ಮಾಜಿ ಸಚಿವ ಚಿನ್ಮಯಾನಂದ್ ವಿರುದ್ಧದ ರೇಪ್ ಕೇಸ್ : ಯುವತಿ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಆರೋಪ ದಾಖಲೆಗೆ ನಿರ್ಧಾರ

Prasthutha|

ನವದೆಹಲಿ : ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಈಗ ಸುಳ್ಳು ಪ್ರಕರಣ ದಾಖಲಿಸಿದ್ದ ಬಗ್ಗೆ ವಿಚಾರಣೆ ಎದುರಿಸಲಿದ್ದಾಳೆ. ಸಂಸದರು-ಶಾಸಕರ ವಿಶೇಷ ಕೋರ್ಟ್ ಗೆ ಹಾಜರಾಗಿದ್ದ ಯುವತಿ, ತಾನು ಈ ಹಿಂದೆ ಚಿನ್ಮಾಯಾನಂದ್ ವಿರುದ್ಧ ಮಾಡಿದ್ದ ಆರೋಪಗಳನ್ನು ತಳ್ಳಿ ಹಾಕಿದ್ದಳು. ಹೀಗಾಗಿ ಇದೀಗ ಪೊಲೀಸರು ಆಕೆಯ ವಿರುದ್ಧ ಅಪರಾಧ ದಂಡ ಸಂಹಿತಿ ಕಲಂ 340ರನ್ವಯ ಪ್ರಕರಣ ದಾಖಲಿಸಲು ಕೋರ್ಟ್ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಕಾನೂನು ವಿದ್ಯಾರ್ಥಿನಿಯು ಈಗಾಗಲೇ ಚಿನ್ಮಯಾನಂದ್ ಪ್ರಕರಣದ ವಿಚಾರಣೆ ಎದುರಿಸುತ್ತಿದ್ದಾರೆ. ಪ್ರಕರಣದ ವಿಚಾರಣೆಯನ್ನು ವಿಶೇಷ ನ್ಯಾಯಾಧೀಶ ಪವನ್ ಕುಮಾರ್ ರೈ ನ.11ಕ್ಕೆ ಮುಂದೂಡಿದ್ದಾರೆ.

- Advertisement -

ಕಾನೂನು ವಿದ್ಯಾರ್ಥಿನಿ ದಾಖಲಿಸಿರುವ ಪ್ರಕರಣದಲ್ಲಿ ಮಾಜಿ ಸಚಿವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ. ಆದರೆ, ಈಗ ಆಕೆ ಅದನ್ನು ನಿರಾಕರಿಸಿದ್ದಾಳೆ. ಹೀಗಾಗಿ ಇದು ಸುಳ್ಳು ಪ್ರಕರಣ ದಾಖಲಿಸಿದ್ದ ಆರೋಪದ ವಿಚಾರಣೆಗೆ ಯೋಗ್ಯವಾದ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷದ ಆಗಸ್ಟ್ ನಲ್ಲಿ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದ ಶಾಜಹಾನ್ ಪುರದ ಕಾನೂನು ವಿದ್ಯಾರ್ಥಿನಿ, ಸಚಿವರು ಅತ್ಯಾಚಾರ ನಡೆಸಿದ್ದ ವೀಡಿಯೊವೊಂದನ್ನು ಬಿಡುಗಡೆ ಮಾಡಿ ಸುದ್ದಿಯಾಗಿದ್ದಳು. ಯುವತಿ ಮಾಜಿ ಸಚಿವರು ಆಡಳಿತ ಸಮಿತಿಯಲ್ಲಿದ್ದ ಶಾಜಹಾನ್ ಪುರದ ಸ್ವಾಮಿ ಸುಖ್ ದೇವಾನಂದ ಸ್ನಾತಕೋತ್ತರ ಕಾಲೇಜಿನ ಕಾನೂನು ವಿದ್ಯಾರ್ಥಿನಿಯಾಗಿದ್ದಳು. ಸಚಿವರ ವಿರುದ್ಧದ ಆರೋಪಗಳ ತನಿಖೆಗೆ ಎಸ್ ಐಟಿ ರಚಿಸಲಾಗಿತ್ತು ಮತ್ತು ವಿದ್ಯಾರ್ಥಿನಿ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿತ್ತು.

- Advertisement -