ಮಾನವ ಹಕ್ಕುಗಳ ಹೆಸರಲ್ಲಿ ಕಾನೂನು ಉಲ್ಲಂಘನೆ ಕ್ಷಮಿಸಲಾಗದು : ಭಾರತ
Prasthutha: October 21, 2020

ನವದೆಹಲಿ : ಮಾನವ ಹಕ್ಕುಗಳ ಹೆಸರಲ್ಲಿ ಕಾನೂನು ಉಲ್ಲಂಘಿಸುವುದು ಸಾಧ್ಯವಿಲ್ಲ ಎಂದು ಭಾರತ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಶನರ್ ಗೆ ತಿಳಿಸಿದೆ. ಭಾರತದಲ್ಲಿನ ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯ ತಿದ್ದುಪಡಿ ಕುರಿತಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಶನರ್ ಮಿಶೆಲ್ ಬ್ಯಾಚೆಲೆಟ್ ಕಳವಳ ವ್ಯಕ್ತಪಡಿಸುರುವುದಕ್ಕೆ ಭಾರತದ ವಿದೇಶಾಂಗ ಸಚಿವಾಲಯ ಈ ಹೇಳಿಕೆ ನೀಡಿದೆ. ವಿಶ್ವಸಂಸ್ಥೆಯ ಅಧೀನ ಸಂಸ್ಥೆಯು ಹೆಚ್ಚು ಸೂಕ್ಷ್ಮವಾಗಿರುತ್ತದೆ ಎಂದು ತಾವು ನಿರೀಕ್ಷಿಸುತ್ತಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಕಶ್ಯಪ್ ಹೇಳಿದ್ದಾರೆ.
“ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗೆ ಸಂಬಂಧಿಸಿದ ವಿಷಯದಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮೀಶನರ್ ಅವರ ಕೆಲವು ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಭಾರತವು ಕಾನೂನು ಮತ್ತು ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿರುವ ಪ್ರಜಾಸತ್ತಾತ್ಮಕ ರಾಷ್ಟ್ರ. ಕಾನೂನುಗಳನ್ನು ರಚಿಸುವ ವಿಶೇಷ ಪರಮಾಧಿಕಾರದ ಹಕ್ಕನ್ನು ದೇಶ ಹೊಂದಿದೆ. ಹೀಗಾಗಿ, ಮಾನವ ಹಕ್ಕುಗಳ ಹೆಸರಲ್ಲಿ ಕಾನೂನು ಉಲ್ಲಂಘನೆಯನ್ನು ಕ್ಷಮಿಸಲು ಸಾಧ್ಯವಿಲ್ಲ’’ ಎಂದು ಅವರು ತಿಳಿಸಿದ್ದಾರೆ.
ಸರಕಾರವನ್ನು ಟೀಕಿಸುವ ಮಾನವ ಹಕ್ಕುಗಳ ಸಂಘಟನೆಗಳನ್ನು ಶಿಕ್ಷಿಸಲು ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಯನ್ನು ಬಳಸಿಕೊಳ್ಳುತ್ತಿರುವುದರ ಬಗ್ಗೆ ತನಗೆ ಕಳವಳವಾಗಿದೆ ಎಂದು ಮಿಶೆಲ್ ಮಂಗಳವಾರ ಹೇಳಿದ್ದರು. ಕಳೆದ ತಿಂಗಳು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಇಂಡಿಯಾದ ವಿರುದ್ಧ ಕ್ರಮ ಕೈಗೊಳ್ಳಲಾದ ಬಗ್ಗೆ ಅವರು ಉಲ್ಲೇಖಿಸಿದ್ದರು.
