ಮನುಕುಲದ ವಿಮೋಚಕ

0
64

-ಅರ್ಷದ್ ಮೊಹಮ್ಮದ್ ನದ್ವಿ
ಓರ್ವ ವಿಮೋಚಕನ ಆಗಮನ ಮಾನವರು ದೈವದತ್ತವಾದ ವಿಮೋಚನೆಗಾಗಿ ಕಾದು ಕುಳಿತಿದ್ದರು. ಈ ಸಂದರ್ಭದಲ್ಲಿ ಕ್ರಿಸ್ತಶಕ 571 ಎಪ್ರಿಲ್ ಇಪ್ಪತ್ತರಂದು (ಅಸ್ಸೀರತುನ್ನಬವಿಯ್ಯ: ಪುಟ109) ಮಕ್ಕಾದಲ್ಲಿ ಅಬ್ದುಲ್ಲ-ಆಮಿನ ದಂಪತಿಗಳಿಗೆ  ಮುಹಮ್ಮದ್ (ಸ್ತುತಿಸಲ್ಪಟ್ಟವನು) ಎಂಬ ಮಗು ಜನಿಸುತ್ತದೆ. ಜನಿಸುವ ಮೊದಲೇ ತಂದೆ ಮರಣ ಹೊಂದಿದ್ದರು. ಆರನೇ ವಯಸ್ಸಿನಲ್ಲಿ ಪ್ರೀತಿಯ ತಾಯಿಯೂ ಕಣ್ಮುಚ್ಚಿದರು. ಮುತ್ತಾತ ಅಬ್ದುಲ್ ಮುತ್ತಲಿಬರ ಸಂರಕ್ಷಣೆಯಲ್ಲಿ ಬೆಳೆದ ಮುಹಮ್ಮದ್‌ರಿಗೆ ಎಂಟು ವರ್ಷ ಪ್ರಾಯವಾದಾಗ ಆ ನೆರಳೂ ಇಲ್ಲವಾಯಿತು. ತನ್ನ ಅನಾಥ ಸ್ಥಿತಿಯನ್ನು ನೆನೆದು ಕಾಲ ಕಳೆಯುತ್ತಿರುವ ಸಂದರ್ಭದಲ್ಲಿ ಆ ಕೊರತೆಯನ್ನು ನೀಗಿಸಲು ತಯಾರಾಗಿ ತೋರಿ ಚಿಕ್ಕಪ್ಪ  ಅಬೂತಾಲಿಬ್ ಮುಂದೆ ಬರುತ್ತಾರೆ. ತಾಯ್ತನದ ಲಾಲನೆ, ಪೋಷಣೆ ಸಿಗಬೇಕಾಗಿದ್ದ ಎಳೆಯ ಪ್ರಾಯದಲ್ಲಿ ಅನಾಥತೆಯ ಕಡು ಬೇಗೆಯಲ್ಲಿ  ಆ ಮಗು ಬೆಳೆಯಿತು.

ಮಕ್ಕಾದಲ್ಲಿ ಕಡು ಬಡತನ ಅಂದು ಸಾಮಾನ್ಯವಾಗಿತ್ತು. ತಂದೆ ತಾಯಿಯನ್ನು ಕಳೆದು ಕೊಂಡ ಮುಹಮ್ಮದರನ್ನು ಜೀವನದಲ್ಲಿ ಎದುರಾಗುವ ಪ್ರತಿಕೂಲ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸಲು ಸಜ್ಜಾಗಿಸುವುದು ಅಬೂತಾಲಿಬರ ಉದ್ದೇಶವಾಗಿತ್ತು. ದೂರ ಪ್ರದೇಶಗಳಿಗೆ ಅವರು ಮುಹಮ್ಮದರನ್ನು ತನ್ನ ಜತೆಯಲ್ಲಿ ಕರೆದೊಯ್ದರು. ಈ ಪ್ರಯಾಣದಲ್ಲಿ ಅವರು ಜನರ ಸ್ಥಿತಿ, ವ್ಯಾಪಾರದ ರೀತಿಯನ್ನು ತಿಳಿದುಕೊಂಡರು. ಪ್ರಯಾಣದ ವೇಳೆ ಮುಹಮ್ಮದರು ಭಾಷಣ, ಕವಿತೆಗಳಿಗೆ ಹೆಚ್ಚು ಗಮನ ಕೊಡುತ್ತಿದ್ದರು. ತಾಯ್ನಡಿನಲ್ಲಿ ಶಸ್ತಾಸ್ತ್ರ ಅಭ್ಯಾಸ, ದೈಹಿಕ ಕಸರತ್ತುಗಳನ್ನು ಕಲಿತುಕೊಂಡರು.

ಹದಿಹರೆಯದಲ್ಲಿದ್ದ ಸಮಯದಲ್ಲಿ ನಾಡಿನಲ್ಲಿ ಒಂದು ಯುದ್ಧ ಪ್ರಾರಂಭವಾಯಿತು (ಹರ್‌ಬುಲ್ ಫಿಜಾರ್).ಅರಬಿ ಗೋತ್ರಗಳ ನಡುವೆ ನಡೆದ ಆ ಯುದ್ಧದ ನೈತಿಕತೆಯ ಕುರಿತಾಗಿ ಹೆಚ್ಚು ಯೋಚಿಸಲು ನಿಲ್ಲದ ಮುಹಮ್ಮದರು ಅದರಲ್ಲಿ ಭಾಗವಹಿಸಿದರು. ಪ್ರತ್ಯೇಕವಾದ ವ್ಯಕ್ತಿತ್ವವನ್ನು ಸ್ವತಃ ಹೊಂದಿದ್ದರೂ ಅವರು ಜನರಿಂದ ದೂರವಾಗಲಿಲ್ಲ. ಜನರೊಡನೆ  ಇರಲು ಅವರು ಬಯಸಿದರು. ಯುದ್ಧ ನಾಲ್ಕು ವರ್ಷಗಳ ಕಾಲ ಮುಂದುವರಿಯಿತು. ದೃಢನಿಲುವು ಮತ್ತು ದೈಹಿಕ ಸಾಮರ್ಥ್ಯವನ್ನು ಆ ಮೂಲಕ ಅವರು ಗಳಿಸಿಕೊಂಡರು.

ತಂದೆತಾಯಿಯರಿಲ್ಲದ ಅವರ  ಬದುಕಿನಲ್ಲಿ ಮನೆಯ ವಾತಾವರಣಕ್ಕೆ ಸಂಬಂಧಿಸಿದ ಯಾವುದೇ ಭಾವನೆಗಳು ಕಂಡುಬರಲಿಲ್ಲ. ಚಿಕ್ಕಂದಿನಿಂದಲೆ ಸಮಾಜಕ್ಕಾಗಿ ಮೀಸಲಿಟ್ಟಂತೆ ಅವರ ಜೀವನವಿತ್ತು. ಅವರು ಜನರ ಜೀವನವನ್ನು ಮೌನವಾಗಿ ಕಂಡು ಅದರ ಬಗ್ಗೆ ಚಿಂತನೆ ನಡೆಸುತ್ತಾ ಇದ್ದರು: ಕಅಬಾದಲ್ಲಿ ಸ್ಥಾಪಿಸಲಾದ ಈ ವಿಗ್ರಹಗಳನ್ನು ಅವರು ದೇವನೆಂದು ಕರೆಯುತ್ತಾರೆ! ಇದೇನಾ ದೇವ? ಈ ಮಣ್ಣಿನ ಆಕೃತಿಗಳು ದೇವನಾಗುವುದಾದರೂ ಹೇಗೆ? ಹಾಗಾದರೆ ಈ ಸುಂದರ ಜಗತ್ತನ್ನು ಸೃಷ್ಟಿಸಿ ಸಿದ್ಧಗೊಳಿಸಿಟ್ಟವನಾರು? ನಿಜವಾಗಿ ದೇವನಾಗಬೇಕಾದವನು ಅವನು ತಾನೆ?! ಮದ್ಯ, ಮಾನಿನಿ, ಯುದ್ಧ ಗಳು ನಡೆಯುವ ಮನೋಹರವಾದ ಜೀವನ! ಜೀವನವೆಂದರೆ ಇದೇನಾ? ಹೀಗೆಲ್ಲಾ ಆ ಮನಸ್ಸು ನುಡಿಯುತ್ತಿತ್ತು.

ಆಡು ಮೇಯಿಸುವವನಾಗಿ

ಯೌವನ ಪ್ರಾಯದಲ್ಲಿ ಸ್ವತಃ ಶ್ರಮಪಟ್ಟು ಜೀವಿಸಲು ಪ್ರಾರಂಭಿಸಿದರು. ಸಮಪ್ರಾಯದ ಯುವಕರು ಮದ್ಯಪಾನ, ಅನೈತಿಕತೆಯಲ್ಲಿ ಮುಳುಗೇಳುತ್ತಿದ್ದರೆ ಮುಹಮ್ಮದರು ಮೇಕೆಗಳನ್ನು ಹುಲ್ಲುಗಾವಲಿಲ್ಲಿ ಮೇಯಿಸತೊಡಗಿದರು. ಪ್ರಪಂಚದ ಅನಂತ ವಿಶಾಲತೆಯನ್ನು ಕಂಡು ಜಗದೊಡೆಯನಲ್ಲಿ ಪಿಸುಗುಟ್ಟುತ್ತಾ ನಡೆದರು. ದೇವನೊಡನೆೆ ಇರುವ ಸಂಬಂಧವನ್ನು ಮುರಿದು ದುರಂತ ಜೀವನದಲ್ಲಿ ಅಲೆದಾಡುತ್ತಿದ್ದ ಮಾನವರನ್ನು ಒಳಿತಿಗೆ ಕೊಂಡೊಯ್ಯುವುದು ಹೇಗೆ ಎಂದು ಅವರು ಚಿಂತನೆ ನಡೆಸಿರಬೇಕು. ಆಡು ಮೇಯಿಸುವ ಕೆಲಸ ಅವರಿಗೆ ಗೌರವಾರ್ಹ ಜೀವನ ಮಾರ್ಗ ಎಂಬುದಕ್ಕಿಂತಲೂ ಹೆಚ್ಚಾಗಿ ಒಂದು ಪ್ರತ್ಯೇಕ ತರಬೇತಿ ಕೂಡ ಆಗಿತ್ತು. ಕರೆದಾಗ ತದ್ವಿರುದ್ಧ ದಿಕ್ಕಿಗೆ ತಿರುಗುವ ಜನರನ್ನು ಕ್ಷೇಮ, ನೆಮ್ಮದಿಯ ಹಸಿರೆಲೆಯನ್ನು ನೀಡಿ  ಗುರಿಯತ್ತ ಕೊಂಡೊಯ್ಯುವುದನ್ನು ಕಲಿತರು.  ದುರ್ಬಲರಿಗೆ ದಯೆ ತೋರಲು ಪ್ರೇರಣೆ ನೀಡುವುದನ್ನು ಅರಿತರು. ಹಿಂಡಿನಿಂದ ಯಾವುದೇ ಆಡು ಕಳೆದುಹೋಗದಂತೆ,  ತೋಳಗಳಿಗೆ ಬಲಿಯಾಗದಂತೆ  ಎಚ್ಚರಿಕೆ ವಹಿಸುವ ರೀತಿಯಲ್ಲಿ ಸಮುದಾಯವನ್ನು ಕಾಪಾಡುವುದನ್ನು ತಿಳಿದರು. ಸಮುದಾಯವನ್ನು  ಹಿಂದಿನಿಂದ ನಡೆಸಿಕೊಂಡು ಹೋಗುವ ನೈಪುಣ್ಯತೆಯನ್ನು  ಆಡು ಮೇಯಿಸುವ ಮೂಲಕ ಅವರು ಕರಗತ ಮಾಡಿಕೊಂಡರು.  ಇತರ ಪ್ರವಾದಿಗಳೂ ಆಡು ಮೇಯಿಸುವ ಜೀವನ ನಡೆಸಿದ್ದರು ಎಂಬ ಇತಿಹಾಸ ಸ್ಮರಣೀಯ.

ಹೋರಾಟಗಾರನಾಗಿ

ಅರೇಬಿಯಾದಲ್ಲಿ ನಡೆಯುತ್ತಿದ್ದ ಅನ್ಯಾಯದ  ಗೋತ್ರ ಯುದ್ಧಗಳು  ಆ ಯುವಕನ ಮನಸ್ಸಿಗೆ ನೋವನ್ನು ನೀಡಿತ್ತು. ನ್ಯಾಯ ಅನ್ಯಾಯಗಳ ವಿವೇಚನೆ ಇಲ್ಲದೆ ಸಾಮೂಹಿಕ ಕೊಲೆ ಸಾವು ನೋವುಗಳನ್ನು  ನಡೆಸಿ ಅಟ್ಟಹಾಸಗೈಯ್ಯುತ್ತಿದ್ದ ಕಾಲವದು. ಫಿಜಾರ್ ಯುದ್ಧದ ಆಘಾತದಿಂದ ಎಚ್ಚೆತ್ತ  ಕುರೈಶರ ಕೆಲ ಯುವಕರಿಗೆ ವಾಸ್ತವ ಪ್ರಜ್ಞೆ ಮೂಡಿತ್ತು. ಈ ಮಧ್ಯೆ ಯಮನ್‌ನ ಝುಬೈದ್ ಗೋತ್ರದ ಓರ್ವ ಮಕ್ಕಾಗೆ ಬಂದು ಆಸುಬ್‌ನು ವಾಯಿಲ್ ಎಂಬಾತನಿಗೆ  ತನ್ನ ವ್ಯಾಪಾರ ಸರಕನ್ನು ಮಾರಿದನು. ಆಸುಬ್‌ನು ವಾಯಿಲ್ ಆತನಿಗೆ ಸರಿಯಾದ ಬೆಲೆ ನೀಡಲಿಲ್ಲ. ಇದರಿಂದ ಕುಪಿತನಾದ ಆ ಯಮನ್ ವ್ಯಕ್ತಿ ಕುರೈಶರಲ್ಲಿ ಸಹಾಯವನ್ನು ಕೋರಿದ. ಆ ಸಂದರ್ಭದಲ್ಲಿ ನ್ಯಾಯ ಪ್ರಜ್ಞೆಯನ್ನು ಹೊಂದಿದ್ದ ಕೆಲ ಕುರೈಶರು ಅಬ್ದುಲ್ಲಾಹಿಬ್‌ನು ಜದ್‌ವ್ ಎಂಬವರ ಮನೆಯಲ್ಲಿ ಸಭೆ ಸೇರಿ ನ್ಯಾಯಕ್ಕಾಗಿ ಹೋರಾಡಲು ಪ್ರತಿಜ್ಞೆಗೈದರು. ಮಕ್ಕಾ ಅಥವಾ ಹೊರ ಪ್ರದೇಶಗಳಿಂದ ಆಗಮಿಸಿದ ಜನರು ಅನ್ಯಾಯಕ್ಕೊಳಗಾದರೆ ಅವರ ಹಕ್ಕುಗಳನ್ನು ಮರಳಿಸಲು ಆ ವ್ಯಕ್ತಿಯೊಂದಿಗೆ ಸೇರಿ ಹೋರಾಡುತ್ತೇವೆ ಎಂದಾಗಿತ್ತು ಆ ಪ್ರತಿಜ್ಞೆ.

ಹಕ್ಕುಗಳ ಸಂರಕ್ಷಣೆಗಾಗಿ ನಡೆದ ಈ ಪ್ರತಿಜ್ಞೆಯಲ್ಲಿ ಯುವಕನಾಗಿದ್ದ ಮುಹಮ್ಮದ್(ಸ) ಸಕ್ರಿಯವಾಗಿ ಪಾಲ್ಗೊಂಡಿದ್ದರು. ಈ ಘಟನೆ ‘ಹಿಲ್‌ಫುಲ್ ಫುಳೂಲ್’ ಎಂದು ಪ್ರಸಿದ್ಧವಾಗಿದೆ (ಅರ್ರಹೀಕುಲ್ ಮಖ್ತೂಮ್:55). ಈ ಘಟನೆಗೆ ಮೊದಲು ಮಕ್ಕಾದಲ್ಲಿ ಸಾಮಾಜಿಕ ಜೀವನದ ಸುರಕ್ಷಿತತೆಗಾಗಿ ಫಳ್‌ಲ್ ಎಂಬ ಹೆಸರಿನ ಮೂವರು ಸಂಘಟಿತರಾಗಿ ಇಂತಹ ಪ್ರತಿಜ್ಞೆ ಕೈಗೊಂಡಿದ್ದರು.  ಆದುದರಿಂದ ಇದು ಫಳ್‌ಲ್‌ಗಳ ಕರಾರು ಎಂಬ ಹೆಸರಿನಲ್ಲಿ ಪ್ರಸಿದ್ಧವಾಯಿತು. ಮುಂದೆ ಪ್ರವಾದಿ ಮುಹಮ್ಮದ್(ಸ) ಇದನ್ನು ಸ್ಮರಿಸುತ್ತಿದ್ದರು ಮತ್ತು ಇಸ್ಲಾಮಿನಲ್ಲಿ ಈಗ ಇಂತಹ ಒಂದು ಒಪ್ಪಂದಕ್ಕೆ ಆಹ್ವಾನಿಸಿದ್ದರೆ ನಾನು ಅದರಲ್ಲಿ ಭಾಗಿಯಾಗುತ್ತಿದ್ದೆ ಹಾಗೂ ಅದಕ್ಕೆ ನಾನು ಕೆಂಪು ಒಂಟೆಗಿಂತ ಹೆಚ್ಚಿನ ಮಹತ್ವ ನೀಡುತ್ತಿದ್ದೆ ಎಂಬ ಸೂಚನೆ ನೀಡಿದ್ದರು.

ಪ್ರವಾದಿ(ಸ)ಯ ಕಾಲದ ಬಳಿಕವೂ ಹಿಳ್‌ಫುಲ್ ಫುಳೂಲ್‌ನ ಪ್ರಭಾವ ಇಸ್ಲಾಮಿ ಸಮಾಜದಲ್ಲಿ ಉಳಿದಿತ್ತು. ಖಾಲಿದ್‌ಬ್‌ನು ಉತ್ಬ ಮತ್ತು ಹುಸೈನ್(ರ) ಮಧ್ಯೆ ಉಂಟಾದ ಸೊತ್ತಿನ ವಿವಾದದ ಘಟನೆ ಇದನ್ನು ಸ್ಪಷ್ಟಪಡಿಸುತ್ತದೆ. ಖಾಲಿದ್ ತನ್ನ ಅಧಿಕಾರದ ಬಲದಲ್ಲಿ ಹುಸೈನ್(ರ)ರಿಗೆ ನೀಡಬೇಕಾದುದನ್ನು  ಪೂರ್ಣವಾಗಿ  ನೀಡದೆ ಅನ್ಯಾಯವಾಗಿ ವರ್ತಿಸಿದರು. ಆ ವೇಳೆ ಹುಸೈನ್(ರ): ‘‘ನನಗೆ ನೀಡಬೇಕಾದುದನ್ನು ಪೂರ್ಣವಾಗಿ ನೀಡಿರಿ. ಇಲ್ಲದಿದ್ದರೆ ಮಸ್ಜಿದುನ್ನಬವಿಯಲ್ಲಿ ನಾನು ನನ್ನ ಖಡ್ಗವನ್ನು ಎತ್ತಿ ಹಿಡಿದು ಹಿಳ್‌ಫುಲ್ ಫುಳೂಲ್‌ನ ಹೆಸರಿನಲ್ಲಿ ಸಹಾಯವನ್ನು ಯಾಚಿಸುವೆನು’’ ಎಂದು ಹೇಳಿದರು.  ಆ ವೇಳೆ ಬಳಿ ಇದ್ದ ಅಬ್ದುಲ್ಲಾಹಿಬ್‌ನು ಝುಬೈರ್(ರ) ಹೇಳಿದರು: ‘‘ಅಲ್ಲಾಹನಾಣೆ! ಹುಸೈನ್ ಹಿಳ್‌ಫುಲ್ ಫುಳೂಲ್‌ನ  ಸಹಾಯ ಯಾಚಿಸಿದರೆ ನಾನೂ ನನ್ನ ಖಡ್ಗವನ್ನು ತೆಗೆದು ಅವರ ಜತೆ ನಿಲ್ಲುವೆನು. ಒಂದೋ ಅವರ ಹಕ್ಕನ್ನು ಮರಳಿ ಪಡೆಯುವೆನು, ಇಲ್ಲದಿದ್ದರೆ ನಾವಿಬ್ಬರೂ ಹುತಾತ್ಮರಾಗುವೆವು’’. ಈ ಸುದ್ಧಿ ತಿಳಿದ ಮಿಸ್‌ವರುಬ್‌ನು ಮಹ್ಸಮ, ಅಬ್ದುರ್ರಹ್‌ಮಾನುಬ್‌ನು ಉಸ್ಮಾನ್ ಮೊದಲಾದವರೆಲ್ಲಾ ಇದೇ ನಿಲುವನ್ನು ತಾಳಿದ್ದರು. ಇದನ್ನು ತಿಳಿದ ಖಾಲಿದ್ ತಕ್ಷಣ ಹುಸೈನ್(ರ)ರ ಹಕ್ಕನ್ನು ಮರಳಿಸಿದರು. (ಇಬ್ನು ಹಿಶಾಮ್:77,78)

ಜೀವನದ ಸುರಕ್ಷಿತತೆ, ನ್ಯಾಯಕ್ಕಾಗಿ ನಾಡಿನಲ್ಲಿರುವ ಕಾನೂನು ವ್ಯವಸ್ಥೆಯನ್ನು ಎತ್ತಿ ಹಿಡಿದು ಹೋರಾಡುವುದು ಅನಿವಾರ್ಯವೆಂದು ಇದು ಸೂಚಿಸುತ್ತದೆ.

ವ್ಯಾಪಾರಿಯಾಗಿ

ಅಬೂತಾಲಿಬ್ ವೃದ್ಧ್ಧಾಪ್ಯದಲ್ಲಿದ್ದರು. ಮುಹಮ್ಮದ್(ಸ)ರ ದೈಹಿಕ ಬಲ ಹೆಚ್ಚಿತ್ತು. ಈ ಸಂದರ್ಭದಲ್ಲಿ ಖದೀಜಾರು ಶಾಮ್‌ಗೆ ವ್ಯಾಪಾರ ಸಂಘವನ್ನು ಕಳಿಸುತ್ತಿರುವ ಸುದ್ಧಿ ಅಬೂತಾಲಿಬ್‌ಗೆ ತಿಳಿಯಿತು. ಖದೀಜಾರ ಸರಕನ್ನು ಕೊಂಡೊಯ್ದು ಶಾಮ್‌ಗೆ ತೆರಳಿ ವ್ಯಾಪಾರ ನಡೆಸಿದರೆ  ಖದೀಜಾ ಎರಡು ಒಂಟೆಗಳನ್ನು ಪ್ರತಿಫಲವಾಗಿ ನೀಡುತ್ತಿದ್ದರು. ಅಬೂತಾಲಿಬರ ಮನವಿಯನ್ನು ಗೌರವಿಸಿ ಮುಹಮ್ಮದ್‌ರಿಗೆ ಈ ಕೆಲಸಕ್ಕೆ  ನಾಲ್ಕು ಒಂಟೆಗಳನ್ನು ನೀಡಲು ಅವರು ಸಿದ್ಧರಾದರು.  ಅದರಂತೆ ಮುಹಮ್ಮದರು ಶಾಮ್‌ಗೆ ತೆರಳಿ ವ್ಯಾಪಾರದಲ್ಲಿ ತೊಡಗಿದರು. ಅವರ ಪ್ರಾಮಾಣಿಕತೆ, ಆಕರ್ಷಕವಾದ ವ್ಯಕ್ತಿತ್ವವು ವ್ಯಾಪಾರದಲ್ಲಿ ಭಾರಿ ಲಾಭವನ್ನು ತಂದಿತು. ಇದು ಖದೀಜಾರಿಗೆ ಮುಹಮ್ಮದರಲ್ಲಿ ಹೆಮ್ಮೆ ಮೂಡಿಸಿತು. ಶಾಮ್‌ನಿಂದ ಮರಳಿದ ಬಳಿಕ ಖದೀಜಾರ ಪರಿಚಾರಕನಾದ ಮೈಸರನ ಜತೆಯಲ್ಲಿ ಪುನಃ ಸಿರಿಯಾಗೆ ವ್ಯಾಪಾರಕ್ಕೆ ಹೊರಟರು.

ಗೃಹಸ್ಥನಾಗಿ

ಬನೂ ಅಸದ್ ಗೋತ್ರದ ಖದೀಜಾ  ನಲುವತ್ತು ವರ್ಷ ಪ್ರಾಯದ ವಿಧವೆಯಾಗಿದ್ದರು. ಅವರನ್ನು ಮುಹಮ್ಮದ್(ಸ) ತನ್ನ ಜೀವನ ಸಂಗಾತಿಯಾಗಿ ಸ್ವೀಕರಿಸಿದರು. ಇದಕ್ಕೆ ಮೊದಲು ಖದೀಜ ಎರಡು ಬಾರಿ ವಿವಾಹಿತರಾಗಿದ್ದರು.  ಪಕ್ವ, ಜವಾಬ್ದಾರಿಯುತ,  ಸತ್ಯಸಂಧ ಗುಣಗಳನ್ನು ಹೊಂದಿದ್ದ ಖದೀಜಾರನ್ನು ಪ್ರವಾದಿ(ಸ) ಒಪ್ಪಿಕೊಂಡರು. ಎರಡು ಬಾರಿ ವಿಧವೆಯಾಗಿದ್ದ, ಮಧ್ಯ ವಯಸ್ಕಳಾದ ಓರ್ವ ಮಹಿಳೆಯನ್ನು ಮದುವೆಯಾಗುವ ಮೂಲಕ ಸಮಾಜದಲ್ಲಿ ಅಂದು ಮದುವೆಯ ವಿಚಾರವಾಗಿ ಚಾಲ್ತಿಯಲ್ಲಿದ್ದ ಕೆಟ್ಟ ಮಾನದಂಡಗಳನ್ನು ಮುರಿದು ಬಿಟ್ಟರು.

ಅವರ ಆಕರ್ಷಕವಾದ ವ್ಯಕ್ತಿತ್ವ ಖದೀಜಾರ ಮನಸ್ಸನ್ನು ಸೆಳೆದಿತ್ತು. ಮದುವೆಗಾಗಿ ಖದೀಜಾರಿಗೆ ಇಪ್ಪತ್ತು ಒಂಟೆಗಳನ್ನು ಮಹ್‌ರ್ ಆಗಿ ನೀಡಲಾಗಿತ್ತು.  ಸಂತೃಪ್ತ ದಾಂಪತ್ಯದಲ್ಲಿ ಎರಡು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ಆರು ಮಕ್ಕಳು ಜನಿಸಿದರು. ಗಂಡು ಮಕ್ಕಳಲ್ಲಿ ಇಬ್ಬರೂ ಎಳೆಯ ಪ್ರಾಯದಲ್ಲೆ ಮರಣ ಹೊಂದಿದರು. ಪ್ರವಾದಿ(ಸ)ಯವರಿಗೆ ಐವತ್ತು ವರ್ಷ ಪ್ರಾಯವಾಗುವ ತನಕ ಖದೀಜಾರ ಹೊರತು ಬೇರೆ ಮದುವೆ ನಡೆಸಿರಲಿಲ್ಲ. ದಾಂಪತ್ಯ ಜೀವನಕ್ಕೆ ಯಾವುದೇ ರೀತಿಯ ಪಾವಿತ್ರತೆ ಕಲ್ಪಿಸಿದ ಅರೇಬಿಯಾದಲ್ಲಿ  ಈ ಮದುವೆ ಮಾದರಿಯಾಗಿತ್ತು.

ಅದಂತೂ ಒಂದು ಮಾದರಿ ದಾಂಪತ್ಯ ಜೀವನವಾಗಿತ್ತು. ನಿರ್ಗತಿಕರ ಕಣ್ಣೀರು ಒರೆಸಲು ಶಕ್ತಿ ಮೀರಿ ಅವರು  ಪ್ರಯತ್ನಿಸಿದರು. ಹಸಿದವರಿಗೆ ಪ್ರೀತಿಯಿಂದ ಅನ್ನ ನೀಡಿದರು. ಶ್ರಮಿಕ ಜೀವನ ಭಾರದಿಂದ  ದುರ್ಬಲ ಜನತೆಯ ಜೀವನ ಭಾರವನ್ನು ಅವರು ಹೇರಿ ಕೊಂಡರು. ಕಡು ಬಡವರಿಗಾಗಿ ತಮ್ಮ ಶ್ರಮದ ಫಲವನ್ನು ಮೀಸಲಿಟ್ಟರು. ಕುಟುಂಬ, ನೆರೆಮನೆ, ಊರಿನ ಜನರು ಹೀಗೆ ಎಲ್ಲರಿಗೂ ಅವರು ಬಂಧುವಾದರು. ಸಂಕಷ್ಟಕ್ಕೊಳಗಾದವರಿಗೆ ನೆರವಾಗಲು ಓಡಿ ತಲುಪಿದರು. ಯಾರನ್ನೂ ನಂಬಲು ಸಾಧ್ಯವಿಲ್ಲದ ಆ ಕಾಲದಲ್ಲಿ ತಮ್ಮ ಬೆಲೆ ಬಾಳುವ ವಸ್ತುಗಳನ್ನು ಜೋಪಾನವಾಗಿಡಲು ಮತ್ತು ಸಾಲ ಪಡೆಯಲು  ಎಲ್ಲರಿಗೂ ಅವರು ನಂಬಿಕಸ್ತರಾದರು. ಗೋತ್ರಗಳಲ್ಲಿ ಅಥವಾ ಆ ಪ್ರದೇಶದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಎದುರಾದರೆ ಅವರ ಮಧ್ಯಸ್ಥಿಕೆಯಲ್ಲಿ ಎಲ್ಲರಿಗೂ ಸಂತೃಪ್ತಿಯ ಪರಿಹಾರ ದೊರಕುತ್ತಿತ್ತು. ಅವರು ಮುಹಮ್ಮದ್(ಸ)ರನ್ನು  ಅಲ್‌ಅಮೀನ್ (ನಂಬಿಕಾರ್ಹ) ಎಂದು ಪ್ರೀತಿಯಿಂದ ಕರೆದರು. ಎಲ್ಲೆಡೆಯಿಂದ ಮೊಳಗಿದ ಹೆಸರಾಗಿತ್ತದು.

ನಾಯಕನಾಗಿ

ಕಅಬಾ ಪುನರ್ ನಿರ್ಮಿಸಲು ಮಕ್ಕಾದ ಗೋತ್ರದವರೆಲ್ಲ ತೀರ್ಮಾನಿಸಿದರು. ಅಂದು ಮುಹಮ್ಮದ್(ಸ)ರಿಗೆ ಮೂವತ್ತೈದು ವರ್ಷ ಪ್ರಾಯವಾಗಿತ್ತು.

ಬೆಟ್ಟಗಳಿಂದ ನೀಲಿ ಬಣ್ಣದ ಕಗ್ಗಲ್ಲನ್ನು ಹೊತ್ತು ತಂದು ಕಅಬಾದ ಗೋಡೆಗಳನ್ನು ಕಟ್ಟಲಾಯಿತು. ಅವರೊಡನೆ ಸೇರಿಕೊಂಡು ಮುಹಮ್ಮದ್(ಸ)  ಕಲ್ಲುಗಳನ್ನು ಹೊತ್ತರು. ಒಂದಾಳು ಎತ್ತರಕ್ಕೆ ಗೋಡೆ ಎದ್ದಾಗ ಹಜರುಲ್ ಅಸ್ವದ್ ಕಲ್ಲು ಪುನರ್ ಪ್ರತಿಷ್ಠಾಪಿಸುವ ವಿಚಾರದಲ್ಲಿ  ಗೋತ್ರಗಳ ಮಧ್ಯೆ ಜಗಳ ಉಂಟಾಯಿತು.  ಕೊನೆಗೆ  ಅದು ಯುದ್ಧದ ಹಂತಕ್ಕೆ ತಲುಪಿತು. ಆ ವೇಳೆ ಅವರ ಮಧ್ಯೆ ಇದ್ದ ವಯೋವೃದ್ಧರಾದ ಅಬೂಉಮಯ್ಯ ಒಂದು ಸಲಹೆಯನ್ನು ಮುಂದಿಡುತ್ತಾರೆ: ‘‘ಸಫಾ ಬೆಟ್ಟದ ಭಾಗದಿಂದ ಮೊದಲು ಪ್ರವೇಶಿಸುವವರನ್ನು ಈ ಸಮಸ್ಯೆಗೆ ಪರಿಹಾರ ಸೂಚಿಸಲು ಮಧ್ಯಸ್ತರನ್ನಾಗಿ ಮಾಡೋಣ’’. ಈ ಸಲಹೆ ಎಲ್ಲರಿಗೂ ತೃಪ್ತಿಯಾದವು. ಅವರು ಸಫಾ ಬೆಟ್ಟದ ಕಡೆ ನೋಡತೊಡಗಿದರು. ಆ ದಾರಿಯಾಗಿ ಮುಹಮ್ಮದ್(ಸ) ಆಗಮಿಸುತ್ತಾರೆ. ಅವರೆಲ್ಲರೂ ಜೋರಾಗಿ ಕೂಗುತ್ತಾರೆ: ‘‘ಅದೋ ಅಲ್ ಅಮೀನ್! ಅವರ ತೀರ್ಪನ್ನು ನಾವು ಸ್ವೀಕರಿಸೋಣ’’

ಅಲ್ಲಿ ನೆರೆದವರ ಮುಖಭಾವದಿಂದಲೆ ಅವರ ಭಾವನೆಗಳೇನೆಂಬುದನ್ನು ಮುಹಮ್ಮದ್(ಸ) ಅರಿಯುತ್ತಾರೆ. ಅವರು ತನ್ನ ಕೈಗಳಿಂದ ಹಜರುಲ್‌ಅಸ್ವದ್ ಎತ್ತಿ ಯಥಾ ಸ್ಥಾನದಲ್ಲಿ ಇಟ್ಟರೆ ಸದ್ಯ ಸಮಸ್ಯೆ ಬಗೆ ಹರಿಯಲು  ಅಷ್ಟು ಸಾಕಾಗುತಿತ್ತು. ಆದರೆ, ಅತ್ಯಂತ ಸತ್ಯಸಂಧವಾದ, ನ್ಯಾಯಪೂರ್ಣವಾದ, ಜನಪರವಾದ ತೀರ್ಪು ನೀಡುವ ಸಲುವಾಗಿ ಸ್ವಲ್ಪ ಹೊತ್ತು ಅವರು ಚಿಂತನೆಯಲ್ಲಿ ಮಗ್ನರಾಗುತ್ತಾರೆ.  ಅಲೋಚನೆಯಿಂದ ವಿರಮಿಸಿದ ಬಳಿಕ ಅವರು ‘‘ನನಗೊಂದು ಬಟ್ಟೆ ಕೊಡಿರಿ ’’ಎನ್ನುತ್ತಾರೆ. ಜನರು ಬಟ್ಟೆಯೊಂದನ್ನು ತಂದಿರಿಸಿ ಮುಂದೇನಾಗುವುದೆಂದು ಕುತೂಹಲದಿಂದ ನೋಡ ತೊಡಗುತ್ತಾರೆ. ಮುಹಮ್ಮದ್(ಸ) ಆ ಬಟ್ಟೆಯನ್ನು ನೆಲಕ್ಕೆ ಹಾಸಿ ಅದರ ಮೇಲೆ ತನ್ನ ಕೈಗಳಿಂದ ಹಜರುಲ್ ಅಸ್ವದ್ ಕಲ್ಲನ್ನಿಡುತ್ತಾರೆ.  ಆ ಬಳಿಕ ನೇರ ನಿಂತು ಗೋತ್ರ ನಾಯಕರತ್ತ ತಿರುಗಿ ‘‘ಪ್ರತಿ ಗೋತ್ರ ನಾಯಕರು ಈ ಬಟ್ಟೆಯನ್ನು ಹಿಡಿಯಲಿ’’ ಎನ್ನುತ್ತಾರೆ.  ಎಲ್ಲರೂ ಅದೇ ರೀತಿ ಬಟ್ಟೆಯ ತುದಿಯಲ್ಲಿ ಹಿಡಿದು ಎತ್ತಿದರು. ಹಜರುಲ್ ಅಸ್ವದ್ ಸ್ಥಾಪಿಸ ಬೇಕಾದ ಜಾಗ ತಲುಪಿದಾಗ ಮುಹಮ್ಮದ್(ಸ) ಆ ಶಿಲೆಯನ್ನು ತನ್ನ ಕೈಗಳಿಂದ ತೆಗೆದು ಆ ಜಾಗದಲ್ಲಿ ಇಡುತ್ತಾರೆ. ಯಾರೂ ಸೋಲದ, ಎಲ್ಲರಿಗೂ ಒಂದೇ ರೀತಿಯಲ್ಲಿ ಗೆಲುವನ್ನು ಪಡೆಯಲು ಸಾಧ್ಯವಾದ ರೀತಿಯ ಸಮಸ್ಯಾ ಪರಿಹಾರ. ಅದರೊಂದಿಗೆ ಭುಗಿಲೆದ್ದ ಗೋತ್ರಗಳ ಜಗಳ ಶಮನವಾಯಿತು. ಅವರೆಲ್ಲರೂ ಆ ಮಹಾ ಮನುಷ್ಯನೆಡೆಗೆ ಕಣ್ಣರೆಪ್ಪೆ ಮುಚ್ಚದೆ ನೋಡತೊಡಗಿದರು. ಸಮಸ್ಯೆ ಬಗೆಹರಿಸಲು ಮುಂದಾಗುವ ಎಲ್ಲರಿಗೂ ಇದೊಂದು ಉತ್ತಮ ಮಾದರಿಯೇ ಸರಿ.

ವ್ಯಾಪಾರಿಯ ಅನುಭವ ಜ್ಞಾನ, ಸತ್ಯಸಂಧತೆ, ಪರಸ್ಪರ ಸಂಬಂಧ,ಭೌಗೋಳಿಕ ಅರಿವು,  ಕುಟುಂಬ – ವೈಯಕ್ತಿಕ – ನೆರೆಮನೆಯ ಆಪ್ತ ಸಂಬಂಧಗಳ ಮೂಲಕ ಗಮನಾರ್ಹವಾದ ಶುದ್ಧ ವ್ಯಕ್ತಿತ್ವ, ಹಿಳ್‌ಫುಲ್ ಫುಳೂಲ್‌ನ ಮೂಲಕ ಅರಿಯಲ್ಪಟ್ಟ ನ್ಯಾಯಪ್ರಜ್ಞೆ, ಸಾಮಾಜಿಕ ಬದ್ಧತೆ, ಅನಾಥರು, ನಿರ್ಗತಿಕರೊಡನೆ ತೋರುವ ಅನುಕಂಪ, ಔದಾರ್ಯತೆ…. ಮೊದಲಾದ ಮಾದರಿ ಸದ್ಗುಣಗಳ ಮೂಲಕ ಅವರು ಆ ಜನತೆಗೆ ಅತ್ಯಂತ ಮೆಚ್ಚಿಕೆಯ ವ್ಯಕ್ತಿಯಾದರು. ಹೀಗೆ ಅವರ ಚಲನವಲನಗಳನ್ನು  ಜನರು ಗಮನಿಸತೊಡಗಿದರು. ತೊಡಗಿತು.  ಪ್ರಯಾಣದ ವೇಳೆಯಲ್ಲಿ, ಆಹಾರ ತಯಾರಿಸುವ  ಸಮಯದಲ್ಲಿ ಅವರಲ್ಲೊಬ್ಬರಾಗಿ ಸಾಮಾನ್ಯರಂತೆ ಅವರು ಜೀವಿಸುತ್ತಾರೆ. ಎಲ್ಲರಿಗೂ ಅವರ ಬಗ್ಗೆ ತಿಳಿದಿದೆ. ಎಲ್ಲರ ಬಗ್ಗೆ ಅವರಿಗೂ ತಿಳಿದಿದೆ. ಅಲ್‌ಅಮೀನ್! ನಾಲ್ಕು ದಶಕಗಳ ಕಾಲದ ಜೀವನಕ್ಕೆ ಜನರು ಮನಃಸಾಕ್ಷಿಯಾಗಿ  ನೀಡಿದ ಪ್ರಮಾಣ ಪತ್ರದಂತಿತ್ತು ಆ ಹೆಸರು.

ಅಲ್ಲಾಹನು ಪ್ರವಾದಿಯನ್ನು  ತನ್ನ ದೌತ್ಯ ನಿರ್ವಹಣೆಗಾಗಿ ನೈಪುಣ್ಯತೆಯಿಂದ ಸಿದ್ಧಗೊಳಿಸುತ್ತಿದ್ದನು. ಇದರ ಬಗ್ಗೆ ಅವರಿಗೆ ಯಾವುದೆ ಮುನ್ಸೂಚನೆ ಇರಲಿಲ್ಲ. ಅಲ್ಲಾಹನು ಪ್ರವಾದಿಯೊಡನೆ ಹೀಗೆ ಹೇಳುವುದನ್ನು ಕುರ್‌ಆನ್‌ನಲ್ಲಿ ಕಾಣಬಹುದಾಗಿದೆ:

‘‘ಈ ರೀತಿ ನಾವು ನಮ್ಮ ಅಪ್ಪಣೆಯಂತೆ  ನಿಮ್ಮ ಕಡೆಗೆ   ದಿವ್ಯ ಸಂದೇಶವನ್ನು ಕಳಿಸಿರುವೆವು. ಈ ಹಿಂದೆ ನೀವು ಗ್ರಂಥವೆಂದರೇನು ಅಥವಾ ನಂಬಿಕೆ ಎಂದರೇನು ಎಂಬುದನ್ನು ಬಲ್ಲವರಾಗಿರಲಿಲ್ಲ’’ (ಕುರ್‌ಆನ್:42:52)

 

***

 

LEAVE A REPLY

Please enter your comment!
Please enter your name here