ಮಹಾರಾಷ್ಟ್ರದಲ್ಲಿ ಸಿಬಿಐಗೆ ಇನ್ನು ಕಿಮ್ಮತ್ತಿಲ್ಲ | ತನಿಖೆಯ ಸಾಮಾನ್ಯ ಅನುಮತಿ ಹಿಂಪಡೆದ ಉದ್ಧವ್ ಠಾಕ್ರೆ

Prasthutha|

ಮುಂಬೈ : ಕೇಂದ್ರದ ಕೈಗೊಂಬೆಯಾಗಿ ವರ್ತಿಸುತ್ತದೆ ಎಂದು ಸದಾ ಆರೋಪಗಳನ್ನು ಎದುರಿಸುತ್ತಿರುವ ಸಿಬಿಐಗೆ ಇದೀಗ ಮಹಾರಾಷ್ಟ್ರದಲ್ಲಿ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಟಿಆರ್ ಪಿ ಹಗರಣಕ್ಕೆ ಸಂಬಂಧಿಸಿ ಪ್ರಕರಣವೊಂದನ್ನು ದಾಖಲಿಸಿರುವ ಸಿಬಿಐ ನಡೆಯಿಂದ ಅಸಮಾಧಾನಿತರಾಗಿರುವ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ರಾಜ್ಯದಲ್ಲಿ ಸಿಬಿಐಗೆ ನೀಡಲಾಗಿದ್ದ ತನಿಖೆಯ ಸಾಮಾನ್ಯ ಸಮ್ಮತಿಯನ್ನೇ ರದ್ದು ಪಡಿಸಿದ್ದಾರೆ.

ಇದೀಗ ರಾಜ್ಯದಲ್ಲಿ ಸಿಬಿಐ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ, ರಾಜ್ಯ ಸರಕಾರದ ಅನುಮತಿ ಪಡೆಯುವುದು ಅನಿವಾರ್ಯವಾಗಿದೆ. ಈಗಾಗಲೇ ಬಿಜೆಪಿ ವಿರೋಧಿ ಸರಕಾರಗಳಿರುವ ಹಲವು ರಾಜ್ಯಗಳಲ್ಲಿ ಸಿಬಿಐಗೆ ಈ ಹಿಂದೆ ನೀಡಲಾಗಿದ್ದ ಸಾಮಾನ್ಯ ಅನುಮತಿ ರದ್ದಾಗಿದೆ. ಇದೀಗ ಮಹಾರಾಷ್ಟ್ರ ಕೂಡ ಇದೇ ಹಾದಿಯಲ್ಲಿ ಮುಂದುವರಿದಿರುವುದು, ಸಿಬಿಐ ಕುರಿತು ಜನ ಸಾಮಾನ್ಯರಿಗಿದ್ದ ವಿಶ್ವಾಸ ಕಳೆದು ಹೋಗುವ ನಿಟ್ಟಿನಲ್ಲಿದೆ.

- Advertisement -

ರಾಜಸ್ಥಾನದಲ್ಲಿ ಈ ವರ್ಷದ ಆರಂಭದಲ್ಲಿ ಸಿಬಿಐಗೆ ನೀಡಲಾಗಿದ್ದ ಸಾಮಾನ್ಯ ಅನುಮತಿ ಹಿಂಪಡೆಯಲಾಗಿತ್ತು. ಪಶ್ಚಿಮ ಬಂಗಾಳ, ಛತ್ತೀಸ್ ಗಢ ಮತ್ತು ಆಂಧ್ರ ಪ್ರದೇಶದಲ್ಲಿ 2019ರಲ್ಲೇ ಈ ಅನುಮತಿ ಹಿಂಪಡೆಯಲಾಗಿತ್ತು.

ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಸಂಪಾದಕತ್ವದ ರಿಪಬ್ಲಿಕ್ ಟಿವಿ ಸೇರಿದಂತೆ ಮೂರು ಟಿವಿ ವಾಹಿನಿಗಳ ವಿರುದ್ಧ ಟಿಆರ್ ಪಿ ತಿರುಚಿದ ಆರೋಪದ ಪ್ರಕರಣದ ತನಿಖೆ ಮುಂಬೈ ಪೊಲೀಸರು ಕೈಗೆತ್ತಿಕೊಂಡಿದ್ದಾರೆ. ಆದರೆ, ಈ ನಡುವೆ, ಇದೇ ವಿಷಯಕ್ಕೆ ಸಂಬಂಧಿಸಿ ಉತ್ತರ ಪ್ರದೇಶದಲ್ಲಿ ದಾಖಲಾದ ಪ್ರಕರಣದ ಆಧಾರದಲ್ಲಿ, ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಈ ಪ್ರಕರಣವನ್ನು ಸಿಬಿಐ ತನಿಖೆಗೊಪ್ಪಿಸಿತ್ತು. ರಿಪಬ್ಲಿಕ್ ಟಿವಿ ವಿರುದ್ಧದ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಉತ್ತರ ಪ್ರದೇಶ ಬಿಜೆಪಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮಹಾರಾಷ್ಟ್ರ ಸರಕಾರ ಪ್ರತಿಪಾದಿಸಿದೆ.

- Advertisement -