ಮಹಾರಾಷ್ಟ್ರ | ಒಂದೇ ಆಂಬ್ಯುಲೆನ್ಸ್ ನಲ್ಲಿ 22 ಕೋವಿಡ್‌ ಶವಗಳ ಸಾಗಾಟ!

Prasthutha: April 27, 2021

ಔರಂಗಬಾದ್‌: ಮಹಾರಾಷ್ಟ್ರದ ಬೀಡ್‌ ನಗರದಲ್ಲಿ ಭಾನುವಾರ ಕೋವಿಡ್‌ನಿಂದ ಮೃತಪಟ್ಟ 22 ಮಂದಿಯ ಮೃತ ದೇಹಗಳನ್ನು ಒಂದೇ ಆಂಬ್ಯುಲೆನ್ಸ್ ನಲ್ಲಿ ಚಿತಾಗಾರಕ್ಕೆ ಸಾಗಿಸಿದ ಘಟನೆ ನಡೆದಿದೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಜಿಲ್ಲಾಡಳಿತ ‘ವೈದ್ಯಕೀಯ ಸಾರಿಗೆ ವಾಹನಗಳ ಕೊರತೆಯೇ ಇದಕ್ಕೆ ಕಾರಣ’ ಎಂದು ಹೇಳಿದೆ.

ಬೀಡ್‌ ನಗರದ ಅಂಬಾಜೋಗಾಯಿಯಲ್ಲಿರುವ ಸ್ವಾಮಿ ರಮಾನಂದ ತೀರ್ಥ ಗ್ರಾಮೀಣ ಸರ್ಕಾರಿ ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇಡಲಾಗಿದ್ದ ಕೋವಿಡ್‌ನಿಂದ ಮೃತಪಟ್ಟವರ ದೇಹಗಳನ್ನು ಭಾನುವಾರ ಅಂತ್ಯಕ್ರಿಯೆಗಾಗಿ ಚಿತಾಗಾರಕ್ಕೆ ಸಾಗಿಸುವ ವೇಳೆ ಈ ಘಟನೆ ನಡೆದಿದೆ.

ಈ ಆಸ್ಪತ್ರೆಯಲ್ಲಿ ಸಾಕಷ್ಟು ಆಂಬ್ಯುಲೆನ್ಸ್ ಗಳಿಲ್ಲ. ಕಳೆದ ವರ್ಷ ಕೋವಿಡ್‌ನ ಮೊದಲ ಅಲೆ ಕಾಣಿಸಿಕೊಂಡಾಗ ಆಸ್ಪತ್ರೆಯಲ್ಲಿ ಐದು ಆಂಬ್ಯುಲೆನ್ಸ್ ಗಳಿದ್ದವು. ನಂತರದಲ್ಲಿ ಮೂರನ್ನು ಹಿಂದಕ್ಕೆ ಪಡೆಯಲಾಯಿತು. ಈಗ ಇರುವ ಎರಡು ಆಂಬ್ಯುಲೆನ್ಸ್ ಗಳಲ್ಲೇ ಕೋವಿಡ್‌ ರೋಗಿಗಳನ್ನು ಕರೆತರುವ ಕಾರ್ಯ ನಿರ್ವಹಿಸಲಾಗುತ್ತಿದೆ’ ಎಂದು ವೈದ್ಯಕೀಯ ಕಾಲೇಜಿನ ಡೀನ್‌ ಡಾ. ಶಿವಾಜಿ ಸೊರಕೆ ಮಂಗಳವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಪಕ್ಕದ ಲೋಖಂಡಿ ಸಾವರ್ಗಾಂವ್ ಗ್ರಾಮದಲ್ಲಿರುವ ಕೋವಿಡ್‌ ಕೇಂದ್ರದಲ್ಲಿ ಶವಗಳನ್ನು ಇಡಲು ಶೀತಲಗೃಹಗಳು ಇಲ್ಲ. ಈ ಕಾರಣ, ಅಲ್ಲಿಂದಲೂ ಶವಗಳನ್ನು ಈ ಆಸ್ಪತ್ರೆಗೆ ಕಳುಹಿಸುತ್ತಾರೆ. ಹೀಗಾಗಿ ಈ ಆಸ್ಪತ್ರೆಗೆ ಇನ್ನೂ ಮೂರು ಆಂಬ್ಯುಲೆನ್ಸ್ ಗಳನ್ನು ಒದಗಿಸುವಂತೆ ಮಾರ್ಚ್‌ 17ರಂದು ಜಿಲ್ಲಾಡಳಿತಕ್ಕೆ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳಿದರು.

‘ಈ ಅವ್ಯವಸ್ಥೆಯನ್ನು ತಪ್ಪಿಸುವುದಕ್ಕಾಗಿ ಬೆಳಿಗ್ಗೆ 8 ರಿಂದ ರಾತ್ರಿ 10ರವರೆಗೆ ಶವಸಂಸ್ಕಾರ ನಡೆಸಲು ಅಂಬಾಜೋಗಾಯಿ ಮುನ್ಸಿಪಲ್ ಕೌನ್ಸಿಲ್‌ಗೆ ಪತ್ರ ಬರೆಯಲಾಗಿದ್ದು, ಇನ್ನು ಮುಂದೆ ಆಸ್ಪತ್ರೆಯ ವಾರ್ಡ್‌ನಿಂದ ಶವಗಳನ್ನು ಚಿತಾಗಾರಕ್ಕೆ ಕಳುಹಿಸಲಾಗುವುದು’ ಎಂದು ಅವರು ಹೇಳಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!