ಮಾಧ್ಯಮ ಭಯೋತ್ಪಾದನೆಯ ಮತ್ತೊಂದು ಪ್ರಕರಣವಷ್ಟೇ

0
104

ಪ್ರಜಾತಂತ್ರ ವ್ಯವಸ್ಥೆಯನ್ನು ಸರ್ವಾಧಿಕಾರ ವ್ಯವಸ್ಥೆಯನ್ನಾಗಿ ಪರಿವರ್ತಿಸಲು ಪ್ರಜಾಪ್ರಭುತ್ವದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗವನ್ನು ಮೊದಲು ವಶಪಡಿಸಿಕೊಳ್ಳಲೇಬೇಕು. ಈ ರೀತಿ ಅತಿಕ್ರಮಣ ನಡೆಸುವ ವೇಳೆ ಪ್ರಜಾತಂತ್ರದ ಅಘೋಷಿತ ನಾಲ್ಕನೆಯ ಅಂಗ ಎಂದು ಗುರುತಿಸಲ್ಪಡುವ ಮಾಧ್ಯಮದ ನೆರವು ಅತ್ಯಗತ್ಯ. ಹಿಂದುತ್ವ ಫ್ಯಾಷಿಸಮನ್ನು ರಾಷ್ಟ್ರೀಯತೆಯ ಹೆಸರಿನಲ್ಲಿ ಪ್ರಚಾರಪಡಿಸಲು ಮತ್ತು ಅದಕ್ಕೆ ಕೋಮು ಆಧಾರಿತ ಜನಾಭಿಪ್ರಾಯ ಸೃಷ್ಟಿಸಲು ಫ್ಯಾಶಿಸ್ಟ್ ಮನೋಸ್ಥಿತಿಯ ಮಾಧ್ಯಮವೂ ಅತ್ಯಗತ್ಯ. ಅಂತಹ ಅಗತ್ಯವನ್ನು ಕರಾರುವಕ್ಕಾಗಿ ಪೂರೈಸುತ್ತಿರುವ ಸದ್ಯದ ಬಹುತೇಕ ಮಾಧ್ಯಮಗಳು ಕೇವಲ ಫ್ಯಾಶಿಸಮ್ ಅಜೆಂಡಾದ ಭಾಗವಾಗಿ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಹೀಗಾಗಿ ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂಡಿಹಿಪ್ಪೆ ಮಾಡುತ್ತಿರುವ ಹಿಂದುತ್ವ ಫ್ಯಾಷಿಸಮ್ನ್ನು ತರಾಟೆಗೆ ತೆಗೆದುಕೊಳ್ಳುವ ಜನವರ್ಗದ ಸಂಖ್ಯೆ ಕಡಿಮೆಯಾಗುತ್ತಿದೆ. ಜನಸಾಮಾನ್ಯರು ಮಾನಸಿಕ ಮತ್ತು ಭಾವುಕತೆಯ ದಾಸ್ಯತನಕ್ಕೆ ಒಳಗಾಗುತ್ತಿದ್ದಾರೆ. ಅದರ ಅಂತಿಮ ಫಲಿತಾಂಶವೇ ಸರ್ವಾಧಿಕಾರವೇ ಪ್ರಜಾಪ್ರಭುತ್ವದ ಸೋಗಿನಲ್ಲಿ ಆಡಳಿತ ನಡೆಸುತ್ತಿದೆ.

ದೇಶದ ಇಂತಹ ಗಂಭೀರ ಪರಿಸ್ಥಿತಿಗೆ ಹೊಣೆಗಾರರು ಬಹುತೇಕ ಮಾಧ್ಯಮಗಳು. ವೈವಿಧ್ಯದಲ್ಲಿ ಏಕತೆಯ ಶಕ್ತಿಯನ್ನು ಕುಗ್ಗಿಸಿ ಕೋಮುಧ್ರುವೀಕರಣದ ಮೂಲಕ ಧರ್ಮ ರಾಜಕೀಯಕ್ಕೆ ವೇದಿಕೆ ನಿರ್ಮಿಸಿದ್ದೇ ಮಾಧ್ಯಮಗಳು. ದೇಶದ ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವನ್ನು ಭಯೋತ್ಪಾದಕರಂತೆ, ದೇಶದ ಶತ್ರುಗಳಂತೆ,  ಇನ್ನೊಂದು ಧರ್ಮದ ಬೆದರಿಕೆಯಂತೆ ಚಿತ್ರಿಸಿದ್ದು ಇದೇ ಮಾಧ್ಯಮಗಳು. ಮೊನ್ನೆ ದೇಶಾದ್ಯಂತ ಕಾಶ್ಮೀರ ಸಮಸ್ಯೆ ಭಾರೀ ಚರ್ಚೆ ಆಗುತ್ತಿರಬೇಕಾದರೆ ಕನ್ನಡ ನಾಡಿನ ಟಿವಿ ಚಾನೆಲ್‌ಗಳು ಮುಸ್ಲಿಮ್ ಸಮುದಾಯವನ್ನು ವಿಕೃತಿಗೊಳಿಸುವಲ್ಲಿ ನಿರತವಾಗಿದ್ದವು. ಬೆಳ್ತಂಗಡಿ ತಾಲೂಕಿನ ಗೋವಿಂದೂರು ಗ್ರಾಮದ ಮದ್ರಸ ಶಿಕ್ಷಕ ರವೂಫ್ ಎಂಬವರು ಸ್ಯಾಟಲೈಟ್ ಮೂಲಕ ಪಾಕಿಸ್ತಾನಕ್ಕೆ ಫೋನ್ ಕರೆ ಮಾಡಿರುವುದಾಗಿ ಬ್ರೇಕಿಂಗ್ ನ್ಯೂಸನ್ನು ಕನ್ನಡ ಟಿವಿ ಚಾನೆಲ್‌ಗಳು ಪ್ರಸಾರ ಮಾಡಿದವು. ರಾಷ್ಟ್ರೀಯ ತನಿಖಾ ದಳವು ಬೆಳ್ತಂಗಡಿಗೆ ಆಗಮಿಸಿ ಧರ್ಮಗುರುವನ್ನು ವಶಕ್ಕೆ ಪಡೆದುಕೊಂಡಿರುವುದಾಗಿಯೂ ಚಾನೆಲ್‌ಗಳು ಹಸಿಹಸಿ ಸುಳ್ಳನ್ನು ಪ್ರಸಾರ ಮಾಡಿದವು. ಇಷ್ಟಕ್ಕೂ ರವೂಫ್ ಹೆಸರಿನ ಆ ಶಿಕ್ಷಕ ಝಾಕಿರ್ ನಾಯಕ್‌ರಂತೆ ಜನಪ್ರಿಯರೋ ಅಥವಾ ಯಾವುದೇ ರಾಜಕೀಯ ಪಕ್ಷದಲ್ಲೋ ಅಥವಾ ಹೋರಾಟ ರಂಗದಲ್ಲೋ ಗುರುತಿಸಿಕೊಂಡವರೂ ಅಲ್ಲ. ಅಷ್ಟೇ ಯಾಕೆ; ಸ್ಥಳೀಯವಾಗಿ ಫ್ಯಾಶಿಸಮನ್ನು ಎದುರು ಹಾಕಿಕೊಂಡವರೂ ಅಲ್ಲ. ಹಾಗಾದರೆ ಒಂದು ಕುಗ್ರಾಮದ ಬಡಪಾಯಿ ಶಿಕ್ಷಕನೋರ್ವ ಯಾಕೆ ಮಾಧ್ಯಮದ ಟಾರ್ಗೆಟ್ ಆಗುತ್ತಿದ್ದಾರೆ? ಇದನ್ನೇ ಹಿಂದುತ್ವ ಫ್ಯಾಶಿಸಂ ಅನ್ನೋದು.

ಕಳೆದ ವರ್ಷ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಮೂವರು ಶಂಕಿತರನ್ನು ಭಯೋತ್ಪಾದನಾ ನಿಗ್ರಹ ದಳದ ತಂಡವು ವಶಪಡಿಸಿಕೊಂಡಿತ್ತು. ಇವರ ಮೊಬೈಲ್‌ಗಳಲ್ಲಿ 15 ಪಾಕಿಸ್ತಾನದ ನಂಬರ್‌ಗಳಿದ್ದವು. ಆರೋಪಿಗಳ ಹೆಸರು ಬಲರಾಮ್ ಸಿಂಗ್, ಸುನಿಲ್ ಸಿಂಗ್ ಮತ್ತು ಶುಭಂ ತಿವಾರಿ ಎಂದಾಗಿತ್ತು. ಹೀಗಾಗಿ ಆ ಪ್ರಕರಣವು ಅಷ್ಟೇನೂ ಆತಂಕಕಾರಿಯಾಗಿ ಮಾಧ್ಯಮಗಳಿಗೆ ಕಾಣಿಸಲೇ ಇಲ್ಲ. ಯಾಕೆಂದರೆ ಅವರು ಪ್ರತಿನಿಧಿಸುವ ಧರ್ಮವು ರವೂಫ್ ಮೌಲವಿ ಪ್ರತಿನಿಧಿಸುವ ಧರ್ಮವಾಗಿರಲಿಲ್ಲ.

ಮಾಧ್ಯಮಗಳು ಪೇಯ್ಡ ನ್ಯೂಸ್ ಬಿತ್ತರಿಸುವುದನ್ನು ಹಲವು ಬಾರಿ ಕೇಳಿದ್ದೆವು. ಆದರೆ ಈಗ ಚಾನೆಲ್‌ಗಳು ತೋರ್ಪಡಿಸುತ್ತಿರುವುದು ಕೇವಲ ಕಮರ್ಶಿಯಲ್‌ಬದ್ಧತೆಯನ್ನಲ್ಲ. ಅವುಗಳು ಕೂಡ ಫ್ಯಾಶಿಸಮನ್ನು ನೆಚ್ಚಿಕೊಂಡು ಅವುಗಳು ಪ್ರಾಯೋಜಿಸಿದ ನ್ಯೂಸ್ ಮತ್ತು ವೀವ್ಸ್ ಗಳನ್ನು ಪ್ರಸಾರ ಮಾಡುತ್ತಿವೆ. ರವೂಫ್ ಮೌಲವಿಯ ವಿಚಾರದಲ್ಲೂ ಪ್ರಸಾರ ಮಾಡಿರುವುದು ಫ್ಯಾಶಿಸಮ್ ಪಡಿಯಚ್ಚನ್ನಾಗಿದೆ. ಒಂದು ಧರ್ಮವನ್ನು ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟುವುದು ಮತ್ತು ಇಸ್ಲಾಮ್ ಧರ್ಮ ಹಾಗೂ ಮುಸ್ಲಿಮರನ್ನು ಅಪಾಯಕಾರಿಯಾಗಿ ಚಿತ್ರಿಸುವುದು ಫ್ಯಾಶಿಸಮ್ ಪ್ರವೃತ್ತಿ. ಇದಕ್ಕೆಂದೇ ಆರೆಸ್ಸೆಸ್ ಹಲವು ಟಿವಿ ಚಾನೆಲ್‌ಗಳನ್ನು, ಪತ್ರಿಕೆಗಳನ್ನು ಪೋಷಿಸುತ್ತಿದೆ. ಇತ್ತೀಚೆಗೆ ಕೋಬ್ರಾ ಪೋಸ್ಟ್ ಸುದ್ದಿತಾಣವು ರಹಸ್ಯ ಕುಟುಕು ಕಾರ್ಯಾಚರಣೆಯ ಮೂಲಕ ಮಾಧ್ಯಮ ಭಯೋತ್ಪಾದನೆಯ ಕರಾಳ ಮುಖವನ್ನು ಬಹಿರಂಗಪಡಿಸಿತ್ತು. ಮಾರುವೇಷದಲ್ಲಿ ರಾಷ್ಟ್ರಮಟ್ಟದ ಪ್ರಮುಖ ಚಾನೆಲ್‌ಗಳ ಸಿಇಒಗಳನ್ನು ಭೇಟಿ ಮಾಡಿ ವ್ಯವಹಾರ ಕುದುರಿಸಿದ ಕೋಬ್ರಾ ಪೋಸ್ಟ್ ಪ್ರತಿನಿಧಿಗಳು ಭಯಾನಕ ಮಾಹಿತಿಯನ್ನು ಹೊರಗೆಡಹಿದ್ದರು. ಸುಮಾರು 7ರಿಂದ 25 ಕೋಟಿ ರೂಪಾಯಿವರೆಗೆ ಬೇಡಿಕೆ ಇಟ್ಟಿದ್ದ ಚಾನೆಲ್ ಸಿಇಒಗಳ ಪಟ್ಟಿಯನ್ನು ಕೋಬ್ರಾ ಪೋಸ್ಟ್ ಅನಾವರಣಗೊಳಿಸಿತ್ತು. ಬಿಜೆಪಿ ಮತ್ತು ಅದರ ಪರಿವಾರದ ಎಲ್ಲ ಅಕ್ರಮಗಳನ್ನು ಮರೆಮಾಚಿ ಎದುರಾಳಿ ಪಕ್ಷಗಳ ತೇಜೋವಧೆಗೈಯ್ಯುವ ಬಹುಕೋಟಿ ರೂಪಾಯಿಯ ಪ್ಯಾಕೇಜನ್ನು ಕಳೆದ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿ ನೀಡಿತ್ತು. ಇಂತಹ ಸುಪಾರಿ ಮಾಧ್ಯಮಗಳ ಬಲಿಪಶುಗಳೇ ರವೂಫ್ ಮೌಲವಿಯಂತಹ ಅಮಾಯಕರು.

LEAVE A REPLY

Please enter your comment!
Please enter your name here