುತ್ತಿದ್ದರೂ, ಆತ ಆ ಕಡೆಗೆ ತಿರುಗಿಯೂ ನೋಡಲಾರನು.”

ಪ್ರವಾದಿ(ಸ) ಹೇಳುತ್ತಾರೆ: ”ಅಲ್ಲಾಹನಿಗೆ ಸ್ತುತಿ. ಅವನು ಒಂದೇ ಬಾರಿ ಮರಣ ಹೊಂದುವನು.” ಇದನ್ನು ಕೇಳಿದ ಒಬ್ಬರು ಹೀಗೆ ಕೇಳುತ್ತಾರೆ: ”ಎಲ್ಲರೂ ಒಂದೇ ಬಾರಿಯಲ್ಲವೇ ಮರಣ ಹೊಂದುವುದು?”

ಪ್ರವಾದಿ(ಸ) ಹೇಳಿದರು: ”ಅಲ್ಲ! ಕೆಲವರು ಚದುರಿದ ಮನದೊಂದಿಗೆ ಸಾಯುತ್ತಾರೆ. ಅವರ ವ್ಯಾಮೋಹಗಳು, ನಿರೀಕ್ಷೆಗಳು ಭೂಮಿಯ ಕಣಿವೆಗಳಲ್ಲಿ ಚದುರಿ ಹೋಗಿರುತ್ತದೆ. ಅಂತಹ ಒಂದು ಕೇಂದ್ರದಲ್ಲಿ ಅವನನ್ನು ಮರಣ ಹಿಡಿಯುತ್ತದೆ. ಯಾವುದರಲ್ಲಿ ಅವನು ನಾಶವಾಗುತ್ತಾನೆ ಎಂಬುದನ್ನು ಅಲ್ಲಾಹನು ಪರಿಗಣಿಸುವುದೇ ಇಲ್ಲ”

ಪರಮ ಸತ್ಯವನ್ನು ಒಳಗೊಂಡ ಅಲ್ಲಾಹನನ್ನು ತನ್ನ ಹದಯದಲ್ಲಿ ಸ್ಥಾಪಿಸಲು ಯಾರಿಗೆ ಸಾಧ್ಯವಾಗುವುದೋ, ಅಂತಹ ಜನರಿಗೆ ಮಾತ್ರ ಆತ್ಮಶಾಂತಿ ಲಭಿಸುವುದು. ಅಂತಹ ವ್ಯಕ್ತಿ ಭೌತಿಕ ಆಸಕ್ತಿಯಿಂದ ತನ್ನನ್ನು ಮುಕ್ತಗೊಳಿಸುತ್ತಾನೆ. ಅಲ್ಲಾಹನ ಹೊರತಾದ ಯಾವುದರ ಪ್ರೀತಿಯನ್ನೂ ಆತ ಬಯಸುವುದಿಲ್ಲ. ಅಲ್ಲಾಹನ ಹೊರತಾಗಿ ಯಾವುದನ್ನೂ ತಪ್ತಿ ಪಡಿಸಲು ಅವನು ಮುಂದಾಗುವುದೂ ಇಲ್ಲ. ಮುಕ್ತಿ ಹೊಂದಿದ ಮಾನವನ ಮನಸ್ಸು ಆಯುಧ ಬಲವನ್ನೂ ಮೀರಿಸುತ್ತದೆ. ಪ್ರಪಂಚ ಸಷ್ಟಿಯ ಸಂದರ್ಭದಲ್ಲಿ ನಡೆದ ಸಂಭಾಷಣೆಯೊಂದನ್ನು ತತ್ವಜ್ಞಾನಿಗಳು ಹೀಗೆ ವರದಿ ಮಾಡಿದ್ದಾರೆ:

”ಭೂಮಿಯನ್ನು ಅಲ್ಲಾಹನು ಸಷ್ಟಿಸಿದಾಗ ಅದು ಅಲುಗಾಡ ತೊಡಗಿ ಒಂದೆಡೆಗೆ ವಾಲತೊಡಗಿತು. ಆ ವೇಳೆ ಅಲ್ಲಾಹನು ಪರ್ವತಗಳನ್ನು ಸಷ್ಟಿಸಿ ಅದರ ಮೇಲೆ ನಾಟಿದನು. ಅದರ ಅಲುಗಾಟ ನಿಂತಿತು. ಇದನ್ನು ಕಂಡು ಅದ್ಭುತಗೊಂಡ ದೇವಚರರು ಹೀಗೆ ಕೇಳುತ್ತಾರೆ:

ಅಲ್ಲಾಹನೇ, ಪರ್ವತಗಳಿಗಿಂತಲೂ ಶಕ್ತಿಯುಳ್ಳ ಯಾವುದೇ ಸಷ್ಟಿಯನ್ನು ನೀನು ಸಷ್ಟಿಸಿರುವೆಯಾ?”

ಅಲ್ಲಾಹ್: ”ಹೌದು! ನಾನು ಕಬ್ಬಿಣವನ್ನು ಸಷ್ಟಿಸಿದ್ದೇನೆ. ಅದು ಪರ್ವತಗಳನ್ನು ತೆರೆಯಬಲ್ಲುದು.”

ದೇವಚರರು: ”ಅದಕ್ಕಿಂತಲೂ ಬಲವಾದುದು ಬೇರೇನಾದರೂ ಇದೆಯೇ?”

ಅಲ್ಲಾಹ್: ”ಹೌದು! ಬೆಂಕಿ. ಅದು ಕಬ್ಬಿಣವನ್ನು ಕರಗಿಸಬಲ್ಲುದು.”

ದೇವಚರರು: ”ಬೆಂಕಿಗಿಂತಲೂ ಶಕ್ತಿಯುಳ್ಳ ಬೇರೇನಾದರೂ ಸಷ್ಟಿಯನ್ನು ನೀನು ಸಷ್ಟಿಸಿರುವಿಯಾ?”

ಅಲ್ಲಾಹ್: ”ಹೌದು! ನೀರು. ಅದು ಬೆಂಕಿಯನ್ನು ನಂದಿಸಬಲ್ಲುದು.”

ದೇವಚರರು: ”ನೀರಿಗಿಂತಲೂ ಶಕ್ತಿಯುಳ್ಳ ಬೇರೇನಾದರೂ ಸಷ್ಟಿ?”

ಅಲ್ಲಾಹ್: ”ಹೌದು! ಗಾಳಿ. ಅದು ನೀರನ್ನು ಹೊತ್ತು ಸಂಚರಿಸಬಲ್ಲುದು.”

ದೇವಚರರು: ”ಗಾಳಿಗಿಂತಲೂ ಶಕ್ತಿಯುಳ್ಳ ಬೇರೇನಾದರೂ ಸಷ್ಟಿ ಇದೆಯೇ?”

ಅಲ್ಲಾಹ್: ”ಹೌದು! ಮನುಷ್ಯ. ಅವನ ಬಲಗೈ ಮಾಡುವ ದಾನ ಎಡಗೈಗೆ ತಿಳಿಯದು.”

ಬಹಳಷ್ಟು ಮಂದಿ ಪಾಪಕತ್ಯಗಳನ್ನು ಎಸಗುವಾಗ ಅದನ್ನು ಇತರರು ತಿಳಿಯುವುದನ್ನು ಇಚ್ಛಿಸುವುದಿಲ್ಲ. ಅದೇ ವೇಳೆ ಮಾಡಿದ ಒಳಿತನ್ನು ಸಮೀಪದ ವ್ಯಕ್ತಿಯೂ ತಿಳಿಯಬಾರದು ಎಂಬ ಧೋರಣೆಯ ಕುರಿತು ಒಮ್ಮೆ ಯೋಚಿಸಿರಿ! ತನ್ನ ಮತ್ತು ಅಲ್ಲಾಹನ ಮಧ್ಯೆ ಇರುವ ವಿಚಾರಗಳಲ್ಲಿ ಜನರ ಪ್ರಶಂಸೆ, ಕತಜ್ಞತೆ ಬಯಸದ ಮನಸ್ಸು ಅಲ್ಲಾಹನನ್ನು ಮಾತ್ರ ಕೇಂದ್ರೀಕರಿಸಿರುತ್ತದೆ. ಅಲ್ಲಾಹನನ್ನು ಮಾತ್ರ ಅವರು ತಪ್ತಿಪಡುತ್ತಾರೆ. ಅಲ್ಲಾಹನು ಅವರನ್ನೂ ತಪ್ತಿ ಪಡುವನು. ಅಲ್ಲಾಹನೆಡೆಗೆ ಸಾಗುವ ವೇಳೆ ತಮ್ಮ ಕೈಕಾಲು, ಮನಸ್ಸಿನ ಸುತ್ತ ಆವರಿಸಲ್ಪಟ್ಟ ಎಲ್ಲಾ ಬಂಧನಗಳನ್ನು ಕಳಚಿಕೊಂಡು ಅವರು ಮುಕ್ತರಾಗುತ್ತಾರೆ. ಅಲ್ಲಾಹನಲ್ಲಿ ಮತ್ತು ಪರಲೋಕದಲ್ಲಿ ನಂಬಿಕೆ ಇರುವವರು ಅಲ್ಲಾಹು ಮತ್ತು ಅವನ ದೂತರ ಶತ್ರುಗಳೊಂದಿಗೆ ಸ್ನೇಹ ಬೆಳೆಸುವುದನ್ನು ನೀವೆಂದೂ ಕಾಣಲಾರಿರಿ – ಅವರು, ತಮ್ಮ ಹೆತ್ತವರು ಅಥವಾ ತಮ್ಮ ಪುತ್ರರು ಅಥವಾ ತಮ್ಮ ಸಹೋದರರು ಅಥವಾ ತಮ್ಮ ಬಂಧುಗಳಾಗಿದ್ದರೂ ಸರಿಯೇ. ಅಲ್ಲಾಹನು ಅವರ ಮನಸ್ಸುಗಳಲ್ಲಿ ವಿಶ್ವಾಸದ ಮುದ್ರೆಯೊತ್ತಿ ಬಿಟ್ಟಿರುವನು ಮತ್ತು ಅವನು ತನ್ನ ಕಡೆಯಿಂದ ವಿಶೇಷ ಚೈತನ್ಯವನ್ನೊದಗಿಸಿ ಅವರಿಗೆ ನೆರವಾಗಿರುವನು. ಮತ್ತು ಅವನು ಅವರನ್ನು ತಳದಲ್ಲಿ ನದಿಗಳು ಹರಿಯುವಂತಹ ಸ್ವರ್ಗೋದ್ಯಾನಗಳೊಳಗೆ ಸೇರಿಸುವನು. ಅವರು ಅವುಗಳಲ್ಲಿ ಸದಾಕಾಲ ಇರುವರು. ಅಲ್ಲಾಹನು ಅವರಿಂದ ಸಂತುಷ್ಟನಾಗಿರುವನು ಮತ್ತು ಅವರು ಅವನಿಂದ ಸಂತುಷ್ಟರಾಗಿರುವರು. ಅವರೇ ಅಲ್ಲಾಹನ ಬಳಗದವರು. ನಿಮಗೆ ತಿಳಿದಿರಲಿ, ಅಲ್ಲಾಹನ ಬಳಗದವರೇ ವಿಜಯಿಗಳಾಗುವರು. (58:22)

***

LEAVE A REPLY

Please enter your comment!
Please enter your name here