ಮುಂದಿನ ವರ್ಷದಿಂದ ನಲಪಾಡ್ ಯುವ ಕಾಂಗ್ರೆಸ್ ಅಧ್ಯಕ್ಷ
Prasthutha: July 5, 2021
ಯುವ ಕಾಂಗ್ರೆಸ್ ವಿವಾದ ಇತ್ಯರ್ಥ ಪಡಿಸಿದ ಐವೈಸಿ

ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ವಿವಾದವನ್ನು ರಾಜ್ಯ ಕಾಂಗ್ರೆಸ್ ಇತ್ಯರ್ಥಪಡಿಸಿದ್ದು, ಅದರಂತೆ 18 ತಿಂಗಳ ಅಧಿಕಾರ ಹಂಚಿಕೆ ಸೂತ್ರವನ್ನು ರಚಿಸಲಾಗಿದೆ.
ಹಾಲಿ ಅಧ್ಯಕ್ಷ ರಕ್ಷಾ ರಾಮಯ್ಯ ಅವರು ಜನವರಿ 31, 2022ರವರೆಗೆ ಹಾಗೂ ಮುಹಮ್ಮದ್ ನಲಪಾಡ್ ಅವರು ಜನವರಿ 31, 2022ರಿಂದ ಅವಧಿ ಮುಗಿಯುವವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಇಂಡಿಯನ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದೇ ವರ್ಷದ ಫೆಬ್ರವರಿಯಲ್ಲಿ ನಡೆದ ಯುವ ಕಾಂಗ್ರೆಸ್ ಸಮಿತಿ ಚುನಾವಣೆಯಲ್ಲಿ ಮುಹಮ್ಮದ್ ನಲಪಾಡ್ ಅತ್ಯಧಿಕ ಮತವನ್ನು ಗಳಿಸಿದ್ದರೂ ಅವರನ್ನು ಅನರ್ಹಗೊಳಿಸಿ ಎರಡನೇ ಸ್ಥಾನದಲ್ಲಿದ್ದ ರಕ್ಷಾ ರಾಮಯ್ಯ ಅವರನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಘೋಷಿಸಲಾಗಿತ್ತು. ರಕ್ಷಾ ಆಯ್ಕೆಯನ್ನು ಪ್ರಶ್ನಿಸಿ ನಲಪಾಡ್ ಕಾಂಗ್ರೆಸ್ ಹೈಕಮಾಂಡ್ ಹಾಗೂ ಯುವ ಕಾಂಗ್ರೆಸ್ ಸಮಿತಿ ಚುನಾವಣಾ ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮತ್ತು ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕೆಪಿಸಿಸಿ ಕಚೇರಿಯಲ್ಲಿ ಸಂಧಾನ ಸಭೆ ನಡೆದಿತ್ತು. ‘ಇಬ್ಬರಿಗೂ ತಲಾ 18 ತಿಂಗಳ ಕಾಲ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದರು. ಬಿ.ವಿ. ಶ್ರೀನಿವಾಸ್ ಕೂಡ ಈ ಕುರಿತು ಸಿದ್ದರಾಮಯ್ಯ ಜತೆ ಚರ್ಚಿಸಿದ್ದರು. ಆದರೆ, ಚುನಾವಣಾ ಪ್ರಕ್ರಿಯೆಯಲ್ಲಿ ಅತ್ಯಧಿಕ ಮತ ಪಡೆದಿರುವುದರಿಂದ ತನಗೇ ಹುದ್ದೆ ನೀಡುವಂತೆ ನಲಪಾಡ್ ಪಟ್ಟು ಹಿಡಿದಿದ್ದರು. ಇದೀಗ ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡಿ ಯುವ ಕಾಂಗ್ರೆಸ್ ಆದೇಶ ಹೊರಡಿಸಿದೆ.

