ಮತ್ತೊಮ್ಮೆ ಠುಸ್ಸಾದ ಬಿಜೆಪಿಯ ಆಪರೇಷನ್ ಕಮಲ

0
339

-ನಾಗೇಶ್ ಎನ್.

ಬಿಜೆಪಿ ಪ್ರಯತ್ನಗಳೆಲ್ಲಾ ಅಕ್ಷರಶಃ ಮಣ್ಣು ಪಾಲಾಗಿವೆ!
ಕೆಲವೇ ಸ್ಥಾನಗಳ ಕೊರತೆಯಿಂದ ಅಧಿಕಾರದ ಗದ್ದುಗೆಯಿಂದ ದೂರಾದ ಬಿಜೆಪಿ, ಮೈತ್ರಿ ಸರಕಾರ ಹಣಿದು ಗದ್ದುಗೆ ಏರುವ ಕನಸು ಕಾಣುತ್ತಲೇ ಇದೆ. ಅದಕ್ಕಾಗಿ ಶತ ಪ್ರಯತ್ನಗಳನ್ನು ನಡೆಸುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಸರಕಾರದ ತಂಟೆಗೆ ಹೋಗದೆ ಲೋಕಸಭಾ ಚುನಾವಣೆಯತ್ತ ಗಮನಹರಿಸಿ ಎಂದು ಹೇಳಿದರು ಅದೇಕೋ ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಮಾತ್ರ ಮಾತು ಕೇಳುತ್ತಲೇ ಇಲ್ಲ. ತಕ್ಷಣಕ್ಕೆ ಅವರಿಗೆ ಮುಖ್ಯಮಂತ್ರಿಯಾಗಿಬಿಡಬೇಕು ಎಂಬ ಹಪಹಪಿಕೆ ತೀವ್ರವಾದಂತಿದೆ. ಅದಕ್ಕಾಗಿಯೇ ಇನ್ನಿಲ್ಲದ ಆಟವಾಡಿ ಪ್ರತಿಬಾರಿಯೂ ಮುಖಭಂಗ ಅನುವಿಸುತ್ತಲೇ ಇದ್ದಾರೆ.

ಮುಂಬರುವ ಲೋಕಸಭೆೆ ಚುನಾವಣೆ ನಂತರ ತಮ್ಮ ರಾಜಕೀಯ ಭವಿಷ್ಯ ಎಂತೋ-ಏನೋ, ಅದಕ್ಕೆ ಮೊದಲು ಹೇಗಾದರೂ ಮಾಡಿ ಮುಖ್ಯಮಂತ್ರಿ ಆಗಲೇಬೇಕೆಂದು ಯಡಿಯೂರಪ್ಪನವರು ಹಿಡಿದಿರುವ ಹಠಕ್ಕೆ ‘ರಾಜಕೀಯ ಶಕುನ’ಗಳು ಸಹಕರಿಸುತ್ತಿಲ್ಲ. ದಿಲ್ಲಿ ವರಿಷ್ಠರ ಕಪಾಕಟಾಕ್ಷವೂ ಸಿಕ್ಕಿಲ್ಲ, ಜತೆಗೆ ರಾಜ್ಯದ ಹಿರಿಯ ನಾಯಕರ ವಿಶ್ವಾಸವನ್ನೂ ದಕ್ಕಿಸಿಕೊಂಡಿಲ್ಲ. ರಾಜ್ಯದ ಆಡಳಿತರೂಢ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಮೇಲೆ ಯಡಿಯೂರಪ್ಪನವರ ‘ಸರ್ಜಿಕಲ್ ಸ್ಟೈಕ್’ ಸಾಕಷ್ಟು ಪೂರ್ವಸಿದ್ಧತೆ ಕೊರತೆಯಿಂದ ‘ಯೂ ಟರ್ನ್’ ತೆಗೆದುಕೊಂಡಿದೆ. ಕೇವಲ ನಾಲ್ಕು ತಿಂಗಳಲ್ಲಿ ಎರಡು ಬಾರಿ ಸರಕಾರ ರಚನೆಗೆ ವಿಫಲ ಯತ್ನ ನಡೆಸಿ ನಗೆಪಾಟಲಿಗೆ ಒಳಗಾಗಿದ್ದಾರೆ. ಆದರೂ ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ, ಮತ್ತೆ ಮಾಡುತ್ತಿರುವ ಯತ್ನಕ್ಕೆ ಹೆಗಲಿಗೆ ಜೋತುಬೀಳುವ ಬೇತಾಳವಷ್ಟೇ ಸಿಕ್ಕಿರೋ ಫಲ. ಸಿಎಂ ಆಗಬೇಕೆಂಬ ಅವರ ಹೆಬ್ಬಯಕೆಗೆ ಅಂಕಿ-ಸಂಖ್ಯೆಗಳ ಬೆಂಬಲ ಇಲ್ಲದಿರುವುದರಿಂದ ಸ್ವಪಕ್ಷೀಯರೇ ಒಳಗೊಳಗೇ ಮುಸಿಮುಸಿ ನಗುತ್ತಿದ್ದಾರೆ.

ಡಿಕೆಶಿ ಟಾರ್ಗೆಟ್:
ಒಂದೆಡೆ ರಾಜ್ಯ ಸರಕಾರದ ಹೆಬ್ಬಂಡೆಯಾಗಿ ನಿಂತಿರುವ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕೇಂದ್ರೀಯ ತನಿಖಾ ಸಂಸ್ಥೆಗಳ ಮೂಲಕ ಹಣಿಯುವ, ಇನ್ನೊಂದೆಡೆ ‘ಆಪರೇಷನ್ ಕಮಲ’ದ ಮೂಲಕ ಮೈತ್ರಿ ಸರಕಾರ ಅಸ್ಥಿರಗೊಳಿಸುವ ಏಕಕಾಲಿಕ ಎರಡೆರಡು ಅಸ್ತ್ರಗಳ ಪ್ರಯೋಗದಿಂದ ಸಿಎಂ ಆಗಬೇಕೆಂಬ ಅದಮ್ಯ ಬಯಕೆ ಹೊಂದಿರುವ ಯಡಿಯೂರಪ್ಪನವರು ಅದಕ್ಕಾಗಿ ಸಾಕಷ್ಟು ಬೆವರು ಹರಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ಸಿನ ಸಾಕಷ್ಟು ಮಂದಿಯನ್ನು ನೇರವಾಗಿ, ತಮ್ಮ ಹಿಂಬಾಲಕರ ಮೂಲಕ ಸಂಪರ್ಕಿಸಿದ್ದಾರೆ. ಮಾಜಿ ಸಚಿವೆ ಶೋಬಾ ಕರಂದ್ಲಾಜೆ, ಯಡಿಯೂರಪ್ಪನವರ ಪುತ್ರ ವಿಜಯೇಂದ್ರ ಸಾರಥ್ಯ. ಮಾಜಿ ಸಚಿವ ಸಿ.ಪಿ.ಯೋಗೀಶ್ವರ, ಶಾಸಕ ಡಾ.ಅಶ್ವತ್ಧನಾರಾಯಣ ಮತ್ತಿತರರ ಕಾರ್ಯಾಚರಣೆ. ಎಲ್ಲ ಶಾಸಕರಿಗೂ ಒಂದೇ ಡೈಲಾಗ್ ‘ಈಗಾಗಲೇ 18 ಮಂದಿ ರೆಡಿ ಆಗಿದ್ದಾರೆ. ನೀವು ಬಂದರೆ 19ನೇಯವರು. ನೀವು ಈಗಲೇ ಬಂದರೆ ಕೋಟ್ಯಂತರ ಹಣದ ಜತೆಗೆ ಸಂಪುಟದಲ್ಲಿ ಸ್ಥಾನ. ತಡಮಾಡಿದರೆ ಸಚಿವರಾಗೋದು ಡೌಟು. ಆಮೇಲೆ ಕೈ-ಕೈ ಹಿಸುಕಿಕೊಳ್ಳಬೇಡಿ.’

ಆದರೆ ಇಂಥ ‘ಆಫರ್’ ಪಡೆದವರೇನೂ ರಾಜಕೀಯದಲ್ಲಿ ಚಳ್ಳೆ-ಪಿಳ್ಳೆಗಳಲ್ಲ. ಅವರಿಗೂ ಅವರದೇ ಆದ ಸಂಪರ್ಕಗಳಿವೆ. ಅವರಿಗೆ ಸಿಕ್ಕಿರುವ ಮಾಹಿತಿ ಕೇವಲ ಆರು ಮಂದಿ ಮಾತ್ರ ಯಡಿಯೂರಪ್ಪನವರ ಗಾಳಕ್ಕೆ ಸಿಕ್ಕಿದ್ದಾರೆ. 30 ರಿಂದ 50 ಕೋಟಿ ರುಪಾಯಿವರೆಗೂ ‘ತಲೆಬೆಲೆ’ ನಿಗದಿ ಮಾಡಿ, ಐದರಿಂದ ಹತ್ತು ಕೋಟಿ ರುಪಾಯಿವರೆಗೂ ಅಡ್ವಾನ್ಸ್ ಪೇಮೆಂಟ್ ಕೂಡ ಮಾಡಲಾಗಿದೆಯಂತೆ. ಆದರೆ 18, 19 ಮಂದಿ ಶಾಸಕರು ರೆಡಿ ಆಗಿದ್ದಾರೆ ಎಂಬುದೆಲ್ಲ ಸುಳ್ಳು. ಹೀಗಾಗಿ, ‘18 ಮಂದಿ ತೋರಿಸಿ, ಆಮೇಲೆ ರೆಸಾರ್ಟ್‌ಗೆ ಬರುತ್ತೇವೆ’ ಎಂದು ಅಡ್ವಾನ್ಸ್ ಪಡೆದವರು ನುಣುಚಿಕೊಳ್ಳುತ್ತಿದ್ದಾರೆ. ಇಂದು ಡಿಕೆ ಶಿವಕುಮಾರ್ ಅವರು ಮೈತ್ರಿ ಸರಕಾರದ ಆಧಾರ ಸ್ತಂಭವಾಗಿದ್ದಾರೆ. ಬಿಜೆಪಿಯಿಂದ ಏನೇ ಆಪತ್ತುಗಳು ಎದುರಾದರೂ ಅದನ್ನು ಸಮರ್ಥವಾಗಿ ನಿವಾರಿಸಿಕೊಳ್ಳುವ ತಾಕತ್ತು ಡಿಕೆ ಶಿವಕುಮಾರ್‌ಗೆ ಮಾತ್ರವಲ್ಲದೇ ಮತ್ತ್ಯಾರಿಗೂ ಇಲ್ಲ. ಈ ಹಿಂದೆ ಯಡಿಯೂರಪ್ಪವಿಶ್ವಾಸ ಮತ ಸಾಬೀತು ಮಾಡುವ ವೇಳೆ ಕಾಂಗ್ರೆಸ್ ಶಾಸಕರ ಹೈಜಾಕ್‌ಗೆ ಯತ್ನಿಸಿದ್ದರು. ಆಗ ಇದೇ ಡಿ.ಕೆ.ಶಿವಕುಮಾರ್ ಅವರು ಬಿಜೆಪಿಯ ಅಬೇಧ್ಯ ಕೋಟೆ ಬೇಧಿಸಿ ತಮ್ಮ ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಅಷ್ಟೇ ಅಲ್ಲ; ಮೈತ್ರಿ ಸರಕಾರ ರಚನೆಗೂ ಕಾರಣರಾದರು. ಡಿ.ಕೆ.ಶಿವಕುಮಾರ್ ಇರುವವರೆಗೆ ತಮಗೆ ಸರಕಾರ ರಚನೆಯ ಅವಕಾಶ ಸಿಗುವುದಿಲ್ಲ ಎಂದರಿತ ಯಡಿಯೂರಪ್ಪ ಅವರನ್ನೇ ಮೊದಲ ಟಾರ್ಗೆಟ್ ಆಗಿಸಿ, ಮೊದಲು ಡಿಕೆಶಿ ಅವರನ್ನು ಹೇಗಾದರೂ ಮಾಡಿ ಕಟ್ಟಿ ಹಾಕಿದರೆ ಮುಂದಿನದು ಸುಲಭ ಎಂದು ಇಡಿ ಮೊರೆ ಹೋದರು. ಆದರೆ ಯಡಿಯೂರಪ್ಪ ಅಂದುಕೊಂಡದ್ದು ಒಂದು; ಅದಾಗಿದ್ದೇ ಇನ್ನೊಂದು!

ಆತುರಗಾರನಿಗೆ ಬುದ್ಧಿ ಮಟ್ಟ:
ಯಡಿಯೂರಪ್ಪನವರ ಏಕಪಕ್ಷೀಯ ರಣಾತುರ ದಿಲ್ಲಿ ಹಾಗೂ ರಾಜ್ಯ ಬಿಜೆಪಿ ನಾಯಕರನ್ನು ಕಂಗೆಡಿಸಿದೆ, ಕೆಂಗಣ್ಣಾಗಿಸಿದೆ. ‘ಜಾರಿ ಬೀಳೋದನ್ನೆ ಜಾರುಬಂಡೆ ಆಟ’ ಮಾಡಿಕೊಂಡಿರುವ ಯಡಿಯೂರಪ್ಪನವರು ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷದ ಮಾನ ಮತ್ತು ವರ್ಚಸ್ಸು ಎರಡನ್ನೂ ಹರಾಜು ಹಾಕುತ್ತಿದ್ದಾರೆ ಎಂದು ಒದ್ದಾಡುತ್ತಿದ್ದಾರೆ. ಆವರ ಆತಂಕಕ್ಕೆ ಸಕಾರಣಗಳು ಇಲ್ಲದಿಲ್ಲ. ಈವರೆಗೂ ಯಡಿಯೂರಪ್ಪನವರು ತಾವೇನು ಮಾಡುತ್ತಿದ್ದೇವೆ ಎಂಬುದರ ಬಗ್ಗೆ ರಾಜ್ಯದ ಹಿರಿಯ ನಾಯಕರ ಜತೆ ಸಮಾಲೋಚನೆಯನ್ನೇ ಮಾಡಿಲ್ಲ. ಡಿ.ವಿ.ಸದಾನಂದಗೌಡ, ಜಗದೀಶ ಶೆಟ್ಟರ್, ಪ್ರಹ್ಲಾದ್ ಜೋಷಿ, ಈಶ್ವರಪ್ಪ, ಅಶೋಕ್, ಸಂತೋಷ್, ಸುರೇಶ್ ಕುಮಾರ್, ಸಿ.ಟಿ. ರವಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರಂಥ ದಿಗ್ಗಜರನ್ನು ಆಪರೇಷನ್ ಕಮಲ ಕಾರ್ಯಾಚರಣೆ ಚೌಕಟ್ಟಿಗೆ ಬಿಟ್ಟುಕೊಂಡಿಲ್ಲ. ಇದಕ್ಕೆ ಕಾರಣ ಬರೀ ಅನುಮಾನ. ಇವರೆಲ್ಲ ಎಲ್ಲಿ ತಮ್ಮ ಕಾರ್ಯತಂತ್ರಕ್ಕೆ ಕಲ್ಲಾಕುತ್ತಾರೋ ಎಂಬ ವಿಕಲ್ಪ ಭೀತಿ. ಹಿಂದೆಲ್ಲ ಯಾರ ಕಾರಣಕ್ಕೆ ಇವರೆಲ್ಲ ಯಡಿಯೂರಪ್ಪನವರಿಂದ ಅಂತರ ಕಾಯ್ಡುಕೊಂಡಿದ್ದರೋ, ಆ ಶೋಬಾ ಕರಂದ್ಲಾಜೆ ಅವರನ್ನೇ ಈಗಲೂ ಯಡಿಯೂರಪ್ಪ ನವರು ‘ವಿಶ್ವಾಸದ ಗಣಿ’ಎಂದು ಭಾವಿಸಿರುವುದು ಅನ್ಯ ನಾಯಕರಲ್ಲಿ ಬೇಸರ ಮೂಡಿಸಿದೆ. ಹಾಗಾದರೆ ‘ಪಕ್ಷದಲ್ಲಿ ನಾವೆಲ್ಲರೂ ಏನೂ ಅಲ್ಲವೇ’ ಎಂಬ ದಿಗ್ಮೂಢತೆಗೆ ಒಳಗಾಗಿರುವ ಈ ನಾಯಕರೆಲ್ಲ ‘ಆಪರೇಷನ್ ಕಮಲ’ ಪ್ರಕ್ರಿಯೆಗೂ ತಮಗೂ ಸಂಬಂಧವಿಲ್ಲ ಎಂಬಂತೆ ದೂರ ಉಳಿದಿದ್ದಾರೆ. ‘ಸುಖಾಸುಮ್ಮನೆ ಆಗದ ಕೆಲಸಕ್ಕೆ ಕೈ ಹಾಕಿ ಮುಖಕ್ಕೆ ಕೆಸರು ಬಳಿದುಕೊಳ್ಳುವುದು ಏಕೆ? ಒಂದೊಮ್ಮೆ ಯಡಿಯೂರಪ್ಪನವರ ‘ಗೆರಿಲ್ಲಾ ಸಮರ’ಕ್ಕೆ ಜಯ ಸಿಕ್ಕರೆ ಆಮೇಲೆ ನೋಡಿಕೊಂಡರಾಯಿತು’ ಎಂಬುದು ಅವರ ಮನದಿಂಗಿತ.

ಪಕ್ಷದ ವರಿಷ್ಠರ ಅಸಹಕಾರ:
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಲಿ, ಪ್ರಧಾನಿ ನರೇಂದ್ರ ಮೋದಿ ಅವರಾಗಲಿ ಯಡಿಯೂರಪ್ಪನವರ ಕಾರ್ಯಾಚರಣೆಗೆ ಅಸ್ತು ಎಂದಿಲ್ಲ. ಬದಲಿಗೆ ಲೋಕಸಭೆ ಚುನಾವಣೆ ಮೇಲೆ ಇದರಿಂದ ಆಗಬಹುದಾದ ಹಾನಿ ಬಗ್ಗೆ ಅವರೆಲ್ಲ ಚಿಂತಿತರಾಗಿದ್ದಾರೆ. ಈ ಬಗ್ಗೆ ರಾಜ್ಯದ ಆಯ್ದ ನಾಯಕರಿಂದ ಮಾಹಿತಿಯನ್ನೂ ಪಡೆದಿದ್ದಾರೆ. ಅವರೆಲ್ಲರೂ ನಕಾರಾತ್ಮಕ ವರದಿಯನ್ನೇ ಕೊಟ್ಟಿದ್ದಾರೆ. ಮಾಹಿತಿ ಪಡೆಯುವಾಗ ಯಡಿಯೂರಪ್ಪನವರ ‘ಲಿಮಿಟೆಡ್ ಎಡಿಷನ್’ ಬಳಗವನ್ನು ನಿರ್ಲಕ್ಷಿಸಿದ್ದಾರೆ. ಆತುರಕ್ಕೆ ಬಿದ್ದು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, ವಿಶ್ವಾಸಮತ ಸಾಬೀತುಪಡಿಸಲಾಗದೆ ಒಂದೂವರೇ ದಿನಕ್ಕೆ ರಾಜೀನಾಮೆ ಕೊಟ್ಟ ಯಡಿಯೂರಪ್ಪನವರು ಈಗ ನಾಲ್ಕೇ ತಿಂಗಳಲ್ಲಿ ಮತ್ತೊಂದು ಬಾರಿ ಎಡವಿ ಬಿದ್ದಿದ್ದಾರೆ. ಸಿಎಂ ಆಗೋದಿರಲಿ, ಇರೋ ಮರ್ಯಾದೆಯನ್ನು ಕಳೆದುಕೊಂಡು, ಪಕ್ಷದ ವರ್ಚಸ್ಸನ್ನೂ ಶ್ರೀರಾಮನವಮಿ ಪಾನಕದಂತೆ ದಾರೀಲಿ ಹೋಗೋರು, ಬರೋರಿಗೆಲ್ಲ ಹಂಚಿ, ತಮ್ಮ ರಾಜಕೀಯ ಬದುಕಿನ ಇಳಿಸಂಜೆಯಲ್ಲಿ ನೋವು, ಅವಮಾನ, ಹತಾಶೆ, ಮುಜುಗರದಲ್ಲಿ ಇನ್ನಿಲ್ಲದಂತೆ ಬೇಯುತ್ತಿದ್ದಾರೆ!

***

 

 

LEAVE A REPLY

Please enter your comment!
Please enter your name here